Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 35

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರೇ, ನನ್ನ ಸಂಗಡ ವ್ಯಾಜ್ಯ ಮಾಡುವವರ ಸಂಗಡ ವ್ಯಾಜ್ಯ ಮಾಡಿರಿ; ನನಗೆ ವಿರೋಧವಾಗಿ ಯುದ್ಧ ಮಾಡುವವರ ಸಂಗಡ ಯುದ್ಧಮಾಡಿರಿ.
2ಗುರಾಣಿಯನ್ನೂ ಖಡ್ಗವನ್ನೂ ಹಿಡಿದುಕೊಂಡು ನನ್ನ ಸಹಾಯಕ್ಕೆ ಎದ್ದು ಬನ್ನಿರಿ.
3ಬರ್ಜಿಯನ್ನೂ ಭಲ್ಲೆಯನ್ನೂ ಹಿಡಿದು ನನ್ನನ್ನು ಹಿಂಸಿಸುವವರಿಗೆ ಎದುರಾಗಿ ಅಡ್ಡಗಟ್ಟಿರಿ. “ನಾನೇ ನಿಮ್ಮ ರಕ್ಷಣೆ” ಎಂದು ನನಗೆ ಹೇಳಿರಿ.
4ನನ್ನ ಪ್ರಾಣವನ್ನು ಹುಡುಕುವವರು ನಾಚಿಕೆಪಟ್ಟು ಅವಮಾನ ಹೊಂದಲಿ; ನನಗೆ ಕೇಡನ್ನು ಕಲ್ಪಿಸುವವರು ಹಿಂದಿರುಗಿ ಲಜ್ಜೆಪಡಲಿ.
5ಅವರು ಗಾಳಿಗೆ ಹಾರುವ ಹೊಟ್ಟಿನ ಹಾಗೆ ಆಗಲಿ; ಯೆಹೋವ ದೇವರ ದೂತನು ಅವರನ್ನು ಹಿಂದಟ್ಟಲಿ.
6ಅಂಥವರ ಮಾರ್ಗವು ಕತ್ತಲೆಯೂ ಜಾರುವಿಕೆಯೂ ಆಗಿರಲಿ; ಯೆಹೋವ ದೇವರ ದೂತನು ಅವರನ್ನು ಹಿಂದಟ್ಟಲಿ.
7ಏಕೆಂದರೆ ಕಾರಣವಿಲ್ಲದೆ ತಮ್ಮ ಬಲೆಯನ್ನು ನನಗೆ ಒಡ್ಡಿದ್ದಾರೆ; ಕಾರಣವಿಲ್ಲದೆ ನನಗೆ ಗುಂಡಿಯನ್ನು ಅಗೆದಿದ್ದಾರೆ.
8ನಾಶವು ಅವರಿಗೆ ಅನಿರೀಕ್ಷಿತವಾಗಿ ಬರಲಿ; ಅವರು ಅಡಗಿಸಿಟ್ಟ ಬಲೆಯು ಅವರನ್ನೇ ಹಿಡಿಯಲಿ; ವಿನಾಶನಕ್ಕಾಗಿ ಅವರು ಗುಂಡಿಯಲ್ಲಿ ಬೀಳಲಿ.
9ಆಗ ನನ್ನ ಪ್ರಾಣವು ಯೆಹೋವ ದೇವರಲ್ಲಿ ಉಲ್ಲಾಸಗೊಂಡು, ದೇವರ ರಕ್ಷಣೆಯಲ್ಲಿ ಸಂತೋಷಿಸುವುದು.
10ಯೆಹೋವ ದೇವರೇ, “ನಿಮ್ಮ ಹಾಗೆ ಯಾರು ಇದ್ದಾರೆ? ಬಡವನನ್ನು ಅವನಿಗಿಂತ ಬಲಿಷ್ಠನಿಂದ ಕಾಪಾಡುತ್ತೀರಿ ದರಿದ್ರನನ್ನೂ, ಕೊರತೆಯುಳ್ಳವನನ್ನೂ ಸುಲಿದುಕೊಳ್ಳುವವನಿಂದ ಬಿಡಿಸುತ್ತೀರಿ,” ಎಂದು ನನ್ನ ಪೂರ್ಣ ಪ್ರಾಣವೇ ಹೇಳುವುದು.
11ಸುಳ್ಳುಸಾಕ್ಷಿಗಳು ನನಗೆ ಎದುರಾಗಿ ಎದ್ದು, ನಾನು ತಿಳಿಯದವುಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ.
12ನನ್ನ ಉಪಕಾರಕ್ಕೆ ಬದಲಾಗಿ ನನಗೆ ಕೇಡನ್ನು ಮಾಡಿ ನನ್ನನ್ನು ದುಃಖದಲ್ಲಿರುವವರಂತೆ ಬಿಟ್ಟುಬಿಟ್ಟಿದ್ದರೆ
13ನಾನಾದರೋ ಅವರು ಅಸ್ವಸ್ಥರಾದಾಗ ಗೋಣಿತಟ್ಟು ಹೊದ್ದುಕೊಂಡು ಉಪವಾಸದಿಂದ ತಗ್ಗಿಸಿಕೊಂಡೆನು; ನನ್ನ ಪ್ರಾರ್ಥನೆಗಳಿಗೆ ಉತ್ತರ ದೊರೆಯಲಿಲ್ಲ.
14ಆದುದರಿಂದ ಸ್ವಸ್ಥರಾದವನು ನನಗೆ ಸ್ನೇಹಿತನೂ ಇಲ್ಲವೆ ಸಹೋದರನೂ ಎಂದು ಭಾವಿಸಿಕೊಂಡು, ನನ್ನ ತಾಯಿಗಾಗಿ ದುಃಖಪಡುವವನ ಹಾಗೆ ಭಾರವುಳ್ಳವನಾಗಿ ತಲೆಬಾಗಿ ಅಳುತ್ತಿದ್ದೆನು.
15ಆದರೆ ನಾನು ಎಡವಿದಾಗ ಅವರು ಸಂತೋಷಿಸುತ್ತಾ ಕೂಡಿಕೊಂಡರು; ಹೌದು, ದೂಷಕರು ನನಗೆ ತಿಳಿಯದೆ ನನ್ನ ವಿರೋಧವಾಗಿ ಕೂಡಿಕೊಂಡರು. ಅವರು ನನ್ನನ್ನು ದೂಷಿಸುವುದನ್ನು ನಿಲ್ಲಿಸಲೇ ಇಲ್ಲ.
16ಔತಣಗಳಲ್ಲಿ ಗೇಲಿಮಾಡುವ ಕಪಟಿಗಳಂತೆ ಅವರು ನನ್ನ ಮೇಲೆ ಹಲ್ಲುಗಳನ್ನು ಕಡಿಯುತ್ತಾರೆ.
17ಯೆಹೋವ ದೇವರೇ, ಎಷ್ಟರವರೆಗೆ ನೀವು ಸುಮ್ಮನೆ ನೋಡುತ್ತಾ ಇರುವಿರಿ? ಅವರ ಅಪಾಯಗಳಿಂದ ನನ್ನ ಪ್ರಾಣವನ್ನು ಬಿಡಿಸಿರಿ. ಆ ಸಿಂಹಗಳಿಂದ ನನ್ನ ಅಮೂಲ್ಯ ಪ್ರಾಣವನ್ನೂ ತಪ್ಪಿಸಿರಿ.
18ಆಗ ನಾನು ದೊಡ್ಡ ಸಭೆಗಳಲ್ಲಿ ನಿಮ್ಮನ್ನು ಕೊಂಡಾಡುವೆನು; ಬಹುಜನರಲ್ಲಿ ನಿಮ್ಮನ್ನು ಸ್ತುತಿಸುವೆನು.
19ನಿಷ್ಕಾರಣವಾಗಿರುವ ನನ್ನ ಶತ್ರುಗಳು ನನ್ನ ಮೇಲೆ ಸುಳ್ಳಾಗಿ ಸಂತೋಷಪಡದೆ ಇರಲಿ; ನನ್ನನ್ನು ಕಾರಣವಿಲ್ಲದೆ ದ್ವೇಷಿಸುವವರು ಕಣ್ಣು ಸನ್ನೆ ಮಾಡದೆ ಇರಲಿ.
20ಅವರು ಅಸಮಾಧಾನವಾಗಿ ಮಾತನಾಡಿ ದೇಶದಲ್ಲಿರುವ ಶಾಂತರಾಗಿ ಬಾಳುವವರ ಮೇಲೆ ಮೋಸದ ವಿಷಯಗಳನ್ನು ಕಲ್ಪಿಸುತ್ತಾರೆ.
21ಹೌದು, ಅವರು ತಮ್ಮ ಬಾಯನ್ನು ತೆರೆದು ನನಗೆ ವಿರೋಧವಾಗಿ, “ಆಹಾ, ಆಹಾ, ನಾವು ಕಣ್ಣಾರೆ ಕಂಡೆವು,” ಎನ್ನುತ್ತಾರೆ.
22ಯೆಹೋವ ದೇವರೇ, ನೀವು ಇದನ್ನು ನೋಡಿದ್ದೀರಿ; ಯೆಹೋವ ದೇವರೇ, ಮೌನವಾಗಿರಬೇಡಿರಿ; ನನಗೆ ದೂರವಾಗಿರಲೂ ಬೇಡಿರಿ.
23ನನ್ನ ದೇವರೇ, ನನ್ನ ಯೆಹೋವ ದೇವರೇ, ನನ್ನ ನ್ಯಾಯವನ್ನು ನಿರ್ಣಯಿಸಿರಿ, ನನ್ನ ವ್ಯಾಜ್ಯದ ಪರವಾಗಿ ಎದ್ದೇಳಿರಿ.
24ಯೆಹೋವ ದೇವರೇ, ನನ್ನ ದೇವರೇ, ನಿಮ್ಮ ನೀತಿಯ ಪ್ರಕಾರ ನನಗೆ ನ್ಯಾಯತೀರಿಸಿರಿ; ಅವರು ನನ್ನ ವಿರುದ್ಧ ಸಂತೋಷಪಡದೆ ಇರಲಿ.
25ಅವರು ತಮ್ಮ ಹೃದಯದಲ್ಲಿ, “ಆಹಾ, ನಮ್ಮ ಇಷ್ಟವೇ ನೆರವೇರಿತು,” ಎಂದು ಹೇಳದಿರಲಿ; “ಅವನನ್ನು ನುಂಗಿಬಿಟ್ಟೆವು,” ಎಂದೂ ಅವರು ಹೇಳದೇ ಇರಲಿ.
26ನನ್ನ ಕೇಡಿನಲ್ಲಿ ಸಂತೋಷಪಡುವವರು ನಾಚಿಕೊಂಡು ಒಟ್ಟಿಗೆ ಕಳವಳಗೊಳ್ಳಲಿ; ನನಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿಕೊಳ್ಳುವವರು ನಾಚಿಕೆಯನ್ನೂ ಅವಮಾನವನ್ನೂ ಹೊಂದಲಿ.
27ನನ್ನ ನೀತಿಯಲ್ಲಿ ಸಂತೋಷಪಡುವವರು ಉತ್ಸಾಹಧ್ವನಿ ಮಾಡಿ, ಆನಂದಪಡಲಿ; “ಹೌದು, ತಮ್ಮ ಸೇವಕನ ಅಭಿವೃದ್ಧಿಯಲ್ಲಿ ಸಂತೋಷಪಡುವ ಯೆಹೋವ ದೇವರು ಮಹಿಮೆಪಡಲಿ,” ಎಂದು ಅವರು ಯಾವಾಗಲೂ ಹೇಳಲಿ.
28ಆಗ ನನ್ನ ನಾಲಿಗೆಯು ನಿಮ್ಮ ನೀತಿಯನ್ನೂ ದಿನವೆಲ್ಲಾ ನಿಮ್ಮ ಸ್ತೋತ್ರವನ್ನೂ ವರ್ಣಿಸುವುದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.