Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 68

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ದೇವರು ಕ್ರಿಯಾಶೀಲರಾಗಲಿ. ಅವರ ಶತ್ರುಗಳು ಚದರಿಹೋಗಲಿ. ದೇವರನ್ನು ವಿರೋಧಿಸುವವರು ಅವರ ಸಮ್ಮುಖದಿಂದ ಓಡಿಹೋಗಲಿ.
2ಗಾಳಿಯಿಂದ ಹೊಗೆ ಹಾರಿಹೋಗುವಂತೆ ಅವರು ಹಾರಿಹೋಗಲಿ. ಮೇಣವು ಬೆಂಕಿಯ ಮುಂದೆ ಕರಗುವಂತೆ, ದುಷ್ಟರು ದೇವರ ಮುಂದೆ ನಾಶವಾಗಲಿ.
3ಆದರೆ ನೀತಿವಂತರು ಸಂತೋಷಿಸಲಿ. ದೇವರ ಮುಂದೆ ಉಲ್ಲಾಸಪಡಲಿ. ಹೌದು, ಅವರು ಹರ್ಷಾನಂದರಾಗಲಿ.
4ದೇವರಿಗೆ ಹಾಡಿರಿ, ದೇವರ ಹೆಸರಿಗೆ ಸ್ತುತಿಗಳನ್ನು ಹಾಡಿರಿ. ಮೇಘಾರೂಢರಾಗಿರುವ ದೇವರನ್ನು ಕೊಂಡಾಡಿರಿ. ಅವರ ಹೆಸರು ಯೆಹೋವ ದೇವರು, ಅವರ ಮುಂದೆ ಉಲ್ಲಾಸಪಡಿರಿ.
5ದೇವರು ತಮ್ಮ ಪರಿಶುದ್ಧ ಸ್ಥಳದಲ್ಲಿ ದಿಕ್ಕಿಲ್ಲದವರಿಗೆ ತಂದೆ, ವಿಧವೆಯರಿಗೆ ರಕ್ಷಕರಾಗಿದ್ದಾರೆ.
6ದೇವರು ಒಂಟಿಗರನ್ನು ಕುಟುಂಬಸ್ತರನ್ನಾಗಿ ಮಾಡುತ್ತಾರೆ. ಸೆರೆಯವರನ್ನು ಹರ್ಷಗೊಳಿಸಿ ಬಿಡುಗಡೆ ಮಾಡುತ್ತಾರೆ. ಆದರೆ ಎದುರು ಬೀಳುವವರು ಒಣಭೂಮಿಯಲ್ಲಿ ವಾಸಿಸುತ್ತಾರೆ.
7ದೇವರೇ, ನೀವು ನಿಮ್ಮ ಜನರ ಮುಂದೆ ಹೊರಟು ಕಾಡಿನಲ್ಲಿ ನಡೆದಾಗ,
8ಭೂಮಿಯು ಕದಲಿತು, ಆಕಾಶಗಳು ಸಹ ನಿಮ್ಮ ಮುಂದೆ ಮಳೆಗರೆದವು. ಇಸ್ರಾಯೇಲರ ದೇವರ ಮುಂದೆ, ಹೌದು, ದೇವರ ಮುಂದೆಯೇ ಸೀನಾಯಿ ಸಹ ಕದಲಿತು.
9ದೇವರೇ, ನೀವು ಹೇರಳವಾಗಿ ಮಳೆಯನ್ನು ಸುರಿಸಿ, ದಣಿದ ನಿಮ್ಮ ಬಾಧ್ಯತೆಯನ್ನು ನೀವು ಉತ್ಸಾಹಪಡಿಸಿದಿರಿ.
10ನಿಮ್ಮ ಪ್ರಜೆಗಳು ಅದರಲ್ಲಿ ವಾಸಮಾಡಿದರು. ದೇವರೇ, ನಿಮ್ಮ ಒಳ್ಳೆಯತನದಿಂದ ಬಡವರಿಗೋಸ್ಕರ ಒದಗಿಸಿದ್ದೀರಿ.
11ಯೆಹೋವ ದೇವರು ವಾಕ್ಯವನ್ನು ಕೊಟ್ಟರು. ಆ ವಾಕ್ಯವನ್ನು ಹೀಗೆಂದು ಪ್ರಕಟಿಸಿದ ಮಹಿಳೆಯರ ಗುಂಪು ದೊಡ್ಡದಾಗಿತ್ತು:
12“ಸೈನ್ಯದೊಡನೆ ಅರಸರು ಓಡಿಹೋದರು. ಪಾಳೆಯದಲ್ಲಿರುವ ಮಹಿಳೆಯರು ಕೊಳ್ಳೆಯನ್ನು ಹಂಚಿಕೊಳ್ಳುವರು.
13ನೀವು ಪಾಳೆಯದ ಬೆಂಕಿಯ ಬಳಿ ಮಲಗಿದರೂ, ಪಾರಿವಾಳದ ರೆಕ್ಕೆಗಳು ಬೆಳ್ಳಿಯಿಂದಲೂ, ಅದರ ಗರಿಗಳು ಬಂಗಾರದಿಂದಲೂ ಹೊಳೆಯುವಂತಿರುವಿರಿ.”
14ಸರ್ವಶಕ್ತರಾದ ದೇವರು ಅರಸರನ್ನು ಅಲ್ಲಿ ಚದರಿಸಿದಾಗ ಸಲ್ಮೋನಿನಲ್ಲಿ ಬಿಳೀ ಹಿಮ ಬಿದ್ದಂತಿತ್ತು.
15ಬಾಷಾನ್ ಬೆಟ್ಟವು ದೇವರ ಬೆಟ್ಟದಂತೆ ಇದೆ; ಬಾಷಾನ್ ಬೆಟ್ಟವು ಉನ್ನತ ಬೆಟ್ಟವಾಗಿದೆ.
16ಉನ್ನತ ಬೆಟ್ಟಗಳೇ, ಏಕೆ ಕುಣಿಯುತ್ತೀರಿ? ದೇವರು ನಿವಾಸಕ್ಕಾಗಿ ಅಪೇಕ್ಷಿಸುವ ಬೆಟ್ಟವು ಇದೇ ಹೌದು, ಯೆಹೋವ ದೇವರು ಅದರಲ್ಲಿ ಸದಾಕಾಲವೂ ವಾಸಿಸುವರು.
17ದೇವರಿಗೆ ಸಹಸ್ರಾರು ಮಾತ್ರವಲ್ಲ ಲಕ್ಷಾಂತರ ರಥಗಳು ಇವೆ. ಕರ್ತ ಆಗಿರುವ ಯೆಹೋವ ದೇವರು ಅವುಗಳ ಸಮೇತವಾಗಿ ಸೀನಾಯಿ ಬೆಟ್ಟದಲ್ಲಿದ್ದ ಹಾಗೆ ಪವಿತ್ರಾಲಯದಲ್ಲಿದ್ದಾರೆ.
18ನೀವು ಅನೇಕ ಸೆರೆಯವರ ಹಿಡಿದುಕೊಂಡು ಉನ್ನತಕ್ಕೆ ಹೋದಾಗ, ಯೆಹೋವ ದೇವರು ತಿರುಗಿಬೀಳುವವರ ಮಧ್ಯದಲ್ಲಿ ಸಹ ನಿವಾಸಿಸುವಂತೆ ಆ ತಿರುಗಿಬಿದ್ದ ಮನುಷ್ಯರಿಂದ ದಾನಗಳನ್ನು ಅಂಗೀಕರಿಸಿದ್ದೀರಿ.
19ಪ್ರತಿದಿನವೂ ನಮ್ಮ ಭಾರವನ್ನು ಹೊರುವ ಕರ್ತದೇವರಿಗೆ ಸ್ತೋತ್ರ. ನಮ್ಮನ್ನು ರಕ್ಷಿಸುವ ದೇವರು ಸ್ತುತಿಹೊಂದಲಿ.
20ನಮ್ಮ ದೇವರು ರಕ್ಷಣೆಯ ದೇವರಾಗಿದ್ದಾರೆ. ಸಾರ್ವಭೌಮ ಯೆಹೋವ ದೇವರು ಮರಣದಿಂದ ಬಿಡುಗಡೆ ಮಾಡುತ್ತಾರೆ.
21ದೇವರು ತಮ್ಮ ಶತ್ರುಗಳ ತಲೆಯನ್ನೂ, ತನ್ನ ಅಪರಾಧಗಳಲ್ಲಿ ಇನ್ನೂ ಮುಂದುವರಿಯುವವರ ಕೂದಲುಳ್ಳ ಮಂಡೆಯನ್ನೂ ಗಾಯಮಾಡುವರು.
22ಯೆಹೋವ ದೇವರು ಹೀಗೆ ಹೇಳುತ್ತಾರೆ, “ಬಾಷಾನಿನಿಂದ ಅವರನ್ನು ತಿರುಗಿ ಬರಮಾಡುವೆನು; ಸಮುದ್ರದ ಅಗಾಧಗಳಿಂದ ಜನರನ್ನು ತಿರುಗಿ ಬರಮಾಡುವೆನು.
23ಆಗ ನಿಮ್ಮ ಪಾದಗಳು ನಿಮ್ಮ ವೈರಿಗಳ ರಕ್ತದ ಮೇಲಿರಲಿ. ನಾಯಿಗಳು ಅದನ್ನು ನೆಕ್ಕಲಿ.”
24ದೇವರೇ, ನಿಮ್ಮ ಮೆರವಣಿಗೆಯು ಪ್ರಕಟವಾಗಿದೆ. ನನ್ನ ಅರಸರಾಗಿರುವ ದೇವರ ಮೆರವಣಿಗೆಯು ಪರಿಶುದ್ಧ ಸ್ಥಳವನ್ನು ಪ್ರವೇಶಿಸುವುದು.
25ಹಾಡುವವರು ಮುಂದಾಗಿಯೂ, ಬಾರಿಸುವವರು ಹಿಂದಾಗಿಯೂ, ದಮ್ಮಡಿ ಬಡಿಯುವ ಕನ್ಯೆಯರು ಮಧ್ಯದಲ್ಲಿಯೂ ಹಿಂಬಾಲಿಸುವರು.
26ಮಹಾಸಭೆಯಲ್ಲಿ ದೇವರನ್ನು ಸ್ತುತಿಸಿರಿ. ಇಸ್ರಾಯೇಲರ ಸಮೂಹದವರಲ್ಲಿ ಯೆಹೋವ ದೇವರನ್ನು ಸ್ತುತಿಸಿರಿ.
27ಬೆನ್ಯಾಮೀನನ ಚಿಕ್ಕ ಗೋತ್ರವು ಅವರನ್ನು ನಡೆಸುವುದು. ಯೆಹೂದದ ಪ್ರಧಾನರೂ, ಜೆಬುಲೂನನ ಪ್ರಧಾನರೂ ನಫ್ತಾಲಿಯ ಪ್ರಧಾನರೂ ಅಲ್ಲಿ ಇದ್ದಾರೆ.
28ದೇವರೇ, ನಿಮ್ಮ ಶಕ್ತಿಯನ್ನು ಪ್ರಕಟಿಸಿರಿ, ಮೊದಲು ಮಾಡಿದಂತೆಯೇ ಈಗಲೂ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿರಿ.
29ಯೆರೂಸಲೇಮಿನ ನಿಮ್ಮ ಮಂದಿರದ ನಿಮಿತ್ತ ಅರಸರು ನಿಮಗೆ ಕಾಣಿಕೆಗಳನ್ನು ಸಮರ್ಪಿಸಲಿ.
30ಆಪು ಹುಲ್ಲಿನ ಮಧ್ಯದಲ್ಲಿರುವ ಕಾಡುಮೃಗಗಳ ಹಾಗೆಯೂ ಕರುಗಳ ಮಧ್ಯದಲ್ಲಿರುವ ಹೋರಿಗಳ ಹಾಗೆಯೂ ಇರುವ ಜನಾಂಗವನ್ನು ಗದರಿಸಿರಿ. ಮೃಗದಂಥವರು ತಗ್ಗಿಸಿಕೊಂಡು ಬೆಳ್ಳಿ ಗಟ್ಟಿಗಳನ್ನು ನಿಮಗೆ ತರಲಿ. ಆದರೆ ಯುದ್ಧದಲ್ಲಿ ಆನಂದಿಸುವ ರಾಷ್ಟ್ರಗಳನ್ನು ಚದರಿಸಿರಿ.
31ಈಜಿಪ್ಟಿನಿಂದ ರಾಯಭಾರಿಗಳು ಬರುವರು. ಕೂಷ್ ದೇಶದವರು ತಾವಾಗಿಯೇ ಬಂದು ದೇವರಿಗೆ ಅಧೀನವಾಗುವರು.
32ಭೂಮಿಯ ರಾಜ್ಯಗಳೇ, ದೇವರಿಗೆ ಹಾಡಿರಿ. ಯೆಹೋವ ದೇವರನ್ನು ಕೀರ್ತಿಸಿರಿ.
33ಪೂರ್ವದ ಆಕಾಶಗಳಲ್ಲಿ ಸವಾರಿ ಮಾಡುವ ದೇವರಿಗೆ ಹಾಡಿರಿ. ದೇವರ ಸ್ವರವು ಗುಡುಗಿನಂತೆ ಇರುವುದು.
34ದೇವರ ಶಕ್ತಿಯನ್ನು ಘೋಷಿಸಿರಿ. ಇಸ್ರಾಯೇಲರ ಮೇಲೆ ಅವರ ಪ್ರಭಾವವಿರುತ್ತದೆ. ಮೇಘಗಳಲ್ಲಿ ಅವರ ಶಕ್ತಿಯು ಇರುತ್ತದೆ.
35ದೇವರೇ, ನಿಮ್ಮ ಪರಿಶುದ್ಧ ಸ್ಥಳದಲ್ಲಿ ನೀವು ಅತಿಶಯವಾಗಿದ್ದೀರಿ. ಇಸ್ರಾಯೇಲರ ದೇವರೇ ಜನರಿಗೆ ಬಲವನ್ನೂ ಶಕ್ತಿಯನ್ನೂ ಕೊಡುವರು. ದೇವರಿಗೆ ಸ್ತುತಿಯಾಗಲಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.