Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಹೋಶುವ 11

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಹಾಚೋರಿನ ಅರಸನಾದ ಯಾಬೀನನು ಇವುಗಳನ್ನು ಕೇಳಿದಾಗ, ಸಮೀಪ ರಾಜ್ಯಗಳ ಅರಸರಿಗೆ ಒಂದು ಸಂದೇಶವನ್ನು ಕಳುಹಿಸಿದನು: ಎಂದರೆ ಮಾದೋನಿನ ಅರಸನಾದ ಯೋಬಾಬನಿಗೂ ಶಿಮ್ರೋನಿನ ಅರಸನಿಗೂ ಅಕ್ಷಾಫಿನ ಅರಸನಿಗೂ
2ಪರ್ವತಗಳ ಉತ್ತರ ದಿಕ್ಕಿನಲ್ಲಿಯೂ ಕಿನ್ನೆರೆತಿಗೆ ದಕ್ಷಿಣಕ್ಕಿರುವ ಬಯಲಿನಲ್ಲಿಯೂ ಕಣಿವೆಗಳಲ್ಲಿ ಮತ್ತು ಪಶ್ಚಿಮದಲ್ಲಿ ದೋರಿನ ಪ್ರಾಂತಗಳಲ್ಲಿ ಇರುವ ಅರಸರಿಗೂ
3ಪೂರ್ವ ಪಶ್ಚಿಮಕ್ಕಿರುವ ಕಾನಾನ್ಯರ ಬಳಿಗೂ ಪರ್ವತಗಳಲ್ಲಿರುವ ಅಮೋರಿಯರ, ಹಿತ್ತಿಯರ, ಪೆರಿಜೀಯರ, ಯೆಬೂಸಿಯರ ಬಳಿಗೂ, ಮಿಚ್ಪಾ ದೇಶದಲ್ಲಿ ಹೆರ್ಮೋನ್ ಪರ್ವತದ ಕೆಳಭಾಗದಲ್ಲಿರುವ ಹಿವ್ವಿಯರ ಬಳಿಗೂ ಹೇಳಿ ಕಳುಹಿಸಿದನು.
4ಅವರೆಲ್ಲರು ಸಮುದ್ರ ದಡದ ಮರಳಿನ ಹಾಗೆ ಅಸಂಖ್ಯರಾಗಿದ್ದರು. ಅವರು ಬಹು ರಥಗಳೂ ಕುದುರೆಗಳೂ ಸಮೂಹವಾಗಿ ತಮ್ಮ ಎಲ್ಲಾ ಸೈನ್ಯಗಳ ಸಂಗಡ ಹೊರಟರು.
5ಈ ಎಲ್ಲಾ ಅರಸರು ಇಸ್ರಾಯೇಲಿನ ಸಂಗಡ ಯುದ್ಧಮಾಡಲು ಬಂದು ಒಟ್ಟುಗೂಡಿ ಮೇರೋಮ ಎಂಬ ಜಲಾಶಯದ ಬಳಿಯಲ್ಲಿ ಇಳಿದುಕೊಂಡರು.
6ಆಗ ಯೆಹೋವ ದೇವರು ಯೆಹೋಶುವನಿಗೆ, “ಅವರಿಗೆ ಭಯಪಡಬೇಡ, ಏಕೆಂದರೆ ನಾಳೆ ಇಷ್ಟು ಹೊತ್ತಿಗೆ ಅವರೆಲ್ಲರೂ ಸಂಹಾರವಾಗುವಂತೆ ಇಸ್ರಾಯೇಲರಿಗೆ ಒಪ್ಪಿಸಿಕೊಡುವೆನು. ನೀನು ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯ್ದು ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು,” ಎಂದರು.
7ಆಗ ಯೆಹೋಶುವನೂ ಅವನ ಸಂಗಡ ಇದ್ದ ಸೈನಿಕರೆಲ್ಲರೂ ಬಂದು ಫಕ್ಕನೆ ಮೇರೋಮ ಜಲಾಶಯದ ಬಳಿಯಲ್ಲಿ ಅವರ ಮೇಲೆ ದಾಳಿಮಾಡಿದರು.
8ಯೆಹೋವ ದೇವರು ಅವರನ್ನು ಇಸ್ರಾಯೇಲರ ಕೈಯಲ್ಲಿ ಒಪ್ಪಿಸಿಕೊಟ್ಟರು. ಇವರು ಅವರನ್ನು ಹೊಡೆದು ದೊಡ್ಡ ಸೀದೋನ್, ಮಿಸ್ರೆಫೋತ್ಮಯಿಮ್ ಎಂಬ ಊರುಗಳವರೆಗೂ ಪೂರ್ವದಿಕ್ಕಿನಲ್ಲಿರುವ ಮಿಚ್ಪೆಯ ಕಣಿವೆಯವರೆಗೂ ಹಿಂದಟ್ಟಿ, ಅವರಲ್ಲಿ ಒಬ್ಬನನ್ನಾದರೂ ಉಳಿಸದೆ ಎಲ್ಲರನ್ನು ಸಂಹರಿಸಿದರು.
9ಯೆಹೋಶುವನು ಯೆಹೋವ ದೇವರ ಅಪ್ಪಣೆಯ ಪ್ರಕಾರವೇ ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯ್ದುಬಿಟ್ಟು, ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟನು.
10ಆ ಕಾಲದಲ್ಲಿ ಯೆಹೋಶುವನು ಹಿಂದಿರುಗಿ ಹಾಚೋರನ್ನು ಹಿಡಿದು, ಅದರ ಅರಸನನ್ನು ಖಡ್ಗದಿಂದ ಸಂಹರಿಸಿದನು. ಏಕೆಂದರೆ ಹಾಚೋರು ಮೊದಲು ಆ ರಾಜ್ಯಗಳಿಗೆಲ್ಲಾ ಶಿರಸ್ಸಾಗಿತ್ತು.
11ಅವರು ಒಬ್ಬರನ್ನಾದರೂ ಉಳಿಸದೆ, ಅದರಲ್ಲಿದ್ದ ಪ್ರತಿಯೊಬ್ಬರನ್ನೂ ಖಡ್ಗದಿಂದ ಸಂಹರಿಸಿದನು. ಹಾಚೋರನ್ನು ಬೆಂಕಿಯಿಂದ ಸುಟ್ಟುಬಿಟ್ಟನು.
12ಇದಲ್ಲದೆ ಯೆಹೋಶುವನು ಆ ಅರಸುಗಳ ಸಮಸ್ತ ಪಟ್ಟಣಗಳನ್ನೂ, ಅವುಗಳ ಸಮಸ್ತ ಅರಸರನ್ನೂ ಹಿಡಿದು ಖಡ್ಗದಿಂದ ದಾಳಿಮಾಡಿ, ಯೆಹೋವ ದೇವರ ಸೇವಕನಾದ ಮೋಶೆಯು ಆಜ್ಞಾಪಿಸಿದಂತೆ ಅವರನ್ನು ಸಂಪೂರ್ಣ ನಾಶಮಾಡಿಬಿಟ್ಟನು.
13ಆದರೆ ದಿನ್ನೆಯ ಮೇಲೆ ನಿಂತಿರುವ ಪಟ್ಟಣಗಳನ್ನೆಲ್ಲಾ ಇಸ್ರಾಯೇಲರು ಸುಟ್ಟು ಬಿಡಲಿಲ್ಲ. ಹಾಚೋರನ್ನು ಮಾತ್ರ ಯೆಹೋಶುವನು ಸುಟ್ಟುಬಿಟ್ಟನು.
14ಆ ಪಟ್ಟಣಗಳ ಎಲ್ಲಾ ಕೊಳ್ಳೆಯನ್ನೂ, ಪಶುಪ್ರಾಣಿಗಳನ್ನೆಲ್ಲಾ ಇಸ್ರಾಯೇಲರು ತಮಗೋಸ್ಕರ ಸುಲಿಗೆ ಮಾಡಿಕೊಂಡರು. ಖಡ್ಗದಿಂದ ಜನರನ್ನು ನಾಶಮಾಡಿದರು. ಒಬ್ಬರನ್ನೂ ಅವರು ಉಳಿಸಲಿಲ್ಲ.
15ಯೆಹೋವ ದೇವರು ತಮ್ಮ ಸೇವಕನಾದ ಮೋಶೆಗೆ ಹೇಗೆ ಆಜ್ಞಾಪಿಸಿದರೋ, ಹಾಗೆಯೇ ಮೋಶೆಯು ಯೆಹೋಶುವನಿಗೆ ಆಜ್ಞಾಪಿಸಿದನು. ಯೆಹೋಶುವನೂ ಹಾಗೆಯೇ ಮಾಡಿದನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದರಲ್ಲಿ ಯೆಹೋಶುವನು ಒಂದನ್ನೂ ಮೀರದೆ ಎಲ್ಲವನ್ನೂ ಮಾಡಿದನು.
16ಈ ಪ್ರಕಾರ ಗೋಷೆನ್ ಸೀಮೆ, ಅದರ ಕಣಿವೆ, ಬಯಲು ಪ್ರದೇಶ, ದಕ್ಷಿಣದ ಪ್ರದೇಶ, ಇಸ್ರಾಯೇಲ್ ಸೀಮೆಯ ಪರ್ವತ ಪ್ರಾಂತ, ಅದಕ್ಕೆ ಸೇರಿದ ಇಳಿಜಾರಿನ ಪ್ರದೇಶ ಇವುಗಳೆಲ್ಲಾ ಯೆಹೋಶುವನಿಗೆ ಸ್ವಾಧೀನವಾದವು.
17ಯೆಹೋಶುವನು ಸೇಯೀರಿಗೆ ಏರಿಹೋಗುವ ಹಾಲಾಕ್ ಬೆಟ್ಟ ಮೊದಲುಗೊಂಡು ಬಾಲ್ಗಾದಿನ ಮಟ್ಟಿಗೂ ಇರುವ ಲೆಬನೋನಿನ ಕಣಿವೆಯಲ್ಲಿ ಹೆರ್ಮೋನಿನ ಬೆಟ್ಟದ ಕೆಳಗಿರುವ ಎಲ್ಲಾ ದೇಶವನ್ನೂ ಬೆಟ್ಟಗಳನ್ನೂ ದಕ್ಷಿಣ ದೇಶವೆಲ್ಲವನ್ನೂ ತೆಗೆದುಕೊಂಡು ಅವುಗಳ ಅರಸುಗಳೆಲ್ಲರನ್ನೂ ಹಿಡಿದು ಅವರಿಗೆ ಮರಣದಂಡನೆ ವಿಧಿಸಿದನು.
18ಯೆಹೋಶುವನು ಬಹಳ ಕಾಲ ಈ ಅರಸುಗಳೆಲ್ಲರ ಸಂಗಡ ಯುದ್ಧ ಮಾಡುತ್ತಿದ್ದನು.
19ಗಿಬ್ಯೋನಿನ ನಿವಾಸಿಗಳಾದ ಹಿವ್ವಿಯರ ಹೊರತಾಗಿ ಇಸ್ರಾಯೇಲರ ಸಂಗಡ ಸಮಾಧಾನ ಮಾಡಿಕೊಂಡ ಬೇರೆ ಒಂದು ಪಟ್ಟಣವಾದರೂ ಇರಲಿಲ್ಲ. ಅವರು ಬೇರೆ ಎಲ್ಲವುಗಳನ್ನು ಯುದ್ಧಮಾಡಿ ತೆಗೆದುಕೊಂಡರು.
20ಏಕೆಂದರೆ ಅವರು ಇಸ್ರಾಯೇಲರಿಗೆ ಎದುರಾಗಿ ಯುದ್ಧಮಾಡಲು ಬರುವ ಹಾಗೆ ಅವರ ಹೃದಯವನ್ನು ಯೆಹೋವ ದೇವರು ಕಠಿಣಮಾಡಿದ್ದರು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆ ಇಸ್ರಾಯೇಲರು ಅವರಿಗೆ ದಯೆ ತೋರಿಸದೆ, ಅವರನ್ನು ಸಂಹರಿಸಿದರು.
21ಆ ಕಾಲದಲ್ಲಿ ಯೆಹೋಶುವನು ಬಂದು ಬೆಟ್ಟದ ದೇಶವಾದ ಹೆಬ್ರೋನಿನಲ್ಲಿಯೂ, ದೆಬೀರಿನಲ್ಲಿಯೂ, ಅನಾಬಿನಲ್ಲಿಯೂ, ಯೆಹೂದದ ಸಕಲ ಬೆಟ್ಟಗಳಲ್ಲಿಯೂ ಇಸ್ರಾಯೇಲ್ ಪ್ರಾಂತದ ಬೆಟ್ಟಗಳಲ್ಲಿಯೂ ಇದ್ದ ಅನಾಕ್ಯರನ್ನು ಕಡಿದುಬಿಟ್ಟು, ಅವರನ್ನೂ, ಅವರ ಪಟ್ಟಣಗಳನ್ನೂ ಪೂರ್ಣವಾಗಿ ನಾಶಮಾಡಿದನು.
22ಅನಾಕ್ಯರು ಇಸ್ರಾಯೇಲರ ದೇಶದಲ್ಲಿ ಒಬ್ಬರೂ ಉಳಿಯಲಿಲ್ಲ. ಗಾಜದಲ್ಲಿಯೂ, ಗತ್‌ನಲ್ಲಿಯೂ, ಅಷ್ಡೋದಿನಲ್ಲಿಯೂ ಮಾತ್ರ ಕೆಲವರು ಉಳಿದರು.
23ಹೀಗೆ ಯೆಹೋಶುವನು ದೇಶವನ್ನೆಲ್ಲಾ ಯೆಹೋವ ದೇವರು ಮೋಶೆಗೆ ಹೇಳಿದ ಪ್ರಕಾರವೇ ಸ್ವಾಧೀನಮಾಡಿಕೊಂಡನು. ಅದನ್ನು ಇಸ್ರಾಯೇಲರಿಗೆ ಅವರ ಗೋತ್ರಗಳ ಭಾಗಗಳಿಗನುಸಾರ ಬಾಧ್ಯತೆಯಾಗಿ ಕೊಟ್ಟನು. ಆಗ ದೇಶವು ಯುದ್ಧವಿಲ್ಲದೆ ವಿಶ್ರಮಿಸಿಕೊಂಡಿತು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.