Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಜ್ಞಾನೋಕ್ತಿಗಳು 1

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಇಸ್ರಾಯೇಲರ ಅರಸನೂ ದಾವೀದನ ಮಗನೂ ಆದ ಸೊಲೊಮೋನನ ಜ್ಞಾನೋಕ್ತಿಗಳು:
2ಜನರು ಜ್ಞಾನವನ್ನೂ ಶಿಸ್ತನ್ನೂ ಪಡೆದುಕೊಳ್ಳುವುದಕ್ಕೆ; ವಿವೇಕದ ಮಾತುಗಳನ್ನು ಗ್ರಹಿಸುವುದಕ್ಕೆ;
3ಅಂದರೆ, ಶಿಕ್ಷಣ, ವಿವೇಕ ನಡವಳಿ, ಸರಿಯಾದದ್ದನ್ನು ಮಾಡುವುದು ನ್ಯಾಯ ಮತ್ತು ಯುಕ್ತವಾದವುಗಳನ್ನು ನಡೆಸುವ ಜ್ಞಾನೋಕ್ತಿಗಳು;
4ಮುಗ್ಧರಿಗೆ ವಿವೇಕವನ್ನೂ ಯೌವನಸ್ಥರಿಗೆ ತಿಳುವಳಿಕೆ ಹಾಗೂ ಸ್ವವಿವೇಚನೆಯನ್ನೂ ಕೊಡುವುದಕ್ಕಾಗಿ ಈ ಜ್ಞಾನೋಕ್ತಿಗಳಿವೆ.
5ಜ್ಞಾನಿಯು ಜ್ಞಾನೋಕ್ತಿಗಳನ್ನು ಕೇಳಿ, ಜ್ಞಾನವನ್ನು ಹೆಚ್ಚಿಸಿಕೊಳ್ಳಲಿ; ವಿವೇಚಿಸುವವರು ಮಾರ್ಗದರ್ಶನವನ್ನು ಹೊಂದಿಕೊಳ್ಳಲಿ.
6ಜ್ಞಾನೋಕ್ತಿಗಳನ್ನು, ಸಾಮ್ಯಗಳನ್ನು, ಜ್ಞಾನಿಗಳ ಮಾತು ಹಾಗೂ ಒಗಟುಗಳನ್ನು ಅರ್ಥಮಾಡಿಕೊಳ್ಳಲು ಇವು ಬರೆಯಲಾಗಿವೆ.
7ಯೆಹೋವ ದೇವರ ಭಯವೇ ಜ್ಞಾನದ ಮೂಲವಾಗಿದೆ. ಆದರೆ ಮೂರ್ಖರು ಜ್ಞಾನವನ್ನೂ ಶಿಕ್ಷಣವನ್ನೂ ಅಸಡ್ಡೆ ಮಾಡುತ್ತಾರೆ. ಮುನ್ನುಡಿ: ಬುದ್ಧಿವಂತಿಕೆಯನ್ನು ಅಳವಡಿಸಿಕೊಳ್ಳಲು ಉಪದೇಶಗಳು ಪಾಪ ಸಂಬಧಿತ ಎಚ್ಚರಿಕೆ
8ಮಗನೇ, ನಿನ್ನ ತಂದೆಯ ಶಿಕ್ಷಣಗಳನ್ನು ಕೇಳು, ನಿನ್ನ ತಾಯಿಯ ಉಪದೇಶವನ್ನು ತೊರೆಯಬೇಡ.
9ಅವು ನಿನ್ನ ತಲೆಗೆ ಸುಂದರ ಕಿರೀಟ ನಿನ್ನ ಕೊರಳನ್ನು ಅಲಂಕರಿಸುವ ಹಾರ.
10ಮಗನೇ, ಪಾಪಿಗಳು ನಿನ್ನನ್ನು ಸೆಳೆದರೆ ನೀನು ಒಪ್ಪಬೇಡ.
11ಒಂದು ವೇಳೆ ಅವರು ನಿನಗೆ, “ನಮ್ಮೊಂದಿಗೆ ಬಾ, ಜನರ ರಕ್ತಕ್ಕಾಗಿ ಒಳಸಂಚು ಮಾಡೋಣ, ನಿರಪರಾಧಿಯ ರಕ್ತಕ್ಕಾಗಿ;
12ಸಮಾಧಿಯು ನುಂಗುವಂತೆ ಜೀವಂತವಾಗಿ ಅವರನ್ನು ದಾಳಿಮಾಡೋಣ ಗುಂಡಿಯೊಳಕ್ಕೆ ಹೋಗುವವರನ್ನು ಸಂಪೂರ್ಣವಾಗಿ ನಾವು ಅವರನ್ನು ನುಂಗಿಬಿಡೋಣ.
13ಅಮೂಲ್ಯವಾದ ಸೊತ್ತನ್ನೆಲ್ಲಾ ನಾವು ಕಂಡುಹಿಡಿದು ಕೊಳ್ಳೆಹೊಡೆದು ನಮ್ಮ ಮನೆಗಳನ್ನು ತುಂಬಿಕೊಳ್ಳೋಣ;
14ನೀನು ನಮ್ಮ ಮಧ್ಯದಲ್ಲಿ ಚೀಟನ್ನು ಹಾಕು, ನಾವೆಲ್ಲರೂ ಹಣಹಂಚಿಕೊಳ್ಳೋಣ,” ಎಂದು ಹೇಳುವುದಾದರೆ.
15ಮಗನೇ, ಅವರೊಂದಿಗೆ ಸೇರಬೇಡ, ಅವರ ಮಾರ್ಗದಲ್ಲಿ ಹೆಜ್ಜೆಯಿಡಬೇಡ.
16ಏಕೆಂದರೆ ಅವರ ಪಾದಗಳು ಕೇಡಿಗೆ ಓಡುತ್ತವೆ, ರಕ್ತಸುರಿಸುವುದಕ್ಕೆ ಆತುರಪಡುತ್ತವೆ.
17ಪಕ್ಷಿಗಳ ಕಣ್ಣೆದುರಿಗೆ ಕಾಣುವಂತೆ ಬಲೆಯನ್ನು ಹರಡುವುದು ವ್ಯರ್ಥವಲ್ಲವೇ!
18ಈ ಜನರು ಒಳಸಂಚು ಮಾಡುವುದು ತಮ್ಮ ಸ್ವಂತ ರಕ್ತಕ್ಕೆ. ಅವರು ಮಾಡುವ ದುರಾಲೋಚನೆ ಅವರನ್ನೇ ನಾಶಮಾಡುವುದು.
19ಅಕ್ರಮ ಲಾಭದ ಬೆನ್ನಟ್ಟಿ ಹೋಗುವವರೆಲ್ಲರ ಗತಿ ಇದೇ. ಕೊಳ್ಳೆಯು ಕೊಳ್ಳೆಗಾರರ ಜೀವವನ್ನೇ ಕೊಳ್ಳೆಮಾಡುವದು. ಜ್ಞಾನವನ್ನು ತಿರಸ್ಕರಿಸುವವರ ವಿರುದ್ಧ ಎಚ್ಚರಿಕೆ
20ಜ್ಞಾನವೆಂಬಾಕೆಯು ಬೀದಿಯಲ್ಲಿ ಕೂಗುತ್ತಾಳೆ, ಬಹಿರಂಗ ಸ್ಥಳಗಳಲ್ಲಿ ಆಕೆಯು ತನ್ನ ಧ್ವನಿಗೈಯುತ್ತಾಳೆ.
21ಜನಭರಿತ ಬೀದಿಗಳಲ್ಲಿ ಆಕೆ ಕರೆಯುತ್ತಾಳೆ, ಪಟ್ಟಣದ ಹೆಬ್ಬಾಗಿಲುಗಳಲ್ಲಿ ಹೀಗೆಂದು ಭಾಷಣ ಮಾಡುತ್ತಾಳೆ:
22“ಮುಗ್ಧರೇ ನೀವು ಎಷ್ಟು ಕಾಲ ಮುಗ್ಧತೆಯನ್ನು ಪ್ರೀತಿಸುವಿರಿ. ಕುಚೋದ್ಯಗಾರರೇ ಎಷ್ಟು ಕಾಲ ಕುಚೋದ್ಯಗಾರರಾಗಿರಲು ಇಚ್ಛಿಸುವಿರಿ? ಜ್ಞಾನಹೀನರೇ, ಎಷ್ಟು ಕಾಲ ಪರಿಜ್ಞಾನವನ್ನು ಹಗೆ ಮಾಡುವಿರಿ?
23ನನ್ನ ಗದರಿಕೆ ಕೇಳಿ ನೀವು ಪಶ್ಚಾತ್ತಾಪಪಡಿರಿ! ಆಗ ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ, ನಿಮಗೆ ನನ್ನ ಬೋಧನೆಗಳನ್ನು ಪ್ರಕಟಿಸುವೆನು.
24ನಾನು ಕರೆದಾಗ ನೀವು ನನ್ನನ್ನು ತಿರಸ್ಕರಿಸಿದ್ದೀರಿ ನಾನು ನನ್ನ ಕೈಚಾಚಿದಾಗ ಯಾರೂ ಮನುಷ್ಯನೂ ಗಮನಿಸಲಿಲ್ಲ.
25ನನ್ನ ಆಲೋಚನೆಯನ್ನು ನೀವು ಲಕ್ಷಿಸದೆ; ನನ್ನ ಗದರಿಕೆಯನ್ನು ನೀವು ಬೇಡವೆಂದು ತಳ್ಳಿಬಿಟ್ಟಿದ್ದರಿಂದ
26ಬಿರುಗಾಳಿಯಂತೆ ನಿಮಗೆ ವಿಪತ್ತು ಬಂದಾಗ ನಾನು ನಗುವೆನು. ಆಪತ್ತು ನಿಮ್ಮನ್ನು ಹಿಂದಿಕ್ಕಿದಾಗ, ನಾನು ಪರಿಹಾಸ್ಯ ಮಾಡುವೆನು.
27ಚಂಡಮಾರುತವು ನಿಮ್ಮನ್ನು ಬಿರುಗಾಳಿಯಂತೆ ತಾಕಿದಾಗ, ವಿಪತ್ತು ಸುಂಟರಗಾಳಿಯಂತೆ ನಿಮ್ಮ ಮೇಲೆ ಬೀಸಿದಾಗ, ಯಾತನೆ ಮತ್ತು ತೊಂದರೆ ನಿಮ್ಮನ್ನು ಆವರಿಸಿದಾಗಲೂ ಪರಿಹಾಸ್ಯಕ್ಕೆ ಒಳಗಾಗುವಿರಿ.
28“ಆಗ ಅವರು ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರ ಕೊಡೆನು. ಅವರು ನನ್ನನ್ನು ಆತುರದಿಂದ ಹುಡುಕುವರು, ಆದರೆ ಅವರು ನನ್ನನ್ನು ಕಂಡುಕೊಳ್ಳುವುದಿಲ್ಲ.
29ಏಕೆಂದರೆ ಅವರು ಅರಿವನ್ನು ಹಗೆಮಾಡಿ, ಯೆಹೋವ ದೇವರಿಗೆ ಭಯಪಡುವುದನ್ನು ಆರಿಸಿಕೊಳ್ಳದೆ ಹೋದರು.
30ನನ್ನ ಬುದ್ಧಿವಾದವನ್ನು ಸ್ವೀಕರಿಸದೆ, ನನ್ನ ಗದರಿಕೆಯನ್ನೆಲ್ಲಾ ಅಸಡ್ಡೆ ಮಾಡಿದರು.
31ಅವರು ತಮ್ಮ ಸ್ವಂತ ನಡತೆಯ ಫಲವನ್ನು ಅನುಭವಿಸಿ, ತಮ್ಮ ಸ್ವಂತ ಕುಯುಕ್ತಿಗಳಿಂದಲೇ ಹೊಟ್ಟೆ ತುಂಬಿಕೊಳ್ಳುವರು.
32ಮುಗ್ಧರ ದಾರಿತಪ್ಪುವಿಕೆಯು ಅವರನ್ನು ಕೊಲ್ಲುವುದು. ಜ್ಞಾನಹೀನರ ನಿಶ್ಚಿಂತೆಯು ಅವರನ್ನು ನಾಶಮಾಡುವುದು.
33ನನಗೆ ಕಿವಿಗೊಡುವವರಾದರೋ ಸುರಕ್ಷಿತರಾಗಿ ಜೀವಿಸುವರು, ಕೇಡಿನ ಭಯವಿಲ್ಲದೇ ನೆಮ್ಮದಿಯಿಂದ ಇರುವರು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.