Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಬ 37

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1“ಇದನ್ನು ನೋಡಿದಾಗ ನನ್ನ ಹೃದಯವು ನಡುಗಿ, ಅದರ ಸ್ಥಳದಿಂದ ಜಿಗಿಯುವಂತಾಗುತ್ತದೆ.
2ದೇವರ ಧ್ವನಿಯ ಘರ್ಜನೆಯನ್ನು ಕೇಳಿರಿ. ದೇವರ ಬಾಯಿಂದ ಹೊರಡುವ ಮಾತನ್ನು ಲಕ್ಷ್ಯಕೊಟ್ಟು ಆಲಿಸಿರಿ.
3ತಮ್ಮ ಮಿಂಚನ್ನು ದೇವರು ಆಕಾಶಮಂಡಲದಲ್ಲಿ ಹರಡುತ್ತಾರೆ; ಅದನ್ನು ಭೂಮಿಯ ಅಂಚುಗಳವರೆಗೆ ಕಳುಹಿಸುತ್ತಾರೆ.
4ಮಿಂಚಿನ ತರುವಾಯ ಘರ್ಜನೆಯ ಶಬ್ದ ಕೇಳಿಬರುವುದು; ದೇವರು ಮಹತ್ತಿನ ಶಬ್ದದಿಂದ ಗುಡುಗುತ್ತಾರೆ; ದೇವರ ಸ್ವರ ಕೇಳುವಾಗ ಅದನ್ನು ತಡೆಯಲಾಗದು.
5ದೇವರು ತಮ್ಮ ಸ್ವರದಿಂದ ಅದ್ಭುತಕಾರ್ಯಗಳನ್ನು ಗುಡುಗುತ್ತಾರೆ; ನಾವು ಗ್ರಹಿಸಲಾಗದ ಮಹಾತ್ಕಾರ್ಯಗಳನ್ನು ದೇವರು ಮಾಡುತ್ತಾರೆ.
6ದೇವರು ಹಿಮಕ್ಕೆ, ‘ಹದವಾಗಿ ಭೂಮಿಗೆ ಬೀಳು’ ಎಂದು ಹೇಳುತ್ತಾರೆ. ಮಳೆಗೆ, ‘ಭೂಮಿಯ ಮೇಲೆ ರಭಸದಿಂದ ಸುರಿ’ ಎಂದು ಆಜ್ಞಾಪಿಸುತ್ತಾರೆ.
7ಹೀಗೆ ದೇವರು ತಮ್ಮ ಕೃತ್ಯವನ್ನು ಜನರೆಲ್ಲರೂ ತಿಳುಕೊಳ್ಳುವಂತೆ ಮಾಡುತ್ತಾರೆ. ಸ್ವಲ್ಪಕಾಲ ಮನುಷ್ಯರ ದುಡಿಮೆಯನ್ನು ನಿಲ್ಲಿಸುತ್ತಾರೆ.
8ಆಗ ಮೃಗಗಳು ಅಡಗುವ ಸ್ಥಳಕ್ಕೆ ಹೋಗುತ್ತವೆ, ತಮ್ಮ ಗುಹೆಗಳಲ್ಲಿ ಉಳಿಯುತ್ತವೆ.
9ದಕ್ಷಿಣದಿಕ್ಕಿನಿಂದ ಬಿರುಗಾಳಿಯು ಬೀಸುತ್ತದೆ. ಉತ್ತರದಿಂದ ಚಳಿಯೂ ಬರುತ್ತದೆ.
10ದೇವರ ಶ್ವಾಸದಿಂದ ನೀರು ಮಂಜುಗಡ್ಡೆ ಆಗುವುದು; ವಿಶಾಲ ಸಮುದ್ರದ ನೀರು ಗಟ್ಟಿಯಾಗುವುದು.
11ಮೋಡವನ್ನು ತೇವಾಂಶದಿಂದ ಭಾರಮಾಡುತ್ತಾರೆ; ಮೇಘಮಂಡಲವು ದೇವರ ಮಿಂಚನ್ನು ಚದರಿಸುತ್ತದೆ.
12ಭೂಲೋಕದಲ್ಲೆಲ್ಲಾ ಸಿಡಿಲುಗಳಿಗೆ ದೇವರು ಆಜ್ಞಾಪಿಸಲು, ಎಲ್ಲಾ ಕೆಲಸವನ್ನು ಮಾಡುವಂತೆ ಅವು ತಿರುಗುತ್ತವೆ.
13ಜನರ ಶಿಕ್ಷಣಕ್ಕಾಗಿಯೂ, ಭೂಮಿಯ ಹಿತಕ್ಕಾಗಿಯೂ ದೇವರು ತಮ್ಮ ಪ್ರೀತಿಯನ್ನು ತೋರಿಸಲು, ಮೇಘಗಳನ್ನು ಬರಮಾಡುತ್ತಾರೆ.
14“ಆದ್ದರಿಂದ ಯೋಬನೇ, ಇದಕ್ಕೆ ಕಿವಿಗೊಡು; ಮೌನವಾಗಿ ನಿಂತು ದೇವರ ಅದ್ಭುತಗಳನ್ನು ಧ್ಯಾನಿಸು.
15ದೇವರು ಮೋಡಗಳಿಗೆ ಅಪ್ಪಣೆ ಕೊಡುವುದನ್ನು ಅರಿತಿರುವೆಯಾ? ದೇವರ ಮೇಘದ ಸಿಡಿಲು ಹೊಳೆಯುವುದನ್ನೂ ನೀನು ತಿಳಿದಿರುವೆಯಾ?
16ಮೋಡಗಳ ತೂಗಾಟವನ್ನು ಬಲ್ಲೆಯಾ? ಜ್ಞಾನಪೂರ್ಣರಾದ ದೇವರ ಅದ್ಭುತಗಳನ್ನೂ ತಿಳಿದುಕೊಂಡಿರುವೆಯಾ?
17ಭೂಮಿಯು ದಕ್ಷಿಣ ಗಾಳಿಯಿಂದ ಸ್ತಬ್ಧವಾಗಿರುವಾಗ, ನಿನ್ನ ವಸ್ತ್ರ ಹೇಗೆ ಬಿಸಿಯಾಗಿರುತ್ತವೆ?
18ಎರಕ ಹೊಯ್ದ ಬಲವಾಗಿರುವ ಕನ್ನಡಿಯ ಹಾಗೆ, ನೀನು ದೇವರ ಸಂಗಡ ಸೇರಿಕೊಂಡು ಆಕಾಶಮಂಡಲವನ್ನು ವಿಸ್ತರಿಸಬಲ್ಲೆಯಾ?
19“ನಾವು ದೇವರಿಗೆ ಏನು ಹೇಳಬೇಕೆಂದು ನಮಗೆ ತಿಳಿಸು; ನಮ್ಮ ಅಂಧಕಾರದಿಂದ ನಾವು ಏನೂ ವಾದಿಸಲು ಸಾಧ್ಯವಿಲ್ಲ.
20ನಾನು ಮಾತನಾಡಬೇಕೆಂದು ದೇವರಿಗೆ ಹೇಳಿಕಳುಹಿಸಬೇಕೆ? ಹಾಗೆ ಮನುಷ್ಯನು ಮಾತನಾಡಿದರೆ, ನಿಜವಾಗಿಯೂ ಬದುಕಿರಲು ಸಾಧ್ಯವೇ?
21ಗಾಳಿ ಬೀಸಿ ಆಕಾಶ ಶುಭ್ರವಾದಾಗ, ಪ್ರಜ್ವಲಿಸುವ ಸೂರ್ಯನನ್ನು ದೃಷ್ಟಿಸಲಾಗದು ಹೌದು, ಯಾರೂ ದಿಟ್ಟಿಸಿ ನೋಡಲಾರರು.
22ಉತ್ತರದಿಂದ ಹೊನ್ನಿನ ಹೊಳಪು ಬರುತ್ತದೆ; ಅದರಂತೆಯೇ ದೇವರ ವಿಸ್ಮಯ ತೇಜಸ್ಸಿನಿಂದ ಬರುತ್ತಾರೆ.
23ಇಂಥಾ ಸರ್ವಶಕ್ತರನ್ನು ನಾವು ಕಂಡುಹಿಡಿಯಲಾಗದು; ದೇವರು ಶಕ್ತಿಯಲ್ಲಿ ಉನ್ನತರಾಗಿದ್ದಾರೆ; ನ್ಯಾಯತೀರ್ಪಿನಲ್ಲಿಯೂ, ಮಹಾ ನೀತಿಯಲ್ಲಿಯೂ ದೇವರು ದಬ್ಬಾಳಿಕೆ ನಡೆಸುವವರಲ್ಲ.
24ಆದ್ದರಿಂದ ಮನುಷ್ಯರು ದೇವರಿಗೆ ಭಯಪಡುತ್ತಾರೆ; ಆದರೆ ತಾವೇ ಜ್ಞಾನಿಗಳೆಂದು ತಿಳಿದಿರುವವರು ದೇವರು ಲಕ್ಷಿಸುವುದಿಲ್ಲ.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.