Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 74

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ದೇವರೇ, ಸದಾಕಾಲಕ್ಕೆ ನಮ್ಮನ್ನು ತಳ್ಳಿಬಿಟ್ಟದ್ದೇಕೆ? ನಿಮ್ಮ ಮೇವಿನ ಕುರಿಮಂದೆಯ ವಿಷಯವಾಗಿ ಬೇಸರಗೊಳ್ಳುವುದು ಏಕೆ?
2ಪೂರ್ವಕಾಲದಲ್ಲಿ ನೀವು ಕೊಂಡುಕೊಂಡ ನಿಮ್ಮ ಜನರನ್ನೂ ನೀವು ವಿಮೋಚಿಸಿದ ನಿಮ್ಮ ಬಾಧ್ಯತೆಯನ್ನೂ ನೀವು ವಾಸಮಾಡಿದ ಚೀಯೋನ್ ಪರ್ವತವನ್ನೂ ಜ್ಞಾಪಕಮಾಡಿಕೊಳ್ಳಿರಿ.
3ನಿತ್ಯ ನಾಶವಾದ ಈ ಪ್ರದೇಶಗಳ ಕಡೆಗೂ ಈ ಪರಿಶುದ್ಧ ನಿವಾಸವನ್ನು ವೈರಿಗಳು ಹಾಳುಮಾಡಿದ್ದರ ಕಡೆಗೂ ನಿಮ್ಮ ಹೆಜ್ಜೆಗಳನ್ನು ತಿರುಗಿಸಿರಿ.
4ನಿಮ್ಮ ವೈರಿಗಳು ನೀವು ನಮ್ಮನ್ನು ಸಂಧಿಸಿದ ಸ್ಥಳದಲ್ಲಿ ಗರ್ಜಿಸುತ್ತಾರೆ. ತಮ್ಮ ಗುರುತುಗಳನ್ನು ಆರಾಧನಾ ಚಿಹ್ನೆಗಳಾಗಿ ಇಟ್ಟಿದ್ದಾರೆ.
5ದಟ್ಟವಾದ ಮರಗಳ ಮಧ್ಯೆ ಕೊಡಲಿ ಎತ್ತುವವನ ಹಾಗೆ ಆ ಜನರು ವರ್ತಿಸಿದ್ದಾರೆ.
6ಈಗ ಚಿತ್ರ ಕೆಲಸಗಳನ್ನು ತಕ್ಷಣ ಕೊಡಲಿಯಿಂದಲೂ ಸುತ್ತಿಗೆಯಿಂದಲೂ ಅವರು ಹೊಡೆದು ಹಾಕುತ್ತಿದ್ದಾರೆ.
7ನಿಮ್ಮ ಪರಿಶುದ್ಧ ಸ್ಥಳಕ್ಕೆ ಬೆಂಕಿಹಚ್ಚಿದ್ದಾರೆ. ನಿಮ್ಮ ಹೆಸರಿನ ನಿವಾಸವನ್ನು ಭೂಮಿಗೆ ಕೆಡವಿ ಅಪವಿತ್ರಗೊಳಿಸಿದ್ದಾರೆ.
8“ಅವುಗಳನ್ನು ಒಟ್ಟಾಗಿ ಕೆಡವಿಬಿಡೋಣ,” ಎಂದು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ. ದೇಶದಲ್ಲಿರುವ ದೇವರ ಸಭಾಸ್ಥಾನಗಳನ್ನೆಲ್ಲಾ ಸುಟ್ಟುಬಿಟ್ಟಿದ್ದಾರೆ.
9ದೇವರಿಂದ ನಮಗೆ ಅದ್ಭುತವಾದ ಸಂಕೇತಗಳು ಕೊಟ್ಟಿರುವುದಿಲ್ಲ. ಪ್ರವಾದಿಗಳು ನಮಗೆ ಉಳಿದಿರುವುದಿಲ್ಲ. ಇದು ಎಷ್ಟು ಕಾಲ ಎಂದು ನಾವ್ಯಾರೂ ತಿಳಿದಿರುವುದಿಲ್ಲ.
10ದೇವರೇ, ವೈರಿಯು ನಿಂದಿಸುವುದು ಎಷ್ಟರವರೆಗೆ? ಶತ್ರುವು ನಿಮ್ಮ ಹೆಸರನ್ನು ಎಂದೆಂದಿಗೂ ದೂಷಿಸುವನೋ?
11ಏಕೆ ನಿಮ್ಮ ಕೈಯನ್ನು, ನಿಮ್ಮ ಬಲಗೈಯನ್ನು ಸಹ ಹಿಂದೆಳೆಯುತ್ತೀರಿ? ನಿಮ್ಮ ಎದೆಯೊಳಗಿಂದ ಅದನ್ನು ಹೊರಗೆ ತೆಗೆದು ಅವರನ್ನು ದಂಡಿಸಿರಿ.
12ದೇವರೇ, ನೀವು ಪೂರ್ವದಿಂದಲೂ ನನ್ನ ಅರಸರಾಗಿದ್ದೀರಿ. ಭೂಲೋಕಕ್ಕೆ ರಕ್ಷಣೆಯನ್ನು ತರುವವರೂ ನೀವೇ ಆಗಿದ್ದೀರಿ.
13ನೀವು ನಿಮ್ಮ ಬಲದಿಂದ ಸಮುದ್ರವನ್ನು ವಿಭಾಗಿಸಿದ್ದೀರಿ. ತಿಮಿಂಗಿಲಗಳ ತಲೆಗಳನ್ನು ನೀರಿನಲ್ಲಿ ಬಡಿಸಿದ್ದೀರಿ.
14ನೀವು ಲಿವ್ಯಾತಾನ ಮೃಗದ ತಲೆಗಳನ್ನು ಬಡೆದಿರಲು ಅದನ್ನು ಮರುಭೂಮಿಯ ಜೀವಜಂತುಗಳಿಗೆ ಆಹಾರವಾಗಿ ಕೊಟ್ಟಿದ್ದೀರಿ.
15ನೀವು ಬುಗ್ಗೆಯನ್ನೂ, ಪ್ರವಾಹವನ್ನೂ ವಿಭಾಗ ಮಾಡಿದ್ದೀರಿ. ನೀವು ಯಾವಾಗಲೂ ತುಂಬಿ ಹರಿಯುವ ನದಿಗಳನ್ನು ಒಣಗಿಸಿದ್ದೀರಿ.
16ಹಗಲು ನಿಮ್ಮದು, ರಾತ್ರಿಯು ಸಹ ನಿಮ್ಮದು. ನೀವು ಸೂರ್ಯಚಂದ್ರನನ್ನೂ ಸ್ಥಾಪಿಸಿದ್ದೀರಿ.
17ನೀವು ಭೂಮಿಯ ಮೇರೆಗಳನ್ನೆಲ್ಲಾ ನಿರ್ಣಯಿಸಿದ್ದೀರಿ. ಬೇಸಿಗೆ ಮತ್ತು ಚಳಿಗಾಲವನ್ನು ನೀವು ನಿರ್ಮಿಸಿದ್ದೀರಿ.
18ಮೂರ್ಖರು ನಿಮ್ಮ ನಾಮವನ್ನು ನಿಂದಿಸುತ್ತಾರೆ. ಶತ್ರುಗಳು ನಿಮ್ಮನ್ನು ಹಾಸ್ಯಮಾಡುತ್ತಾರೆ. ಯೆಹೋವ ದೇವರೇ, ಇದನ್ನು ಜ್ಞಾಪಕಮಾಡಿಕೊಳ್ಳಿರಿ.
19ನಿಮ್ಮ ಪಾರಿವಾಳದ ಪ್ರಾಣವನ್ನು ದುಷ್ಟಮೃಗಗಳಿಗೆ ಒಪ್ಪಿಸಕೊಡಬೇಡಿರಿ. ನಿಮ್ಮ ದೀನರ ಮಂಡಳಿಯನ್ನು ಸದಾಕಾಲಕ್ಕೆ ಮರೆತುಬಿಡಬೇಡಿರಿ.
20ಒಡಂಬಡಿಕೆಗೆ ಗೌರವವನ್ನು ಕೊಡಿರಿ. ಏಕೆಂದರೆ ಭೂಮಿಯ ಕತ್ತಲಿನ ಸ್ಥಳಗಳು ಕ್ರೂರತನದ ನಿವಾಸಗಳಿಂದ ತುಂಬಿ ಇವೆ.
21ಕುಗ್ಗಿದವನು ಅವಮಾನದಿಂದ ಹಿಂದಿರುಗದಿರಲಿ. ದೀನನೂ, ಬಡವನೂ ನಿಮ್ಮ ಹೆಸರನ್ನು ಸ್ತುತಿಸಲಿ.
22ದೇವರೇ, ಏಳು; ನಿಮ್ಮ ನ್ಯಾಯವನ್ನು ವಾದಿಸಿರಿ. ದಿನವೆಲ್ಲಾ ಮೂರ್ಖನು ನಿಮ್ಮನ್ನು ಹೇಗೆ ನಿಂದಿಸುತ್ತಾನೆಂದು ಜ್ಞಾಪಕಮಾಡಿಕೊಳ್ಳಿರಿ.
23ನಿಮ್ಮ ವೈರಿಗಳ ಗದ್ದಲವನ್ನೂ ನಿಮ್ಮ ವಿರೋಧಿಗಳ ಆಕ್ರೋಶ ನಿರಂತರವಾಗಿ ಬೆಳೆಯುವ ಕಲಹವನ್ನೂ ಮರೆತುಬಿಡಬೇಡಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.