Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 105

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ, ಅವರ ಹೆಸರನ್ನು ಸಾರಿ ಹೇಳಿರಿ; ಜನರಲ್ಲಿ ದೇವರ ಕ್ರಿಯೆಗಳನ್ನು ತಿಳಿಯಪಡಿಸಿರಿ.
2ದೇವರಿಗೆ ಹಾಡಿರಿ, ದೇವರಿಗೆ ಕೀರ್ತನೆ ಹಾಡಿರಿ; ದೇವರ ಅದ್ಭುತ ಕ್ರಿಯೆಗಳ ವಿಷಯವಾಗಿ ಮಾತನಾಡಿರಿ.
3ದೇವರ ಪರಿಶುದ್ಧ ನಾಮವನ್ನು ಹೊಗಳಿರಿ; ಯೆಹೋವ ದೇವರನ್ನು ಹುಡುಕುವವರ ಹೃದಯವು ಸಂತೋಷಿಸಲಿ.
4ಯೆಹೋವ ದೇವರನ್ನೂ, ಅವರ ಬಲವನ್ನೂ ಆಶ್ರಯಿಸಿರಿ, ಅವರ ಮುಖವನ್ನು ಯಾವಾಗಲೂ ಹುಡುಕಿರಿ.
5ದೇವರು ಮಾಡಿದ ಆಶ್ಚರ್ಯಕಾರ್ಯಗಳನ್ನೂ, ಅವರ ಅದ್ಭುತಗಳನ್ನೂ, ಅವರ ಬಾಯಿಂದ ಹೊರಟ ನ್ಯಾಯ ನಿರ್ಣಯಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.
6ದೇವರ ಸೇವಕನಾದ ಅಬ್ರಹಾಮನ ಸಂತತಿಯೇ, ಅವರು ಆಯ್ದುಕೊಂಡ ಯಾಕೋಬನ ಮಕ್ಕಳೇ,
7ಅವರೇ ನಮ್ಮ ದೇವರಾದ ಯೆಹೋವ ಆಗಿದ್ದಾರೆ. ಅವರ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಇವೆ.
8ದೇವರು ತಮ್ಮ ಒಡಂಬಡಿಕೆಯನ್ನೂ, ಸಾವಿರ ತಲಾಂತರಗಳಿಗೆ ಆಜ್ಞಾಪಿಸಿದ ತಮ್ಮ ಮಾತನ್ನೂ,
9ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನೂ, ಇಸಾಕನಿಗೆ ಇಟ್ಟ ಆಣೆಯನ್ನೂ ಯುಗಯುಗಕ್ಕೂ ಜ್ಞಾಪಕ ಮಾಡಿಕೊಂಡಿದ್ದಾರೆ.
10ದೇವರು ಅದನ್ನು ಯಾಕೋಬನಿಗೆ ತೀರ್ಪನ್ನಾಗಿ ದೃಢಪಡಿಸಿದರು; ಅವರು ಇಸ್ರಾಯೇಲರಿಗೆ ನಿತ್ಯ ಒಡಂಬಡಿಕೆಯಾಗಿ ಸ್ಥಾಪಿಸಿ ಹೇಳಿದ್ದೇನೆಂದರೆ:
11“ನಾನು ನಿಮಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯತೆಯ ಪಾಲಾಗಿ ಕೊಡುವೆನು.”
12ಆಗ ಅವರು ಅಲ್ಪಸಂಖ್ಯಾತರೂ, ಬಹು ಸ್ವಲ್ಪ ಮಂದಿಯಾಗಿಯೂ, ಪರದೇಶಸ್ಥರಾಗಿಯೂ ನಾಡಿನಲ್ಲಿ ಇದ್ದರು.
13ಅವರು ಜನಾಂಗದಿಂದ ಜನಾಂಗಕ್ಕೂ ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೂ ಹೋಗುತ್ತಿದ್ದರು.
14ಜನರು ಅವರಿಗೆ ಕೇಡು ಮಾಡದಂತೆ ದೇವರು ತಡೆದರು. ಹೌದು, ಅವರಿಗೋಸ್ಕರ ದೇವರು ಅರಸರನ್ನು ಗದರಿಸಿ ಹೀಗೆ ಹೇಳಿದರು:
15“ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ, ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ.”
16ದೇವರು ಕ್ಷಾಮವನ್ನು ದೇಶದಲ್ಲಿ ಅನುಮತಿಸಿದರು. ಆಹಾರದ ಒದಗುವಿಕೆಯನ್ನು ಸ್ವಲ್ಪಕಾಲ ನಿಲ್ಲಿಸಿದ್ದರು.
17ಆಗ ದೇವರು ಅವರ ಮುಂದೆ ಒಬ್ಬ ಮನುಷ್ಯನನ್ನು ಕಳುಹಿಸಿದರು. ಅವನೇ ದಾಸನಾಗಿ ಮಾರಲಾದ ಯೋಸೇಫನು.
18ಸಂಕೋಲೆಗಳಿಂದ ಅವನ ಕಾಲನ್ನು ನೋಯಿಸಿದರು; ಅವನನ್ನು ಕಬ್ಬಿಣದ ಬೇಡಿಗಳಲ್ಲಿ ಇರಿಸಿದರು.
19ಯೆಹೋವ ದೇವರ ಮುಂತಿಳಿಸಿದ ವಾಕ್ಯವು ನೆರವೇರುವವರೆಗೆ ಅವನು ದೇವರ ಮಾತಿನಿಂದ ಪರಿಶೋಧಿತನಾದನು.
20ಅರಸನು ಅವನನ್ನು ಕರೆದು ಸೆರೆಯಿಂದ ಬಿಡಿಸಿದನು. ಹೌದು, ಜನಗಳ ಅಧಿಪತಿಯಿಂದ ಅವನು ಬಿಡುಗಡೆಯಾದನು.
21ಅರಸನು ಅವನನ್ನು ತನ್ನ ಮನೆಗೆ ಯಜಮಾನನಾಗಿಯೂ, ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಪತಿಯಾಗಿಯೂ,
22ತನ್ನ ಪ್ರಧಾನರಿಗೆ ತನ್ನ ಇಷ್ಟ ಪ್ರಕಾರ ಶಿಕ್ಷಣ ಕೊಡುವುದಕ್ಕೂ, ತನ್ನ ಜ್ಞಾನವನ್ನು ಮಂತ್ರಿಗಳಿಗೆ ಬೋಧಿಸುವುದಕ್ಕೂ ಯೋಸೇಫನನ್ನು ನೇಮಿಸಿದನು.
23ಅನಂತರ ಇಸ್ರಾಯೇಲನು ಈಜಿಪ್ಟಿಗೆ ಬಂದನು; ಯಾಕೋಬನು ಹಾಮನ ದೇಶದಲ್ಲಿ ಪರದೇಶಸ್ಥನಾಗಿದ್ದನು.
24ದೇವರು ತಮ್ಮ ಜನರನ್ನು ಬಹಳ ಅಭಿವೃದ್ಧಿಗೊಳಿಸಿ, ಅವರನ್ನು ವೈರಿಗಳಿಗಿಂತ ಬಲಿಷ್ಟರನ್ನಾಗಿ ಮಾಡಿದರು.
25ತಮ್ಮ ಜನರನ್ನು ದ್ವೇಷಿಸುವಂತೆಯೂ, ತಮ್ಮ ಸೇವಕರನ್ನು ಕುಯುಕ್ತಿಯಿಂದ ನಡೆಸುವಂತೆಯೂ ದೇವರು ಅವರ ಹೃದಯವನ್ನು ಮಾರ್ಪಡಿಸಿದನು.
26ದೇವರು ತಮ್ಮ ಸೇವಕ ಮೋಶೆಯನ್ನೂ, ಆಯ್ದುಕೊಂಡ ಆರೋನನನ್ನೂ ಕಳುಹಿಸಿದರು.
27ಇವರು ದೇವರ ಸೂಚಕಕಾರ್ಯಗಳನ್ನೂ, ಹಾಮನ ದೇಶದಲ್ಲಿ ಅದ್ಭುತಗಳನ್ನೂ ಅವರೊಳಗೆ ತೋರಿಸಿದರು.
28ದೇವರು ಕತ್ತಲೆಯನ್ನು ಕಳುಹಿಸಿ, ದೇಶವನ್ನೆಲ್ಲಾ ಕತ್ತಲು ಮಾಡಿದರು. ದೇವರ ಮಾತಿಗೆ ಈಜಿಪ್ಟನವರು ವಿರೋಧವಾಗಿ ತಿರುಗಿ ಬಿದ್ದರಲ್ಲವೇ?
29ದೇವರು ಅವರ ನೀರನ್ನು ರಕ್ತವಾಗಿ ಮಾರ್ಪಡಿಸಿದರು. ಅವರ ಮೀನುಗಳನ್ನು ನಾಶಮಾಡಿದರು.
30ಅವರ ದೇಶವು ಕಪ್ಪೆಗಳಿಂದ ತುಂಬಿಕೊಂಡಿತು; ಅವರ ಅರಸುಗಳ ಕೊಠಡಿಗಳಲ್ಲಿ ಸಹ ಅವು ನುಗ್ಗಿದವು.
31ದೇವರು ಆಜ್ಞಾಪಿಸಲು ನೊಣದ ಗುಂಪುಗಳೂ, ಅವರ ಮೇರೆಗಳಲ್ಲೆಲ್ಲಾ ಹೇನುಗಳೂ ಬಂದವು.
32ದೇವರು ಕಲ್ಮಳೆಯನ್ನೂ, ಅಗ್ನಿ ಜ್ವಾಲೆಗಳನ್ನೂ ಅವರ ದೇಶದಲ್ಲಿ ಬರಮಾಡಿದರು.
33ಅವರ ದ್ರಾಕ್ಷಿಯ ಬಳ್ಳಿ, ಅಂಜೂರದ ಗಿಡಗಳು ಹಾಗೂ ಅವರ ಮೇರೆಗಳ ಮರಗಳು ಮುರಿದು ಬಿದ್ದವು.
34ದೇವರು ಆಜ್ಞಾಪಿಸಲು ಮಿಡತೆಗಳೂ, ಲೆಕ್ಕವಿಲ್ಲದ ಕಂಬಳಿ ಹುಳುಗಳೂ ಬಂದವು.
35ಅವು ಈಜಿಪ್ಟ್ ದೇಶದಲ್ಲಿ ಎಲ್ಲಾ ಸಸ್ಯಗಳನ್ನು ತಿಂದುಬಿಟ್ಟವು; ಅವರ ಭೂಮಿಯ ಫಲಗಳನ್ನು ಸಹ ತಿಂದುಬಿಟ್ಟವು.
36ಅವರ ದೇಶದಲ್ಲಿಯ ಎಲ್ಲಾ ಚೊಚ್ಚಲ ಮಕ್ಕಳೂ ಅವರ ಎಲ್ಲಾ ಪ್ರಮುಖರೂ ದೇವರ ಬಾಧೆಗೆ ಒಳಗಾದರು.
37ದೇವರು ಬೆಳ್ಳಿ ಬಂಗಾರಗಳ ಸಂಗಡ ಇಸ್ರಾಯೇಲರನ್ನು ಹೊರಗೆ ಬರಮಾಡಿದರು. ಅವರ ಗೋತ್ರಗಳಲ್ಲಿ ಬಲಹೀನನಾದ ಒಬ್ಬನೂ ಇರಲಿಲ್ಲ.
38ಅವರೆಲ್ಲರೂ ಹೊರಗೆ ಹೋಗುವಾಗ ಈಜಿಪ್ಟ್ ದೇಶವು ಸಂತೋಷಿಸಿತು; ಏಕೆಂದರೆ ಈಜಿಪ್ಟಿನವರಿಗೆ ಅವರನ್ನು ಕುರಿತು ಹೆದರಿಕೆ ಇತ್ತು.
39ದೇವರು ಇಸ್ರಾಯೇಲರ ನೆರಳಿಗೋಸ್ಕರ ಮೇಘವನ್ನೂ, ರಾತ್ರಿಯಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನೂ ಏರ್ಪಡಿಸಿದರು.
40ಅವರು ಕೇಳಿದಾಗ ದೇವರು ಲಾವಕ್ಕಿಗಳನ್ನು ಬರಮಾಡಿ, ಪರಲೋಕದ ಆಹಾರದಿಂದ ಅವರನ್ನು ತೃಪ್ತಿಪಡಿಸಿದರು.
41ದೇವರು ಬಂಡೆಯನ್ನು ತೆರೆಯಲು ನೀರು ಹೊರಟಿತು; ಅದು ಮರುಭೂಮಿಯಲ್ಲಿ ನದಿಯಾಗಿ ಹರಿಯಿತು.
42ಹೀಗೆ ದೇವರು ತಮ್ಮ ಪರಿಶುದ್ಧ ವಾಗ್ದಾನವನ್ನೂ, ತಮ್ಮ ಸೇವಕನಾದ ಅಬ್ರಹಾಮನನ್ನೂ ಜ್ಞಾಪಕಮಾಡಿಕೊಂಡರು.
43ದೇವರು ತಮ್ಮ ಜನರನ್ನು ಆನಂದದಿಂದಲೂ, ತಾವು ಆಯ್ದುಕೊಂಡವರನ್ನು ಉತ್ಸಾಹದಿಂದಲೂ ಹೊರತಂದರು.
44ದೇವರು ಜನಾಂಗಗಳ ದೇಶಗಳನ್ನು ಅವರಿಗೆ ಕೊಟ್ಟರು. ಇಸ್ರಾಯೇಲರು ಇತರರ ಕಷ್ಟಾರ್ಜಿತವನ್ನು ತಮಗಾಗಿ ಸ್ವಾಧೀನಮಾಡಿಕೊಂಡರು.
45ದೇವರ ಸೂತ್ರಗಳನ್ನು ಕೈಗೊಂಡು, ಅವರ ನಿಯಮಗಳನ್ನು ಇಸ್ರಾಯೇಲರು ಕಾಯಬೇಕೆಂಬ ಉದ್ದೇಶದಿಂದಲೇ ಹೀಗೆಲ್ಲಾ ಆಯಿತು. ಯೆಹೋವ ದೇವರನ್ನು ಸ್ತುತಿಸಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.