Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಬ 42

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆಗ ಯೋಬನು ಯೆಹೋವ ದೇವರಿಗೆ ಕೊಟ್ಟ ಉತ್ತರ:
2“ತಮಗೆ ಎಲ್ಲಾ ಕಾರ್ಯಗಳನ್ನು ಮಾಡಲು ಸಾಧ್ಯ ಎಂದು ನಾನು ಬಲ್ಲೆ; ತಮ್ಮ ಯಾವ ಉದ್ದೇಶವನ್ನೂ ಅಡ್ಡಿಮಾಡಲು ಸಾಧ್ಯವಿಲ್ಲ ಎಂಬುದನ್ನು ಸಹ ತಿಳಿದಿದ್ದೇನೆ.
3‘ತಿಳುವಳಿಕೆಯಿಲ್ಲದೆ ನನ್ನ ಯೋಜನೆಯನ್ನು ಮಂಕುಮಾಡುವ ನೀನು ಯಾರು?’ ಎಂದು ತಾವು ಪ್ರಶ್ನಿಸಿದ್ದೀರಿ. ನಿಶ್ಚಯವಾಗಿ, ತಾವು ಹೇಳಿದಂತೆ ನನಗೆ ಅರ್ಥವಾಗದವುಗಳನ್ನು ಮಾತಾಡಿಬಿಟ್ಟೆ, ನನಗೆ ತಿಳಿಯದ ಸಂಗತಿಗಳನ್ನೂ ನನ್ನ ಬುದ್ಧಿಗೆ ಮೀರಿದ ಅದ್ಭುತಗಳನ್ನೂ ಕುರಿತು ಟೀಕಿಸಿಬಿಟ್ಟೆ.
4“ತಾವು ನನಗೆ, ‘ನಾನು ನಿನ್ನನ್ನು ಪ್ರಶ್ನೆಮಾಡುವೆನು; ನೀನೇ ನನಗೆ ಉತ್ತರಕೊಡು,’ ಎಂದು ಅಪ್ಪಣೆ ಕೊಟ್ಟಿದ್ದೀರಿ.
5ಇದುವರೆಗೆ ತಮ್ಮನ್ನು ಕುರಿತು ನಾನು ಬೇರೆಯವರಿಂದ ಕೇಳಿದ್ದೆ; ಆದರೆ ಈಗ ತಮ್ಮನ್ನು ಕಣ್ಣಾರೆ ಕಂಡಿದ್ದೇನೆ.
6ಆದ್ದರಿಂದ ನಾನು ಹೇಳಿದ್ದನ್ನೆಲ್ಲಾ ಹಿಂತೆಗೆದುಕೊಂಡು, ಧೂಳಿನಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ,” ಎಂದನು. ಸಮಾಪ್ತಿ
7ಯೆಹೋವ ದೇವರು ಯೋಬನ ಸಂಗಡ ಮಾತಾಡಿದ ತರುವಾಯ, ತೇಮಾನ್ಯನಾದ ಎಲೀಫಜನಿಗೆ, “ನಿನ್ನ ಮೇಲೆಯೂ ನಿನ್ನ ಸ್ನೇಹಿತರಿಬ್ಬರ ಮೇಲೆಯೂ ನನಗೆ ಕೋಪವಿದೆ. ಏಕೆಂದರೆ ನೀವು ನನ್ನ ದಾಸನಾದ ಯೋಬನಂತೆ ನೀವು ನನ್ನ ವಿಷಯವಾಗಿ ಸತ್ಯವನ್ನು ಆಡಲಿಲ್ಲ.
8ಆದುದರಿಂದ ಈಗ ನೀವು ಏಳು ಹೋರಿಗಳನ್ನು, ಏಳು ಟಗರುಗಳನ್ನು ತೆಗೆದುಕೊಂಡು ನನ್ನ ದಾಸನಾದ ಯೋಬನ ಬಳಿಗೆ ಬನ್ನಿರಿ. ನಿಮ್ಮ ದೋಷಪರಿಹಾರಕ್ಕಾಗಿ ದಹನಬಲಿಯನ್ನು ಅರ್ಪಿಸಿರಿ; ನನ್ನ ದಾಸನಾದ ಯೋಬನು ನಿಮ್ಮ ಪರವಾಗಿ ಪ್ರಾರ್ಥನೆಮಾಡುವನು. ನಾನು ನಿಮ್ಮ ಬುದ್ಧಿಹೀನತೆಯ ಪ್ರಕಾರ ದಂಡಿಸದಂತೆ, ಅವನ ಪ್ರಾರ್ಥನೆಯನ್ನು ಸ್ವೀಕರಿಸುವೆನು. ನೀವು ನನ್ನ ದಾಸನಾದ ಯೋಬನಂತೆ ನನ್ನ ವಿಷಯವಾಗಿ ಸತ್ಯವನ್ನು ಆಡಲಿಲ್ಲ,” ಎಂದು ಹೇಳಿದರು.
9ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು ಮತ್ತು ನಾಮಾಥ್ಯನಾದ ಚೋಫರನು ಹೋಗಿ ಯೆಹೋವ ದೇವರು ತಮಗೆ ಹೇಳಿದಂತೆ ಮಾಡಿದರು. ಯೆಹೋವ ದೇವರು ಯೋಬನ ಪ್ರಾರ್ಥನೆಯನ್ನು ಸ್ವೀಕರಿಸಿದರು.
10ಯೋಬನು ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥನೆ ಮಾಡಿದ ತರುವಾಯ ಯೆಹೋವ ದೇವರು ಅವನ ಸಂಪತ್ತನ್ನು ಪುನಃಸ್ಥಾಪಿಸಿದರು. ಯೆಹೋವ ದೇವರು ಯೋಬನಿಗೆ ಮೊದಲು ಇದ್ದವುಗಳಿಗಿಂತ ಎರಡರಷ್ಟು ಕೊಟ್ಟರು.
11ಆಗ ಯೋಬನ ಎಲ್ಲಾ ಸಹೋದರರು, ಸಹೋದರಿಯರು, ಹಿಂದಿನ ಪರಿಚಿತರೆಲ್ಲರೂ ಅವನ ಬಳಿಗೆ ಬಂದರು. ಅವರು ಯೋಬನ ಸಂಗಡ ಅವನ ಮನೆಯಲ್ಲಿ ಊಟಮಾಡಿ, ಯೆಹೋವ ದೇವರು ಅವನ ಮೇಲೆ ಬರಮಾಡಿದ ಎಲ್ಲಾ ಆಪತ್ತಿಗಾಗಿ ಸಂತಾಪ ವ್ಯಕ್ತಪಡಿಸಿ ಅವನನ್ನು ಸಂತೈಸಿದರು. ಪ್ರತಿಯೊಬ್ಬರೂ ಒಂದೊಂದು ಬೆಳ್ಳಿ ನಾಣ್ಯವನ್ನೂ ಒಂದೊಂದು ಚಿನ್ನದ ಉಂಗುರವನ್ನೂ ಯೋಬನಿಗೆ ಕೊಟ್ಟರು.
12ಇದಲ್ಲದೆ ಯೆಹೋವ ದೇವರು ಯೋಬನ ಆರಂಭಕ್ಕಿಂತ ಅವನ ಅಂತ್ಯವನ್ನು ಅಧಿಕವಾಗಿ ಆಶೀರ್ವದಿಸಿದರು. ಯೋಬನಿಗೆ ಹದಿನಾಲ್ಕು ಸಾವಿರ ಕುರಿಗಳೂ ಆರು ಸಾವಿರ ಒಂಟೆಗಳೂ ಸಾವಿರ ಜೋಡಿ ಎತ್ತುಗಳೂ ಸಾವಿರ ಕತ್ತೆಗಳೂ ದೊರಕಿದವು.
13ಅವನಿಗೆ ಏಳು ಪುತ್ರರೂ ಮೂರು ಪುತ್ರಿಯರೂ ಹುಟ್ಟಿದರು.
14ಯೋಬನು ಮೊದಲನೆಯವಳಿಗೆ ಯೆಮೀಮಳೆಂದೂ ಎರಡನೆಯವಳಿಗೆ ಕೆಚೀಯಳೆಂದೂ ಮೂರನೆಯವಳಿಗೆ ಕೆರೆನ್ ಹಪ್ಪೂಕ್ ಎಂದೂ ಹೆಸರಿಟ್ಟನು.
15ಯೋಬನ ಪುತ್ರಿಯರ ಹಾಗೆ ಸೌಂದರ್ಯವತಿಯರು ದೇಶದಲ್ಲೆಲ್ಲೂ ಇರಲಿಲ್ಲ. ಅವರ ತಂದೆ ಅವರ ಅಣ್ಣತಮ್ಮಂದಿರಿಗೆ ಕೊಟ್ಟಹಾಗೆ ಅವರಿಗೂ ಸೊತ್ತನ್ನು ಹಂಚಿದನು.
16ತರುವಾಯ ಯೋಬನು ನೂರ ನಾಲ್ವತ್ತು ವರ್ಷ ಬಾಳಿದನು. ನಾಲ್ಕನೆಯ ತಲೆಮಾರು ತನಕ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಕಂಡನು.
17ಅನಂತರ ಯೋಬನು, ದಿನತುಂಬಿದ ಮುದುಕನಾಗಿ ಸತ್ತನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.