Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಜ್ಞಾನೋಕ್ತಿಗಳು 7

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಮಗನೇ, ನನ್ನ ಮಾತುಗಳನ್ನು ಅನುಸರಿಸಿ, ನನ್ನ ಆಜ್ಞೆಗಳನ್ನು ನಿನ್ನಲ್ಲಿ ಇಟ್ಟುಕೋ.
2ನನ್ನ ಆಜ್ಞೆಗಳನ್ನು ಅನುಸರಿಸಿ ಬಾಳು; ನಿನ್ನ ಕಣ್ಣುಗುಡ್ಡೆಯಂತೆ ನನ್ನ ಕಟ್ಟಳೆಗಳನ್ನು ಕಾಪಾಡು.
3ಅವುಗಳನ್ನು ನಿನ್ನ ಬೆರಳುಗಳಿಗೆ ಉಂಗುರವಾಗಿಟ್ಟುಕೋ; ನಿನ್ನ ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆ.
4ಜ್ಞಾನಕ್ಕೆ, “ನೀನು ನನ್ನ ಸಹೋದರಿ,” ಎಂದೂ, ಒಳನೋಟಕ್ಕೆ, “ನನ್ನ ಬಂಧು” ಎಂದೂ ಹೇಳು.
5ಅವು ವ್ಯಭಿಚಾರಿಣಿಯಿಂದಲೂ ಸವಿಮಾತನಾಡುವ ದಾರಿತಪ್ಪಿದ ಸ್ತ್ರೀಯಿಂದಲೂ ನಿನ್ನನ್ನು ಕಾಪಾಡುತ್ತವೆ.
6ನಾನು ನನ್ನ ಮನೆಯ ಕಿಟಿಕಿಯ ಜಾಲರಿಯಿಂದ ಇಣಕಿ ನೋಡಿದಾಗ,
7ಮುಗ್ಧರ ನಡುವೆ, ಯುವಕರ ಮಧ್ಯದಲ್ಲಿ, ತಿಳುವಳಿಕೆಯಿಲ್ಲದ ಯೌವನಸ್ಥನನ್ನು ಕಂಡೆನು.
8ಅವನು ಅವಳ ಮೂಲೆ ಮನೆಯ ದಿಕ್ಕಿನಲ್ಲಿ ಬೀದಿಯಿಂದ ಹಾದುಹೋಗುತ್ತಿದ್ದನು.
9ಸಂಜೆಯ ಮಬ್ಬಿನಲ್ಲಿ ರಾತ್ರಿಯ ಕತ್ತಲೆಯು ಕವಿಯುತ್ತಿತ್ತು.
10ಇಗೋ, ವೇಶ್ಯೆಯ ವಸ್ತ್ರವನ್ನು ಧರಿಸಿಕೊಂಡು ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಂಡಳು.
11ಅವಳು ಕೂಗಾಟದವಳು, ಹಟಮಾರಿ; ಅವಳ ಪಾದಗಳು ಮನೆಯಲ್ಲಿ ನಿಲ್ಲುವುದೇ ಇಲ್ಲ.
12ಒಮ್ಮೆ ಬೀದಿಯಲ್ಲಿ ಮತ್ತೊಮ್ಮೆ ಚೌಕಗಳಲ್ಲಿ ಹೀಗೆ ಅವಳು ಮೂಲೆ ಮೂಲೆಗೂ ಹೊಂಚು ಹಾಕುತ್ತಾಳೆ.
13ಅವಳು ಆ ಯುವಕನನ್ನು ಹಿಡಿದುಕೊಂಡು ಮುದ್ದಿಟ್ಟು, ನಾಚಿಕೆಯಿಲ್ಲದೆ ಅವಳು ಹೀಗೆನ್ನುತ್ತಾಳೆ:
14“ಈ ದಿವಸ ನನ್ನ ಹರಕೆಗಳನ್ನು ನಾನು ಸಲ್ಲಿಸಿದ್ದೇನೆ. ನಾನು ನನ್ನ ಸಮಾಧಾನದ ಯಜ್ಞವನ್ನು ಅರ್ಪಿಸಿದ್ದೇನೆ.
15ಆದಕಾರಣ ನಾನು ನಿನ್ನನ್ನು ಎದುರುಗೊಳ್ಳುವುದಕ್ಕೆ ಬಂದೆನು; ಅತ್ಯಾಶೆಯಿಂದ ನಿನ್ನನ್ನು ಹುಡುಕಿ ಕಂಡುಕೊಂಡಿದ್ದೇನೆ.
16ಈಜಿಪ್ಟಿನ ನಯವಾದ ನಾರು ಮಡಿಯಿಂದಲೂ ನನ್ನ ಹಾಸಿಗೆಯನ್ನು ಅಲಂಕರಿಸಿದ್ದೇನೆ.
17ರಕ್ತಬೋಳ, ಅಗರು, ಲವಂಗ, ಚಕ್ಕೆಗಳಿಂದ ನನ್ನ ಹಾಸಿಗೆಯನ್ನು ಸುವಾಸನೆಗೊಳಿಸಿದ್ದೇನೆ.
18ಬಾ, ಬೆಳಗಿನವರೆಗೂ ತೃಪ್ತಿಯಾಗುವ ತನಕ ಪ್ರೀತಿಯ ವಶದಲ್ಲಿ ತುಂಬಿಕೊಂಡು ಕಾಮ ವಿಲಾಸಗಳಿಂದ ನಾವು ಸಂತೋಷಿಸೋಣ.
19ಏಕೆಂದರೆ ಯಜಮಾನನು ಮನೆಯಲ್ಲಿ ಇಲ್ಲ; ಅವನು ದೀರ್ಘ ಪ್ರಯಾಣದಲ್ಲಿದ್ದಾನೆ.
20ಅವನು ತನ್ನೊಂದಿಗೆ ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ; ಹುಣ್ಣಿಮೆಗೆ ಮುಂಚೆ ಅವನು ಮನೆಗೆ ಬರುವುದಿಲ್ಲ.”
21ಮನವೊಲಿಸುವ ಮಾತುಗಳಿಂದ ಅವಳು ಅವನನ್ನು ದಾರಿ ತಪ್ಪಿಸಿ, ಅವಳು ತನ್ನ ಮೋಹಕ ಮಾತುಗಳಿಂದ ಅವನನ್ನು ಆಕರ್ಷಿಸುತ್ತಾಳೆ.
22ಎತ್ತು ವಧೆಯ ಸ್ಥಾನಕ್ಕೆ ಹೋಗುವಂತೆ, ಅಥವಾ ಜಿಂಕೆಯು ಬಲೆಗೆ ಸಿಕ್ಕಿಬೀಳುವಂತೆ,
23ಅವನು ತನ್ನ ಪ್ರಾಣವು ಅಪಾಯದಲ್ಲಿರುವುದನ್ನು ತಿಳಿಯದೆ, ಒಂದು ಬಾಣವು ತನ್ನ ಕಾಳಿಜವನ್ನು ತಿವಿಯುವವರೆಗೆ, ಪಕ್ಷಿಯು ಬಲೆಯ ಕಡೆಗೆ ಓಡುವ ಹಾಗೆ ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ.
24ಆದ್ದರಿಂದ ನನ್ನ ಮಕ್ಕಳೇ, ನನಗೆ ಕಿವಿಗೊಡಿರಿ, ನನ್ನ ಮಾತುಗಳನ್ನು ಆಲಿಸಿರಿ.
25ಅವಳ ಮಾರ್ಗಗಳಿಗೆ ನಿಮ್ಮ ಹೃದಯವು ತಿರುಗದೆ ಇರಲಿ; ತಪ್ಪಿಯೂ ಅವಳ ದಾರಿಯಲ್ಲಿ ಹೋಗಬೇಡಿರಿ.
26ಏಕೆಂದರೆ ಅನೇಕರು ಅವಳಿಗೆ ಬಲಿಯಾಗಿ ಬಿದ್ದಿದ್ದಾರೆ. ಬಲಿಷ್ಠರಾದ ಅನೇಕ ಪುರುಷರು ಅವಳಿಂದ ಹತರಾಗಿದ್ದಾರೆ.
27ಅವಳ ಮನೆಯು ಪಾತಾಳಕ್ಕೆ ಹೆದ್ದಾರಿ, ಅದು ಮೃತ್ಯುವಿನ ಕೊಠಡಿಗೆ ಇಳಿದು ಹೋಗುತ್ತದೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.