Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಜ್ಞಾನೋಕ್ತಿಗಳು 6

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಮಗನೇ, ನಿನ್ನ ನೆರೆಯವನಿಗೆ ನೀನು ಹೊಣೆಯಾಗಿದ್ದರೆ, ಪರನಿಗಾಗಿ ನಿನ್ನ ಕೈಯನ್ನು ಒಡ್ಡಿದ್ದರೆ,
2ನೀನು ನುಡಿದ ನಿನ್ನ ಬಾಯಿ ಮಾತುಗಳಿಂದಲೇ ಸಿಕ್ಕಿಕೊಂಡಿರುವೆ. ನಿನ್ನ ಬಾಯಿ ಮಾತುಗಳೇ ನಿನ್ನನ್ನು ಸೆರೆಹಿಡಿದಿದೆ.
3ಮಗನೇ, ನೀನು ನಿನ್ನ ನೆರೆಯವನ ಕೈಗೆ ಸಿಕ್ಕಿಕೊಂಡದರಿಂದ, ನಿನ್ನನ್ನು ನೀನು ತಪ್ಪಿಸಿಕೊಳ್ಳಲು ಇದನ್ನು ಮಾಡು: ಹೋಗಿ ನಿನ್ನನ್ನು ನೀನು ತಗ್ಗಿಸಿಕೋ, ನಿನ್ನ ನೆರೆಯವನಿಗೆ ವಿಶ್ರಾಂತಿಯನ್ನು ಕೊಡಬೇಡ.
4ನಿನ್ನ ಕಣ್ಣುಗಳಿಗೆ ನಿದ್ರೆಯನ್ನೂ ನಿನ್ನ ರೆಪ್ಪೆಗಳಿಗೆ ತೂಕಡಿಕೆಯನ್ನೂ ಕೊಡಬೇಡ.
5ಬೇಟೆಗಾರನ ಕೈಯಿಂದ ಜಿಂಕೆಯೂ, ಬಲೆ ಬೀಸುವವನ ಕೈಯಿಂದ ಪಕ್ಷಿಯೂ ತಪ್ಪಿಸಿಕೊಳ್ಳುವಂತೆ ನೀನು ತಪ್ಪಿಸಿಕೋ.
6ಸೋಮಾರಿಯೇ, ನೀನು ಇರುವೆಯ ಹತ್ತಿರ ಹೋಗಿ, ಅದರ ನಡವಳಿಕೆಯನ್ನು ನೋಡಿ ಜ್ಞಾನವಂತನಾಗು.
7ನಾಯಕನಾಗಲೀ, ಮೇಲ್ವಿಚಾರಕನಾಗಲೀ, ಅಧಿಕಾರಿಯಾಗಲೀ ಇರುವೆಗೆ ಇಲ್ಲದೆ ಹೋದರೂ,
8ಬೇಸಿಗೆಯಲ್ಲಿ ಅದು ತನ್ನ ಆಹಾರವನ್ನು ಸಂಗ್ರಹಿಸುತ್ತದೆ. ಸುಗ್ಗಿಯಲ್ಲಿ ತನ್ನ ಆಹಾರವನ್ನು ಕೂಡಿಸಿಕೊಳ್ಳುತ್ತದೆ.
9ಸೋಮಾರಿಯೇ, ಎಷ್ಟು ಹೊತ್ತು ನೀನು ನಿದ್ರೆ ಮಾಡುವುದು? ನಿನ್ನ ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವೆ?
10ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ, ಇನ್ನೂ ಸ್ವಲ್ಪ ವಿಶ್ರಾಂತಿಗಾಗಿ ಕೈ ಮುದುರಿಕೊಳ್ಳುವೆ ಎನ್ನುವೆಯಾ?
11ಹೀಗೆ ನಿನಗೆ ಬಡತನವು ಕಳ್ಳನಂತೆಯೂ ಕೊರತೆಯು ಶಸ್ತ್ರಧಾರಿಯಂತೆಯೂ ನಿನ್ನ ಮೇಲೆ ಬರುವುವು.
12ತೊಂದರೆಕೊಡುವವನೂ ಕೆಡುಕನೂ ಆಗಿರುವವನ ಬಾಯಿಂದ ಕುಟಿಲ ಮಾತೇ ಬರುವುದು.
13ಅವನು ಕಣ್ಣು ಮಿಟುಕಿಸುತ್ತಾನೆ, ಕಾಲು ಕೆರೆಯುತ್ತಾನೆ, ಬೆರಳು ಸನ್ನೆಮಾಡುತ್ತಾನೆ,
14ಅವನು ತನ್ನ ಹೃದಯದಲ್ಲಿ ಮೋಸಕರ ಯೋಜನೆಯನ್ನೇ ಮಾಡುತ್ತಾನೆ; ಯಾವಾಗಲೂ ಅವನು ಜಗಳವನ್ನು ಕಲ್ಪಿಸುತ್ತಾನೆ.
15ಆದ್ದರಿಂದ ಅವನಿಗೆ ವಿಪತ್ತು ಬೇಗ ಬರುವುದು; ಯಾವ ಪರಿಹಾರವಿಲ್ಲದೆ ಅವನು ತಟ್ಟನೆ ನಾಶವಾಗುವನು.
16ಈ ಆರು ವಿಷಯಗಳನ್ನು ಯೆಹೋವ ದೇವರು ಹಗೆ ಮಾಡುತ್ತಾರೆ; ಹೌದು, ಏಳು ದೇವರಿಗೆ ಅಸಹ್ಯವಾಗಿವೆ, ಅವು ಯಾವವೆಂದರೆ:
17ಹೆಮ್ಮೆಯ ದೃಷ್ಟಿ, ಸುಳ್ಳಾಡುವ ನಾಲಿಗೆ, ನಿರಪರಾಧಿಯ ರಕ್ತವನ್ನು ಸುರಿಸುವ ಕೈಗಳು,
18ದುರಾಲೋಚನೆಗಳನ್ನು ಕಲ್ಪಿಸುವ ಹೃದಯ, ಕೇಡಿಗೆ ನುಗ್ಗಲು ತ್ವರೆಪಡುವ ಕಾಲುಗಳು,
19ಅಸತ್ಯವನ್ನಾಡುವ ಸುಳ್ಳುಸಾಕ್ಷಿ ಮತ್ತು ಸಹೋದರರಲ್ಲಿ ಜಗಳ ಹುಟ್ಟಿಸುವ ವ್ಯಕ್ತಿ. ವ್ಯಭಿಚಾರಕ್ಕೆ ವಿರುದ್ಧವಾಗಿ ಎಚ್ಚರಿಕೆ
20ಮಗನೇ, ನಿನ್ನ ತಂದೆಯ ಆಜ್ಞೆಯನ್ನು ಕೈಗೊಳ್ಳು, ನಿನ್ನ ತಾಯಿಯ ಬೋಧನೆಯನ್ನು ತ್ಯಜಿಸಬೇಡ.
21ಅವುಗಳನ್ನು ಯಾವಾಗಲೂ ನಿನ್ನ ಹೃದಯದಲ್ಲಿ ಬಂಧಿಸಿಕೋ. ಅವುಗಳನ್ನು ನಿನ್ನ ಕೊರಳಿಗೆ ಧರಿಸಿಕೋ.
22ನೀನು ನಡೆಯುವಾಗ ಅವು ನಿನಗೆ ಮಾರ್ಗದರ್ಶಿಯಾಗಿರುತ್ತವೆ. ನೀನು ಮಲಗುವಾಗ ಅವು ನಿನ್ನನ್ನು ಕಾಯುತ್ತವೆ. ನೀನು ಎಚ್ಚರಗೊಂಡಾಗ ಅವು ನಿನ್ನೊಂದಿಗೆ ಮಾತಾಡುತ್ತವೆ.
23ಆಜ್ಞೆಯೇ ದೀಪವಾಗಿದೆ, ಬೋಧನೆಯೇ ಬೆಳಕಾಗಿದೆ; ಶಿಕ್ಷಣದ ತಿದ್ದುವಿಕೆಗಳು ಜೀವ ಮಾರ್ಗವಾಗಿವೆ.
24ಅವು ಕೆಟ್ಟ ಹೆಂಗಸಿನಿಂದಲೂ, ಪರಸ್ತ್ರೀಯ ವಂಚಕ ಮಾತಿನಿಂದಲೂ ನಿನ್ನನ್ನು ತಪ್ಪಿಸಿ ಕಾಪಾಡಬಲ್ಲವು.
25ನಿನ್ನ ಹೃದಯ ಅವಳ ಸೌಂದರ್ಯವನ್ನು ಮೋಹಿಸದಿರಲಿ. ಅವಳ ಕಣ್ಣುರೆಪ್ಪೆಗಳಿಂದ ಅವಳು ನಿನ್ನನ್ನು ವಶಮಾಡಿಕೊಳ್ಳದೆ ಇರಲಿ.
26ಏಕೆಂದರೆ ವೇಶ್ಯೆಯನ್ನು ಊಟದಿಂದ ಕೊಂಡುಕೊಳ್ಳಬಹುದು, ಆದರೆ ವ್ಯಭಿಚಾರಿಣಿ ಅಮೂಲ್ಯ ಜೀವವನ್ನೇ ಬೇಟೆಯಾಡುವಳು.
27ಒಬ್ಬನು ತನ್ನ ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡರೆ, ಅವನ ವಸ್ತ್ರಗಳು ಸುಡುವುದಿಲ್ಲವೋ?
28ಒಬ್ಬನು ಧಗಧಗಿಸುವ ಕೆಂಡದ ಮೇಲೆ ನಡೆದರೆ, ಅವನ ಪಾದಗಳು ಸುಡುವುದಿಲ್ಲವೋ?
29ಪರನ ಹೆಂಡತಿಯನ್ನು ಕೂಡುವವನ ಗತಿಯು ಹೀಗೆಯೇ ಇರುವದು. ಅವಳನ್ನು ಮುಟ್ಟುವ ಯಾವನೂ ದಂಡನೆಯಿಂದ ತಪ್ಪಿಸಿಕೊಳ್ಳನು.
30ಹಸಿದಾಗ ಕಳ್ಳನು ತನ್ನ ಹಸಿವೆಯನ್ನು ತೃಪ್ತಿಪಡಿಸಲು ಕಳವು ಮಾಡಿದರೆ, ಜನರು ಅವನನ್ನು ಹೀಯಾಳಿಸುವುದಿಲ್ಲ.
31ಅವನು ಸಿಕ್ಕಿಕೊಂಡರೆ ಏಳರಷ್ಟು ಹಿಂದಕ್ಕೆ ಕೊಡಬೇಕಾಗುವುದು. ತನ್ನ ಮನೆಯ ಆಸ್ತಿಯನ್ನೆಲ್ಲಾ ಸಹ ಅವನು ಕೊಡಬೇಕಾಗುವುದು.
32ವ್ಯಭಿಚಾರಿಯು ಬುದ್ಧಿಹೀನನಾಗಿದ್ದಾನೆ. ಹಾಗೆ ಮಾಡುವವನು ತನ್ನನ್ನೇ ನಾಶಮಾಡಿಕೊಳ್ಳುವನು.
33ಅವನಿಗೆ ಗಾಯವೂ ಅವಮಾನವೂ ಆಗುತ್ತವೆ. ಅವನ ನಿಂದೆಯು ಎಂದಿಗೂ ಅಳಿಸಲಾಗದು.
34ಏಕೆಂದರೆ ಮತ್ಸರವು ಪತಿಯ ಕ್ರೋಧವನ್ನು ಉದ್ರೇಕಿಸುವುದು. ಆದ್ದರಿಂದ ಮುಯ್ಯಿ ತೀರಿಸುವಾಗ ಅವನು ಕರುಣೆ ತೋರನು.
35ಅವನು ಯಾವ ಪರಿಹಾರವನ್ನು ಒಪ್ಪುವುದಿಲ್ಲ; ಎಷ್ಟು ದೊಡ್ಡ ಲಂಚ ಕೊಟ್ಟರೂ ಅವನು ಅದನ್ನು ತಿರಸ್ಕರಿಸುವನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.