Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ರೋಮಾಪುರದವರಿಗೆ 7

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಪ್ರಿಯರೇ, ನಿಯಮವನ್ನು ತಿಳಿದವರಿಗೆ ನಾನು ಹೇಳುವುದೇನೆಂದರೆ, ಒಬ್ಬ ಮನುಷ್ಯನು ಜೀವದಿಂದಿರುವ ತನಕ ಮಾತ್ರ ನಿಯಮಕ್ಕೆ ಅವನ ಮೇಲೆ ಅಧಿಕಾರ ಇರುತ್ತದೆಂದು ನೀವು ಬಲ್ಲಿರಿ.
2ಒಬ್ಬ ಮದುವೆಯಾದ ಹೆಣ್ಣು ಮಗಳು ಕಾನೂನಿಗನುಸಾರವಾಗಿ ಅವಳ ಪತಿಯು ಜೀವದಿಂದಿರುವ ತನಕ ಮಾತ್ರ ಅವನಿಗೆ ಬದ್ಧಳಾಗಿರುತ್ತಾಳೆ. ಆದರೆ ಪತಿಯು ಸತ್ತರೆ ಆಕೆಯು ಮದುವೆಯ ಕಾನೂನಿನಿಂದ ಬಿಡುಗಡೆ ಹೊಂದಿದವಳಾಗಿರುತ್ತಾಳೆ.
3ಹೀಗಿರುವಾಗ, ಅವಳ ಪತಿಯು ಜೀವಂತನಾಗಿರುವಾಗ ಆಕೆಯು ಇನ್ನೊಬ್ಬನನ್ನು ಮದುವೆಯಾದರೆ ವ್ಯಭಿಚಾರಿಣಿ ಎಂದು ಎನಿಸಿಕೊಳ್ಳುವಳು. ಆದರೆ ಪತಿಯು ಸತ್ತರೆ, ಆಕೆಯು ಬೇರೊಬ್ಬನನ್ನು ಮದುವೆಯಾದರೂ ಆ ಕಾನೂನಿನಿಂದ ಅವಳು ಬಿಡುಗಡೆ ಆಗಿರಲಾಗಿ ವ್ಯಭಿಚಾರಿಣಿ ಎಂದು ಎನಿಸಿಕೊಳ್ಳುವುದಿಲ್ಲ.
4ಆದ್ದರಿಂದ, ನನ್ನ ಪ್ರಿಯರೇ, ನೀವು ದೇವರಿಗೆ ಫಲಕೊಡುವವರಾಗಬೇಕೆಂದು ಸತ್ತವರೊಳಗಿಂದ ಎದ್ದುಬಂದಾತನಿಗೆ ಸೇರಿದವರಾಗಲು ಕ್ರಿಸ್ತ ಯೇಸುವಿನ ದೇಹದ ಮೂಲಕ ನಿಯಮದ ಪಾಲಿಗೆ ಸತ್ತಿರಿ.
5ಮಾಂಸಭಾವಕ್ಕನುಸಾರವಾಗಿ ನಾವು ಜೀವಿಸುತ್ತಿದ್ದಾಗ, ನಿಯಮದಿಂದ ಉತ್ತೇಜನಗೊಂಡ ಪಾಪದ ದುರಾಶೆಗಳು ನಮ್ಮ ದೇಹದಲ್ಲಿ ಕಾರ್ಯ ನಡೆಸುತ್ತಿದ್ದವು. ಆದ್ದರಿಂದ ನಾವು ಮರಣಕ್ಕೆ ಫಲಗಳನ್ನು ಹುಟ್ಟಿಸುತ್ತಿದ್ದೆವು.
6ಈಗಲಾದರೋ ಒಂದು ಕಾಲದಲ್ಲಿ ನಮ್ಮನ್ನು ಯಾವುದು ಬಂಧನದಲ್ಲಿರಿಸಿತ್ತೋ ಅದಕ್ಕೆ ಸತ್ತವರಾಗಿದ್ದು ನಿಯಮದಿಂದ ಬಿಡುಗಡೆ ಹೊಂದಿದವರಾಗಿರುತ್ತೇವೆ. ಹೀಗೆ ನಾವು ಲಿಖಿತವಾದ ಹಳೆಯ ನಿಯಮದಂತೆ ನಡೆಯದೆ ಆತ್ಮದಿಂದ ನವಜೀವನದಲ್ಲಿ ನಡೆಯುವರಾಗಿದ್ದೇವೆ. ನಿಯಮವೂ ಪಾಪವೂ
7ಹಾಗಾದರೆ ನಾವು ಏನು ಹೇಳೋಣ? ನಿಯಮವೇ ಪಾಪವಾಗಿದೆಯೋ? ಎಂದಿಗೂ ಇಲ್ಲ. ಆದರೂ ನಿಯಮವನ್ನು ಬಿಟ್ಟು ಬೇರಾವುದರ ಮೂಲಕವೂ ಪಾಪವೆಂದರೆ ಏನೆಂದು ನನಗೆ ತಿಳಿದುಕೊಳ್ಳಲು ಸಾಧ್ಯವಿರಲಿಲ್ಲ. ನಿಯಮವು, “ದುರಾಶೆ ಪಡಬೇಡ,” ಎಂದು ಹೇಳದೆ ಇರುತ್ತಿದ್ದರೆ ದುರಾಶೆ ಎಂದರೆ ಏನೆಂದು ನಾನು ತಿಳಿಯಲು ಸಾಧ್ಯವಿರಲಿಲ್ಲ.
8ಆದರೆ ಪಾಪವು, ಆ ಆಜ್ಞೆಯಿಂದ ಅನುಕೂಲ ಹೊಂದಿ ನನ್ನಲ್ಲಿ ಎಲ್ಲಾ ವಿಧದ ಆಶೆಗಳನ್ನು ಉಂಟುಮಾಡಿತು. ಏಕೆಂದರೆ ನಿಯಮವಿಲ್ಲದೆ ಪಾಪವು ಸತ್ತದ್ದಾಗಿರುತ್ತದೆ.
9ಒಮ್ಮೆ ನಾನು ನಿಯಮವಿಲ್ಲದೆ ಜೀವಿಸುತ್ತಿದ್ದೆನು. ಆದರೆ ಯಾವಾಗ ಆಜ್ಞೆಯು ಬಂದಿತೋ ಆಗ ಪಾಪವು ಜೀವಂತವಾಯಿತು, ನಾನು ಸತ್ತವನಾದೆನು.
10ಜೀವವನ್ನು ತರಲಿಕ್ಕಾಗಿ ಕೊಟ್ಟಿರುವ ಆಜ್ಞೆಯೇ ಮರಣವನ್ನು ಉಂಟುಮಾಡುವುದಾಯಿತು ಎಂದು ಕಂಡುಕೊಂಡೆನು.
11ಪಾಪವು ಆಜ್ಞೆಯಿಂದ ಅನುಕೂಲ ಹೊಂದಿ ನನ್ನನ್ನು ವಂಚಿಸಿ, ಅದೇ ನನ್ನನ್ನು ಮರಣಕ್ಕೆ ಒಳಪಡಿಸಿತು.
12ಹೀಗಿರಲಾಗಿ, ನಿಯಮವು ಪವಿತ್ರವಾದದ್ದು. ಆಜ್ಞೆಯು ಪವಿತ್ರವೂ ನ್ಯಾಯವೂ ಒಳ್ಳೆಯದೂ ಆಗಿರುತ್ತದೆ.
13ಹಾಗಾದರೆ ಒಳ್ಳೆಯದಾಗಿರುವ ನಿಯಮವೇ ನನಗೆ ಮರಣಕ್ಕೆ ಕಾರಣವಾಯಿತೋ? ಎಂದಿಗೂ ಇಲ್ಲ! ಆದರೂ ಪಾಪವು ಪಾಪವೇ ಎಂದು ಕಾಣುವಂತೆ ಒಳ್ಳೆಯದಾಗಿರುವ ನಿಯಮದ ಮೂಲಕವೇ ಪಾಪವು ನನ್ನಲ್ಲಿ ಮರಣವು ಉಂಟಾಗುವಂತೆ ಮಾಡಿತು. ಈ ರೀತಿಯಾಗಿ ಆಜ್ಞೆಯ ಮೂಲಕ ಪಾಪವು ಘೋರವಾದದ್ದೇ ಎಂದು ಕಂಡುಬರಲು ಸಾಧ್ಯವಾಯಿತು.
14ನಿಯಮವು ಆತ್ಮಿಕವಾದದ್ದೆಂದು ಬಲ್ಲೆವು. ಆದರೆ ನರಮಾನವನಾದ ನಾನು ಪಾಪಕ್ಕೆ ಗುಲಾಮನಂತೆ ಮಾರಿಕೊಂಡವನಾಗಿದ್ದೇನೆ.
15ನಾನು ಏನು ಮಾಡುತ್ತೇನೆ ಎಂಬುದನ್ನು ತಿಳಿಯದವನಾಗಿದ್ದೇನೆ. ಏಕೆಂದರೆ ನಾನು ಮಾಡಬೇಕೆಂದು ಬಯಸುವುದನ್ನು ಮಾಡದೆ, ಯಾವುದನ್ನು ದ್ವೇಷಿಸುತ್ತೇನೋ ಅದನ್ನೇ ಮಾಡುವವನಾಗಿದ್ದೇನೆ.
16ನಾನು ಮಾಡಲು ಬಯಸದಿರುವುದನ್ನು ಮಾಡುವುದಾದರೆ, ನಿಯಮವು ಒಳ್ಳೆಯದೆಂದು ಒಪ್ಪುತ್ತೇನೆ.
17ಹೀಗಿರಲಾಗಿ ನಾನು ಬಯಸದಿರುವುದನ್ನು ಮಾಡುವವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಸಿರುವ ಪಾಪವೇ ಅದನ್ನು ಮಾಡುತ್ತದೆ.
18ನನ್ನಲ್ಲಿ, ಅಂದರೆ ನನ್ನ ಶಾರೀರಿಕ ಸ್ವಭಾವದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲ ಎಂದು ಬಲ್ಲೆನು. ಏಕೆಂದರೆ ಒಳ್ಳೆಯದನ್ನು ಮಾಡಬೇಕೆಂಬ ಮನಸ್ಸೇನೋ ನನ್ನಲ್ಲಿ ಇದೆ, ಆದರೆ ಅದನ್ನು ಮಾಡುವುದಕ್ಕೆ ನನ್ನಿಂದಾಗದು.
19ನಾನು ಬಯಸುವ ಒಳ್ಳೆಯದನ್ನು ಮಾಡದೆ, ನಾನು ಮಾಡಲು ಬಯಸದೆ ಇರುವ ಕೆಟ್ಟದ್ದನ್ನೇ ಮಾಡುತ್ತಿದ್ದೇನೆ.
20ಮಾಡಬಾರದೆನ್ನುವ ಕೆಲಸವನ್ನು ನಾನು ಮಾಡುತ್ತಿರುವುದಾದರೆ ಅದನ್ನು ಮಾಡಿದವನು ನಾನಲ್ಲ. ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡುತ್ತಿದೆ.
21ಒಳ್ಳೆಯದನ್ನು ಮಾಡಲು ಬಯಸುತ್ತಿರುವ ನನ್ನಲ್ಲಿ ಕೆಟ್ಟದ್ದು ಇರುವ ನಿಯಮವನ್ನು ಕಾಣುತ್ತಿದ್ದೇನೆ.
22ಏಕೆಂದರೆ ನಾನು ಹೃದಯಪೂರ್ವಕವಾಗಿ ದೇವರ ನಿಯಮದಲ್ಲಿ ಹರ್ಷಗೊಳ್ಳುವವನಾಗಿದ್ದೇನೆ.
23ಆದರೆ ನನ್ನ ಅವಯವಗಳಲ್ಲಿ ಬೇರೊಂದು ನಿಯಮವನ್ನು ಕಾಣುತ್ತಿದ್ದೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರೋಧವಾಗಿ ಹೋರಾಡುತ್ತಾ ನನ್ನ ಅವಯವಗಳಲ್ಲಿ ಸೇರಿಕೊಂಡಿರುವ ಪಾಪದ ನಿಯಮಕ್ಕೆ ಸೆರೆಯವನನ್ನಾಗಿ ಮಾಡುತ್ತಿದೆ.
24ನಾನು ಎಂಥಾ ದುರವಸ್ಥೆಯುಳ್ಳ ಮನುಷ್ಯನು! ನನ್ನನ್ನು ಈ ಮರಣಕರವಾದ ದೇಹದಿಂದ ಯಾರು ಬಿಡಿಸಬಲ್ಲರು?
25ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ದೇವರಿಗೆ ಸ್ತೋತ್ರ! ಏಕೆಂದರೆ ನನ್ನಷ್ಟಕ್ಕೆ ನಾನೇ ನನ್ನ ಮನಸ್ಸಿನಲ್ಲಿ ದೇವರ ನಿಯಮಕ್ಕೆ ಗುಲಾಮನಾಗಿಯೂ ನನ್ನ ಮಾಂಸಭಾವದ ದೇಹದಲ್ಲಿ ಪಾಪದ ನಿಯಮಕ್ಕೆ ಗುಲಾಮನಾಗಿಯೂ ಇದ್ದೇನೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.