Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಬ 6

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಅದಕ್ಕೆ ಯೋಬನು ಉತ್ತರವಾಗಿ ಹೀಗೆಂದನು:
2“ಅಯ್ಯೋ, ನನ್ನ ವ್ಯಥೆಯನ್ನು ತೂಕಮಾಡಿ ನೋಡಿದರೆ ಒಳ್ಳೇದು, ನನ್ನ ದುಃಖವನ್ನೆಲ್ಲಾ ತಕ್ಕಡಿಗೆ ಹಾಕಿದರೆ ಲೇಸು.
3ಏಕೆಂದರೆ ನನ್ನ ಕಷ್ಟ ಈಗಲೇ ಸಮುದ್ರದ ಮರಳಿಗಿಂತ ಭಾರವಾಗಿದೆ; ನನ್ನ ಮಾತುಗಳು ದುಡುಕಿದ್ದರಲ್ಲಿ ಆಶ್ಚರ್ಯವಿಲ್ಲ.
4ಸರ್ವಶಕ್ತರ ಬಾಣಗಳು ನನ್ನಲ್ಲಿ ನಾಟಿವೆ; ಅವುಗಳ ವಿಷವನ್ನು ನನ್ನ ಆತ್ಮವು ಹೀರುತ್ತಿದೆ; ದೇವರ ವಿಷಯವಾದ ಹೆದರಿಕೆಗಳು ನನ್ನನ್ನು ಸುತ್ತುವರೆದಿವೆ.
5ಹುಲ್ಲು ಇರುವಾಗ ಕಾಡುಕತ್ತೆಯು ಅರಚುವುದೋ? ಮೇವು ಇದ್ದರೆ ಎತ್ತು ಕೂಗುವುದೋ?
6ರುಚಿ ಇಲ್ಲದ ಆಹಾರನ್ನು ಉಪ್ಪಿಲ್ಲದೆ ತಿನ್ನಬಹುದೋ? ಕೋಳಿ ಮೊಟ್ಟೆಯ ಲೋಳೆಯಲ್ಲಿ ರುಚಿಯುಂಟೋ?
7ಮುಟ್ಟಲು ಕೂಡ ನನಗೆ ಇಷ್ಟವಾಗಲಿಲ್ಲ, ಅಂಥ ಆಹಾರವು ನನಗೆ ಬೇಸರ.
8“ದೇವರು ನನ್ನ ವಿಜ್ಞಾಪನೆಯನ್ನು ಲಾಲಿಸಿದರೆ ಸಾಕು, ನಾನು ನಿರೀಕ್ಷಿಸಿದ್ದನ್ನು ದೇವರು ಕೊಟ್ಟರೆ ಲೇಸು.
9ನನ್ನನ್ನು ಜಜ್ಜುವುದು ದೇವರಿಗೆ ಮೆಚ್ಚಿಗೆಯಾದರೆ, ದೇವರು ತಮ್ಮ ಕೈಚಾಚಿ ನನ್ನ ಪ್ರಾಣವನ್ನು ತೆಗೆದುಕೊಳ್ಳಲಿ.
10ಹಾಗಿದ್ದರೆ, ಇದು ನನಗೆ ಆದರಣೆಯಾಗಿರುವುದು; ಪರಿಶುದ್ಧ ದೇವರ ಮಾತುಗಳನ್ನು ನನ್ನ ಅತ್ಯಂತ ಯಾತನೆಯಲ್ಲಿಯೂ ನಾನು ನಿರಾಕರಿಸಲಿಲ್ಲ; ಇದರಿಂದ ಬರುವ ಆನಂದವು ನನಗೆ ಇನ್ನೂ ಇರುವುದು.
11“ನಾನು ನಿರೀಕ್ಷೆಯಿಂದಿರಲು, ನನಗೆ ಶಕ್ತಿ ಎಲ್ಲಿದೆ? ನಾನು ಸಹನೆಯಿಂದಿರಲು, ನನಗೆ ಭವಿಷ್ಯ ಏನಿದೆ?
12ನನ್ನ ಶಕ್ತಿ ಕಲ್ಲುಗಳ ಶಕ್ತಿಯೋ? ನನ್ನ ಶರೀರ ಕಂಚಿನ ಶರೀರವೋ?
13ನನಗೆ ಸಹಾಯವು ಇಲ್ಲದೆ ಹೋಗಿದೆಯಲ್ಲಾ? ಈಗ ಯಶಸ್ಸು ಸಹ ನನ್ನಿಂದ ತೊಲಗಿಹೋಗಿದೆಯಲ್ಲಾ.
14“ಒಬ್ಬನು ಸರ್ವಶಕ್ತರ ಮೇಲಣ ಭಯಭಕ್ತಿಯನ್ನು ಬಿಡುವವನಾಗಿದ್ದರೂ, ಅವನ ಮಿತ್ರನು ಅವನಿಗೆ ದಯೆ ತೋರಿಸಬೇಕು.
15ಆದರೆ ನನ್ನ ಸಹೋದರರಾದರೋ, ಉಕ್ಕಿ ಹರಿಯುವ ತೊರೆಯಂತೆಯೂ, ಬತ್ತಿದ ಹಳ್ಳದಂತೆಯೂ ಅಪನಂಬಿಗಸ್ತರಾಗಿದ್ದಾರೆ.
16ಅವು ಮಂಜುಗಡ್ಡೆಯಿಂದ ಕಪ್ಪಾಗಿವೆ, ಅವುಗಳಲ್ಲಿ ಹಿಮ ಅಡಗಿಕೊಳ್ಳುತ್ತದೆ.
17ಉಷ್ಣ ಸಮಯದಲ್ಲಿ ಅವು ಹರಿಯುವದಿಲ್ಲ; ಸೆಕೆಯಾದಾಗ ಬತ್ತಿ ಅದರ ಸ್ಥಳದಿಂದ ಮಾಯವಾಗುತ್ತವೆ.
18ಇಂಥಾ ತೊರೆಗಳ ಮಾರ್ಗವಾಗಿ ಪ್ರಯಾಣ ಮಾಡುವ ವರ್ತಕರ ಗುಂಪುಗಳು, ದಾರಿತಪ್ಪಿ ಮರಳುಗಾಡಿನಲ್ಲಿ ಅಲೆದು ನಾಶವಾಗುತ್ತವೆ.
19ತೇಮದ ವರ್ತಕರ ಗುಂಪುಗಳು ನೀರಿಗಾಗಿ ಹಂಬಲಿಸುತ್ತಾರೆ; ಶೆಬದ ವ್ಯಾಪಾರಿಗಳು ನಿರೀಕ್ಷೆಯಿಂದ ನೋಡುತ್ತಾರೆ.
20ಅವರು ನಿರೀಕ್ಷಿಸಿದ್ದರಿಂದ ವ್ಯಥೆಗೊಂಡರು; ಅವರು ಬಂದು ಸ್ಥಳಸೇರಿದರೂ ನಿರಾಶರಾದರು.
21ಈಗ ನೀವು ಸಹ ಹಾಗೆಯೇ ನಿಸ್ಸಹಾಯಕರಾಗಿ ಇದ್ದೀರಿ; ಏಕೆಂದರೆ ನೀವು ನನ್ನ ವಿಪತ್ತನ್ನು ಕಂಡು ಹಿಂಜರಿಯುತ್ತೀರಿ.
22ನಾನು ನಿಮ್ಮನ್ನು, ‘ನನಗೆ ದಾನಮಾಡಿರಿ,’ ಎಂದು ಬಿನ್ನವಿಸಿದೆನೋ? ‘ನಿಮ್ಮ ಆಸ್ತಿಯಿಂದ ನನಗಾಗಿ ಈಡು ಕೊಡಿರಿ,’ ಎಂದೆನೋ?
23‘ಶತ್ರುವಿನ ಕೈಯಿಂದ ನನ್ನನ್ನು ತಪ್ಪಿಸಿರಿ,’ ಎಂದೂ, ‘ಬಲಾತ್ಕಾರಿಗಳ ಕೈಗಳಿಂದ ನನ್ನನ್ನು ವಿಮೋಚಿಸಿರಿ,’ ಎಂದೂ ನಾನು ಕೇಳಿದೆನೋ?
24“ನನಗೆ ಬೋಧಿಸಿರಿ, ನಾನು ಮೌನವಾಗಿರುವೆನು; ನಾನು ಮಾಡಿದ ತಪ್ಪನ್ನು ನನಗೆ ತಿಳಿಸಿರಿ.
25ಯಥಾರ್ಥ ಮಾತುಗಳು ಎಷ್ಟೋ ನೋವನ್ನು ತರುತ್ತವೆ! ಆದರೆ ನಿಮ್ಮ ತರ್ಕವು ರುಜುಪಡಿಸುವುದೇನು?
26ನಾನು ಹೇಳಿದ ಮಾತುಗಳನ್ನು ತಿದ್ದಬೇಕೆನ್ನುವಿರೋ? ಬೇಸರದ ನನ್ನ ಮಾತುಗಳು ನಿಮಗೆ ಗಾಳಿಮಾತುಗಳೋ?
27ತಂದೆಯಿಲ್ಲದವರಿಗಾಗಿ ಚೀಟು ಹಾಕುತ್ತೀರಿ, ನಿಮ್ಮ ಸ್ನೇಹಿತನನ್ನು ಮಾರಿಬಿಡುತ್ತೀರಿ.
28“ಆದ್ದರಿಂದ ಈಗ ಸ್ವಲ್ಪ ದಯೆಯುಳ್ಳವರಾಗಿ ನನ್ನನ್ನು ದೃಷ್ಟಿಸಿರಿ; ನಾನು ನಿಮ್ಮೆದುರಿನಲ್ಲಿ ಸುಳ್ಳು ಹೇಳುವೆನೋ?
29ಕರುಣೆ ತೋರಿಸಿರಿ, ಅನ್ಯಾಯವಾಗದಿರಲಿ; ಪುನಃ ಯೋಚಿಸಿರಿ, ನನ್ನ ಪ್ರಾಮಾಣಿಕತೆಯು ಪ್ರಶ್ನಿಸಲಾಗಿದೆ.
30ನನ್ನ ನಾಲಿಗೆಯಲ್ಲಿ ದುಷ್ಟತನ ಇದೆಯೋ? ವಿಪತ್ತುಗಳ ವಿವೇಚನೆಯು ನನಗಿಲ್ಲವೋ?
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.