Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಬ 41

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1“ಯೋಬನೇ, ಲಿವ್ಯಾತಾನ್ ಮೊಸಳೆಯನ್ನು ಗಾಳದಿಂದ ಎಳೆಯಬಲ್ಲೆಯಾ? ಹಗ್ಗದಿಂದ ಅದರ ನಾಲಿಗೆಯನ್ನು ಬಿಗಿಯಬಲ್ಲೆಯಾ?
2ಅದರ ಮೂಗಿನಲ್ಲಿ ಗಾಳ ಇಡುವೆಯಾ? ಅದರ ದವಡೆಗೆ ಮುಳ್ಳಿನಿಂದ ಚುಚ್ಚುವೆಯಾ?
3ಅದು ಅನೇಕ ಸಾರಿ ಕರುಣೆಗಾಗಿ ನಿನಗೆ ವಿಜ್ಞಾಪನೆಮಾಡಿತೇ? ನಿನ್ನ ಸಂಗಡ ನಮ್ರತೆಯಿಂದ ಮಾತನಾಡೀತೇ?
4ನೀನು ಅದನ್ನು ಇಡೀ ಜೀವಮಾನಕ್ಕೂ ಆಳಾಗಿ ಸೇರಿಸಿಕೊಳ್ಳುವಂತೆ, ನಿನ್ನೊಂದಿಗೆ ಒಡಂಬಡಿಕೆ ಮಾಡಿಕೊಂಡೀತೆ?
5ಸಾಕುಪಕ್ಷಿಯಂತೆ ಅದನ್ನು ಆಡಿಸಬಲ್ಲೆಯಾ? ಮನೆಯಲ್ಲಿರುವ ನಿನ್ನ ಹುಡುಗಿಯರ ವಿನೋದಕ್ಕಾಗಿ ಅದನ್ನು ಕಟ್ಟಿ ಹಾಕಬಲ್ಲೆಯಾ?
6ಬೆಸ್ತರು ಅದಕ್ಕಾಗಿ ವ್ಯಾಪಾರ ಒಪ್ಪಂದ ಮಾಡುತ್ತಾರೆಯೆ? ಅವರು ಅದನ್ನು ವರ್ತಕರಲ್ಲಿ ಹಂಚಿ ಮಾರುವರೆ?
7ಆ ಮೊಸಳೆಯ ಚರ್ಮವನ್ನು ಮುಳ್ಳುಗಳಿಂದ ಚುಚ್ಚಬಲ್ಲೆಯಾ? ಅದರ ತಲೆಯನ್ನು ಮೀನು ಹಿಡಿಯುವ ಈಟಿಯಿಂದ ತಿವಿಯಬಲ್ಲೆಯಾ?
8ಅದರ ಮೇಲೆ ನಿನ್ನ ಕೈಹಾಕಿ ನೋಡು! ಆ ಹೋರಾಟವನ್ನು ನೆನೆಸಿಕೊಂಡರೆ, ನೀನು ಮತ್ತೆ ಅದನ್ನು ಮುಟ್ಟುವುದೇ ಇಲ್ಲ!
9ಅದನ್ನು ಹಿಡಿಯಬಹುದೆಂಬ ನಿರೀಕ್ಷೆಯು ವ್ಯರ್ಥವಾದದ್ದು; ಹಿಡಿಯ ಬಂದವನು ನೋಡಿದ ಮಾತ್ರಕ್ಕೆ ಹೆದರಿ ಬಿದ್ದುಹೋಗುವನು.
10ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆ ಯಾರಲ್ಲಿಯೂ ಇಲ್ಲ; ಹೀಗಿರುವಾಗ, ನನಗೆ ಎದುರಾಗಿ ನಿಲ್ಲಲು ಶಕ್ತರು ಯಾರು?
11ನಾನು ಸಾಲ ತೀರಿಸಬೇಕೆಂದು ನನಗೆ ವಿರೋಧವಾಗಿ ಹಕ್ಕು ಸಾಧಿಸುವವರು ಯಾರು? ಆಕಾಶದ ಕೆಳಗೆ ಇರುವಂಥ ಪ್ರತಿಯೊಂದೂ ನನ್ನದೇ.
12“ನಾನು ಲಿವ್ಯಾತಾನ್ ಮೊಸಳೆಯ ದೇಹದ ಭಾಗಗಳನ್ನೂ ಬಲವನ್ನೂ, ಅದರ ಆಕರ್ಷಕ ಸೊಬಗನ್ನೂ ವರ್ಣಿಸದೆ ಸುಮ್ಮನಿರಲಾರೆನು.
13ಅದರ ಹೊರ ವಸ್ತ್ರವನ್ನು ತೆಗೆಯಬಲ್ಲವರು ಯಾರು? ಅದರ ಜೋಡು ದವಡೆಗಳೊಳಗೆ ಕಡಿವಾಣದಿಂದ ನುಗ್ಗಬಲ್ಲವರು ಯಾರು?
14ಅದರ ಮುಖದ ಕದಗಳನ್ನು ತೆರೆಯಬಲ್ಲವರು ಯಾರು? ಅದರ ಹಲ್ಲುಗಳ ಸುತ್ತಲೂ ಭಯಭೀತಿ ಆವರಿಸಿರುವುದು.
15ಗುರಾಣಿಗಳ ಸಾಲುಗಳು ಅದರ ಬೆನ್ನಿಗೆ ಹೆಮ್ಮೆಯಾಗಿವೆ; ಅವು ಒಟ್ಟಿಗೆ ಬಿಗಿಯಾಗಿ ಮುದ್ರಿಸಲಾಗಿವೆ.
16ಗಾಳಿಯೂ ಅವುಗಳ ನಡುವೆ ನುಗ್ಗದಂತೆ, ಒಂದಕ್ಕೊಂದು ಹೊಂದಿಕೊಂಡಿವೆ.
17ಆ ಅಡ್ಡಣಗಳು ಒಂದಕ್ಕೊಂದು ಅಂಟಿಕೊಂಡಿವೆ; ಪ್ರತ್ಯೇಕಿಸಲಾಗದಂತೆ ಹಿಡಿದುಕೊಂಡಿವೆ.
18ಅದರ ಸೀನಿನ ತುಂತುರುಗಳು ಬೆಳಕಿನ ಹೊಳಪನ್ನು ಹೊರಹಾಕುವುದು; ಅದರ ಕಣ್ಣುಗಳು ಉದಯದ ಕಿರಣಗಳ ಹಾಗೆ ಇವೆ.
19ಅದರ ಬಾಯಿಂದ ಉರಿಯುವ ದೀಪಗಳು ಹೊರಡುತ್ತವೆ; ಬೆಂಕಿಯ ಕಿಡಿಗಳು ಹಾರುತ್ತವೆ.
20ಆಪುಹುಲ್ಲಿಗೆ ಬೆಂಕಿಯಿಟ್ಟಾಗ ಕುದಿಯುವ ಪಾತ್ರೆಯೊಳಗಿಂದ ಆವಿ ಬರುವಂತೆ, ಅದರ ಮೂಗಿನೊಳಗಿಂದ ಹೊಗೆ ಹಾಯುವುದು.
21ಅದರ ಶ್ವಾಸವೇ ಇದ್ದಲನ್ನು ಹೊತ್ತಿಸುವುದು; ಜ್ವಾಲೆಯು ಅದರ ಬಾಯಿಯೊಳಗಿಂದ ಹೊರಡುವುದು.
22ಅದರ ಬಲವು ಕುತ್ತಿಗೆಯಲ್ಲಿ ನೆಲೆಗೊಂಡಿರುವುದು; ಅದರ ಮುಂದೆ ಭಯವು ಸಾಗುತ್ತಿರುವುದು.
23ಅದರ ಮಾಂಸದ ಖಂಡಗಳು ಒಟ್ಟಾಗಿ ಕೂಡಿಕೊಂಡಿವೆ; ಅವು ಸ್ಥಿರವಾಗಿದ್ದು ಕದಲದೆ ಇರುತ್ತವೆ.
24ಅದರ ಹೃದಯವು ಬಂಡೆಯಂತೆಯೂ, ಬೀಸುವ ಕೆಳಗಲ್ಲಿನಂತೆಯೂ ಗಟ್ಟಿಯಾಗಿದೆ.
25ಅದು ಎದ್ದರೆ ಶೂರರು ಸಹ ಹೆದರುತ್ತಾರೆ; ಅದರ ಹೊಡೆತಕ್ಕೆ ಭಯಭ್ರಾಂತರಾಗಿ ಹಿಂಜರಿಯುವರು.
26ಖಡ್ಗದಿಂದ ಹೊಡೆದರೆ ಅದಕ್ಕೇನೂ ಆಗುವುದಿಲ್ಲ; ಭರ್ಜಿ, ಬಾಣ, ಕವಚ ಇವುಗಳಿಂದಲೂ ಅದಕ್ಕೆ ಏನು ಆಗುವುದಿಲ್ಲ.
27ಕಬ್ಬಿಣವು ಅದಕ್ಕೆ ಒಣಹುಲ್ಲಿನಂತೆಯೂ, ಕಂಚು ಅದಕ್ಕೆ ಕೊಳೆತ ಕಟ್ಟಿಗೆಯಂತೆಯೂ ಇರುವುದು.
28ಲಿವ್ಯಾತಾನ್ ಮೊಸಳೆಯನ್ನು ಬಿಲ್ಲುಬಾಣಗಳು ಓಡಿಸಲು ಅಸಾಧ್ಯ; ಕವಣೆಯ ಕಲ್ಲು ಅದಕ್ಕೆ ಹೊಟ್ಟಿಗೆ ಸಮಾನ.
29ದೊಣ್ಣೆಗಳು ಅದಕ್ಕೆ ಒಣಹುಲ್ಲಿನ ಹಾಗೆ ಇರುವುದು; ಭರ್ಜಿ ಅದಕ್ಕೆ ತಾಕಿದರೆ, ಅದು ನಗುವುದು.
30ಅದರ ಹೊಟ್ಟೆಯ ಅಡಿಯಲ್ಲಿ ಚೂಪಾದ ಒಡೆದ ಮಡಕೆಗಳಂತಿವೆ, ಅದು ಕೆಸರಿನ ಮೇಲೆ ತೆನೆಬಡಿಯುವ ಯಂತ್ರದಿಂದ ಆಗುವ ಗುರುತಿನಂತಿರುವುದು.
31ಅದು ಆಳವಾದ ನೀರನ್ನು ಕುದಿಯುವ ಹಂಡೆಯ ನೀರಿನಂತೆ ಕಲಕುವುದು; ಸಮುದ್ರವನ್ನು ತೈಲದ ಪಾತ್ರೆಯ ಹಾಗೆಯೂ ಕದಲಿಸುವುದು.
32ಸಾಗರಕ್ಕೆ ನೆರೆ ಬಂತೋ ಎಂಬಂತೆ, ಅದು ತಾನು ಬಂದ ಹಾದಿಯನ್ನೇ ಬೆಳ್ಳಗಾಗುವಂತೆ ಮಾಡುವುದು.
33ಭೂಮಿಯ ಮೇಲೆ ಇದಕ್ಕೆ ಸಮಾನವಾದದ್ದು ಇಲ್ಲ; ಇದು ಭಯಭೀತಿಯಿಲ್ಲದ ಸೃಷ್ಟಿ.
34ಇದು ಪ್ರತಿ ಅಹಂಕಾರಿಯನ್ನು ನೋಡುವುದು; ಗರ್ವಪಡುವ ಎಲ್ಲರ ಮೇಲೆ ಇದು ರಾಜನಾಗಿರುವುದು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.