Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 106

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ; ಅವರು ಒಳ್ಳೆಯವರು. ಅವರ ಪ್ರೀತಿ ಶಾಶ್ವತವಾಗಿರುವುದು.
2ಯೆಹೋವ ದೇವರ ಪರಾಕ್ರಮ ಕ್ರಿಯೆಗಳನ್ನು ಪ್ರಕಟಿಸಿರಿ, ದೇವರನ್ನು ತಕ್ಕಂತೆ ಸ್ತುತಿಸುವವರು ಯಾರಿಗೆ ಸಾಧ್ಯ?
3ನ್ಯಾಯವನ್ನು ಕಾಪಾಡಿಕೊಂಡು ಯಾವಾಗಲೂ ಸರಿಯಾದವುಗಳನ್ನು ಪಾಲಿಸುವವರು ಧನ್ಯರು.
4ದೇವರೇ, ನಿಮ್ಮ ಜನರ ಮೇಲಿರುವ ಮೆಚ್ಚುಗೆಯಿಂದ ನನ್ನನ್ನು ಜ್ಞಾಪಕಮಾಡಿಕೊಳ್ಳಿರಿ, ನಿಮ್ಮ ರಕ್ಷಣೆಯಿಂದ ನನ್ನನ್ನು ದರ್ಶಿಸಿರಿ.
5ಯೆಹೋವ ದೇವರೇ, ನಾನು ನೀವು ಆಯ್ದುಕೊಂಡವರ ಸುಖವನ್ನು ಕಂಡು, ನಿಮ್ಮ ಜನರ ಸಂತೋಷದೊಂದಿಗೆ ಸಂತೋಷಿಸಿ, ನಿಮ್ಮ ಸ್ವಕೀಯರ ಸಂಗಡ ಹೊಗಳಿಕೊಳ್ಳುವೆನು.
6ನಮ್ಮ ಪಿತೃಗಳಂತೆ ನಾವು ಕೂಡಾ ಪಾಪಮಾಡಿದ್ದೇವೆ; ಅಕ್ರಮ ಮಾಡಿದ್ದೇವೆ; ದುಷ್ಟಕೃತ್ಯಗಳನ್ನು ನಡೆಸಿದ್ದೇವೆ.
7ನಮ್ಮ ಪಿತೃಗಳು ಈಜಿಪ್ಟಿನಲ್ಲಿ ನಿಮ್ಮ ಅದ್ಭುತಗಳಿಗೆ ಲಕ್ಷಕೊಡದೆ, ನಿಮ್ಮ ಕರುಣಾತಿಶಯವನ್ನು ನೆನಸದೆ, ಸಮುದ್ರದ ಬಳಿಯಲ್ಲಿ ಅಂದರೆ ಕೆಂಪುಸಮುದ್ರದ ಹತ್ತಿರ ತಿರುಗಿಬಿದ್ದರು.
8ಆದರೂ ದೇವರು ತಮ್ಮ ಮಹಾಶಕ್ತಿಯನ್ನು ಅವರಿಗೆ ತಿಳಿಯಮಾಡುವ ಹಾಗೆ, ತಮ್ಮ ಹೆಸರಿನ ನಿಮಿತ್ತ ಅವರನ್ನು ರಕ್ಷಿಸಿದರು.
9ದೇವರು ಕೆಂಪು ಸಮುದ್ರವನ್ನು ಗದರಿಸಲು, ಅದು ಒಣಗಿ ಹೋಯಿತು; ಹೀಗೆ ಮರುಭೂಮಿಯಲ್ಲಿ ನಡೆದು ಹೋದಂತೆ ಜಲಾಗಾಧದಲ್ಲಿ ಇಸ್ರಾಯೇಲರನ್ನು ನಡೆಸಿದರು.
10ವೈರಿಯ ಕೈಯೊಳಗಿಂದ ಅವರನ್ನು ರಕ್ಷಿಸಿದರು, ಶತ್ರುವಿನ ಕೈಯಿಂದ ಅವರನ್ನು ಬಿಡುಗಡೆ ಮಾಡಿದರು.
11ಪ್ರವಾಹಗಳು ಅವರ ವೈರಿಗಳನ್ನು ಮುಚ್ಚಿಬಿಟ್ಟವು, ವೈರಿಗಳಲ್ಲಿ ಒಬ್ಬನೂ ಉಳಿಯಲಿಲ್ಲ.
12ಆಗ ಅವರು ದೇವರ ಮಾತುಗಳನ್ನು ನಂಬಿ, ದೇವರಿಗೆ ಸ್ತೋತ್ರವನ್ನು ಹಾಡಿದರು.
13ಆದರೆ ಬೇಗನೇ ದೇವರು ಮಾಡಿದ ಕೆಲಸಗಳನ್ನು ಮರೆತುಬಿಟ್ಟು, ದೇವರ ಸಂಕಲ್ಪಕ್ಕೆ ಅವರು ಕಾದುಕೊಳ್ಳದೆ ಹೋದರು.
14ಮರುಭೂಮಿಯಲ್ಲಿ ದುರಾಶೆಯಿಂದ ಆಶಿಸಿ, ಹಾಳು ಪ್ರದೇಶದಲ್ಲಿ ದೇವರನ್ನು ಪರೀಕ್ಷಿಸಿದರು.
15ಆಗ ದೇವರು ಅವರ ಬೇಡಿಕೆಯಂತೆಯೇ ಅವರಿಗೆ ಕೊಟ್ಟುಬಿಟ್ಟರು; ಆದರೆ ಅವರ ದೇಹಕ್ಕೆ ಭೀಕರ ರೋಗವನ್ನು ಸಹ ಅನುಮತಿಸಿದರು.
16ಇಸ್ರಾಯೇಲರು ಪಾಳೆಯದಲ್ಲಿ ಮೋಶೆಯ ಮೇಲೆಯೂ, ಯೆಹೋವ ದೇವರಿಗೆ ಪ್ರತಿಷ್ಠಿತನಾದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಟ್ಟರು.
17ಆಗ ಭೂಮಿಯು ಬಾಯಿತೆರೆದು ದಾತಾನನನ್ನು ನುಂಗಿ, ಅಬೀರಾಮನ ಗುಂಪನ್ನು ಮುಚ್ಚಿಬಿಟ್ಟಿತು.
18ಬೆಂಕಿಯು ಅವರ ಗುಂಪಿನಲ್ಲಿ ಉರಿದು, ಜ್ವಾಲೆಯು ದುಷ್ಟರನ್ನು ಸುಟ್ಟಿತು.
19ಅವರು ಹೋರೇಬಿನಲ್ಲಿ ಎರಕದ ಕರುವನ್ನು ಮಾಡಿ, ಆ ವಿಗ್ರಹಕ್ಕೆ ಅಡ್ಡಬಿದ್ದರು.
20ಹೀಗೆ ಅವರು ತಮ್ಮ ಮಹಿಮೆಯುಳ್ಳ ದೇವರನ್ನು ಹುಲ್ಲು ತಿನ್ನುವ ಎತ್ತಿನ ರೂಪಕ್ಕೆ ಬದಲಾಯಿಸಿದರು.
21ಅವರು ತಮ್ಮನ್ನು ರಕ್ಷಿಸಿದ ದೇವರನ್ನು ಬೇಗ ಮರೆತುಬಿಟ್ಟರು. ಹೌದು, ಈಜಿಪ್ಟ್ ದೇಶದಲ್ಲಿ ಮಹತ್ಕಾರ್ಯಗಳನ್ನೂ,
22ಹಾಮ ದೇಶದಲ್ಲಿ ಅದ್ಭುತಗಳನ್ನೂ, ಕೆಂಪುಸಮುದ್ರದ ಬಳಿಯಲ್ಲಿ ಅತಿಶಯವಾದವುಗಳನ್ನೂ ಮಾಡಿದ ದೇವರನ್ನು ಮರೆತುಬಿಟ್ಟರು.
23ಆದ್ದರಿಂದ ದೇವರು ಅವರಿಗೆ ಪೂರ್ಣದಂಡನೆ ಕೊಡುವುದಾಗಿ ಹೇಳಿದರು. ಆದರೆ ಅವರು ಆಯ್ದುಕೊಂಡ ಮೋಶೆಯು, ದೇವರ ಕಠಿಣ ತೀರ್ಮಾನವನ್ನು ಶಾಂತಪಡಿಸಲು ಆಪತ್ತಿನಲ್ಲಿ ದೇವರ ಮುಂದೆ ಮಧ್ಯಸ್ಥನಾಗಿ ನಿಂತುಕೊಂಡನು.
24ಹೌದು, ಇಸ್ರಾಯೇಲರು ಮನೋಹರವಾದ ದೇಶವನ್ನು ಹೀನೈಸಿ, ದೇವರ ಮಾತನ್ನು ನಂಬದೆ ಹೋದರು.
25ತಮ್ಮ ಗುಡಾರಗಳಲ್ಲಿ ಗೊಣಗುಟ್ಟಿ ಯೆಹೋವ ದೇವರ ಮಾತನ್ನು ಹೇಳದೆ ಹೋದರು.
26ಆದ್ದರಿಂದ ದೇವರು ಅವರನ್ನು ಮರುಭೂಮಿಯಲ್ಲಿ ಬೀಳುವಂತೆಯೂ, ಅವರ ಸಂತತಿಯರು ದೇಶಗಳಲ್ಲಿ ಚದರಿಸುವಂತೆಯೂ
27ತಮ್ಮ ಕೈಯನ್ನು ಎತ್ತಿ ಅವರಿಗೆ ಪ್ರಮಾಣ ಮಾಡಬೇಕಾಯಿತು.
28ಇಸ್ರಾಯೇಲರು ಬಾಳ್ ಪೆಯೋರನ ದೇವತೆಗೆ ತಮ್ಮನ್ನು ಒಪ್ಪಿಸಿಕೊಟ್ಟರು; ಜೀವವಿಲ್ಲದ ದೇವರುಗಳಿಗೆ ಅರ್ಪಿಸಿದ ಯಜ್ಞಗಳನ್ನು ತಿಂದರು.
29ತಮ್ಮ ಕ್ರಿಯೆಗಳಿಂದ ದೇವರನ್ನು ಅಸಂತೋಷಪಡಿಸಿದರು. ಆದ್ದರಿಂದ ವ್ಯಾಧಿಯು ಅವರಲ್ಲಿ ಹಬ್ಬಿತು.
30ಆಗ ಫೀನೆಹಾಸನು ಎದ್ದು ಬಂದು ದಂಡಿಸಿದ್ದರಿಂದ ವ್ಯಾಧಿ ನಿಂತುಹೋಯಿತು.
31ಇದು ತಲತಲಾಂತರಕ್ಕೂ, ಯುಗಯುಗಕ್ಕೂ ಫೀನೆಹಾಸನಿಗೆ ನೀತಿ ಎಂದು ಎಣಿಸಲಾಯಿತು.
32ಮೆರೀಬಾದ ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು. ಅಲ್ಲಿ ಅವರ ನಿಮಿತ್ತ ಮೋಶೆಗೆ ಕೇಡು ಬಂತು.
33ಏಕೆಂದರೆ ಇಸ್ರಾಯೇಲರು ದೇವರ ಆತ್ಮನಿಗೆ ತಿರುಗಿ ಬಿದ್ದದ್ದರಿಂದ, ಮೋಶೆ ದುಡುಕಿ ಮಾತನಾಡಿದನು.
34ಯೆಹೋವ ದೇವರು ಅವರಿಗೆ ಆಜ್ಞಾಪಿಸಿದ ಜನಗಳನ್ನು ಅವರು ದಂಡಿಸದೆ ಹೋದರು.
35ಆದರೆ ಇತರ ಜನಾಂಗಗಳ ಸಂಗಡ ಕೂಡಿಕೊಂಡು, ಅವರ ಪದ್ಧತಿಗಳನ್ನು ಕಲಿತುಕೊಂಡರು.
36ಅವರ ವಿಗ್ರಹಗಳಿಗೆ ಆರಾಧನೆ ಮಾಡಿದರು; ಅವು ಅವರಿಗೆ ಉರುಲಿನಂತಾದವು.
37ತಮ್ಮ ಗಂಡು ಮಕ್ಕಳನ್ನೂ, ಹೆಣ್ಣು ಮಕ್ಕಳನ್ನೂ ಸುಳ್ಳು ದೇವರುಗಳಿಗೆ ಬಲಿಕೊಟ್ಟರು.
38ಇದಲ್ಲದೆ ತಮ್ಮ ಗಂಡು ಹೆಣ್ಣು ಮಕ್ಕಳ ನಿರಪರಾಧದ ರಕ್ತವನ್ನು ಚೆಲ್ಲಿ, ಕಾನಾನಿನ ವಿಗ್ರಹಗಳಿಗೆ ಅರ್ಪಿಸಿ, ದೇಶವನ್ನು ರಕ್ತದಿಂದ ಅಶುದ್ಧ ಮಾಡಿದರು.
39ಹೀಗೆ ತಮ್ಮ ದುಷ್ಕೃತ್ಯಗಳಿಂದ ತಮ್ಮನ್ನು ಅಪವಿತ್ರ ಮಾಡಿಕೊಂಡು, ತಮ್ಮ ಕ್ರಿಯೆಗಳಿಂದ ದುರಾಚಾರಿಗಳಾದರು.
40ಆಗ ಯೆಹೋವ ದೇವರು ತಮ್ಮ ಜನರ ಮೇಲೆ ಬಹು ಬೇಸರಗೊಂಡರು. ದೇವರು ತಮ್ಮ ವಾರಸುದಾರರಾದ ಇಸ್ರಾಯೇಲರ ಮೇಲೆ ಅಸಂತೋಷಗೊಂಡು,
41ಅವರನ್ನು ಇತರ ಜನಾಂಗಗಳ ಕೈಗೆ ಒಪ್ಪಿಸಿಕೊಟ್ಟರು. ಹೀಗೆ ಅವರ ವೈರಿಗಳು ಅವರನ್ನು ಆಳಿದರು.
42ಅವರ ಶತ್ರುಗಳು ಅವರನ್ನು ಬಾಧೆಪಡಿಸಿದರು; ಅವರ ಕೈಕೆಳಗೆ ಅವರು ಅಧೀನರಾದರು.
43ಅನೇಕ ಸಾರಿ ದೇವರು ಇಸ್ರಾಯೇಲರನ್ನು ಬಿಡಿಸಿದರು, ಆದರೆ ಅವರು ತಿರುಗಿಬೀಳುತ್ತಲೇ ಇದ್ದರು; ತಮ್ಮ ಅಕ್ರಮದಿಂದಲೇ ಅವರು ಕುಗ್ಗಿಹೋದರು;
44ಆದರೂ ಅವರ ಕೂಗನ್ನು ದೇವರು ಕೇಳಿದಾಗ ಇಕ್ಕಟ್ಟಿನಲ್ಲಿದ್ದ ಅವರ ಮೇಲೆ ಲಕ್ಷ್ಯವಿಟ್ಟು,
45ಅವರಿಗಾಗಿ ತಮ್ಮ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು, ತಮ್ಮ ಅತಿಶಯವಾದ ಪ್ರೀತಿಯ ಪ್ರಕಾರ,
46ಅವರನ್ನು ಸೆರೆಹಿಡಿದವರ ಕರುಣೆ ತೋರುವಂತೆ ಮಾಡಿದರು.
47ನಮ್ಮ ದೇವರಾದ ಯೆಹೋವ ದೇವರೇ, ನಾವು ನಿಮ್ಮ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ, ನಿಮ್ಮ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ, ನಮ್ಮನ್ನು ರಕ್ಷಿಸಿರಿ.
48ಇಸ್ರಾಯೇಲ್ ದೇವರಾದ ಯೆಹೋವ ದೇವರಿಗೆ ಯುಗಯುಗಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲರೂ, “ಆಮೆನ್!” ಎಂದು ಹೇಳಲಿ. ನೀವು ಯೆಹೋವ ದೇವರನ್ನು ಸ್ತುತಿಸಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.