Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಹೆಜ್ಕೇಲನು 22

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರ ವಾಕ್ಯವು ನನಗೆ ಬಂದಿತು:
2“ಮನುಷ್ಯಪುತ್ರನೇ, ಈಗ ನೀನು ನ್ಯಾಯತೀರಿಸುವೆಯಾ? ರಕ್ತಾಪರಾಧವುಳ್ಳ ಪಟ್ಟಣಕ್ಕೆ ನ್ಯಾಯತೀರಿಸುವೆಯಾ? ಹಾಗಾದರೆ ಅದರ ಅಸಹ್ಯವಾದವುಗಳನ್ನೆಲ್ಲಾ ಅದಕ್ಕೆ ತಿಳಿಸುವೆ.
3ಆಮೇಲೆ ನೀನು ಹೇಳಬೇಕಾದದ್ದೇನೆಂದರೆ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಪಟ್ಟಣವು ಅದರ ಮಧ್ಯದಲ್ಲಿ ಅದರ ದಂಡನೆಯ ಕಾಲ ಬರುವಂತೆ ರಕ್ತವನ್ನು ಚೆಲ್ಲುತ್ತದೆ. ತನ್ನನ್ನು ಅಶುದ್ಧಮಾಡುವಂತೆ ತನ್ನಲ್ಲಿ ವಿಗ್ರಹ ಮಾಡಿಕೊಂಡಿದೆ.
4ನೀನು ಚೆಲ್ಲಿದ ನಿನ್ನ ರಕ್ತದಿಂದ ನೀನು ಅಪರಾಧಿಯಾದೆ; ನೀನು ಮಾಡಿದ ನಿನ್ನ ವಿಗ್ರಹಗಳಿಂದ ನೀನು ಅಶುದ್ಧನಾದೆ; ನಿನ್ನ ದಿನಗಳನ್ನು ಸಮೀಪಿಸಿರುವೆ; ಮತ್ತು ನಿಮ್ಮ ವರ್ಷಗಳ ಅಂತ್ಯವು ಬಂದಿದೆ. ಆದ್ದರಿಂದ ನಿನ್ನನ್ನು ಇತರ ಜನಾಂಗಗಳಿಗೆ ನಾಚಿಕೆಯಾಗಿಯೂ, ಎಲ್ಲಾ ದೇಶಗಳಿಗೂ ನಿಂದೆಯಾಗಿಯೂ ಮಾಡಿದ್ದೇನೆ.
5ಕುಖ್ಯಾತ ನಗರವೇ, ಬಹಳ ತೊಂದರೆಗೊಳಗಾದವಳೇ, ನಿನ್ನನ್ನು ಹತ್ತಿರದವರೂ, ದೂರದವರೂ ಅಪಹಾಸ್ಯ ಮಾಡುವರು.
6“ ‘ಇಸ್ರಾಯೇಲಿನ ಅರಸರು ಪ್ರತಿಯೊಬ್ಬನು ತಮ್ಮ ತಮ್ಮ ಶಕ್ತ್ಯಾನುಸಾರವಾಗಿ ರಕ್ತವನ್ನು ನಿನ್ನ ಮೇಲೆ ಚೆಲ್ಲುತ್ತಲೇ ಇದ್ದಾರೆ.
7ನಿನ್ನಲ್ಲಿ ತಂದೆಯನ್ನೂ, ತಾಯಿಯನ್ನೂ ಅಲಕ್ಷ್ಯ ಮಾಡಿದ್ದಾರೆ. ನಿನ್ನಲ್ಲಿ ಅಪರಿಚಿತರಿಗೆ ಬಲಾತ್ಕಾರ ಮಾಡಿದ್ದಾರೆ. ನಿನ್ನಲ್ಲಿ ದಿಕ್ಕಿಲ್ಲದವನನ್ನೂ, ವಿಧವೆಯನ್ನೂ ಪೀಡಿಸಿದ್ದಾರೆ.
8ನೀನು ನನ್ನ ಪರಿಶುದ್ಧ ಸಂಗತಿಗಳನ್ನು ತಿರಸ್ಕರಿಸಿ, ನನ್ನ ಸಬ್ಬತ್ ದಿನಗಳನ್ನು ಅಪವಿತ್ರ ಪಡಿಸಿದ್ದಿ.
9ನಿನ್ನಲ್ಲಿ ರಕ್ತ ಚೆಲ್ಲುವ ಹಾಗೆ ಚಾಡಿ ಹೇಳುವವರು ಇದ್ದಾರೆ; ಪರ್ವತಗಳ ಪೂಜಾಸ್ಥಳಗಳಲ್ಲಿ ತಿನ್ನುತ್ತಾರೆ; ನಿನ್ನಲ್ಲಿ ಅವರು ದ್ರೋಹವನ್ನು ಮಾಡಿದ್ದಾರೆ.
10ನಿಮ್ಮಲ್ಲಿ ತಂದೆಯ ಹಾಸಿಗೆಯನ್ನು ಅವಮಾನಿಸುವವರು ಇದ್ದಾರೆ, ನಿನ್ನಲ್ಲಿ ಮುಟ್ಟಿನಿಂದ ಅಶುದ್ಧಳಾದವಳನ್ನು ಕೂಡಿದ್ದಾರೆ.
11ಒಬ್ಬನು ತನ್ನ ನೆರೆಯವನ ಹೆಂಡತಿಯ ಸಂಗಡ ಅಸಹ್ಯಕರವಾದದ್ದನ್ನು ಮಾಡಿದ್ದಾನೆ; ಮತ್ತೊಬ್ಬನು ಅತ್ಯಾಚಾರದಿಂದ ಸೊಸೆಯನ್ನು ಕೆಡಿಸಿದ್ದಾನೆ; ಇನ್ನೊಬ್ಬನು ತನ್ನ ತಂದೆಯ ಮಗಳಾದ ತನ್ನ ಸಹೋದರಿಯನ್ನೇ ಮಾನಭಂಗಪಡಿಸಿದ್ದಾನೆ.
12ನಿನ್ನಲ್ಲಿ ರಕ್ತ ಚೆಲ್ಲುವ ಹಾಗೆ ಲಂಚ ತೆಗೆದುಕೊಂಡಿದ್ದಾರೆ. ಬಡ್ಡಿಯನ್ನು ಲಾಭವನ್ನೂ ತೆಗೆದುಕೊಂಡಿದ್ದಾರೆ. ಬಲಾತ್ಕಾರದಿಂದ ನಿನ್ನ ನೆರೆಯವರಲ್ಲಿ ದುರ್ಲಾಭ ಮಾಡಿಕೊಂಡಿದ್ದಾರೆ. ನನ್ನನ್ನು ಮರೆತುಬಿಟ್ಟಿದ್ದಾರೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
13“ ‘ಆದ್ದರಿಂದ ನೀನು ಮಾಡಿದ ಈ ದುರ್ಲಾಭದಿಂದಲೂ, ನಿನ್ನಲ್ಲಿರುವ ನಿನ್ನ ರಕ್ತಾಪರಾಧದಿಂದಲೂ ನಾನು ನನ್ನ ಕೈ ಬಡಿದುಕೊಂಡಿದ್ದೇನೆ.
14ನಾನು ನಿನ್ನೊಳಗೆ ಕೆಲಸ ನಡೆಸುವ ದಿವಸಗಳಲ್ಲಿ ನಿನ್ನ ಹೃದಯವು ನಿಲ್ಲುವುದೋ? ನಿನ್ನ ಕೈಗಳು ಬಲವಾಗಿರುವುವೋ? ಯೆಹೋವ ದೇವರಾದ ನಾನೇ ಹೇಳಿದ್ದೇನೆ, ನಾನೇ ಅದನ್ನು ಮಾಡುವೆನು.
15ನಿನ್ನನ್ನು ಜನಾಂಗಗಳಲ್ಲಿ ಚದರಿಸಿ, ದೇಶಗಳಲ್ಲಿ ಹರಡಿಸುವೆನು. ನಿನ್ನ ಅಶುದ್ಧತ್ವವನ್ನು ನಿನ್ನಿಂದ ತೆಗೆದು ನಾಶಮಾಡುವೆನು.
16ಆಗ ನೀನು ಇತರ ಜನಾಂಗಗಳ ಮುಂದೆ ನಿನ್ನಷ್ಟಕ್ಕೆ ನೀನೇ ಅಪಕೀರ್ತಿಗೆ ಗುರಿಯಾಗುವಿ; ನಾನೇ ಯೆಹೋವ ದೇವರೆಂದು ನೀನು ತಿಳಿದುಕೊಳ್ಳುವೆ.’ ”
17ಯೆಹೋವ ದೇವರ ವಾಕ್ಯವು ನನಗೆ ಬಂದಿತು:
18“ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರು ನನಗೆ ಕಸದ ಹಾಗಾದರೂ, ಅವರೆಲ್ಲರೂ ಗುಹೆಯಲ್ಲಿರುವ ತಾಮ್ರ, ತವರ, ಕಬ್ಬಿಣದ ಹಾಗೆ ಇದ್ದಾರೆ. ಸೀಸದ ಮತ್ತು ಬೆಳ್ಳಿಯ ಕಸದ ಹಾಗೆಯೂ ಇದ್ದಾರೆ.
19ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನೀವೆಲ್ಲರೂ ಕೆಟ್ಟವರಾಗಿರುವುದರಿಂದ ಇಗೋ, ನಾನು ನಿಮ್ಮನ್ನು ಯೆರೂಸಲೇಮಿನ ಮಧ್ಯಕ್ಕೆ ಕೂಡಿಸುತ್ತೇನೆ.
20ಅವರು ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ ಮತ್ತು ತಗಡುಗಳನ್ನು ಹೇಗೆ ಒರೆಯೊಳಗೆ ಕೂಡಿಸಿ, ಅದಕ್ಕೆ ಬೆಂಕಿಯನ್ನು ಊದಿ ಕರಗಿಸುವರೋ, ಹಾಗೆಯೇ ನಾನು ನಿಮ್ಮನ್ನು ನನ್ನ ಕೋಪದಲ್ಲಿ ಮತ್ತು ನನ್ನ ರೋಷದಲ್ಲಿ ಒಟ್ಟುಗೂಡಿಸಿ ನಿಮ್ಮನ್ನು ನಗರದೊಳಗೆ ಹಾಕಿ ಕರಗಿಸುತ್ತೇನೆ.
21ನಾನು ನಿಮ್ಮನ್ನು ಕೂಡಿಸಿ, ನನ್ನ ರೋಷದ ಬೆಂಕಿಯನ್ನು ನಿಮ್ಮ ಮೇಲೆ ಊದುವೆನು. ನೀವು ಅದರೊಳಗೆ ಕರಗಿಹೋಗುವಿರಿ.
22ಬೆಳ್ಳಿಯು ಕುಲುಮೆಯಲ್ಲಿ ಕರಗುವ ಹಾಗೆ ನೀವು ನನ್ನ ರೋಷಾಗ್ನಿಯಲ್ಲಿ ಕರಗುವಿರಿ. ನಿನ್ನ ಮೇಲೆ ರೋಷಾಗ್ನಿಯನ್ನು ಸುರಿಸಿದವರು ಯೆಹೋವ ದೇವರಾದ ನಾನೇ ಎಂದು ನಿಮಗೆ ತಿಳಿಯುತ್ತದೆ.’ ”
23ಯೆಹೋವ ದೇವರ ವಾಕ್ಯವು ಮತ್ತೆ ನನಗೆ ಬಂದಿತು,
24“ಮನುಷ್ಯಪುತ್ರನೇ, ಅದಕ್ಕೆ ಹೀಗೆ ಹೇಳು, ‘ದೇವರ ರೌದ್ರದ ದಿವಸದಲ್ಲಿ ನೀನು ಶುದ್ಧಿಯಾಗದ ದೇಶವಾಗಿಯೂ, ಮಳೆಯಿಲ್ಲದ ದೇಶವಾಗಿಯೂ ಇರುವೆ.’
25ಬೇಟೆಯನ್ನು ಸುಲಿದುಕೊಳ್ಳುವ ಗರ್ಜಿಸುವ ಸಿಂಹದ ಹಾಗೆ ಅದರ ಮಧ್ಯದಲ್ಲಿ ಅವಳ ಪ್ರವಾದಿಗಳ ಒಳಸಂಚು ಉಂಟು; ಪ್ರಾಣಗಳನ್ನು ತಿಂದುಬಿಟ್ಟಿದ್ದಾರೆ, ಸಂಪತ್ತನ್ನೂ, ಅಮೂಲ್ಯವಾದ ವಸ್ತುವನ್ನೂ ದೋಚಿಕೊಂಡಿದ್ದಾರೆ, ಅವರು ಅದರ ಮಧ್ಯದಲ್ಲಿ ಬಹಳ ಜನರನ್ನು ವಿಧವೆಯರನ್ನಾಗಿ ಮಾಡಿದ್ದಾರೆ.
26ಅದರ ಯಾಜಕರು ನನ್ನ ವಿಧಿಗಳನ್ನು ಭಂಗಪಡಿಸಿದ್ದಾರೆ. ನನ್ನ ಪರಿಶುದ್ಧ ವಸ್ತುಗಳನ್ನು ಅಪವಿತ್ರಪಡಿಸಿದ್ದಾರೆ. ಅವರು ಪರಿಶುದ್ಧವಾದದ್ದಕ್ಕೂ, ಅಪವಿತ್ರವಾದದ್ದಕ್ಕೂ ಬೇಧವೆಣಿಸಲಿಲ್ಲ. ಶುದ್ಧ, ಅಶುದ್ಧಗಳ ವ್ಯತ್ಯಾಸವಿಲ್ಲ ಎಂದು ಬೋಧಿಸಿದರು. ನನ್ನ ಸಬ್ಬತ್ ದಿನಗಳಿಗೆ ತಮ್ಮ ಕಣ್ಣುಗಳನ್ನು ಮರೆಮಾಡಿದ್ದಾರೆ. ಆದ್ದರಿಂದ ನಾನು ಅವರಲ್ಲಿ ಅಪಕೀರ್ತಿಗೆ ಗುರಿಯಾಗಿದ್ದೇನೆ.
27ಅಲ್ಲಿಯ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ, ಪ್ರಾಣಗಳನ್ನು ನುಂಗುವ ಹಾಗೆ ಬೇಟೆಯ ತೋಳಗಳಂತಿದ್ದಾರೆ.
28ಮೋಸವನ್ನು ದರ್ಶಿಸಿ ಸುಳ್ಳು ಶಕುನ ಹೇಳುತ್ತಾರೆ; ಯೆಹೋವ ದೇವರು ಮಾತನಾಡದಿದ್ದರೂ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ’ ಎಂದು ಅವರ ಪ್ರವಾದಿಗಳು ಅವರಿಗೆ ಸುಣ್ಣ ಹಚ್ಚುತ್ತಾರೆ.
29ದೇಶದ ಜನರು ಬಲಾತ್ಕಾರದಿಂದ ಸೂರೆಮಾಡಿದ್ದಾರೆ, ಕೊಳ್ಳೆಯನ್ನು ಹೊಡೆದಿದ್ದಾರೆ. ಬಡವನನ್ನೂ, ದರಿದ್ರರನ್ನೂ ಪೀಡಿಸಿದ್ದಾರೆ; ಹೌದು, ಅವರು ನ್ಯಾಯ ಕೊಡದೆ ವಿದೇಶಿಯರನ್ನು ಬಲಾತ್ಕಾರ ಪಡಿಸಿದ್ದಾರೆ.
30“ಗೋಡೆಯನ್ನು ಕಟ್ಟಿ ನಾಡನ್ನು ನಾನು ಹಾಳುಮಾಡದಂತೆ ನಾಡಿನ ಪರವಾಗಿ ಪೌಳಿಗೋಡೆಯ ಬಿರುಕಿನಲ್ಲಿ ನಿಲ್ಲುವ ಒಬ್ಬ ಮನುಷ್ಯನನ್ನು ಅವರೊಳಗೆ ನಾನು ಹುಡುಕಿದೆನು. ಆದರೆ ಯಾರೂ ಸಿಕ್ಕಲಿಲ್ಲ.
31ಆದ್ದರಿಂದ ನನ್ನ ರೋಷವನ್ನು ಅವರ ಮೇಲೆ ಸುರಿಸಿದ್ದೇನೆ. ನನ್ನ ಸಿಟ್ಟಿನ ಬೆಂಕಿಯಿಂದ ಅವರನ್ನು ಸಂಹರಿಸಿದ್ದೇನೆ. ಅವರ ದುರ್ನಡತೆಯ ಹೊಣೆಯನ್ನು ಅವರ ತಲೆಗಳ ಮೇಲೆ ಹೊರಿಸಿದ್ದೇನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.