Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 34

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನಾನು ಎಲ್ಲಾ ಕಾಲಗಳಲ್ಲಿ ಯೆಹೋವ ದೇವರನ್ನು ಸ್ತುತಿಸುವೆನು; ಅವರ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವುದು.
2ಯೆಹೋವ ದೇವರಲ್ಲಿ ನನ್ನ ಪ್ರಾಣವು ಹಿಗ್ಗುವುದು; ಇದನ್ನು ದೀನರು ಕೇಳಿ ಸಂತೋಷಪಡುವರು.
3ನನ್ನ ಸಂಗಡ ಯೆಹೋವ ದೇವರನ್ನು ಮಹಿಮೆಪಡಿಸಿರಿ; ನಾವು ಒಟ್ಟಾಗಿ ಅವರ ಹೆಸರನ್ನು ಘನಪಡಿಸೋಣ.
4ನಾನು ಯೆಹೋವ ದೇವರನ್ನು ಹುಡುಕಿದೆನು; ಆಗ ಅವರು ನನಗೆ ಉತ್ತರಕೊಟ್ಟು, ಸಕಲ ಭೀತಿಗಳಿಂದ ನನ್ನನ್ನು ಬಿಡಿಸಿದರು.
5ದೇವರನ್ನು ದೃಷ್ಟಿಸಿದವರು ಪ್ರಕಾಶ ಹೊಂದಿದರು; ಅಂಥವರ ಮುಖಗಳು ನಾಚಿಕೆಯಿಂದ ಕುಂದಿಹೋಗುವುದಿಲ್ಲ.
6ಬಡವನಾದ ನಾನು ಕರೆಯಲು ಯೆಹೋವ ದೇವರು ಕೇಳಿ ನನ್ನ ಎಲ್ಲಾ ಇಕ್ಕಟ್ಟುಗಳೊಳಗಿಂದ ನನ್ನನ್ನು ರಕ್ಷಿಸಿದರು.
7ದೇವರಿಗೆ ಭಯಪಡುವವರ ಸುತ್ತಲೂ ಯೆಹೋವ ದೇವರ ದೂತನು ಇಳಿದುಕೊಂಡು ಅವರನ್ನು ಕಾಪಾಡುತ್ತಾನೆ.
8ಯೆಹೋವ ದೇವರು ಒಳ್ಳೆಯವರೆಂದು ರುಚಿಸಿ ನೋಡಿರಿ; ಅವರನ್ನು ಆಶ್ರಯಿಸುವ ಮನುಷ್ಯನು ಭಾಗ್ಯವಂತನು.
9ದೇವರ ಭಕ್ತರೇ, ನೀವು ಯೆಹೋವ ದೇವರಿಗೆ ಭಯಪಡಿರಿ; ಏಕೆಂದರೆ ದೇವಭಕ್ತಿಯುಳ್ಳವರಿಗೆ ಯಾವ ಕೊರತೆಯೂ ಇಲ್ಲ.
10ಸಿಂಹಗಳು ಹಸಿದು ಬಳಲಬಹುದು, ಆದರೆ ಯೆಹೋವ ದೇವರನ್ನು ಹುಡುಕುವವರಿಗೆ ಯಾವ ಒಳ್ಳೆಯದರ ಕೊರತೆಯೂ ಇರುವುದಿಲ್ಲ.
11ಮಕ್ಕಳೇ, ನೀವು ಬಂದು ನನ್ನ ಮಾತನ್ನು ಕೇಳಿರಿ; ನಾನು ಯೆಹೋವ ದೇವರ ಬಗ್ಗೆ ಭಯವನ್ನು ನಿಮಗೆ ಕಲಿಸುವೆನು.
12ನಿಮ್ಮಲ್ಲಿ ಜೀವನವನ್ನು ಪ್ರೀತಿಸುವವನು ಮತ್ತು ಬಹಳ ದಿನಗಳವರೆಗೆ ಬದುಕಬೇಕೆ?
13ನೀನು ಕೇಡಿನಿಂದ ನಿನ್ನ ನಾಲಿಗೆಯನ್ನು, ಮೋಸವನ್ನು ನುಡಿಯದ ಹಾಗೆ ನಿನ್ನ ತುಟಿಗಳನ್ನೂ ನಿಯಂತ್ರಿಸಿಕೋ.
14ಕೇಡಿನಿಂದ ತೊಲಗಿ ಒಳ್ಳೆಯದನ್ನು ಮಾಡು; ಸಮಾಧಾನವನ್ನು ಹುಡುಕಿ ಅದನ್ನು ಹಿಂಬಾಲಿಸು.
15ನೀತಿವಂತರ ಮೇಲೆ ಯೆಹೋವ ದೇವರು ದೃಷ್ಟಿ ಇಡುತ್ತಾರೆ, ಅವರು ಮೊರೆಯಿಡುವಾಗ ದೇವರು ಕಿವಿಗೊಡುತ್ತಾರೆ.
16ಆದರೆ ಕೆಟ್ಟದ್ದನ್ನು ಮಾಡುವವರಿಗೆ ಯೆಹೋವ ದೇವರು ವಿಮುಖರಾಗಿದ್ದಾರೆ, ಅಂಥವರ ಹೆಸರನ್ನು ಭೂಮಿಯೊಳಗಿಂದ ತೆಗೆದುಹಾಕುವರು.
17ನೀತಿವಂತರ ಕೂಗನ್ನು ಯೆಹೋವ ದೇವರು ಕೇಳಿ, ಅವರನ್ನು ಎಲ್ಲಾ ಇಕ್ಕಟ್ಟುಗಳೊಳಗಿಂದ ಬಿಡಿಸುತ್ತಾರೆ.
18ಮುರಿದ ಹೃದಯದವರಿಗೆ ಯೆಹೋವ ದೇವರು ಸಮೀಪವಾಗಿದ್ದಾರೆ; ಜಜ್ಜಿದ ಆತ್ಮವುಳ್ಳವರನ್ನು ರಕ್ಷಿಸುತ್ತಾರೆ.
19ನೀತಿವಂತನಿಗೆ ತೊಂದರೆಗಳು ಬಹಳವಾಗಿವೆ; ಆದರೆ ಅವೆಲ್ಲವುಗಳಿಂದ ಯೆಹೋವ ದೇವರು ಅವನನ್ನು ಬಿಡಿಸುತ್ತಾರೆ.
20ಅವರು ಅವನ ಎಲುಬುಗಳನ್ನೆಲ್ಲಾ ಕಾಪಾಡುತ್ತಾರೆ; ಅವುಗಳಲ್ಲಿ ಒಂದಾದರೂ ಮುರಿದು ಹೋಗುವುದಿಲ್ಲ.
21ಕೇಡು ದುಷ್ಟನನ್ನೇ ಕೊಲ್ಲುವುದು; ನೀತಿವಂತನನ್ನು ದ್ವೇಷಿಸುವವರು ಶಿಕ್ಷೆಗೆ ಒಳಗಾಗುವರು.
22ಯೆಹೋವ ದೇವರು ತಮ್ಮ ಸೇವಕರ ಪ್ರಾಣವನ್ನು ವಿಮೋಚಿಸುತ್ತಾರೆ; ದೇವರನ್ನು ಆಶ್ರಯಿಸುವವರು ಯಾರೂ ಶಿಕ್ಷೆಗೆ ಒಳಗಾಗುವುದಿಲ್ಲ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.