Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಹೆಜ್ಕೇಲನು 20

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಏಳನೆಯ ವರ್ಷದ, ಐದನೆಯ ತಿಂಗಳಿನ, ಹತ್ತನೆಯ ದಿನದಲ್ಲಿ ಇಸ್ರಾಯೇಲಿನ ಹಿರಿಯರಲ್ಲಿ ಕೆಲವರು ಯೆಹೋವ ದೇವರ ಬಳಿಗೆ ವಿಚಾರಣೆಗಾಗಿ ಬಂದು ನನ್ನ ಮುಂದೆ ಕುಳಿತುಕೊಂಡರು.
2ಆಗ ಯೆಹೋವ ದೇವರ ವಾಕ್ಯವು ನನಗೆ ಬಂದಿತು,
3“ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಹಿರಿಯರ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನನ್ನು ಪ್ರಶ್ನೆಕೇಳುವುದಕ್ಕೆ ಬಂದಿರೋ? ನನ್ನ ಜೀವದಾಣೆ, ನಾನು ನಿಮಗೆ ಉತ್ತರ ಕೊಡುವುದೇ ಇಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’
4“ನೀನು ಅವರಿಗೆ ನ್ಯಾಯತೀರಿಸುವೆಯೋ? ಮನುಷ್ಯಪುತ್ರನೇ, ನೀನು ಅವರಿಗೆ ನ್ಯಾಯತೀರಿಸುವೆಯೋ? ಹಾಗಾದರೆ ಅವರ ಪಿತೃಗಳ ಅಸಹ್ಯವಾದವುಗಳನ್ನು ಅವರಿಗೆ ತಿಳಿಸು.
5ಅವರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಇಸ್ರಾಯೇಲನ್ನು ಆಯ್ದುಕೊಂಡ ದಿವಸದಲ್ಲಿ ಯಾಕೋಬನ ವಂಶದವರಿಗೆ ನನ್ನ ಕೈಯೆತ್ತಿ, “ನಿಮ್ಮ ಸಾರ್ವಭೌಮ ಯೆಹೋವ ದೇವರು ನಾನೇ” ಎಂದು ಈಜಿಪ್ಟ್ ದೇಶದಲ್ಲಿ ಅವರಿಗೆ ಹೇಳಿದೆನು.
6ನಾನು ಅವರಿಗೆ ಪ್ರಮಾಣಮಾಡಿ ಈಜಿಪ್ಟ್ ದೇಶದಿಂದ ಹೊರಗೆ ತಂದು, ಅವರಿಗೋಸ್ಕರ ನಾನೇ ನೋಡಿಕೊಂಡಂಥ ಹಾಲೂ ಜೇನೂ ಹರಿಯುವ ಕೀರ್ತಿಯುಳ್ಳ ದೇಶಕ್ಕೆ ಅವರನ್ನು ಆ ದಿವಸದಲ್ಲಿ ಕರೆತಂದೆನು.
7ಆಮೇಲೆ ನಾನು ಅವರಿಗೆ, “ನಿಮ್ಮಲ್ಲಿ ಒಬ್ಬೊಬ್ಬನು ತಮ್ಮ ತಮ್ಮ ಕಣ್ಣುಗಳ ಮುಂದೆ ಅಸಹ್ಯವಾದವುಗಳನ್ನು ಬಿಸಾಡಿ ಬಿಡಿರಿ. ಈಜಿಪ್ಟಿನ ವಿಗ್ರಹಗಳಿಂದ ನಿಮ್ಮನ್ನು ಅಶುದ್ಧಪಡಿಸಿಕೊಳ್ಳಬೇಡಿರಿ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನಾಗಿರುವೆನು.”
8“ ‘ಆದರೆ ಅವರು ನನಗೆ ವಿರುದ್ಧವಾಗಿ ತಿರುಗಿಬಿದ್ದರು. ನನಗೆ ಕಿವಿಗೊಡಲಿಲ್ಲ. ಅವರು ತಮ್ಮ ಕಣ್ಣಿಗೆ ಅಸಹ್ಯವಾದವುಗಳನ್ನು ಬಿಸಾಡಲಿಲ್ಲ. ಅವರು ಈಜಿಪ್ಟಿನ ವಿಗ್ರಹಗಳನ್ನು ಬಿಡಲಿಲ್ಲ. ಆಗ ನಾನು ಅವರ ಮೇಲೆ ನನ್ನ ರೋಷವನ್ನು ಸುರಿಸಿ, ಈಜಿಪ್ಟ್ ದೇಶದಲ್ಲಿ ಅವರ ಮೇಲೆ ನನ್ನ ಕೋಪವನ್ನು ತೀರಿಸುವೆನೆಂದು ಹೇಳಿದೆನು.
9ಆದರೆ ಅವರು ಯಾರ ಮಧ್ಯದಲ್ಲಿದ್ದರೋ, ನಾನು ಯಾರ ಮುಂದೆ ಅವರನ್ನು ಈಜಿಪ್ಟ್ ದೇಶದಿಂದ ಹೊರಗೆ ತಂದು ನನ್ನನ್ನು ತಿಳಿಯಪಡಿಸಿದೆನೋ ಆ ಜನಾಂಗಗಳ ಕಣ್ಣುಗಳ ಮುಂದೆ ನನ್ನ ಹೆಸರು ಅಪವಿತ್ರವಾಗದ ಹಾಗೆ ನನ್ನ ಹೆಸರಿಗೋಸ್ಕರವೇ ಈ ಕೆಲಸವನ್ನು ಮಾಡಿದೆನು.
10ಆದ್ದರಿಂದ ನಾನು ಅವರನ್ನು ಈಜಿಪ್ಟ್ ದೇಶದಿಂದ ಹೊರಗೆ ಕರೆತಂದು, ಮರುಭೂಮಿಯೊಳಗೆ ಅವರನ್ನು ಬರಮಾಡಿದೆನು.
11ಯಾವ ಸಂಗತಿಗಳನ್ನು ಮಾಡಿದರೆ ಮನುಷ್ಯನು ಬದುಕುವನೋ? ಆ ನನ್ನ ನಿಯಮಗಳನ್ನು ಅವರಿಗೆ ಕೊಟ್ಟು, ನನ್ನ ನ್ಯಾಯಗಳನ್ನು ಅವರಿಗೆ ತಿಳಿಸಿದೆನು.
12ಇದಲ್ಲದೆ ಅವರನ್ನು ಪರಿಶುದ್ಧ ಮಾಡುವ ಯೆಹೋವ ದೇವರು ನಾನೇ ಎಂದು ಅವರು ತಿಳಿಯುವ ಹಾಗೆ ನನಗೂ, ಅವರಿಗೂ ಗುರುತಾಗಿರುವುದಕ್ಕೆ ನನ್ನ ಸಬ್ಬತ್ ದಿನಗಳನ್ನು ನಾನು ಅವರಿಗೆ ಕೊಟ್ಟೆನು.
13“ ‘ಆದರೆ ಇಸ್ರಾಯೇಲ್ ಜನರು ಮರುಭೂಮಿಯಲ್ಲಿಯೂ ನನಗೆ ವಿರುದ್ಧವಾಗಿ ತಿರುಗಿಬಿದ್ದರು. ಅವರು ನನ್ನ ಆಜ್ಞೆಗಳನ್ನು ಅನುಸರಿಸಲಿಲ್ಲ, ನನ್ನ ಅಪ್ಪಣೆಗಳನ್ನು ತಿರಸ್ಕರಿಸಿದರು. ಅವುಗಳಿಗೆ ವಿಧೇಯನಾಗುವವನು ಅವುಗಳಿಂದ ಜೀವಿಸುವನು. ನನ್ನ ಸಬ್ಬತ್ ದಿನಗಳನ್ನು ಅಪವಿತ್ರಗೊಳಿಸಿದರು. ಆಗ ನಾನು ಅವರ ಮೇಲೆ ನನ್ನ ರೋಷವನ್ನು ಸುರಿದು, ಅವರನ್ನು ಮರುಭೂಮಿಯಲ್ಲಿ ನಾಶಮಾಡುವೆನೆಂದು ಹೇಳಿದೆನು.
14ಆದರೆ ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಬರಮಾಡಿದೆನೋ, ಆ ಜನಾಂಗಗಳ ದೃಷ್ಟಿಯಲ್ಲಿ ಅಪವಿತ್ರವಾಗದ ಹಾಗೆ ನನ್ನ ಹೆಸರಿಗಾಗಿಯೇ ಕೆಲಸ ಮಾಡಿದೆನು.
15ಆದರೂ ಹಾಲೂ ಜೇನೂ ಹರಿಯುವಂಥ ದೇಶಗಳಿಗೆ ಕೀರ್ತಿಯಾಗಿರುವಂಥ ಆ ದೇಶದಲ್ಲಿ ಅವರನ್ನು ಸೇರಿಸುವುದಿಲ್ಲವೆಂದು ಮರುಭೂಮಿಯಲ್ಲಿ ಅವರಿಗೆ ನನ್ನ ಕೈಯೆತ್ತಿ ಪ್ರಮಾಣಮಾಡಿದೆನು.
16ಅವರ ಹೃದಯವು ತಮ್ಮ ವಿಗ್ರಹಗಳಲ್ಲಿ ಆಸಕ್ತವಾಗಿ, ನನ್ನ ನಿಯಮಗಳನ್ನು ಅನುಸರಿಸದೆ ನಿರಾಕರಿಸಿ, ನಾನು ನೇಮಿಸಿದ ವಿಶ್ರಾಂತಿಯ ದಿನಗಳನ್ನು ಅಪವಿತ್ರ ಮಾಡಿದ್ದರು.
17ಆದರೂ ಅವರನ್ನು ನಾನು ನಾಶಮಾಡದ ಹಾಗೆ ನನ್ನ ಕಣ್ಣು ಕನಿಕರಿಸಿತು. ನಾನು ಅವರನ್ನು ಮರುಭೂಮಿಯಲ್ಲಿ ಅಂತ್ಯಗೊಳಿಸಲಿಲ್ಲ.
18ಮರುಭೂಮಿಯಲ್ಲಿ ನಾನು ಅವರ ಮಕ್ಕಳಿಗೆ ಹೇಳಿದ್ದೇನೆಂದರೆ, “ನೀವು ನಿಮ್ಮ ತಂದೆಗಳ ನಿಯಮಗಳನ್ನು ಅನುಸರಿಸಬೇಡಿರಿ, ಅವರ ನ್ಯಾಯಗಳನ್ನು ಕೈಕೊಳ್ಳಬೇಡಿರಿ, ಅವರ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರಮಾಡಿಕೊಳ್ಳಬೇಡಿರಿ.
19ನಾನೇ ಯೆಹೋವ ದೇವರೂ ನಿಮ್ಮ ದೇವರೂ ಆಗಿದ್ದೇನೆ. ನನ್ನ ನಿಯಮಗಳಲ್ಲೇ ನಡೆಯಿರಿ ಮತ್ತು ನನ್ನ ನ್ಯಾಯಗಳನ್ನು ಜಾಗರೂಕತೆಯಿಂದ ಕೈಗೊಂಡು ಅವುಗಳನ್ನೇ ಮಾಡಿರಿ.
20ನನ್ನ ಸಬ್ಬತ್ ದಿನಗಳನ್ನು ಪರಿಶುದ್ಧ ಮಾಡಿರಿ, ನಾನೇ ನಿಮ್ಮ ದೇವರಾದ ಯೆಹೋವ ದೇವರು ಎಂದು ಅವು ನಿಮಗೂ ನನಗೂ, ನೀವು ತಿಳಿಯುವ ಹಾಗೆ ಗುರುತುಗಳಾಗಿರುವುವು.”
21“ ‘ಆದರೆ ಮಕ್ಕಳು ನನಗೆ ವಿರೋಧವಾಗಿ ತಿರುಗಿಬಿದ್ದರು. ಯಾವವುಗಳನ್ನು ಮನುಷ್ಯನು ಮಾಡಿದರೆ ಬದುಕುವನೋ, ಆ ನನ್ನ ನಿಯಮಗಳಲ್ಲಿ ನಡೆಯಲಿಲ್ಲ ಮತ್ತು ನನ್ನ ನ್ಯಾಯಗಳನ್ನು ಜಾಗರೂಕತೆಯಿಂದ ಪಾಲಿಸಿ ನಡೆಯಲಿಲ್ಲ. ನನ್ನ ಸಬ್ಬತ್ ದಿನಗಳನ್ನು ಅಪವಿತ್ರಪಡಿಸಿದಿರಿ. ಆಗ ಅವರ ಮೇಲೆ ನನ್ನ ರೋಷವನ್ನು ಸುರಿದುಬಿಡುವೆನೆಂದೂ, ನನ್ನ ಕೋಪವನ್ನು ಮರುಭೂಮಿಯಲ್ಲಿ ಅವರ ಮೇಲೆ ತೀರಿಸಿ ಬಿಡುವೆನೆಂದೂ ಹೇಳಿದೆನು.
22ಆದರೂ ನಾನು ನನ್ನ ಕೈಯನ್ನು ಹಿಂತೆಗೆದು, ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಹೊರಗೆ ಬರಮಾಡಿದೆನೋ, ಆ ಜನಾಂಗಗಳ ದೃಷ್ಟಿಯಲ್ಲಿ ನನ್ನ ಹೆಸರು ಅಪವಿತ್ರವಾಗದ ಹಾಗೆ, ನನ್ನ ಹೆಸರಿಗೋಸ್ಕರವೇ ಕೆಲಸ ಮಾಡಿದೆನು.
23ನಾನು ಅವರನ್ನು ಇತರ ಜನಾಂಗಗಳಲ್ಲಿ ಚದರಿಸುತ್ತೇನೆಂದೂ, ದೇಶಗಳಲ್ಲಿ ಹರಡಿಸುತ್ತೇನೆಂದೂ ಮರುಭೂಮಿಯಲ್ಲಿ ಅವರ ಮೇಲೆ ಕೈಯೆತ್ತಿ ಪ್ರಮಾಣಮಾಡಿದೆನು.
24ಏಕೆಂದರೆ ಅವರು ನನ್ನ ನ್ಯಾಯಗಳಲ್ಲಿ ನಡೆಯದೆ, ನನ್ನ ನಿಯಮಗಳನ್ನು ಅಲಕ್ಷಿಸಿ, ನನ್ನ ಸಬ್ಬತ್ ದಿನಗಳನ್ನು ಅಪವಿತ್ರಪಡಿಸಿದರು. ತಮ್ಮ ಪಿತೃಗಳ ವಿಗ್ರಹಗಳ ಕಡೆಗೆ ಕಣ್ಣಿಟ್ಟಿದ್ದರು.
25ನಾನೇ ಯೆಹೋವ ದೇವರು ಎಂದು ಅವರು ತಿಳಿದುಕೊಳ್ಳುವಂತೆ ನಾನು ಅವರಿಗೆ ಅಹಿತವಾದ ನಿಯಮಗಳನ್ನೂ, ಅವರು ಬದುಕಬಾರದ ನ್ಯಾಯಗಳನ್ನೂ ಕೊಟ್ಟೆನು.
26ಅವರು ತಮ್ಮ ಚೊಚ್ಚಲು ಮಕ್ಕಳನ್ನು ಆಹುತಿಕೊಟ್ಟು ಅರ್ಪಿಸುತ್ತಿದ್ದ ಬಲಿಗಳಿಂದಲೇ ಅವರನ್ನು ಹೊಲೆಗೆಡಿಸಿ, ಕೇವಲ ದುರವಸ್ಥೆಗೆ ತಂದೆನು. ಆಗ ನಾನೇ ಯೆಹೋವ ದೇವರೆಂದು ಅವರು ತಿಳಿದುಕೊಳ್ಳುವರು.’
27“ಆದ್ದರಿಂದ ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಮನೆತನದವರ ಸಂಗಡ ಮಾತನಾಡಿ ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನಗೆ ವಿರುದ್ಧವಾಗಿ ಬಹಳ ಅಪರಾಧಮಾಡಿದ್ದರಲ್ಲಿಯೂ ನಿಮ್ಮ ಪಿತೃಗಳು ನನ್ನನ್ನು ದೂಷಿಸಿದರು.
28ನಾನು ಪ್ರಮಾಣಪೂರ್ವಕವಾಗಿ ಅವರಿಗೆ ವಾಗ್ದಾನಮಾಡಿದ ದೇಶದಲ್ಲಿ ನಾನು ಅವರನ್ನು ಬರಮಾಡಿದ ಮೇಲೆ ಅವರು ಎತ್ತರವಾದ ಎಲ್ಲಾ ಗುಡ್ಡಗಳನ್ನೂ, ಸೊಂಪಾಗಿ ಬೆಳೆದಿರುವ ಮರಗಳನ್ನೂ ನೋಡಿ, ಅಲ್ಲಿ ತಮ್ಮ ಬಲಿಗಳನ್ನರ್ಪಿಸಿ ಸುವಾಸನೆಗಳನ್ನಿಟ್ಟು ಪಾನದ್ರವ್ಯವನ್ನು ಸುರಿದರು.
29ಆಗ ನಾನು ಅವರಿಗೆ ಹೇಳಿದ್ದೇನೆಂದರೆ: ನೀವು ಹೋಗುವ ಈ ಎತ್ತರವಾದ ಸ್ಥಳವು ಏನು? ಅದಕ್ಕೆ ಈ ದಿನದವರೆಗೂ ಬಾಮಾ ಎಂದು ಕರೆಯುವರು.’ ” ಇಸ್ರಾಯೇಲಿನ ಪುನಸ್ಥಾಪನೆ
30“ಆದ್ದರಿಂದ ನೀನು ಇಸ್ರಾಯೇಲಿನ ಮನೆತನದವರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಿಮ್ಮ ಪಿತೃಗಳ ಹಾಗೆ ನಿಮ್ಮನ್ನು ಅಪವಿತ್ರಪಡಿಸಿಕೊಳ್ಳುತ್ತೀರೋ? ಅವರ ಅಸಹ್ಯವಾದ ವಿಗ್ರಹಗಳ ಹಿಂದೆ ಹೋಗುತ್ತೀರೋ?
31ನಿಮ್ಮ ದಾನಗಳನ್ನು ತರುವಾಗಲೂ, ಬೆಂಕಿಯಲ್ಲಿ ನಿಮ್ಮ ಮಕ್ಕಳನ್ನು ಯಜ್ಞವಾಗಿ ಅರ್ಪಿಸುವಾಗಲೂ, ನೀವು ಇಂದಿನವರೆಗೂ ನಿಮ್ಮ ಎಲ್ಲಾ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರಪಡಿಸಿಕೊಳ್ಳುತ್ತಿದ್ದೀರಿ. ಹೀಗಿರುವಾಗ ಇಸ್ರಾಯೇಲ್ ವಂಶದವರೇ, ನೀವು ನನ್ನನ್ನು ವಿಚಾರಿಸಲು ಅನುಮತಿಸಬೇಕೆ? ನನ್ನ ಜೀವದಾಣೆ ನಾನು ನಿಮ್ಮನ್ನು ವಿಚಾರಿಸಲು ಅನುಮತಿಸುವುದಿಲ್ಲ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
32“ ‘ “ನಾವು ಇತರ ಜನಾಂಗಗಳ ಹಾಗೆ ಮತ್ತು ಇತರ ದೇಶಗಳವರ ಹಾಗೆ ಇದ್ದು ಮರಕ್ಕೂ ಕಲ್ಲಿಗೂ ಸೇವೆ ಮಾಡುತ್ತೇವೆಂದು ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಯೋಚನೆಯು ಎಷ್ಟು ಮಾತ್ರಕ್ಕೂ ನೆರವೇರದು.”
33ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, ನನ್ನ ಜೀವದಾಣೆ, ನಿಶ್ಚಯವಾಗಿ ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ, ಸುರಿಸಿದ ರೋಷದಿಂದಲೂ ನಾನು ನಿಮ್ಮ ಮೇಲೆ ಅಧಿಕಾರ ನಡೆಸುತ್ತೇನೆ.
34ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ, ಸುರಿಸಿದ ರೋಷದಿಂದಲೂ, ನಿಮ್ಮನ್ನು ಜನರೊಳಗಿಂದ ಹೊರತಂದು ನೀವು ಚದರಿಹೋಗಿರುವ ದೇಶಗಳೊಳಗಿಂದ ನಿಮ್ಮನ್ನು ಒಂದಾಗಿ ಕೂಡಿಸುವೆನು.
35ನಿಮ್ಮನ್ನು ಜನರಿರುವ ಮರುಭೂಮಿಯೊಳಗೆ ತಂದು, ನಿಮ್ಮೊಂದಿಗೆ ಅಲ್ಲಿ ಮುಖಾಮುಖಿಯಾಗಿ ನ್ಯಾಯತೀರ್ಪು ಮಾಡುವೆನು.
36ಅದೇ ರೀತಿ ನಾನು ನಿಮ್ಮ ಪಿತೃಗಳ ಸಂಗಡ ಈಜಿಪ್ಟ್ ದೇಶದ ಮರುಭೂಮಿಯಲ್ಲಿ ನ್ಯಾಯತೀರ್ಪು ಮಾಡಿದೆನು. ಈಗಲೂ ನಿಮ್ಮ ಸಂಗಡ ನ್ಯಾಯತೀರ್ಪು ಮಾಡುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
37ನೀವು ನನ್ನ ಕೋಲಿನ ಕೆಳಗೆ ನಡೆಯುವಾಗ, ನನ್ನ ಗಮನವು ನಿಮ್ಮ ಮೇಲೆ ಇರುತ್ತದೆ ಮತ್ತು ನಾನು ನಿಮ್ಮನ್ನು ಒಡಂಬಡಿಕೆಗೆ ತರುತ್ತೇನೆ.
38ತಿರುಗಿಬಿದ್ದವರನ್ನೂ ನನಗೆ ವಿರೋಧವಾಗಿ ಅಪರಾಧ ಮಾಡಿದವರನ್ನೂ ನಿಮ್ಮೊಂದಿಗೆ ಶುದ್ಧಮಾಡುತ್ತೇನೆ. ಅವರು ಪ್ರವಾಸಿಗಳಾಗಿದ್ದ ದೇಶದೊಳಗಿಂದ ಅವರನ್ನು ಹೊರಗೆ ತರುತ್ತೇನೆ. ಆದರೆ ಅವರು ಇಸ್ರಾಯೇಲ್ ದೇಶದೊಳಗೆ ಹೋಗದ ಹಾಗೆ ಮಾಡಿ, ನಾನೇ ಯೆಹೋವ ದೇವರೆಂಬುದನ್ನು ಅವರಿಗೆ ತಿಳಿಸುತ್ತೇನೆ.
39“ ‘ನಿಮ್ಮ ವಿಷಯವಾಗಿ, ಓ ಇಸ್ರಾಯೇಲಿನ ಮನೆತನದವರೇ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಹೋಗಿರಿ, ನಿಮ್ಮ ನಿಮ್ಮ ವಿಗ್ರಹಗಳನ್ನು ಸೇವಿಸಿರಿ. ಆದರೆ ನಂತರ ನೀವು ಖಂಡಿತವಾಗಿಯೂ ನನ್ನ ಮಾತನ್ನು ಕೇಳುತ್ತೀರಿ ಮತ್ತು ನಿಮ್ಮ ದಾನಗಳಿಂದಲೂ, ನಿಮ್ಮ ವಿಗ್ರಹಗಳಿಂದಲೂ ಇನ್ನು ಮೇಲೆ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಪಡಿಸಬೇಡಿರಿ.
40ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ನನ್ನ ಪರಿಶುದ್ಧ ಪರ್ವತದಲ್ಲಿಯೇ, ಇಸ್ರಾಯೇಲಿನ ಉನ್ನತ ಪರ್ವತದಲ್ಲಿಯೇ ಇಸ್ರಾಯೇಲಿನ ಮನೆತನದವರೆಲ್ಲರೂ, ದೇಶದಲ್ಲಿರುವವರೆಲ್ಲರೂ ನನ್ನನ್ನು ಸೇವಿಸುವರು. ನಾನು ಅಲ್ಲಿ ಅವರಿಗೆ ಮೆಚ್ಚಿ, ನಿಮ್ಮ ಉತ್ತಮ ಅರ್ಪಣೆಗಳನ್ನೂ, ನಿಮ್ಮ ಕಾಣಿಕೆಗಳ ಪ್ರಥಮ ಫಲವನ್ನೂ, ನಿಮ್ಮ ಎಲ್ಲಾ ಪರಿಶುದ್ಧ ಸಂಗತಿಗಳನ್ನೂ ಅಂಗೀಕರಿಸುವೆನು.
41ನಾನು ನಿಮ್ಮನ್ನು ಇತರ ಜನಾಂಗಗಳೊಳಗಿಂದ ಹೊರತಂದು, ನೀವು ಚದರಿಸುವ ದೇಶದೊಳಗಿಂದ ಕೂಡಿಸುವಾಗ, ನಿಮ್ಮನ್ನು ಸುವಾಸನೆಯಂತೆ ಅಂಗೀಕರಿಸುವೆನು. ಇತರ ಜನಾಂಗಗಳ ಮುಂದೆ ನನ್ನನ್ನು ಪರಿಶುದ್ಧನೆಂದು ತೋರಿಸುವೆನು.
42ನಾನು ನಿಮ್ಮ ಮೇಲೆ ಇಸ್ರಾಯೇಲ್ ದೇಶದಲ್ಲಿ ನನ್ನ ಕೈಯೆತ್ತಿ ನಿಮ್ಮ ಪಿತೃಗಳಿಗೆ ಕೊಟ್ಟ ದೇಶದಿಂದ ನಿಮ್ಮನ್ನು ಕರೆದುಕೊಂಡು ಬರುವಾಗ, ನಾನೇ ಯೆಹೋವ ದೇವರೆಂದು ತಿಳಿದುಕೊಳ್ಳುವಿರಿ.
43ಅಲ್ಲಿ ನೀವು ನಿಮ್ಮ ಮಾರ್ಗಗಳನ್ನು ಬಿಟ್ಟು, ನೀವು ಯಾವ ಸಂಗತಿಗಳಿಂದ ಅಶುದ್ಧವಾಗಿದ್ದೀರೋ, ಆ ನಿಮ್ಮ ಕ್ರಿಯೆಗಳನ್ನೆಲ್ಲಾ ಜ್ಞಾಪಕ ಮಾಡಿಕೊಳ್ಳುವಿರಿ. ನೀವು ಮಾಡಿದ ನಿಮ್ಮ ಎಲ್ಲಾ ಕೆಟ್ಟತನದ ನಿಮಿತ್ತವಾಗಿ ನಿಮ್ಮ ಸ್ವಂತ ದೃಷ್ಟಿಯಲ್ಲಿಯೇ ನೀವು ಅಸಹ್ಯರಾಗುವಿರಿ.
44ಇಸ್ರಾಯೇಲಿನ ಮನೆತನದವರೇ, ನಿಮ್ಮ ದುರ್ಮಾರ್ಗಗಳ ಪ್ರಕಾರವಲ್ಲ, ನಿಮ್ಮ ದುಷ್ಕೃತ್ಯಗಳ ಪ್ರಕಾರವಲ್ಲ, ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಸಹಿಸಿಕೊಂಡಿರುವಾಗ, ನಾನೇ ಯೆಹೋವ ದೇವರೆಂದು ತಿಳಿದುಕೊಳ್ಳುವಿರಿ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ” ದಕ್ಷಿಣಕ್ಕೆ ವಿರೋಧವಾದ ಪ್ರವಾದನೆ
45ಯೆಹೋವ ದೇವರ ವಾಕ್ಯವು ನನಗೆ ಬಂದಿತು:
46“ಮನುಷ್ಯಪುತ್ರನೇ, ದಕ್ಷಿಣದ ಕಡೆಗೆ ಮುಖಮಾಡಿ, ದಕ್ಷಿಣದ ಕಡೆಗೆ ಮಾತನಾಡು. ದಕ್ಷಿಣ ಬಯಲು ಮರುಭೂಮಿಗೆ ವಿರೋಧವಾಗಿ ಪ್ರವಾದಿಸು.
47ದಕ್ಷಿಣದ ಮರುಭೂಮಿಗೆ ಹೇಳಬೇಕಾದದ್ದೇನೆಂದರೆ: ‘ಯೆಹೋವ ದೇವರ ವಾಕ್ಯವನ್ನು ಕೇಳು. ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ನಿನ್ನಲ್ಲಿ ಬೆಂಕಿ ಹಚ್ಚುತ್ತೇನೆ. ಅದು ನಿನ್ನಲ್ಲಿರುವ ಎಲ್ಲಾ ಹಸಿಮರಗಳನ್ನು ಮತ್ತು ಎಲ್ಲಾ ಒಣ ಮರಗಳನ್ನು ತಿಂದುಬಿಡುವುದು. ಉರಿಯುವ ಜ್ವಾಲೆ ಆರಿಹೋಗುವುದಿಲ್ಲ. ದಕ್ಷಿಣ ಮೊದಲುಗೊಂಡು ಉತ್ತರದವರೆಗೂ ಎಲ್ಲಾ ಮುಖಗಳು ಅದರಲ್ಲಿ ಸುಟ್ಟುಹೋಗುವುವು.
48ಯೆಹೋವ ದೇವರಾದ ನಾನೇ ಅದನ್ನು ಹಚ್ಚಿದೆನೆಂದು ಪ್ರತಿಯೊಬ್ಬರೂ ತಿಳಿದುಕೊಳ್ಳುವರು, ಅದು ಆರಿಹೋಗುವುದಿಲ್ಲ.’ ”
49ಆಗ ನಾನು, “ಅಯ್ಯೋ, ಸಾರ್ವಭೌಮ ಯೆಹೋವ ದೇವರೇ, ‘ಅವನು ಸಾಮ್ಯಗಳನ್ನು ಹೇಳುವುದಿಲ್ಲವೇ?’ ಎಂದು ನನ್ನ ವಿಷಯದಲ್ಲಿ ಅವರು ಹೇಳುತ್ತಾರೆ,” ಎಂದೆನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.