Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ನೆಹೆಮೀಯ 2

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಅರಸನಾದ ಅರ್ತಷಸ್ತನ ಇಪ್ಪತ್ತನೆಯ ವರ್ಷದ, ನಿಸಾನ ತಿಂಗಳಲ್ಲಿ, ಅವನ ಮುಂದೆ ದ್ರಾಕ್ಷಾರಸವನ್ನು ತೆಗೆದುಕೊಂಡು ಅರಸನಿಗೆ ಕೊಟ್ಟೆನು. ನಾನು ಅವನ ಸಮ್ಮುಖದಲ್ಲಿ ಹಿಂದೆ ಎಂದೂ ದುಃಖಿತನಾಗಿದ್ದಿಲ್ಲ.
2ಆದಕಾರಣ ಅರಸನು ನನಗೆ, “ನಿನಗೆ ಕಾಯಿಲೆ ಇಲ್ಲದೆ ಇರುವಾಗ, ನಿನ್ನ ಮುಖವು ದುಃಖದಿಂದಿರುವುದೇನು? ನಿನಗೆ ರೋಗ ಏನೂ ಇಲ್ಲವಲ್ಲ? ಇದು ಮನೋವೇದನೆಯೇ ಹೊರತು ಬೇರೇನೂ ಅಲ್ಲ,” ಎಂದನು. ಆಗ ನಾನು ಬಹು ಭಯಪಟ್ಟು ಅರಸನಿಗೆ,
3“ಅರಸನು ಎಂದೆಂದಿಗೂ ಬಾಳಲಿ. ನನ್ನ ತಂದೆಗಳ ಸಮಾಧಿಗಳಿರುವ ಸ್ಥಳವಾದ ಆ ಪಟ್ಟಣವು ಹಾಳಾಗಿದ್ದು, ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿರುವಾಗ ನನ್ನ ಮುಖವು ದುಃಖವಿಲ್ಲದೆ ಇರಲು ಸಾಧ್ಯವೇ?” ಎಂದು ಹೇಳಿದೆನು.
4ಅದಕ್ಕೆ ಅರಸನು ನನಗೆ, “ನಿನಗೆ ಬೇಕಾಗಿರುವುದೇನು?” ಎಂದನು. ಆಗ ನಾನು ಪರಲೋಕದ ದೇವರನ್ನು ಪ್ರಾರ್ಥಿಸಿ
5ಅರಸನಿಗೆ, “ಅರಸನಿಗೆ ಮೆಚ್ಚಿಗೆಯಾದರೆ ಮತ್ತು ನಿಮ್ಮ ಸೇವಕನಿಗೆ ನಿಮ್ಮ ಮುಂದೆ ದಯೆ ದೊರಕಿದರೆ, ನನ್ನನ್ನು ನನ್ನ ತಂದೆಗಳ ಸಮಾಧಿಗಳಿರುವ ಪಟ್ಟಣವನ್ನು ಕಟ್ಟಿಸುವುದಕ್ಕಾಗಿ ಯೆಹೂದಕ್ಕೆ ನನ್ನನ್ನು ಕಳುಹಿಸಬೇಕು,” ಎಂದೆನು.
6ರಾಣಿಯು ಅವನ ಬಳಿಯಲ್ಲಿ ಕುಳಿತಿರುವಾಗ ಅರಸನು ನನಗೆ, “ನಿನ್ನ ಪ್ರಯಾಣ ಎಷ್ಟು ದಿವಸ? ನೀನು ತಿರುಗಿ ಯಾವಾಗ ಬರುತ್ತೀ?” ಎಂದನು. ನಾನು ಅರಸನಿಗೆ ಸಮಯ ಗೊತ್ತು ಮಾಡಿದೆನು. ಆಗ ಅರಸನು ನನ್ನನ್ನು ಕಳುಹಿಸಲು ಸಮ್ಮತಿಸಿದನು.
7ತರುವಾಯ ನಾನು ಅರಸನಿಗೆ, “ಯೂಫ್ರೇಟೀಸ್ ನದಿ ಆಚೆಯ ರಾಜ್ಯಪಾಲರು ತಮ್ಮ ಪ್ರಾಂತಗಳಲ್ಲಿ ಹಾದು, ಯೆಹೂದದ ನಾಡಿಗೆ ಹೋಗುವುದಕ್ಕೆ ನನಗೆ ಅಪ್ಪಣೆ ಕೊಡಬೇಕಾಗುತ್ತದೆ.
8ರಾಜವನಪಾಲಕನಾದ ಆಸಾಫನು, ದೇವಾಲಯದ ಕೋಟೆಯ ಬಾಗಿಲುಗಳನ್ನೂ, ಪಟ್ಟಣದ ಪೌಳಿಗೋಡೆಯನ್ನೂ, ನಾನು ಸೇರುವ ಮನೆಯನ್ನೂ, ಕಟ್ಟಲು ಬೇಕಾಗುವ ತೊಲೆಗಳಿಗಾಗಿ ಮರಗಳನ್ನೂ ಕೊಡಬೇಕಾಗುತ್ತದೆ. ಇದನ್ನೆಲ್ಲಾ ಕೊಡುವಂತೆ ರಾಜರು ನನ್ನ ಕೈಯಲ್ಲಿ ಪತ್ರಗಳನ್ನು ದಯಮಾಡಿ ನೀಡಬೇಕು,” ಎಂದು ಬಿನ್ನವಿಸಿದೆನು. ನನ್ನ ದೇವರ ಕೃಪಾಹಸ್ತ ನನ್ನ ಮೇಲೆ ಇದ್ದುದರಿಂದ, ರಾಜನು ಅವುಗಳನ್ನು ನನಗೆ ಕೊಟ್ಟನು.
9ಆಗ ನಾನು ಯೂಫ್ರೇಟೀಸ್ ನದಿಯ ಆಚೆಯಲ್ಲಿರುವ ಅಧಿಪತಿಗಳ ಬಳಿಗೆ ಬಂದು, ಅರಸನ ಪತ್ರಗಳನ್ನು ಅವರಿಗೆ ಕೊಟ್ಟೆನು. ಅರಸನು ನನ್ನ ಸಂಗಡ ಸೈನ್ಯಾಧಿಪತಿಗಳನ್ನೂ, ಕುದುರೆ ಸವಾರರನ್ನೂ ಕಳುಹಿಸಿದನು.
10ಇಸ್ರಾಯೇಲರ ಹಿತಚಿಂತಕನು ಒಬ್ಬನು ಬಂದನೆಂಬ ಸಮಾಚಾರ ಹೋರೋನಿನ ಸನ್ಬಲ್ಲಟನಿಗೂ, ಅಮ್ಮೋನ್ ದೇಶದವನಾದ ಟೋಬೀಯ ಎಂಬ ಅಧಿಕಾರಿಗೂ ಮುಟ್ಟಿತು. ಅವರು ತುಂಬಾ ವಿಚಲಿತರಾದರು. ನೆಹೆಮೀಯನು ಯೆರೂಸಲೇಮಿನ ಗೋಡೆಗಳನ್ನು ಪರೀಕ್ಷಿಸಿದ್ದು
11ನಾನು ಯೆರೂಸಲೇಮಿಗೆ ಬಂದು ಅಲ್ಲಿ ಮೂರು ದಿವಸ ಇದ್ದ ತರುವಾಯ, ನಾನೂ, ನನ್ನ ಸಂಗಡ ಇರುವ ಕೆಲವರೂ ರಾತ್ರಿಯಲ್ಲಿ ಎದ್ದೆವು.
12ಆದರೆ ಯೆರೂಸಲೇಮಿಗೋಸ್ಕರ ಮಾಡಲು ನನ್ನ ದೇವರು ನನ್ನ ಹೃದಯದಲ್ಲಿ ಇಟ್ಟಿದ್ದನ್ನು ಯಾರಿಗೂ ತಿಳಿಸಲಿಲ್ಲ. ನಾನು ಸವಾರಿಮಾಡುತ್ತಿದ್ದ ವಾಹನ ಪಶುವಿನ ಹೊರತು ಬೇರೆ ಪಶು ನನ್ನೊಂದಿಗಿರಲಿಲ್ಲ.
13ನಾನು ರಾತ್ರಿಯಲ್ಲಿ ಕಣಿವೆಯ ಬಾಗಿಲಿಂದ ಹೊರಟು, ಸರ್ಪದ ಬಾವಿಯನ್ನು ದಾಟಿ, ತಿಪ್ಪೆ ದಿಬ್ಬೆಯ ಬಾಗಿಲಿಗೆ ಬಂದು, ಯೆರೂಸಲೇಮಿನ ಕೆಡವಿ ಹಾಕಲಾದ ಗೋಡೆಗಳನ್ನೂ, ಬೆಂಕಿಯಿಂದ ಸುಡಲಾದ ಅದರ ಬಾಗಿಲುಗಳನ್ನೂ ಚೆನ್ನಾಗಿ ಕಂಡೆನು.
14ಅಲ್ಲಿಂದ ಬುಗ್ಗೆಬಾಗಿಲನ್ನು ಹಾದು, ಅರಸನ ಕೊಳಕ್ಕೆ ಹೋದೆನು. ನನ್ನ ವಾಹನ ಪಶುವಿಗೆ ಅಲ್ಲಿಂದ ಮುಂದೆ ಹೋಗುವುದಕ್ಕೆ ಮಾರ್ಗವಿಲ್ಲದ್ದರಿಂದ,
15ನಾನು ರಾತ್ರಿಯಲ್ಲಿ ಹಳ್ಳದ ಮಾರ್ಗದಿಂದ ಹತ್ತುತ್ತಾ ಗೋಡೆಯನ್ನು ಪರೀಕ್ಷಿಸಿದೆನು. ಆಮೇಲೆ ಪುನಃ ಕಣಿವೆಯ ಬಾಗಿಲಿನಿಂದ ಮನೆಗೆ ಬಂದೆನು.
16ನಾನು ಎಲ್ಲಿ ಹೋದೆನೆಂದೂ, ಏನು ಮಾಡಿದೆನೆಂದೂ ಅಧಿಕಾರಿಗಳು ತಿಳಿಯದೆ ಇದ್ದರು. ಅಲ್ಲಿಯವರೆಗೆ ನಾನು ಯೆಹೂದ್ಯರಿಗಾದರೂ, ಯಾಜಕರಿಗಾದರೂ, ಶ್ರೀಮಂತರಿಗಾದರೂ, ಅಧಿಕಾರಿಗಳಿಗಾದರೂ, ಕೆಲಸ ಮಾಡುವ ಇತರ ಜನರಿಗಾದರೂ ಗೊತ್ತಿರಲಿಲ್ಲ.
17ಬಳಿಕ ನಾನು ಅವರಿಗೆ, “ನಮ್ಮ ದುರವಸ್ಥೆ ನಿಮ್ಮ ಕಣ್ಣ ಮುಂದಿರುತ್ತದಲ್ಲವೇ? ಯೆರೂಸಲೇಮ್ ಪಟ್ಟಣ ಹಾಳುಬಿದ್ದಿದೆ; ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ; ಬನ್ನಿ, ಯೆರೂಸಲೇಮಿನ ಗೋಡೆಯನ್ನು ಪುನಃ ಕಟ್ಟೋಣ. ಹೀಗೆ ಮಾಡಿದರೆ, ನಮ್ಮ ಮೇಲಿನ ನಿಂದೆ ನೀಗುವುದು,” ಎಂದು ಹೇಳಿದೆ.
18ಇದಲ್ಲದೆ, ನನ್ನ ದೇವರ ಕೃಪಾಹಸ್ತ ನನ್ನನ್ನು ಹೇಗೆ ನಡೆಸಿತೆಂಬುದನ್ನೂ, ರಾಜನು ನನಗೆ ಹೇಳಿದ್ದನ್ನೂ ಅವರಿಗೆ ವಿವರಿಸಿದೆ. ಆಗ ಅವರು, “ಬನ್ನಿ, ಪುನಃ ಕಟ್ಟೋಣ,” ಎಂದು ಹೇಳಿ, ಆ ಒಳ್ಳೆಯ ಕೆಲಸಕ್ಕೆ ಕೈಹಾಕಲು ಧೈರ್ಯಗೊಂಡರು.
19ಆದರೆ ಹೋರೋನಿನವನಾದ ಸನ್ಬಲ್ಲಟನೂ, ಅಮ್ಮೋನ್ಯ ದಾಸನಾದ ಟೋಬೀಯನೂ, ಅರಬಿಯನಾದ ಗೆಷೆಮನೂ ಇದನ್ನು ಕೇಳಿದಾಗ, ಅವರು ನಮ್ಮನ್ನು ಗೇಲಿಮಾಡಿ ತಿರಸ್ಕರಿಸಿ, “ನೀವು ಮಾಡುವ ಈ ಕಾರ್ಯವೇನು? ನೀವು ಅರಸನಿಗೆ ವಿರೋಧವಾಗಿ ತಿರುಗಿಬೀಳುವಿರೋ?” ಎಂದರು.
20ಆಗ ನಾನು ಅವರಿಗೆ, “ಪರಲೋಕದ ದೇವರು ನಮಗೆ ಸಫಲತೆ ಅನುಗ್ರಹಿಸುವರು. ಅವರ ಸೇವಕರಾದ ನಾವು ಪುನಃ ಕಟ್ಟುವ ಕಾರ್ಯ ಪ್ರಾರಂಭಿಸುವೆವು. ಆದರೆ ನಿಮಗೆ ಯೆರೂಸಲೇಮಿನಲ್ಲಿ ಯಾವುದೇ ಪಾಲಾದರೂ ಹಕ್ಕಾದರೂ ಐತಿಹಾಸಿಕ ಬಾಧ್ಯತೆಯಾದರೂ ಇರುವುದಿಲ್ಲ,” ಎಂದು ಹೇಳಿದೆನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.