Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ರೋಮಾಪುರದವರಿಗೆ 6

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಹಾಗಾದರೆ ನಾವು ಏನು ಹೇಳೋಣ? ಕೃಪೆಯು ಹೆಚ್ಚಾಗಲಿ ಎಂದು ನಾವು ಪಾಪದಲ್ಲಿ ಮುಂದುವರಿಯೋಣವೆ?
2ಎಂದಿಗೂ ಹಾಗಾಗದಿರಲಿ! ನಾವು ಪಾಪದ ಪಾಲಿಗೆ ಸತ್ತೆವು, ನಾವು ಇನ್ನೂ ಪಾಪದಲ್ಲಿ ಜೀವಿಸುವುದು ಹೇಗೆ?
3ಅಥವಾ ಕ್ರಿಸ್ತ ಯೇಸುವಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರುವ ನಾವು ಅವರ ಮರಣದಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರುತ್ತೇವೆಂಬುದು ನಿಮಗೆ ತಿಳಿಯದೋ?
4ಹೀಗಿರುವಲ್ಲಿ ಯೇಸುವಿರೊಂದಿಗೆ ದೀಕ್ಷಾಸ್ನಾನದ ಮೂಲಕ ಅವರ ಮರಣದಲ್ಲಿ ಹೂಣಲಾದೆವು. ಆದ್ದರಿಂದ ತಂದೆಯ ಮಹಿಮೆಯ ಮೂಲಕ ಕ್ರಿಸ್ತ ಯೇಸು ಸತ್ತವರೊಳಗಿಂದ ಎಬ್ಬಿಸಲಾದಂತೆಯೇ ನಾವು ಹೊಸ ಜೀವವನ್ನು ಜೀವಿಸಬೇಕು.
5ನಾವು ಕ್ರಿಸ್ತ ಯೇಸುವಿನೊಂದಿಗೆ ಸೇರಿ ಅವರ ಮರಣದಲ್ಲಿ ಪಾಲುಗಾರರಾದರೆ, ಅವರ ಪುನರುತ್ಥಾನದಲ್ಲಿಯೂ ಪಾಲುಗಾರರಾಗುವೆವು.
6ನಮ್ಮ ಪಾಪದ ಶರೀರವು ನಾಶವಾಗಿ ನಾವು ಇನ್ನು ಮುಂದೆ ಎಂದಿಗೂ ಪಾಪಕ್ಕೆ ಗುಲಾಮರಾಗದಂತೆ, ನಮ್ಮ ಹಳೆಯ ಮನುಷ್ಯ ಸ್ವಭಾವ ಯೇಸುವಿನೊಂದಿಗೆ ಶಿಲುಬೆಗೆ ಹಾಕಲಾಯಿತು ಎಂದು ನಾವು ಬಲ್ಲೆವು.
7ಮರಣ ಹೊಂದಿರುವ ಯಾರೇ ಆದರೂ ಪಾಪದಿಂದ ಮುಕ್ತರಾಗಿರುತ್ತಾರೆ.
8ನಾವು ಈಗ ಕ್ರಿಸ್ತ ಯೇಸುವಿನೊಂದಿಗೆ ಸತ್ತಿರುವುದಾದರೆ, ಅವರೊಂದಿಗೆ ಬದುಕುವೆವು ಎಂದು ನಂಬುತ್ತೇವೆ.
9ಕ್ರಿಸ್ತ ಯೇಸು ಮರಣದಿಂದ ಜೀವಿತರಾಗಿ ಎದ್ದು ಬಂದದ್ದರಿಂದ ಅವರು ಪುನಃ ಸಾಯಲಾರರೆಂದು ಬಲ್ಲೆವು. ಇನ್ನು ಮುಂದೆ ಅವರ ಮೇಲೆ ಮರಣಕ್ಕೆ ಅಧಿಕಾರವಿಲ್ಲ.
10ಕ್ರಿಸ್ತ ಯೇಸು ಪಾಪದ ಪಾಲಿಗೆ ಸತ್ತದ್ದೂ ಒಂದೇ ಸಾರಿಯಾಗಿರುತ್ತದೆ. ಆದರೆ, ಅವರು ಜೀವಿಸುವ ಜೀವಿತವು ದೇವರಿಗಾಗಿಯೇ.
11ಅದೇ ರೀತಿಯಲ್ಲಿ, ನೀವೂ ಸಹ ಪಾಪದ ಪಾಲಿಗೆ ಸತ್ತವರೆಂದೂ ಕ್ರಿಸ್ತ ಯೇಸುವಿನಲ್ಲಿ ದೇವರಿಗಾಗಿ ಜೀವಿಸುವವರೆಂದೂ ಎಣಿಸಿಕೊಳ್ಳಿರಿ.
12ಆದ್ದರಿಂದ ನೀವು ದೇಹದ ಆಶೆಗಳಿಗೆ ಒಳಗಾಗದಂತೆ ನಿಮ್ಮ ನಶ್ವರ ದೇಹಗಳಲ್ಲಿ ಪಾಪವು ಅಧಿಕಾರ ನಡೆಸಲು ಬಿಡಬೇಡಿರಿ.
13ನಿಮ್ಮ ದೇಹದ ಅವಯವಗಳನ್ನು ಅನೀತಿಯನ್ನು ನಡೆಸುವ ಸಾಧನಗಳಾಗುವಂತೆ ಪಾಪಕ್ಕೆ ಒಪ್ಪಿಸಬೇಡಿರಿ. ಆದರೆ ಅದರ ಬದಲಾಗಿ ಮರಣದಿಂದ ಜೀವಕ್ಕೆ ಬಂದವರಂತೆ ನಿಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳಿರಿ. ನಿಮ್ಮ ದೇಹದ ಅವಯವಗಳನ್ನು ನೀತಿಯ ಸಾಧನಗಳಾಗಿರುವುದಕ್ಕಾಗಿ ದೇವರಿಗೆ ಸಮರ್ಪಿಸಿರಿ.
14ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸದು; ಏಕೆಂದರೆ ನೀವು ನಿಯಮಕ್ಕೆ ಅಧೀನರಲ್ಲ, ಕೃಪೆಗೆ ಅಧೀನರಾಗಿದ್ದೀರಿ. ನೀತಿಗೆ ಗುಲಾಮರು
15ಹಾಗಾದರೆ ಏನು? ನಾವು ನಿಯಮಕ್ಕೆ ಅಧೀನರಾಗಿರದೆ ಕೃಪೆಗೆ ಅಧೀನರಾಗಿರುತ್ತೇವೆಂದು ಪಾಪ ಮಾಡಬಹುದೋ? ಎಂದಿಗೂ ಇಲ್ಲ!
16ನೀವು ಯಾರಾದರೊಬ್ಬರಿಗೆ ವಿಧೇಯರಾಗಿರುವುದಕ್ಕಾಗಿ ಗುಲಾಮರಾಗಿ ನಿಮ್ಮನ್ನು ಒಪ್ಪಿಸಿಕೊಟ್ಟಾಗ, ನೀವು ಅವನಿಗೆ ವಿಧೇಯರಾದ ಗುಲಾಮರಾಗುತ್ತೀರಿ ಎಂಬುದು ನಿಮಗೆ ತಿಳಿಯದೋ? ಮರಣಕ್ಕೆ ನಡೆಸುವ ಪಾಪಕ್ಕೆ ನೀವು ಗುಲಾಮರಾಗಿರಬಹುದು ಇಲ್ಲವೆ ನೀತಿಗೆ ನಡೆಸುವ ವಿಧೇಯತೆಗೆ ಒಳಪಟ್ಟಿರಬಹುದು.
17ಆದರೆ ನೀವು ಪಾಪಕ್ಕೆ ಗುಲಾಮರಾಗಿದ್ದರೂ ನಿಮಗೆ ಒಪ್ಪಿಸಿದ ಬೋಧನೆಗೆ ಹೃದಯದಿಂದ ವಿಧೇಯರಾದುದ್ದಕ್ಕಾಗಿ, ದೇವರಿಗೆ ಸ್ತೋತ್ರವಾಗಲಿ.
18ಪಾಪದಿಂದ ಬಿಡುಗಡೆಹೊಂದಿ ನೀತಿಗೆ ಗುಲಾಮರಾಗಿದ್ದೀರಿ.
19ನೀವು ಶರೀರಭಾವದಲ್ಲಿ ಬಲಹೀನರಾಗಿರುವುದರಿಂದ ನಾನು ಮಾನವ ಮಾತುಗಳಲ್ಲಿ ಇದನ್ನು ಹೇಳುತ್ತಿದ್ದೇನೆ. ನಿಮ್ಮ ದೇಹದ ಅವಯವಗಳನ್ನು ಅಶುದ್ಧತೆಗೂ ಅಧರ್ಮಕ್ಕೂ ದಾಸತ್ವದಲ್ಲಿ ಒಪ್ಪಿಸಿ ಕೊಡುತ್ತಿದ್ದಂತೆಯೇ ನೀವು ಈಗ ಅವುಗಳನ್ನು ಪರಿಶುದ್ಧತೆಗೆ ನಡೆಸುವ ನೀತಿಗೆ ಗುಲಾಮರಾಗಿ ಒಪ್ಪಿಸಿರಿ.
20ನೀವು ಪಾಪಕ್ಕೆ ಗುಲಾಮರಾಗಿದ್ದಾಗ ನೀತಿಗೆ ಅಧೀನರಾಗಿರಲಿಲ್ಲ.
21ಆದ್ದರಿಂದ ಈಗ ನೀವು ನಾಚಿಕೆ ಪಟ್ಟುಕೊಳ್ಳುತ್ತಿರುವ ಸಂಗತಿಗಳಿಂದ ನಿಮಗಾದ ಲಾಭವೇನು? ಅವು ಮರಣದಲ್ಲಿ ಸಮಾಪ್ತವಾಗುತ್ತವೆ!
22ಆದರೆ ಈಗ ನೀವು ಪಾಪದಿಂದ ಬಿಡುಗಡೆ ಹೊಂದಿದವರಾಗಿ ದೇವರಿಗೆ ಗುಲಾಮರಾಗಿರುವುದರಿಂದ, ಪವಿತ್ರವಾಗಿರುವುದೇ ನಿಮಗೆ ದೊರಕುವ ಫಲವು. ಕಡೆಗೆ ದೊರೆಯುವಂಥದು ನಿತ್ಯಜೀವವಾಗಿರುತ್ತದೆ.
23ಏಕೆಂದರೆ ಪಾಪವು ಕೊಡುವ ಸಂಬಳ ಮರಣ, ದೇವರ ಉಚಿತ ವರವಾದರೋ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ಇರುವ ನಿತ್ಯಜೀವ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.