Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಬ 40

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರು ಯೋಬನಿಗೆ ಮತ್ತೆ ಇಂತೆಂದರು:
2“ಸರ್ವಶಕ್ತರಾದ ದೇವರೊಂದಿಗೇ ತಪ್ಪು ಕಂಡುಹಿಡಿಯುವ ನೀನು, ದೇವರಿಗೇ ಪಾಠ ಕಲಿಸಿಕೊಡುವೆಯಾ? ದೇವರ ಮೇಲೆಯೇ ಆರೋಪಿಸುವ ನೀನು ಈಗ ಉತ್ತರಕೊಡು!”
3ಆಗ ಯೋಬನು ಯೆಹೋವ ದೇವರಿಗೆ ಉತ್ತರವಾಗಿ,
4“ಅಯ್ಯೋ, ನಾನು ಅಯೋಗ್ಯ, ತಮಗೆ ಏನು ಉತ್ತರಕೊಡಲಿ? ಬಾಯಿಯ ಮೇಲೆ ಕೈಯಿಟ್ಟುಕೊಳ್ಳುತ್ತೇನೆ.
5ಒಂದು ಸಾರಿ ಮಾತಾಡಿದೆ, ಈಗ ನನಗೆ ಕೊಡುವುದಕ್ಕೆ ಉತ್ತರ ಇಲ್ಲ; ಮತ್ತೆ ಮಾತಾಡುತ್ತಿದ್ದೇನೆ, ಆದರೆ ಮಾತಾಡಲು ನನಗೆ ಇನ್ನೇನೂ ಇಲ್ಲ,” ಎಂದನು.
6ಆಗ ಯೆಹೋವ ದೇವರು ಬಿರುಗಾಳಿಯೊಳಗಿಂದ ಯೋಬನಿಗೆ ಉತ್ತರಕೊಟ್ಟು ಹೇಳಿದ್ದೇನೆಂದರೆ:
7“ಈಗ ಶೂರನಂತೆ ನಿನ್ನ ನಡು ಕಟ್ಟಿಕೋ; ನಾನು ನಿನಗೆ ಪ್ರಶ್ನೆಮಾಡುತ್ತೇನೆ; ನೀನು ನನಗೆ ಉತ್ತರಕೊಡು.
8“ನನ್ನ ನ್ಯಾಯವನ್ನು ನೀನು ಅಪಕೀರ್ತಿ ಮಾಡುತ್ತೀಯೋ? ನೀನು ನಿನ್ನ ನ್ಯಾಯವನ್ನು ಸ್ಥಾಪಿಸಲು ನನ್ನನ್ನು ಅಪರಾಧಿ ಎಂದು ನಿರ್ಣಯಿಸುತ್ತೀಯೋ?
9ದೇವರಾದ ನನಗಿರುವ ಭುಜಬಲ ನಿನಗಿದೆಯೋ? ನನ್ನ ಧ್ವನಿಯ ಹಾಗೆ ನೀನು ಗುಡುಗಬಲ್ಲೆಯೋ?
10ಹಾಗಾದರೆ, ಮಹಿಮೆ ಘನತೆಗಳಿಂದ ನಿನ್ನನ್ನು ಅಲಂಕರಿಸಿಕೋ; ನೀನು ಗೌರವ ಪ್ರಭಾವಗಳನ್ನೂ ಧರಿಸಿಕೋ.
11ನಿನ್ನ ಕಡುಕೋಪವನ್ನು ಎಲ್ಲಾ ಗರ್ವಿಷ್ಠರ ಮೇಲೆ ಸುರಿಸಿ, ಅವರನ್ನು ತಗ್ಗಿಸು.
12ಹೌದು, ಗರ್ವಿಷ್ಠರನ್ನೆಲ್ಲಾ ನೋಡಿ ತಗ್ಗಿಸಿಬಿಡು; ದುಷ್ಟರನ್ನು ಅವರು ನಿಂತಿರುವ ಸ್ಥಳದಲ್ಲಿಯೇ ಕೆಡವಿಬಿಡು.
13ಅವರೆಲ್ಲರನ್ನು ಒಟ್ಟಾಗಿ ಧೂಳಿನಲ್ಲಿ ಅಡಗಿಸಿಬಿಡು; ಅಂಧಕಾರ ಲೋಕದಲ್ಲಿ ಅವರ ಮುಖಕ್ಕೆ ಮುಸುಕುಹಾಕು.
14ನೀನು ಹಾಗೆ ಮಾಡಿದರೆ, ನಿನ್ನ ಬಲ ನಿನ್ನನ್ನು ರಕ್ಷಿಸಬಲ್ಲದೆಂದು ನಾನೇ ಒಪ್ಪಿಕೊಳ್ಳುವೆನು.
15“ನಾನು ನಿನ್ನ ಹಾಗೆ ಸೃಷ್ಟಿಮಾಡಿದ ನೀರಾನೆಯನ್ನು ನೋಡು; ಅದು ಎತ್ತಿನ ಹಾಗೆ ಹುಲ್ಲನ್ನು ತಿನ್ನುತ್ತದೆ.
16ಅದರ ಸೊಂಟದಲ್ಲಿ ಎಂಥಾ ಬಲ ಅಡಕವಾಗಿದೆ. ಅದರ ಹೊಟ್ಟೆಯ ನರಗಳಲ್ಲಿ ಸಹ ಎಂಥಾ ಶಕ್ತಿಯಿದೆ!
17ನೀರಾನೆಯು ತನ್ನ ಬಾಲವನ್ನು ದೇವದಾರು ಮರದಂತೆ ಬಗ್ಗಿಸುತ್ತದೆ; ಅದರ ತೊಡೆಯ ನರಗಳೋ ಹೆಣೆದುಕೊಂಡಿವೆ.
18ಅದರ ಮೂಳೆಗಳು ಕಂಚಿನ ಸಲಿಕೆಗಳಂತೆ ಬಲವಾಗಿವೆ; ಅದರ ಕೈಕಾಲುಗಳು ಕಬ್ಬಿಣದ ಕಂಬಿಗಳ ಹಾಗೆ ಇರುತ್ತವೆ.
19ದೇವರ ಸೃಷ್ಟಿಗಳಲ್ಲಿ ಅದು ಮುಖ್ಯವಾದದ್ದು; ಸೃಷ್ಟಿಕರ್ತ ದೇವರು ಅದಕ್ಕೆ ಕೋರೆಹಲ್ಲಿನ ಖಡ್ಗವನ್ನು ಒದಗಿಸಿದ್ದಾರೆ.
20ಪರ್ವತಗಳಲ್ಲಿ ಅದಕ್ಕೆ ಮೇವು ಸಿಗುತ್ತದೆ; ಎಲ್ಲಾ ಕಾಡುಮೃಗಗಳು ಅಲ್ಲಿ ಆಡುತ್ತವೆ.
21ನೀರಾನೆಯು ತಾವರೆ ಗಿಡಗಳಡಿಯಲ್ಲಿಯೂ ಆಪಿನ ಮರೆಯಲ್ಲಿಯೂ, ಜವುಗು ಭೂಮಿಯಲ್ಲಿಯೂ ವಿಶ್ರಮಿಸಿಕೊಳ್ಳುತ್ತದೆ.
22ತಾವರೆ ಎಲೆಗಳು ನೆರಳನ್ನು ಅದಕ್ಕೆ ಹರಡುತ್ತವೆ; ನದಿಯ ನೀರವಂಜಿ ಮರಗಳು ಅದನ್ನು ಸುತ್ತಿಕೊಳ್ಳುತ್ತವೆ.
23ಹೊಳೆ ಉಕ್ಕಿ ಬಂದರೂ ನೀರಾನೆಯು ಹೆದರುವುದಿಲ್ಲ. ಯೊರ್ದನ್ ನದಿ ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು.
24ಅದು ನೋಡುತ್ತಿರುವಾಗ ಯಾರಾದರೂ ಅದನ್ನು ಹಿಡಿಯಬಲ್ಲರೋ? ಅದರ ಮೂಗನ್ನು ಗಾಳದಿಂದ ಚುಚ್ಚಬಲ್ಲರೋ?
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.