Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಬ 5

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1“ಈಗ ನೀನು ಕರೆದರೆ, ನಿನಗೆ ಉತ್ತರ ಕೊಡುವವರು ಇದ್ದಾರೋ? ಪರಿಶುದ್ಧರಲ್ಲಿ ಯಾರ ಕಡೆಗೆ ನೀನು ತಿರುಗಿಕೊಳ್ಳುವೆ?
2ಮೂಢನನ್ನು ಅಸಮಾಧಾನವು ಕೊಲ್ಲುವುದು; ಮುಗ್ಧನನ್ನು ಅಸುಹೆ ಸಾಯುವಂತೆ ಮಾಡುವುದು.
3ಮೂಢನು ಬೇರೂರುವುದನ್ನು ನಾನು ನೋಡಿದೆನು, ಕೂಡಲೇ ಅವನ ಮನೆ ಶಾಪಕ್ಕಿಡಾಗುವುದನ್ನು ಕಂಡೆನು.
4ಅವನ ಮಕ್ಕಳು ಭದ್ರತೆಯಿಲ್ಲದವರಾಗುವರು; ಬಿಡಿಸತಕ್ಕವರಿಲ್ಲದೆ ಅವರು ನ್ಯಾಯಸ್ಥಾನದಲ್ಲಿ ಸೋತುಹೋಗುವರು.
5ಹಸಿದವರು ಅವನ ಪೈರನ್ನು ತಿಂದುಬಿಡುವರು; ಮುಳ್ಳುಬೇಲಿ ಹಾಕಿದ್ದರೂ ಅದನ್ನು ತೆಗೆದುಕೊಳ್ಳುವರು; ಅವನ ಆಸ್ತಿಯನ್ನು ಬಾಯಾರಿಕೆಯಾದವರು ನುಂಗಿಬಿಡುವರು.
6ಮಣ್ಣಿನಿಂದ ಕಷ್ಟಗಳು ಹುಟ್ಟುವುದಿಲ್ಲ; ಭೂಮಿಯಿಂದ ತೊಂದರೆ ಮೊಳೆಯುವುದಿಲ್ಲ.
7ಆದರೂ ಕಿಡಿಗಳು ಹಾರುವ ಪ್ರಕಾರವೇ, ಮನುಷ್ಯನು ಶ್ರಮೆಹೊಂದಲು ಹುಟ್ಟುತ್ತಾನೆ.
8“ನಾನು ನೀನಾಗಿದ್ದರೆ ದೇವರಿಗೇ ಬೇಡಿಕೊಳ್ಳುತ್ತಿದ್ದೆ; ನನ್ನ ವಿಷಯವನ್ನು ದೇವರ ಮುಂದೆಯೇ ಇಡುತ್ತಿದ್ದೆ.
9ದೇವರು ಸಂಶೋಧನೆ ಮಾಡಲಾಗದಷ್ಟು ಮಹಾಕಾರ್ಯಗಳನ್ನೂ, ಅಸಂಖ್ಯವಾದ ಅದ್ಭುತ ಕೃತ್ಯಗಳನ್ನೂ ಮಾಡುತ್ತಾರೆ.
10ಭೂಮಿಯ ಮೇಲೆ ಮಳೆಯನ್ನು ಕೊಡುತ್ತಾರೆ; ಹೊಲಗಳ ಮೇಲೆ ನೀರನ್ನು ಸುರಿಸುತ್ತಾರೆ.
11ದೇವರು ತಗ್ಗಿದವರನ್ನು ಉನ್ನತದಲ್ಲಿಡುತ್ತಾರೆ; ದುಃಖವುಳ್ಳವರನ್ನು ಭದ್ರತೆಗೆ ಒಯ್ಯುತ್ತಾರೆ.
12ದೇವರು ವಂಚಕರ ಯೋಜನೆಗಳನ್ನು ಭಂಗಪಡಿಸುತ್ತಾರೆ. ಕುಯುಕ್ತಿಯುಳ್ಳವರ ಕೈಗಳು ಯಾವುದೇ ಯಶಸ್ಸನ್ನು ಸಾಧಿಸದಂತೆ ಮಾಡುತ್ತಾರೆ.
13ದೇವರು ಜ್ಞಾನಿಗಳನ್ನು ಅವರ ಯುಕ್ತಿಯಲ್ಲಿಯೇ ಹಿಡಿಯುತ್ತಾರೆ, ಮತ್ತು ಕುತಂತ್ರಿಯ ಯೋಜನೆಗಳನ್ನು ನಿರರ್ಥಕಮಾಡುತ್ತಾರೆ.
14ಕುತಂತ್ರರು ಹಗಲಿನಲ್ಲಿಯೇ ಕತ್ತಲೆಯನ್ನು ಸಂಧಿಸುತ್ತಾರೆ; ಮಧ್ಯಾಹ್ನದಲ್ಲಿ ರಾತ್ರಿಯಂತೆ ತಡಕಾಡುತ್ತಾರೆ.
15ದೇವರು ದಿಕ್ಕಿಲ್ಲದವರನ್ನು ದಬ್ಬಾಳಿಕೆಮಾಡುವವರ ಬಾಯಿಯೆಂಬ ಖಡ್ಗದಿಂದಲೂ, ಬಲಿಷ್ಠರ ಕೈಯೊಳಗಿಂದಲೂ ರಕ್ಷಿಸುತ್ತಾರೆ.
16ಆದ್ದರಿಂದ ಬಡವರಿಗೆ ನಿರೀಕ್ಷೆಯುಂಟಾಗುವುದು; ಅನ್ಯಾಯವು ತನ್ನ ಬಾಯಿ ಮುಚ್ಚಿಕೊಳ್ಳುವುದು.
17“ಇಗೋ, ದೇವರು ಗದರಿಸುವ ಮನುಷ್ಯನು ಧನ್ಯನು; ಸರ್ವಶಕ್ತರ ಶಿಕ್ಷೆಯನ್ನು ತಿರಸ್ಕರಿಸಬೇಡ.
18ಗಾಯ ಮಾಡುವವರೂ ಗಾಯ ಕಟ್ಟುವವರೂ ದೇವರೇ; ಹೊಡೆಯುವುದೂ ಗುಣಪಡಿಸುವುದೂ ದೇವರ ಕೈಯೇ.
19ದೇವರು ಆರು ಇಕ್ಕಟ್ಟುಗಳಿಂದ ನಿನ್ನನ್ನು ತಪ್ಪಿಸುವರು; ಹೌದು, ಏಳರಲ್ಲಿಯೂ ಕೇಡು ನಿನ್ನನ್ನು ಮುಟ್ಟದು.
20ಬರದಲ್ಲಿ ನಿನ್ನನ್ನು ಮರಣದೊಳಗಿಂದಲೂ, ಯುದ್ಧದಲ್ಲಿ ಖಡ್ಗದ ಬಲದಿಂದಲೂ ದೇವರು ವಿಮೋಚಿಸುವರು.
21ನೀನು ನಾಲಿಗೆಯೆಂಬ ಚಾಟಿಹೊಡೆತಕ್ಕೆ ಮರೆಯಾಗಿರುವೆ; ನಾಶ ಬಂದಾಗ ನೀನು ಭಯಪಡುವುದಿಲ್ಲ.
22ನೀನು ನಾಶಕ್ಕೂ, ಕ್ಷಾಮಕ್ಕೂ ನಗುವೆ; ಕಾಡುಮೃಗಗಳಿಗೂ ನೀನು ಭಯಪಡುವುದಿಲ್ಲ.
23ಹೊಲದ ಕಲ್ಲುಗಳ ಸಂಗಡ ನಿನಗೆ ಒಪ್ಪಂದ ಇರುವುದು; ಕಾಡು ಮೃಗಗಳೂ ನಿನ್ನೊಂದಿಗೆ ಸಮಾಧಾನವಾಗಿರುವವು.
24ನಿನ್ನ ಗುಡಾರವು ಕ್ಷೇಮವಾಗಿದೆ ಎಂದು ನೀನು ತಿಳಿದುಕೊಳ್ಳುವೆ, ನಿನ್ನ ಆಸ್ತಿಯನ್ನು ನೀನು ಪರೀಕ್ಷಿಸುವಾಗ ಏನೂ ಕಡಿಮೆಯಾಗಿರುವುದಿಲ್ಲ.
25ನಿನ್ನ ಸಂತತಿಯು ಬಹಳವಾಗಿದೆ ಎಂದೂ, ನಿನ್ನ ಸಂತಾನವು ಭೂಮಿಯ ಹುಲ್ಲಿನಂತಿದೆ ಎಂದೂ ತಿಳಿದುಕೊಳ್ಳುವೆ.
26ಸಿವುಡು ತನ್ನ ಕಾಲದಲ್ಲಿ ಮನೆಗೆ ಸೇರುವಂತೆ ನೀನು ಪೂರ್ಣ ಪ್ರಾಯದವನಾಗಿ ಸಮಾಧಿ ಸೇರುವೆ.
27“ಇದನ್ನು ನಾವು ಪರಿಶೋಧಿಸಿದ್ದೇವೆ; ಇದು ಸತ್ಯವಾದದ್ದು, ಇದನ್ನು ನೀನು ಕೇಳಿ ತಿಳಿದುಕೋ, ಇದನ್ನು ನೀನು ಅನ್ವಯಿಸು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.