Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಹೆಜ್ಕೇಲನು 21

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರ ವಾಕ್ಯವು ನನಗೆ ಬಂದಿತು,
2“ಮನುಷ್ಯಪುತ್ರನೇ, ನೀನು ಯೆರೂಸಲೇಮಿಗೆ ಅಭಿಮುಖವಾಗಿ ಅಲ್ಲಿನ ಪರಿಶುದ್ಧ ಸ್ಥಳಗಳ ಕಡೆಗೆ ಮಾತನಾಡುತ್ತಾ ಇಸ್ರಾಯೇಲ್ ದೇಶಕ್ಕೆ ವಿರುದ್ಧವಾಗಿ ಪ್ರವಾದಿಸಿ,
3‘ಇಸ್ರಾಯೇಲ್ ದೇಶಕ್ಕೆ ಹೇಳಬೇಕಾದದ್ದೇನೆಂದರೆ, ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ನಿಮಗೆ ವಿರೋಧವಾಗಿದ್ದೇನೆ. ನನ್ನ ಖಡ್ಗವನ್ನು ಅದರ ಒರೆಯಿಂದ ಹೊರಗೆ ತೆಗೆದು, ನಿನ್ನೊಳಗಿರುವ ನೀತಿವಂತರನ್ನೂ, ದುಷ್ಟರನ್ನೂ ಕಡಿದುಬಿಡುವೆನು.
4ಆಮೇಲೆ ನಾನು ನೀತಿವಂತರನ್ನೂ, ದುಷ್ಟರನ್ನೂ ಕಡಿದುಬಿಡುವುದರಿಂದ ನನ್ನ ಖಡ್ಗವು ದಕ್ಷಿಣದಿಂದ ಮೊದಲುಗೊಂಡು ಉತ್ತರದ ಮನುಷ್ಯರೆಲ್ಲರಿಗೆ ವಿರೋಧವಾಗಿ ಅದರ ಒರೆಯನ್ನು ಬಿಟ್ಟು ಹೋಗುವುದು.
5ಆಗ ಯೆಹೋವ ದೇವರಾದ ನಾನೇ ನನ್ನ ಖಡ್ಗವನ್ನು ಒರೆಯಿಂದ ಹೊರಗೆ ತೆಗೆದೆನೆಂದು ಜನರೆಲ್ಲರಿಗೂ ತಿಳಿಯುವುದು, ಅದು ಮತ್ತೆ ತಿರುಗಿ ಬರುವುದೇ ಇಲ್ಲ.’
6“ಆದ್ದರಿಂದ ಮನುಷ್ಯಪುತ್ರನೇ, ನರಳಾಡು! ಮುರಿದ ಹೃದಯ ಮತ್ತು ಕಹಿ ದುಃಖದಿಂದ ಅವರ ಮುಂದೆ ನರಳಾಡು.
7‘ನೀನು ಏಕೆ ನರಳಾಡುತ್ತೀ?’ ಎಂದು ಅವರು ನಿನಗೆ ಕೇಳಿದಾಗ, ನೀನು ಹೇಳಬೇಕಾದದ್ದೇನೆಂದರೆ, ‘ಆ ಸುದ್ದಿಯ ನಿಮಿತ್ತವೇ ಅದು ಬರುವುದು. ಏಕೆಂದರೆ ಆಗ ಹೃದಯಗಳೆಲ್ಲಾ ಕರಗುವುವು. ಕೈಗಳೆಲ್ಲಾ ನಿತ್ರಾಣವಾಗುವುವು. ಪ್ರತಿಯೊಂದು ಆತ್ಮವು ಕುಂದುವದು. ಎಲ್ಲಾ ಮೊಣಕಾಲುಗಳು ನೀರಿನಂತೆ ತೇವವಾಗಿರುತ್ತವೆ. ಅದು ಬರುತ್ತದೆ, ಅದು ತರಲಾಗುತ್ತದೆ,’ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
8ಯೆಹೋವ ದೇವರ ವಾಕ್ಯವು ನನಗೆ ಬಂದಿತು,
9“ಮನುಷ್ಯಪುತ್ರನೇ, ಪ್ರವಾದಿಸಿ, ‘ಯೆಹೋವ ದೇವರು ಹೀಗೆ ಹೇಳುತ್ತಾರೆಂದು ಹೇಳು: “ ‘ಆ ಒಂದು ಖಡ್ಗವು ಹದಮಾಡಲಾಗಿದೆ; ಮೆರುಗೂ ಸಹ ಮಾಡಲಾಗಿದೆ.
10ಸಂಹರಿಸಲು ಸಾಣೆಹಿಡಿದಿದೆ; ಮಿಂಚುವಂತೆ ಮಸೆಯಲಾಗಿದೆ. “ ‘ಹಾಗಾದರೆ ನನ್ನ ಮಗ ಯೆಹೂದದ ರಾಜದಂಡದಲ್ಲಿ ನಾವು ಸಂತೋಷ ಪಡಬಹುದೋ? ಅಂಥ ಪ್ರತಿಯೊಂದು ಬೆತ್ತವನ್ನೂ ಖಡ್ಗವು ತಿರಸ್ಕರಿಸುತ್ತದೆ.
11“ ‘ಖಡ್ಗವು ಕೈಯಲ್ಲಿ ಅದು ಹಿಡಿಯಲಾಗುವ ಹಾಗೆ ಮಸೆಯಲು ಕೊಡಲಾಗಿದೆ. ಕೊಲ್ಲುವವನ ಕೈಗೆ ಕೊಡುವ ಹಾಗೆ ಆ ಖಡ್ಗಕ್ಕೆ ಹದವನ್ನೂ, ಸಾಣೆಯನ್ನೂ ಮಾಡಲಾಗಿದೆ.
12ಮನುಷ್ಯಪುತ್ರನೇ, ಕೂಗು ಮತ್ತು ಗೋಳಾಡು. ಏಕೆಂದರೆ ಅದು ನನ್ನ ಜನರ ಮೇಲೆಯೂ, ಇಸ್ರಾಯೇಲಿನ ಪ್ರಭುಗಳೆಲ್ಲರ ಮೇಲೆಯೂ ಇರುವುದು. ಖಡ್ಗದ ಮುಖಾಂತರ ಅಂಜಿಕೆಯು ನನ್ನ ಜನರ ಮೇಲೆ ಬರುವುದು. ಆದ್ದರಿಂದ ನಿನ್ನ ಎದೆಯನ್ನು ಬಡಿದುಕೋ.
13“ ‘ಪರಿಶೋಧನೆಯು ಖಂಡಿತವಾಗಿ ಬರುವುದಿಲ್ಲ. ಖಡ್ಗವು ತಿರಸ್ಕರಿಸುವ ಯೆಹೂದದ ರಾಜದಂಡವು ಮುಂದುವರಿಯದಿದ್ದರೆ ಹೇಗೆ? ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’
14“ಆದ್ದರಿಂದ ನೀನು ಮನುಷ್ಯಪುತ್ರನೇ, ಕೈಗೆ ಕೈತಟ್ಟಿ ಪ್ರವಾದಿಸು. ಹತರಾದವರ ಖಡ್ಗವಾದ ಆ ಖಡ್ಗವೇ ಎರಡರಷ್ಟು, ಮೂರರಷ್ಟು ಸಂಹರಿಸಲಿ. ಪ್ರಜೆಯನ್ನು ಹತಿಸುವ ಆ ಖಡ್ಗ ಸುತ್ತಲೂ ಬೀಸಿ ಆ ಕೊಠಡಿಗಳಲ್ಲಿ ಸೇರುವವರನ್ನು ಆ ದೊಡ್ಡ ಖಡ್ಗ ಸಂಹರಿಸುವುದು.
15ಅವರ ಹೃದಯವು ಕರಗುವ ಹಾಗೆಯೂ, ಅವರ ಎಲ್ಲಾ ಬಾಗಿಲುಗಳಲ್ಲಿ ಪತನವು ಹೆಚ್ಚಾಗುವ ಹಾಗೆಯೂ ಖಡ್ಗದ ಮೊನೆ ಇಟ್ಟಿದ್ದೇನೆ. ಆಹಾ, ಮಿಂಚಿನಂತೆ ಹೊಡೆಯಲು ಈ ಬಲೆ ಹೆಣೆಯಲಾಗಿದೆ ಅದನ್ನು ಕೊಲೆಮಾಡುವುದಕ್ಕೆ ಮಸೆಯಲಾಗಿದೆ.
16ಖಡ್ಗವೇ ಬಲಕ್ಕೆ ಹೊಡೆ, ಎಡಕ್ಕೆ ಹೊಡೆ, ನಿನ್ನ ಅಲಗು ತಿರುಗಿದ ಕಡೆಗೆಲ್ಲಾ ಹೊಡೆ.
17ನಾನೂ ಸಹ ಕೈತಟ್ಟಿ ನನ್ನ ರೋಷವನ್ನು ತೀರಿಸಿಕೊಳ್ಳುವೆನು, ಎಂದು ಯೆಹೋವ ದೇವರಾದ ನಾನು ಹೇಳಿದ್ದೇನೆ.”
18ಯೆಹೋವ ದೇವರ ವಾಕ್ಯವು ನನಗೆ ಬಂದಿತು:
19“ಮನುಷ್ಯಪುತ್ರನೇ, ಬಾಬಿಲೋನಿನ ಅರಸನ ಖಡ್ಗವು ಬರುವ ಹಾಗೆ ನೀನು ಎರಡು ಮಾರ್ಗಗಳನ್ನು ನೇಮಿಸಿಕೋ. ಅವೆರಡು ದಾರಿಗಳು ಒಂದೇ ದೇಶದಿಂದ ಹೊರಟ ಹಾಗಿರಲಿ. ಒಂದೊಂದು ಪಟ್ಟಣಕ್ಕೆ ಹೋಗುವ ದಾರಿಯ ಮೊದಲಲ್ಲಿ ಕೈಮರವನ್ನು ಚಿತ್ರಿಸು.
20ಅಮ್ಮೋನ್ಯರ ರಬ್ಬಾ ಪಟ್ಟಣಕ್ಕೂ, ಯೆಹೂದದ ಕೋಟೆ ಕೊತ್ತಲಗಳಿಂದ ಕುಡಿದ ಯೆರೂಸಲೇಮಿಗೂ ಆ ಖಡ್ಗವು ಬರುವುದಕ್ಕೆ ದಾರಿಗಳನ್ನು ಮಾಡು.
21ಬಾಬಿಲೋನಿನ ಅರಸನು, ಮಾರ್ಗವು ಒಡೆಯುವ ಸ್ಥಳದಲ್ಲಿ ಶಕುನವನ್ನು ನೋಡುವುದಕ್ಕೆ ನಿಂತಿದ್ದಾನೆ; ಬಾಣಗಳನ್ನು ಅಲ್ಲಾಡಿಸಿದನು; ಮೂರ್ತಿಗಳ ಹತ್ತಿರ ವಿಚಾರಿಸಿದನು; ಅವನು ಹತ್ಯೆ ಮಾಡಿದ ಪ್ರಾಣಿಯ ಯಕೃತ್ತನ್ನು ಪರೀಕ್ಷಿಸುತ್ತಾರೆ.
22ಅವನ ಬಲಗೈಯಲ್ಲಿ ಯೆರೂಸಲೇಮಿಗಾಗಿ ಶಕುನವು ಇತ್ತು. ಅಲ್ಲಿ ಅವನು ಬಡಿಯುವ ಆಯುಧಗಳನ್ನಿಟ್ಟು, ಬಾಯಿಬಿಟ್ಟು ಸಂಹಾರ ಧ್ವನಿಗೈದು, ಆರ್ಭಟವಿಟ್ಟು ಬಾಗಿಲುಗಳ ಎದುರಾಗಿ ಬಡಿಯುವ ಆಯುಧಗಳನ್ನಿಟ್ಟು ದಿಬ್ಬ ಹಾಕಿ, ಒಡ್ಡು ಕಟ್ಟಿದ್ದು ಸೂಚನೆಯಾಗಿದೆ.
23ಆದರೆ ಅವರು ತಾವು ಅರಸನಿಂದ ಮಾಡಿಸಿಕೊಂಡ ಪ್ರಮಾಣಗಳಲ್ಲಿ ನಂಬಿಕೆ ಇಟ್ಟಿದ್ದರಿಂದ, ಅವರಿಗೆ ಸುಳ್ಳು ಶಕುನದ ಹಾಗೆ ಕಾಣುವುದು. ಆದರೆ ಅವನು ಅವರ ಅಕ್ರಮವನ್ನು ಜ್ಞಾಪಕಪಡಿಸಿ, ಅವರನ್ನು ಸೆರೆಯಾಗಿ ಒಯ್ಯುವನು.
24“ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನಿಮ್ಮ ದ್ರೋಹಗಳು ಪ್ರಕಟವಾಗಿ, ನಿಮ್ಮ ಕೆಲಸಗಳಲ್ಲೆಲ್ಲಾ ನಿಮ್ಮ ಪಾಪಗಳು ಕಾಣುವ ಹಾಗೆ, ನೀವು ನಿಮ್ಮ ಅಕ್ರಮಗಳನ್ನು ಜ್ಞಾಪಕಕ್ಕೆ ತಂದದ್ದರಿಂದ ನೀವು ಕೈಗೆ ಸಿಕ್ಕಿ ಬೀಳುವಿರಿ.
25“ ‘ದುಷ್ಟನಾದ ಭ್ರಷ್ಟ ಇಸ್ರಾಯೇಲಿನ ರಾಜಕುಮಾರನೇ, ನೀನು ಮಾಡಿದ ಅಕ್ರಮಗಳಿಂದ ನಿನಗೆ ಅಂತ್ಯ ದಿವಸವು ಬಂದಿತು.
26ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಮುಂಡಾಸವನ್ನು ಎತ್ತಿಡು, ಕಿರೀಟವನ್ನು ತೆಗೆದುಹಾಕು; ಅದು ಮೊದಲಿದ್ದ ಹಾಗೆಯೇ ಇರುವುದಿಲ್ಲ; ತಗ್ಗಿಸಿಕೊಂಡವನನ್ನು ಹೆಚ್ಚಿಸಿ, ಹೆಚ್ಚಿಸಿಕೊಂಡವನನ್ನು ತಗ್ಗಿಸು.
27ಬಾ, ನಾಶನ! ನಾಶನ! ನಾನು ಅದನ್ನು ಪಾಳು ಬೀಳುವಂತೆ ಮಾಡುವೆನು. ಅದು ಯಾರದೋ, ಅವನು ಬರುವವರೆಗೆ ನಾನು ಅದನ್ನು ಪುನಃ ಕಟ್ಟಿಸುವುದಿಲ್ಲ; ಅವನಿಗೆ ನಾನು ಅದನ್ನು ಒಪ್ಪಿಸುವೆನು.’
28“ಮನುಷ್ಯಪುತ್ರನೇ, ನೀನು ಪ್ರವಾದಿಸಿ, ಸಾರ್ವಭೌಮ ಯೆಹೋವ ದೇವರು ಅಮ್ಮೋನಿಯರ ವಿಷಯವಾಗಿಯೂ ಅವರ ನಿಂದೆಯ ವಿಷಯವಾಗಿಯೂ ಹೀಗೆ ಹೇಳುತ್ತಾರೆ, ‘ಹೌದು, ನೀನು ಹೀಗೆ ಹೇಳು: “ ‘ಒಂದು ಖಡ್ಗವು, ಒಂದು ಖಡ್ಗವು ಸಂಹರಿಸುವುದಕ್ಕೆ ಹಿರಿದಿದೆ, ಮಿಂಚುವಂತೆ ಬಹಳವಾಗಿ ಮಸೆಯಲಾಗಿದೆ. ಥಳಥಳಿಸುತ್ತಾ ನುಂಗುವಹಾಗಿದೆ.
29ನಿನ್ನ ಜೋಯಿಸರು ವ್ಯರ್ಥವಾದದ್ದನ್ನು ನೋಡಿ, ಸಾಕ್ಷಾತ್ಕರಿಸಿ ಸುಳ್ಳಾಗಿ ಶಕುನ ಹೇಳುತ್ತಿದ್ದಾರೆ. ಹೀಗೆ ನಿನ್ನನ್ನು ಹತರಾದ ದುಷ್ಟರ ಕುತ್ತಿಗೆಗಳ ಮೇಲೆ ತಂದಿದ್ದಾರೆ. ಅವರ ಅಂತ್ಯದಿನವು ಬಂದಿದೆ. ಅದೇ ಅವರ ಅಕ್ರಮಗಳಿಗೆ ಅಂತ್ಯವಾಗಿದೆ.
30“ ‘ಖಡ್ಗವನ್ನು ಒರೆಗೆ ಸೇರಿಸು, ನೀನು ಸೃಷ್ಟಿಯಾದ ಸ್ಥಳದಲ್ಲಿಯೇ ನಿನ್ನ ಪೂರ್ವಜರ ನಾಡಿನಲ್ಲಿಯೇ ನಿನಗೆ ನ್ಯಾಯತೀರಿಸುವೆನು.
31ನನ್ನ ಕ್ರೋಧವನ್ನು ನಿನ್ನ ಮೇಲೆ ಸುರಿಸುವೆನು. ನನ್ನ ಉಗ್ರವಾದ ಬೆಂಕಿ ನಿನ್ನ ಮೇಲೆ ಊದಿ ನಾಶಪಡಿಸುವುದರಲ್ಲಿ ಗಟ್ಟಿಗರಾದ ಕ್ರೂರ ಜನರ ಕೈಗೆ ನಿನ್ನನ್ನು ಒಪ್ಪಿಸುವೆನು.
32ನೀನು ಅಗ್ನಿಗೆ ಆಹುತಿಯಾಗುವೆ. ನಿನ್ನ ರಕ್ತವು ದೇಶದ ಮಧ್ಯದಲ್ಲೆಲ್ಲಾ ಇರುವುದು. ಇನ್ನು ಮೇಲೆ ನೀನು ಜ್ಞಾಪಕಕ್ಕೆ ಬರುವುದಿಲ್ಲವೆಂದು, ಯೆಹೋವ ದೇವರಾದ ನಾನೇ ಹೇಳಿದ್ದೇನೆ.’ ”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.