Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಜ್ಞಾನೋಕ್ತಿಗಳು 2

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ, ನನ್ನ ಆಜ್ಞೆಗಳನ್ನು ನಿನ್ನಲ್ಲಿ ಕಾದಿರಿಸು.
2ನೀನು ಜ್ಞಾನಕ್ಕೆ ಕಿವಿಗೊಟ್ಟು, ತಿಳುವಳಿಕೆಗೆ ನಿನ್ನ ಹೃದಯವನ್ನು ತಿರುಗಿಸು,
3ಹೌದು, ನೀನು ಒಳನೋಟಕ್ಕಾಗಿ ಮೊರೆಯಿಟ್ಟು, ತಿಳುವಳಿಕೆಗಾಗಿ ನಿನ್ನ ಸ್ವರವೆತ್ತಿ,
4ಬೆಳ್ಳಿಯಂತೆ ನೀನು ಅದನ್ನು ಹಂಬಲಿಸಿದರೆ, ನಿಗೂಢ ನಿಕ್ಷೇಪದಂತೆ ನೀನು ಅದಕ್ಕಾಗಿ ಹುಡುಕಿದರೆ,
5ಆಗ ನೀನು ಯೆಹೋವ ದೇವರ ಭಯಭಕ್ತಿಯನ್ನು ತಿಳಿದುಕೊಳ್ಳುವೆ; ದೇವರ ಅರಿವನ್ನು ಕಂಡುಕೊಳ್ಳುವೆ.
6ಏಕೆಂದರೆ ಯೆಹೋವ ದೇವರೇ ಜ್ಞಾನವನ್ನು ಕೊಡುತ್ತಾರೆ; ಅವರ ಬಾಯಿಂದಲೇ ಅರಿವೂ ತಿಳುವಳಿಕೆಯೂ ಹೊರಟುಬರುತ್ತವೆ.
7ನೀತಿವಂತರಿಗೋಸ್ಕರ ದೇವರು ಸುಜ್ಞಾನವನ್ನು ಕೂಡಿಸಿಡುವರು, ನಿರ್ದೋಷಿಯಾಗಿ ನಡೆದುಕೊಳ್ಳುವವರಿಗೆ ದೇವರು ಗುರಾಣಿಯಾಗಿದ್ದಾರೆ.
8ನ್ಯಾಯವಂತರ ದಾರಿಗಳನ್ನು ದೇವರು ಕಾಯುತ್ತಾರೆ; ತಮ್ಮ ನಂಬಿಗಸ್ತರ ಮಾರ್ಗವನ್ನು ಭದ್ರಪಡಿಸುತ್ತಾರೆ.
9ಆಗ ನೀನು ಸರಿಯಾದದ್ದನ್ನೂ ನ್ಯಾಯವನ್ನೂ ಯುಕ್ತವಾದದ್ದನ್ನು ಅರ್ಥಮಾಡಿಕೊಳ್ಳುವೆ, ಮಾತ್ರವಲ್ಲದೆ ಪ್ರತಿಯೊಂದು ಸನ್ಮಾರ್ಗವನ್ನೂ ತಿಳಿದುಕೊಳ್ಳುವೆ.
10ನಿನ್ನ ಹೃದಯದಲ್ಲಿ ಜ್ಞಾನವು ಪ್ರವೇಶಿಸಿ, ನಿನ್ನ ಪ್ರಾಣಕ್ಕೆ ತಿಳುವಳಿಕೆಯು ಹಿತಕರವಾಗಿರುವುದು.
11ನಿನ್ನ ವಿವೇಚನೆಯು ನಿನ್ನನ್ನು ಭದ್ರವಾಗಿ ಕಾಯುವುದು; ತಿಳುವಳಿಕೆಯು ನಿನ್ನನ್ನು ಕಾಪಾಡುವುದು.
12ಜ್ಞಾನವು ದುಷ್ಟರ ಮಾರ್ಗಗಳಿಂದಲೂ, ವಕ್ರರ ಮಾತುಗಳಿಂದಲೂ ಕಾಪಾಡುವುದು.
13ಅವರು ಕತ್ತಲೆಯ ಹಾದಿಗಳಲ್ಲಿ ನಡೆಯುವುದಕ್ಕೆ ನೇರವಾದ ದಾರಿಗಳನ್ನು ತೊರೆದುಬಿಡುತ್ತಾರೆ.
14ಅವರು ಕೆಟ್ಟದ್ದನ್ನು ಮಾಡುವುದಕ್ಕೆ ಸಂತೋಷಿಸುತ್ತಾರೆ. ಕೇಡಿನ ವಕ್ರತನದಲ್ಲಿ ಆನಂದಿಸುತ್ತಾರೆ.
15ಅವರ ಮಾರ್ಗಗಳು ವಕ್ರವಾಗಿವೆ; ತಮ್ಮ ನಡತೆಗಳಲ್ಲಿ ಅವರು ತಪ್ಪಿಹೋಗಿದ್ದಾರೆ.
16ಜಾರಿಣಿಯಿಂದಲೂ ದಾರಿತಪ್ಪಿದ ಪರಸ್ತ್ರೀಯ ವಶೀಕರಣದ ಮಾತುಗಳಿಂದಲೂ ಜ್ಞಾನವು ನಿನ್ನನ್ನು ರಕ್ಷಿಸುವುದು.
17ಅವಳು ತನ್ನ ಯೌವನ ಕಾಲದ ಪತಿಯನ್ನು ತ್ಯಜಿಸಿದ್ದಾಳೆ, ದೇವರ ಸನ್ನಿಧಿಯಲ್ಲಿ ಮಾಡಿಕೊಂಡ ಒಡಂಬಡಿಕೆಯನ್ನೂ ಕಡೆಗಣಿಸಿದ್ದಾಳೆ.
18ಏಕೆಂದರೆ ಅವಳ ಮನೆ ಮರಣ ಮಾರ್ಗ. ಅವಳ ದಾರಿ ಮೃತರ ಕಡೆಗೂ ನಡೆಸುತ್ತವೆ.
19ಅವಳ ಬಳಿಗೆ ಹೋಗುವ ಯಾವನೂ ಹಿಂದಿರುಗುವುದಿಲ್ಲ; ಜೀವಮಾರ್ಗಗಳನ್ನು ಅಂಥವರು ಹಿಡಿಯುವುದೇ ಇಲ್ಲ.
20ಆದ್ದರಿಂದ ಒಳ್ಳೆಯವರ ಮಾರ್ಗದಲ್ಲಿ ನೀನು ನಡೆಯುವೆ ನೀತಿವಂತರ ದಾರಿಯನ್ನು ನೀನು ಹಿಡಿಯುವೆ.
21ಏಕೆಂದರೆ ಪ್ರಾಮಾಣಿಕರು ದೇಶದಲ್ಲಿ ವಾಸಿಸುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿ ಇರುವರು.
22ದುಷ್ಟರಾದರೋ ಭೂಮಿಯಿಂದ ತೆಗೆದುಹಾಕಲಾಗುವರು; ದ್ರೋಹಿಗಳು ಬೇರುಸಹಿತವಾಗಿ ಕಿತ್ತುಹಾಕಲಾಗುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.