Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಜ್ಞಾನೋಕ್ತಿಗಳು 8

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಜ್ಞಾನವು ಕರೆಯುತ್ತದಲ್ಲವೋ? ತಿಳುವಳಿಕೆ ಎಂಬಾಕೆಯು ತನ್ನ ಸ್ವರವನ್ನು ಎತ್ತಿ ಕೂಗಿ ಕರೆಯುವುದಿಲ್ಲವೋ?
2ಉನ್ನತ ಸ್ಥಳಗಳ ತುದಿಯಲ್ಲಿಯೂ, ಹಾದಿಗಳ ಸಂಧಿಗಳಲ್ಲಿಯೂ ನಿಂತುಕೊಳ್ಳುತ್ತಾಳೆ.
3ಪಟ್ಟಣದ ಪ್ರವೇಶ ದ್ವಾರಗಳಲ್ಲಿಯೂ ಒಳಗೆ ಬರುವಾಗ ಅವಳು ಸ್ವರವೆತ್ತಿ ಹೇಳುವುದೇನೆಂದರೆ,
4“ಮನುಷ್ಯರೇ, ನಾನು ಕರೆಯುತ್ತಿರುವುದು ನಿಮ್ಮನ್ನೇ, ಮಾನವರಿಗಾಗಿಯೇ ನಾನು ಧ್ವನಿಗೈಯುತ್ತೇನೆ.
5ಮುಗ್ಧರೇ, ಜ್ಞಾನವನ್ನು ಗ್ರಹಿಸಿರಿ. ಬುದ್ಧಿಹೀನರೇ, ನೀವು ತಿಳುವಳಿಕೆಯ ಹೃದಯದವರಾಗಿರಿ.
6ಕೇಳಿರಿ, ಉತ್ಕೃಷ್ಟ ಸಂಗತಿಗಳನ್ನು ನಾನು ಮಾತಾಡುವೆನು; ನ್ಯಾಯವಾದ ಸಂಗತಿಗಳಿಗಾಗಿ ನನ್ನ ತುಟಿಗಳನ್ನು ತೆರೆಯುವೆನು.
7ನನ್ನ ಬಾಯಿಯು ಸತ್ಯವನ್ನು ಮಾತಾಡುವುದು; ನನ್ನ ತುಟಿಗಳಿಗೆ ಕೆಟ್ಟತನವು ಅಸಹ್ಯವಾಗಿದೆ.
8ನನ್ನ ಬಾಯಿಯ ಮಾತುಗಳೆಲ್ಲಾ ನೀತಿಯುಕ್ತವಾಗಿವೆ; ಮೂರ್ಖತನವಾಗಲಿ, ವಕ್ರತೆಯಾಗಲಿ ಅವುಗಳಲ್ಲಿ ಇಲ್ಲ.
9ವಿವೇಚಿಸುವವನಿಗೆ ನನ್ನ ಎಲ್ಲ ಮಾತುಗಳು ನೇರವಾಗಿರುವುದು. ತಿಳುವಳಿಕೆ ಉಳ್ಳವನಿಗೆ ಅವು ಪ್ರಾಮಾಣಿಕವಾಗಿಯೂ ಇರುವುದು.
10ಬೆಳ್ಳಿಗಿಂತ ನನ್ನ ಬೋಧನೆಯನ್ನು ಆರಿಸಿಕೋ ಉತ್ತಮ ಬಂಗಾರಕ್ಕಿಂತ ಮಿಗಿಲಾದ ತಿಳುವಳಿಕೆಯನ್ನು ಪಡೆದುಕೋ.
11ಏಕೆಂದರೆ ಮಾಣಿಕ್ಯಗಳಿಗಿಂತ ಜ್ಞಾನವು ಅಮೂಲ್ಯವಾದದ್ದು. ಅಪೇಕ್ಷಿಸತಕ್ಕ ಯಾವ ವಸ್ತುಗಳನ್ನು ಅದಕ್ಕೆ ಹೋಲಿಸಲಾಗದು.
12“ಜ್ಞಾನವೆಂಬ ನಾನು ವಿವೇಕದೊಂದಿಗೆ ವಾಸವಾಗಿದ್ದೇನೆ. ತಿಳುವಳಿಕೆಯನ್ನೂ ವಿವೇಚನೆಯನ್ನೂ ನಾನು ಹೊಂದಿದ್ದೇನೆ.
13ಕೆಟ್ಟದ್ದನ್ನು ಹಗೆ ಮಾಡುವುದೇ ಯೆಹೋವ ದೇವರ ಭಯವಾಗಿದೆ; ಗರ್ವ, ಅಹಂಕಾರ, ಕೆಟ್ಟನಡವಳಿಕೆ, ವಕ್ರ ಭಾಷಣಗಳನ್ನು ನಾನು ಹಗೆಮಾಡುತ್ತೇನೆ.
14ಸಮಾಲೋಚನೆಯೂ ಒಳ್ಳೆಯ ನ್ಯಾಯವೂ ನನ್ನಲ್ಲಿದೆ. ನನ್ನಲ್ಲಿ ಒಳನೋಟವೂ ಶಕ್ತಿಯೂ ಇವೆ.
15ನನ್ನ ಮೂಲಕ ರಾಜರು ಆಳುವರು; ಪ್ರಧಾನರು ನ್ಯಾಯವಾದ ತೀರ್ಪು ಕೊಡುವರು.
16ನನ್ನಿಂದ ಅಧಿಪತಿಗಳು ಆಳುತ್ತಾರೆ, ಕೀರ್ತಿವಂತರೆಲ್ಲರೂ ಭೂಮಿಯ ಮೇಲೆ ಆಳುವರು.
17ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ; ಹಂಬಲಿಸಿ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು.
18ಐಶ್ವರ್ಯವೂ ಘನತೆಯೂ, ಶಾಶ್ವತ ಸಂಪತ್ತು ಹಾಗೂ ಸಮೃದ್ಧಿಯು ನನ್ನೊಂದಿಗಿವೆ.
19ನನ್ನ ಫಲವು ಬಂಗಾರಕ್ಕಿಂತಲೂ, ನನ್ನ ಆದಾಯವು ಉತ್ತಮವಾದ ಬೆಳ್ಳಿಗಿಂತಲೂ ಶ್ರೇಷ್ಠವಾಗಿವೆ.
20ನೀತಿಯ ಮಾರ್ಗದಲ್ಲಿಯೂ ನ್ಯಾಯದ ದಾರಿ ನಡುವೆಯೂ ನಾನು ನಡೆಯುತ್ತೇನೆ.
21ನನ್ನನ್ನು ಪ್ರೀತಿಸುವವರು ಸಂಪತ್ತನ್ನು ಬಾಧ್ಯವಾಗಿ ಹೊಂದುವರು. ನಾನು ಅವರ ಬೊಕ್ಕಸಗಳನ್ನು ತುಂಬಿಸುವೆನು.
22“ಯೆಹೋವ ದೇವರು ತಮ್ಮ ಸೃಷ್ಟಿಕ್ರಮದಲ್ಲಿ ನನ್ನನ್ನು ಮೊದಲು ನಿರ್ಮಿಸಿದರು, ದೇವರ ಪುರಾತನ ಕಾರ್ಯಗಳಲ್ಲಿ ನಾನೇ ಮೊದಲು;
23ಪ್ರಾರಂಭದಲ್ಲಿ ಜಗದುತ್ಪತ್ತಿಗೆ ಮುಂಚೆಯೇ ಅನಾದಿಕಾಲದಲ್ಲಿ ದೇವರು ನನ್ನನ್ನು ಸೃಷ್ಟಿಸಿದರು.
24ಆಗಾಧಗಳು ಇಲ್ಲದೆ ಇರುವಾಗ ನಾನು ಹುಟ್ಟಿ ಬಂದೆನು, ನೀರಿನ ಬುಗ್ಗೆಗಳು ಇಲ್ಲದೆ ಇರುವಾಗಲೇ ನಾನಿದ್ದೆನು.
25ಪರ್ವತಗಳು ಸ್ಥಾಪಿತವಾಗುವುದಕ್ಕಿಂತ ಮುಂಚೆಯೂ ಬೆಟ್ಟಗುಡ್ಡಗಳಿಗಿಂತ ಮೊದಲು ನಾನು ಜನಿಸಿದೆನು.
26ಭೂಮಿಯನ್ನೂ ಹೊಲಗಳನ್ನೂ ಲೋಕದ ಅಣುಗಳನ್ನೂ ಅವರು ನಿರ್ಮಿಸದೆ ಇರುವಾಗಲೇ ನಾನು ಜನಿಸಿದೆನು.
27ಅವರು ಆಕಾಶಗಳನ್ನು ಸಿದ್ಧಪಡಿಸಿದಾಗ ಸಾಗರದ ಮೇಲೆ ಚಕ್ರವನ್ನು ಹಾಕಿದಾಗ,
28ಮೇಲೆ ಮೇಘಗಳನ್ನು ಅವರು ಸ್ಥಾಪಿಸಿದಾಗ ಅಗಾಧದ ಬುಗ್ಗೆಗಳನ್ನು ಅವರು ಬಲಪಡಿಸಿದಾಗ,
29ಪ್ರವಾಹಗಳು ತನ್ನ ಆಜ್ಞೆಯನ್ನು ಮೀರದಂತೆ ಸಮುದ್ರಕ್ಕೆ ಅವರು ಮೇರೆಯನ್ನು ಮಾಡಿ ಭೂಮಿಯ ಅಸ್ತಿವಾರಗಳನ್ನು ನೇಮಿಸಿದಾಗ, ನಾನು ಅಲ್ಲಿ ಇದ್ದೆನು.
30ಆಗ ನಾನು ಅವರೊಂದಿಗೆ ಕುಶಲ ಶಿಲ್ಪಿಯಂತೆ ಅವರ ಹತ್ತಿರ ಇದ್ದೆನು. ಅವರ ಸನ್ನಿಧಿಯಲ್ಲಿ ಯಾವಾಗಲೂ ಆನಂದಿಸುತ್ತಾ ಅನುದಿನವೂ ಸಂತೋಷಿಸುತ್ತಿದ್ದೆನು.
31ಅವರ ಭೂಮಿಯ ವಾಸಸ್ಥಳದ ಭಾಗದಲ್ಲಿ ಸಂತೋಷಿಸುತ್ತಿದ್ದೆನು; ಮಾನವರೊಂದಿಗೆ ಆನಂದಿಸುತ್ತಿದ್ದೆನು.
32“ಆದ್ದರಿಂದ ಮಕ್ಕಳೇ, ಈಗ ನನ್ನ ಕಡೆಗೆ ಕಿವಿಗೊಡಿರಿ; ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರು.
33ನನ್ನ ಬೋಧನೆಯನ್ನು ಕೇಳಿ ಬುದ್ಧಿವಂತರಾಗಿರಿ; ಅದನ್ನು ನೀವು ತಿರಸ್ಕರಿಸಬೇಡಿರಿ.
34ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನ ಕಾಯುತ್ತಾ, ನನ್ನ ಬಾಗಿಲುಗಳ ನಿಲುವುಗಳಲ್ಲಿ ನಿರೀಕ್ಷಿಸುತ್ತಾ, ನನ್ನ ಮಾತುಗಳನ್ನು ಕೇಳುವವರು ಧನ್ಯರು.
35ಏಕೆಂದರೆ ನನ್ನನ್ನು ಕಂಡುಕೊಳ್ಳುವವನು ಜೀವವನ್ನು ಕಂಡುಕೊಂಡು ಯೆಹೋವ ದೇವರ ಕೃಪೆಯನ್ನು ಹೊಂದುವನು.
36ಆದರೆ ನನ್ನನ್ನು ಬಿಟ್ಟು ದೂರಹೋಗುವವನು ತನ್ನ ಸ್ವಂತ ಪ್ರಾಣಕ್ಕೆ ಕೇಡುಮಾಡಿಕೊಳ್ಳುತ್ತಾನೆ, ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.