Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 104

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನನ್ನ ಮನವೇ, ಯೆಹೋವ ದೇವರನ್ನು ಸ್ತುತಿಸು. ನನ್ನ ದೇವರಾದ ಯೆಹೋವ ದೇವರೇ, ನೀವು ಬಹಳ ದೊಡ್ಡವರಾಗಿದ್ದೀರಿ; ಘನತೆಯಿಂದಲೂ, ಪ್ರಭಾವದಿಂದಲೂ ಭೂಷಿತನಾಗಿರುವೆ.
2ದೇವರು ವಸ್ತ್ರದ ಹಾಗೆ ಬೆಳಕನ್ನು ಧರಿಸಿಕೊಳ್ಳುತ್ತಾರೆ, ಆಕಾಶವನ್ನು ಗುಡಾರದ ಹಾಗೆ ಹರಡಿಸಿದ್ದಾರೆ.
3ದೇವರು ನೀರಿನ ಮೇಲೆ ತನ್ನ ಉಪ್ಪರಿಗೆಗಳ ತೊಲೆಗಳನ್ನು ಇರಿಸುತ್ತಾರೆ. ಮೋಡಗಳನ್ನು ತಮ್ಮ ರಥವಾಗಿ ಮಾಡುತ್ತಾರೆ. ಗಾಳಿಯ ರೆಕ್ಕೆಗಳ ಮೇಲೆ ಸವಾರಿ ಮಾಡುತ್ತಾರೆ.
4ಅವರು ಗಾಳಿಗಳನ್ನು ತಮ್ಮ ದೂತರಾಗಿ ಮಾಡಿದ್ದಾರೆ, ಅಗ್ನಿ ಜ್ವಾಲೆಯನ್ನು ತಮ್ಮ ಸೇವಕರಾಗಿಯೂ ಮಾಡಿಕೊಂಡಿದ್ದಾರೆ.
5ಯುಗಯುಗಾಂತರಗಳಿಗೂ ಅದು ಕದಲದ ಹಾಗೆ, ದೇವರು ಭೂಮಿಯನ್ನು ಅದರ ಅಸ್ತಿವಾರಗಳ ಮೇಲೆ ಸ್ಥಾಪಿಸಿದ್ದಾರೆ.
6ಜಲಗಾಧವು ವಸ್ತ್ರದ ಹಾಗೆ ಅದನ್ನು ಮುಚ್ಚಿದೆ; ಬೆಟ್ಟಗಳ ಮೇಲೆ ಜಲರಾಶಿಗಳು ನಿಂತವು.
7ನಿಮ್ಮ ಗದರಿಕೆಯಿಂದ ಜಲರಾಶಿ ಓಡಿ ಹೋದವು; ನಿಮ್ಮ ಗುಡುಗಿನ ಶಬ್ದದಿಂದ ಅವು ಓಡಿ ಹೋದವು.
8ಜಲರಾಶಿಗಳು ಬೆಟ್ಟಗಳಿಗೆ ಏರಿ, ತಗ್ಗುಗಳಿಗೆ ಇಳಿದು, ನೀವು ಅವುಗಳಿಗೆ ಸ್ಥಾಪಿಸಿದ ಸ್ಥಳಕ್ಕೆ ಹೋದವು.
9ಅವು ದಾಟದ ಹಾಗೆಯೂ, ಭೂಮಿಯನ್ನು ಮುಚ್ಚುವುದಕ್ಕೆ ತಿರುಗಿ ಬಾರದ ಹಾಗೆಯೂ ನೀವು ಮೇರೆಯನ್ನು ಇಟ್ಟಿದ್ದೀರಿ.
10ಬುಗ್ಗೆಗಳನ್ನು ಹಳ್ಳಗಳಿಗೆ ಕಳುಹಿಸುತ್ತೀರಿ. ಅವು ಬೆಟ್ಟಗಳ ನಡುವೆ ಹರಿಯುತ್ತವೆ.
11ಅವು ಕಾಡಿನ ಮೃಗಗಳಿಗೆಲ್ಲಾ ನೀರು ಕುಡಿಸುತ್ತವೆ; ಕಾಡುಕತ್ತೆಗಳು ತಮ್ಮ ದಾಹವನ್ನು ತೀರಿಸಿಕೊಳ್ಳುತ್ತವೆ.
12ಆಕಾಶದ ಪಕ್ಷಿಗಳು, ಅವುಗಳ ಹತ್ತಿರ ವಾಸವಾಗಿದ್ದು, ಕೊಂಬೆಗಳ ಮಧ್ಯದಲ್ಲಿಂದ ಹಾಡುತ್ತವೆ.
13ದೇವರು ಬೆಟ್ಟಗಳಿಗೆ ತಮ್ಮ ಉಪ್ಪರಿಗೆಗಳೊಳಗಿಂದ ನೀರು ಹಾಕುತ್ತಾರೆ. ಅವರ ಕೆಲಸಗಳ ಫಲದಿಂದ ಭೂಮಿಯು ತೃಪ್ತಿಯಾಗುತ್ತದೆ.
14ದೇವರು ಪಶುಗಳಿಗೋಸ್ಕರ ಹುಲ್ಲನ್ನೂ, ಮನುಷ್ಯನ ವ್ಯವಸಾಯಕ್ಕೋಸ್ಕರ ಪಲ್ಯಗಳನ್ನೂ ಮೊಳೆಸುತ್ತಾರೆ. ಹೀಗೆ ಭೂಮಿಯೊಳಗಿಂದ ಆಹಾರವನ್ನು ಬರಮಾಡುತ್ತಾರೆ.
15ದ್ರಾಕ್ಷಾರಸವು ಮನುಷ್ಯ ಹೃದಯವನ್ನು ಸಂತೋಷಪಡಿಸುತ್ತದೆ; ಎಣ್ಣೆಯು ಮಾನವನ ಮುಖವನ್ನು ಪ್ರಕಾಶಿಸುವಂತೆ ಮಾಡುತ್ತದೆ; ರೊಟ್ಟಿಯು ಮನುಷ್ಯನ ಪ್ರಾಣಕ್ಕೆ ಆಧಾರವಾಗುತ್ತದೆ.
16ಯೆಹೋವ ದೇವರು ನೆಟ್ಟ ಮರಗಳಾದ ಲೆಬನೋನಿನ ದೇವದಾರು ವೃಕ್ಷಗಳಿಗೆ ಬೇಕಾದಷ್ಟು ಜಲವಿರುತ್ತದೆ.
17ಅಲ್ಲಿ ಹಕ್ಕಿಗಳು ಗೂಡು ಕಟ್ಟುತ್ತವೆ; ತುರಾಯಿ ಗಿಡಗಳಲ್ಲಿ ಬಕಪಕ್ಷಿಗಳು ವಾಸಿಸುತ್ತವೆ.
18ಎತ್ತರವಾದ ಬೆಟ್ಟಗಳು ಕಾಡುಮೇಕೆಗಳಿಗೆ, ಬೆಟ್ಟದ ಮೊಲಗಳಿಗೆ ಬಂಡೆಗಳು ಆಶ್ರಯವಾಗಿವೆ.
19ದೇವರೇ, ಕಾಲಗಳ ಸೂಚನೆಗಾಗಿ ಚಂದ್ರನನ್ನು ಸೃಷ್ಟಿಸಿದ್ದೀರಿ, ಸೂರ್ಯನು ತನ್ನ ಅಸ್ತಮಾನವನ್ನು ತಿಳಿದಿದ್ದಾನೆ.
20ನೀವು ಕತ್ತಲನ್ನು ಬರಮಾಡುತ್ತೀರಿ, ಆಗ ರಾತ್ರಿಯಾಗುತ್ತದೆ; ಅದರಲ್ಲಿ ಅಡವಿಯ ಮೃಗಗಳೆಲ್ಲಾ ಸಂಚರಿಸುತ್ತವೆ.
21ಸಿಂಹದ ಮರಿಗಳು ಬೇಟೆಗೋಸ್ಕರವೂ, ದೇವರಿಂದ ತಮ್ಮ ಆಹಾರವನ್ನು ಹುಡುಕುವುದಕ್ಕೋಸ್ಕರವೂ ಗರ್ಜಿಸುತ್ತವೆ.
22ಸೂರ್ಯೋದಯವಾಗಲು ಅವು ಕೂಡಿಬಂದು ತಮ್ಮ ಗವಿಗಳಲ್ಲಿ ಮಲಗಿಕೊಳ್ಳುತ್ತವೆ.
23ಮನುಷ್ಯನು ತನ್ನ ಕೆಲಸಕ್ಕೆ ಹೊರಟುಹೋಗಿ ಸಾಯಂಕಾಲದವರೆಗೆ ದುಡಿಯುತ್ತಾನೆ.
24ಯೆಹೋವ ದೇವರೇ, ನಿಮ್ಮ ಕೆಲಸಗಳು ಎಷ್ಟೋ ಇವೆ! ಅವುಗಳನ್ನೆಲ್ಲಾ ಜ್ಞಾನದಿಂದ ಉಂಟುಮಾಡಿದ್ದೀರಿ, ಭೂಮಿಯು ನಿಮ್ಮ ಸಂಪತ್ತಿನಿಂದ ತುಂಬಿದೆ.
25ದೊಡ್ಡದೂ, ವಿಶಾಲವಾದದ್ದೂ ಆದ ಸಮುದ್ರವಿದೆ; ಅದರಲ್ಲಿ ಲೆಕ್ಕವಿಲ್ಲದಷ್ಟು ಜೀವಜಂತುಗಳೂ, ಸಣ್ಣ ದೊಡ್ಡ ಜಲಚರಗಳೂ ಇವೆ.
26ಅದರಲ್ಲಿ ಹಡಗುಗಳು ಹೋಗುತ್ತವೆ; ಅದರಲ್ಲಿ ಆಡುವುದಕ್ಕೆ ನೀವು ರೂಪಿಸಿದ ಲಿವ್ಯಾತಾನ ತಿಮಿಂಗಲವು ಇದೆ.
27ದೇವರೇ, ನೀವು ಅವುಗಳ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುವ ಹಾಗೆ, ಅವುಗಳೆಲ್ಲಾ ನಿಮ್ಮನ್ನು ಕಾದುಕೊಂಡಿರುತ್ತವೆ.
28ನೀವು ಅವುಗಳಿಗೆ ಕೊಡಲು ಅವು ಕೂಡಿ ಬರುತ್ತವೆ; ನೀವು ನಿಮ್ಮ ಕೈ ತೆರೆಯಲು, ಒಳ್ಳೆಯವುಗಳಿಂದ ತೃಪ್ತಿ ಹೊಂದುತ್ತವೆ.
29ನೀವು ನಿಮ್ಮ ಮುಖವನ್ನು ಮರೆಮಾಡಲು, ಅವು ಹೆದರುತ್ತವೆ. ನೀವು ಅವುಗಳ ಶ್ವಾಸವನ್ನು ತೆಗೆದುಬಿಡಲು, ಸತ್ತು ಹೋಗಿ, ಮಣ್ಣುಪಾಲಾಗುತ್ತವೆ.
30ನೀವು ನಿಮ್ಮ ಶ್ವಾಸವನ್ನು ಕಳುಹಿಸಲು, ಜೀವಜಂತುಗಳು ಹುಟ್ಟುತ್ತವೆ; ಹೀಗೆ ನೀವು ಭೂಮಿಯನ್ನು ನೂತನಗೊಳಿಸುತ್ತೀರಿ.
31ಯೆಹೋವ ದೇವರ ಮಹಿಮೆಯು ಯುಗಯುಗಕ್ಕೂ ಇರಲಿ; ಯೆಹೋವ ದೇವರು ತಮ್ಮ ಕೆಲಸಗಳಲ್ಲಿ ಸಂತೋಷಪಡಲಿ.
32ಅವರು ಭೂಮಿಯನ್ನು ದೃಷ್ಟಿಸಲು, ಅದು ನಡುಗುತ್ತದೆ; ಬೆಟ್ಟಗಳನ್ನು ಮುಟ್ಟಲು, ಅವು ಹೊಗೆ ಹಾಯುತ್ತವೆ.
33ನಾನು ಜೀವಿತ ಕಾಲವೆಲ್ಲಾ ಯೆಹೋವ ದೇವರಿಗೆ ಹಾಡುತ್ತಿರುವೆನು. ನಾನು ಬದುಕಿರುವವರೆಗೆ ದೇವರನ್ನು ಸ್ತುತಿಸುತ್ತಿರುವೆನು.
34ದೇವರ ವಿಷಯವಾದ ನನ್ನ ಧ್ಯಾನವು ಮಧುರವಾಗಿರುವುದು; ನಾನು ಯೆಹೋವ ದೇವರಲ್ಲಿ ಸಂತೋಷ ಪಡುವೆನು.
35ಪಾಪಿಗಳು ಭೂಮಿಯೊಳಗಿಂದ ಮುಗಿದು ಹೋಗಲಿ; ದುಷ್ಟರು ಇಲ್ಲದೆ ಹೋಗಲಿ. ನನ್ನ ಮನವೇ, ಯೆಹೋವ ದೇವರನ್ನು ಸ್ತುತಿಸು. ಯೆಹೋವ ದೇವರಿಗೆ ಸ್ತೋತ್ರವಾಗಲಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.