Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 69

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ದೇವರೇ, ನನ್ನನ್ನು ರಕ್ಷಿಸಿರಿ. ಏಕೆಂದರೆ, ಪ್ರವಾಹ ಕುತ್ತಿಗೆಯ ವರೆಗೆ ಬಂದಿದೆ.
2ನೆಲವಿಲ್ಲದಿರುವ ಆಳವಾದ ಕೆಸರಿನಲ್ಲಿ ನಾನು ಮುಳುಗುತ್ತಿದ್ದೇನೆ. ಪ್ರವಾಹಗಳು ನನ್ನ ಮೇಲೆ ಹಾದುಹೋಗುವ ನೀರಿನ ಅಗಾಧಕ್ಕೆ ನಾನು ಬಂದಿದ್ದೇನೆ.
3ನಾನು ಮೊರೆಯಿಟ್ಟು ದಣಿದಿದ್ದೇನೆ. ನನ್ನ ಗಂಟಲು ಒಣಗಿದೆ. ನಾನು ದೇವರನ್ನು ಎದುರು ನೋಡುವುದರಿಂದ ನನ್ನ ಕಣ್ಣು ಕ್ಷೀಣವಾಗಿವೆ.
4ಕಾರಣವಿಲ್ಲದೆ ನನ್ನನ್ನು ದ್ವೇಷಿಸುವವರು ನನ್ನ ತಲೆಗೂದಲುಗಳಿಗಿಂತ ಹೆಚ್ಚಾಗಿದ್ದಾರೆ. ನನ್ನನ್ನು ನಾಶಮಾಡ ಬಯಸುವವರೂ ಕಾರಣವಿಲ್ಲದೆ ನನಗೆ ಶತ್ರುಗಳಾಗಿದ್ದಾರೆ. ನಾನು ಅಪಹರಿಸದಿದ್ದರೂ ದಂಡ ಕೊಡಬೇಕಾಯಿತು.
5ದೇವರೇ, ನೀವು ನನ್ನ ಮೂರ್ಖತನವನ್ನು ತಿಳಿದಿದ್ದೀರಿ. ನನ್ನ ಅಪರಾಧಗಳು ನಿಮಗೆ ಮರೆಯಾಗಿಲ್ಲ.
6ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮನ್ನು ನಂಬಿದವರಿಗೆ ನನ್ನಿಂದ ನಿರಾಶೆಯಾಗದಿರಲಿ; ಇಸ್ರಾಯೇಲರ ದೇವರೇ, ನಿಮ್ನನ್ನು ಹುಡುಕುವವರು ನನ್ನಿಂದ ಅಪಮಾನಕ್ಕೆ ಗುರಿಯಾಗದಿರಲಿ.
7ನಾನು ನಿಮ್ಮ ನಿಮಿತ್ತ ನಿಂದೆಗೆ ಒಳಗಾಗಿದ್ದೇನೆ. ಅವಮಾನವು ನನ್ನ ಮುಖವನ್ನು ಮುಚ್ಚಿದೆ.
8ನನ್ನ ಸಹೋದರರಿಗೆ ಅನ್ಯನಾಗಿದ್ದೇನೆ. ನನ್ನ ಒಡಹುಟ್ಟಿದವರಿಗೇ ಪರಕೀಯನಾಗಿದ್ದೇನೆ.
9ಏಕೆಂದರೆ ನಿಮ್ಮ ಆಲಯದ ಮೇಲಿನ ಆಸಕ್ತಿಯು ಬೆಂಕಿಯಂತೆ ನನ್ನನ್ನು ದಹಿಸಿಬಿಟ್ಟಿದೆ. ನಿಮ್ಮನ್ನು ನಿಂದಿಸುವವರ ನಿಂದೆಗಳು ನನ್ನ ಮೇಲೆ ಬಿದ್ದಿವೆ.
10ನಾನು ಅತ್ತು ಉಪವಾಸ ಮಾಡಿದಾಗ ನಿಂದೆಗೆ ಒಳಗಾಗಬೇಕಾಯಿತು.
11ಗೋಣಿತಟ್ಟನ್ನು ನನ್ನ ಉಡುಪಾಗಿ ಮಾಡಿಕೊಂಡಿದ್ದೇನೆ. ಇದರಿಂದ ನಾನು ಅವರಿಗೆ ಗಾದೆಯ ಮಾತಾದೆನು.
12ಊರುಬಾಗಿಲಲ್ಲಿ ಕೂತುಕೊಳ್ಳುವವರು ಪರಿಹಾಸ್ಯ ಮಾಡುತ್ತಾರೆ. ನಾನು ಮದ್ಯಪಾನಿಗಳಿಗೆ ಗಾಯನ ವಿಷಯವಾಗಿದ್ದೇನೆ.
13ಯೆಹೋವ ದೇವರೇ, ನಾನಾದರೋ ನಿಮಗೆ ಮೊರೆಯಿಟ್ಟಿದ್ದೇನೆ. ಇದು ನಿಮ್ಮ ಮೆಚ್ಚಿಕೆಯ ಸಕಾಲ. ಓ ದೇವರೇ, ನಿಮ್ಮ ಮಹಾಪ್ರೀತಿಯಿಂದ ನನಗೆ ನಿಮ್ಮ ನಿಶ್ಚಯ ರಕ್ಷಣೆಯನ್ನು ದಯಪಾಲಿಸಿರಿ.
14ನನ್ನನ್ನು ಕೆಸರಿನೊಳಗಿಂದ ಬಿಡಿಸಿರಿ. ನಾನು ಮುಳುಗದೆ ಇರಲಿ. ನನ್ನನ್ನು ದ್ವೇಷಿಸಿಸುವವರಿಂದಲೂ ನೀರಿನ ಅಗಾಧದಿಂದಲೂ ನನಗೆ ಬಿಡುಗಡೆ ಆಗಲಿ.
15ನೀರಿನ ಪ್ರವಾಹವು ನನ್ನ ಮೇಲೆ ಹಾದುಹೋಗದೆ ಇರಲಿ. ಅಗಾಧವು ನನ್ನನ್ನು ನುಂಗದೆ ಇರಲಿ. ಕುಣಿಯು ನನ್ನ ಮೇಲೆ ತನ್ನ ಬಾಯನ್ನು ಮುಚ್ಚದೆ ಇರಲಿ.
16ಯೆಹೋವ ದೇವರೇ, ನಿಮ್ಮ ಪ್ರೀತಿಯ ಒಳ್ಳೆಯತನದಿಂದ ನನಗೆ ಉತ್ತರಕೊಡಿರಿ. ನಿಮ್ಮ ಮಹಾ ಕರುಣೆಯಿಂದ ನನ್ನ ಕಡೆಗೆ ತಿರುಗಿರಿ.
17ನಿಮ್ಮ ಮುಖವನ್ನು ನಿಮ್ಮ ಸೇವಕನಿಗೆ ಮರೆಮಾಡಬೇಡಿರಿ. ನಾನು ಇಕ್ಕಟ್ಟಿನಲ್ಲಿದ್ದೇನೆ. ಬೇಗ ನನಗೆ ಉತ್ತರಕೊಡಿರಿ.
18ನನಗೆ ಸಮೀಪವಾಗಿ ನನ್ನನ್ನು ಕಾಪಾಡಿರಿ. ನನ್ನ ಶತ್ರುಗಳ ನಿಮಿತ್ತ ನನ್ನನ್ನು ಬಿಡಿಸಿರಿ.
19ನೀವು ನನಗಿರುವ ನಿಂದೆ, ನಾಚಿಕೆ ಹಾಗೂ ನನ್ನ ಅವಮಾನವನ್ನೂ ತಿಳಿದಿದ್ದೀರಿ. ನನ್ನ ವೈರಿಗಳೆಲ್ಲರು ನಿಮ್ಮ ಮುಂದೆ ಇದ್ದಾರೆ.
20ನಿಂದೆಯು ನನ್ನ ಹೃದಯವನ್ನು ಮುರಿದಿದೆ. ನನ್ನನ್ನು ನಿಸ್ಸಹಾಯಕನನ್ನಾಗಿ ಮಾಡಿದೆ. ಅನುತಾಪಕ್ಕೋಸ್ಕರ ಕೆಲವರನ್ನು ನಿರೀಕ್ಷಿಸಿದೆನು, ಆದರೆ ಒಬ್ಬರೂ ಇರಲಿಲ್ಲ. ಸಂತೈಸುವವರಿಗೋಸ್ಕರ ಸಹ ಎದುರು ನೋಡಿದೆನು, ಆದರೆ ಯಾರೂ ಸಿಕ್ಕಲಿಲ್ಲ.
21ನನ್ನ ಆಹಾರಕ್ಕಾಗಿ ಕಹಿಯಾದದ್ದನ್ನು ಕೊಟ್ಟರು. ನನ್ನ ದಾಹಕ್ಕಾಗಿ ನನಗೆ ಹುಳಿರಸವನ್ನು ಕುಡಿಯಲು ಕೊಟ್ಟರು.
22ಅವರ ಊಟವೇ ಅವರಿಗೆ ಉರುಲಾಗಲಿ. ಸುಖವಾಗಿರುವವರಿಗೆ ಅದು ಬೋನಾಗಲಿ.
23ಅವರ ಕಣ್ಣುಗಳು ಕಾಣದ ಹಾಗೆ ಕತ್ತಲಾಗಲಿ. ಮತ್ತು ಅವರ ಬೆನ್ನು ಎಂದೆಂದಿಗೂ ಬಗ್ಗಿ ಹೋಗಲಿ
24ಅವರು ಕೋಪಕ್ಕೆ ಗುರಿಯಾಗಲಿ. ಅವರು ಬೇಸರಕ್ಕೆ ತುತ್ತಾಗಲಿ.
25ಅವರ ವಾಸಸ್ಥಾನವು ಹಾಳಾಗಲಿ; ಅವರ ಗುಡಾರಗಳಲ್ಲಿ ನಿವಾಸಿಯು ಇಲ್ಲದೆ ಹೋಗಲಿ.
26ನೀವು ಗಾಯಮಾಡಿದ ನನ್ನನ್ನು ಹಿಂಸಿಸುತ್ತಾರೆ. ನೀವು ನೋಯಿಸಿದ ನನ್ನನ್ನು ಕುರಿತು ಚುಚ್ಚಿಮಾತನಾಡಿಕೊಳ್ಳುತ್ತಾರೆ.
27ಅಪರಾಧದ ಮೇಲೆ ಅಪರಾಧವು ಅವರ ಮೇಲೆ ಬರಲಿ. ಅವರು ನಿಮ್ಮ ರಕ್ಷಣೆಯಲ್ಲಿ ಸೇರದೆ ಇರಲಿ.
28ಜೀವಪುಸ್ತಕದೊಳಗಿಂದ ಅವರ ಹೆಸರು ಅಳಿದು ಹೋಗಲಿ. ನೀತಿವಂತರ ಸಂಗಡ ಅವರ ಹೆಸರು ಬರೆಯದೆ ಇರಲಿ.
29ದೇವರೇ, ನಾನು ನೊಂದು ವ್ಯಥೆಗೊಂಡಿದ್ದೇನೆ. ನಿಮ್ಮ ರಕ್ಷಣೆಯು ನನ್ನನ್ನು ಕಾಪಾಡಲಿ.
30ನಾನು ದೇವರ ಹೆಸರನ್ನು ಹಾಡಿ ಸ್ತುತಿಸುವೆನು. ಸ್ತೋತ್ರದಿಂದ ದೇವರನ್ನು ಸ್ತುತಿಸುವೆನು.
31ಅದು ಯೆಹೋವ ದೇವರಿಗೆ ಎಳೆಯ ಎತ್ತು ಯಜ್ಞಗಳಿಗಿಂತ, ಕೊಂಬೂ ಗೊರಸುಗಳುಳ್ಳ ಹೋರಿಗಳಿಗಿಂತ ಮೆಚ್ಚಿಕೆಯಾಗಿರುವುದು.
32ಇದನ್ನು ದೀನರು ಕಂಡು ಸಂತೋಷಪಡುವರು. ದೇವರನ್ನು ಹುಡುಕುವವರೇ, ನಿಮ್ಮ ಹೃದಯವು ಚೈತನ್ಯಗೊಳ್ಳಲಿ.
33ಯೆಹೋವ ದೇವರು ಬಡವರ ಮೊರೆಗೆ ಕಿವಿಗೊಡುತ್ತಾರೆ. ಸೆರೆಯಲ್ಲಿರುವ ತಮ್ಮ ಜನರನ್ನು ತಿರಸ್ಕರಿಸುವುದಿಲ್ಲ.
34ಆಕಾಶವೂ ಭೂಮಿಯೂ ಸಮುದ್ರಗಳೂ, ಅವುಗಳಲ್ಲಿ ಸಂಚರಿಸುವುದೆಲ್ಲವೂ ದೇವರನ್ನು ಸ್ತುತಿಸಲಿ.
35ದೇವರು ಚೀಯೋನನ್ನು ರಕ್ಷಿಸುವರು. ದೇವರು ಯೆಹೂದದ ಪಟ್ಟಣಗಳನ್ನು ಕಟ್ಟುವರು. ಜನರು ಅಲ್ಲಿ ವಾಸಮಾಡಿ, ಅದನ್ನು ಸ್ವಾಧೀನಮಾಡಿಕೊಳ್ಳುವರು.
36ದೇವರ ಸೇವಕರ ಸಂತತಿಯು ಅದನ್ನು ಬಾಧ್ಯವಾಗಿ ಹೊಂದುವುದು. ದೇವರ ಹೆಸರನ್ನು ಪ್ರೀತಿಸುವವರು ಅದರಲ್ಲಿ ವಾಸಮಾಡುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.