Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಬ 36

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಎಲೀಹು ಮುಂದುವರಿದು ಹೇಳಿದ್ದೇನೆಂದರೆ:
2“ನನ್ನನ್ನು ಸ್ವಲ್ಪ ತಾಳಿಕೋ, ನಾನು ನಿನಗೆ ತೋರಿಸಿಕೊಡುತ್ತೇನೆ. ಏಕೆಂದರೆ ದೇವರ ಪರವಾಗಿ ಇನ್ನೂ ಹೇಳತಕ್ಕ ಮಾತುಗಳು ಇವೆ.
3ನಾನು ನನ್ನ ತಿಳುವಳಿಕೆಯನ್ನು ದೂರದಿಂದ ಪಡೆದುಕೊಳ್ಳುತ್ತೇನೆ. ನನ್ನ ಸೃಷ್ಟಿಕರ್ತ ನ್ಯಾಯವಂತರು ಎಂದು ನಿರೂಪಿಸುವೆನು.
4ನಿಜವಾಗಿ ನನ್ನ ಮಾತುಗಳು ಸುಳ್ಳಲ್ಲ; ತಿಳುವಳಿಕೆಯಲ್ಲಿ ಸಂಪೂರ್ಣನಾದ ಒಬ್ಬನಾಗಿ ನಾನು ನಿನ್ನ ಬಳಿಯಲ್ಲಿಯೇ ಇದ್ದೇನೆ.
5“ನೋಡು, ದೇವರು ಸರ್ವಶಕ್ತರು, ಆದರೂ ಯಾರನ್ನೂ ತಿರಸ್ಕಾರ ಮಾಡುವುದಿಲ್ಲ. ಶಕ್ತಿವಂತರಾದ ದೇವರು ತಮ್ಮ ಉದ್ದೇಶದಲ್ಲಿ ದೃಢವಾಗಿದ್ದಾರೆ.
6ದುಷ್ಟರು ಬಹುಕಾಲ ಬಾಳಲು ದೇವರು ಅನುಮತಿಸುವುದಿಲ್ಲ; ಆದರೆ ದೇವರು ಬಾಧೆಪಡುವವರಿಗೆ ಅವರ ಹಕ್ಕುಗಳನ್ನು ಕೊಡುತ್ತಾರೆ.
7ದೇವರು ನೀತಿವಂತರಿಂದ ತಮ್ಮ ಕಣ್ಣುಗಳನ್ನು ತೊಲಗಿಸುವುದಿಲ್ಲ; ದೇವರು ನೀತಿವಂತರನ್ನು ಅರಸುಗಳ ಸಂಗಡ ಸಿಂಹಾಸನದಲ್ಲಿ ಕುಳ್ಳಿರಿಸುವರು; ಹೌದು, ದೇವರು ಅವರನ್ನು ಎಂದೆಂದಿಗೂ ಉನ್ನತಕ್ಕೇರಿಸುವರು.
8ಒಂದು ವೇಳೆ ಜನರು ಸಂಕಟದ ಸಂಕೋಲೆಗಳಿಂದ ಬಂಧಿತರಾಗಿ, ಬಾಧೆಯ ಹಗ್ಗಗಳಿಂದ ಹಿಡಿಯಲಾಗಿದ್ದರೆ,
9ದೇವರು ಅವರ ಕೃತ್ಯವನ್ನೂ ಸೊಕ್ಕಿನ ದ್ರೋಹಗಳನ್ನೂ ಅವರಿಗೆ ಹೇಳುವರು.
10ದೇವರು ಅವರ ಕಿವಿಯನ್ನು ತಿದ್ದುವಿಕೆಗಾಗಿ ತೆರೆದು, ಜನರು ದುಷ್ಟತನವನ್ನು ಬಿಟ್ಟು ತಿರುಗಿಕೊಳ್ಳುವಂತೆ ಅವರಿಗೆ ಆಜ್ಞಾಪಿಸುವರು.
11ಒಂದು ವೇಳೆ, ಜನರು ವಿಧೇಯರಾಗಿ ದೇವರನ್ನು ಸೇವಿಸಿದರೆ, ತಮ್ಮ ದಿವಸಗಳನ್ನು ಅಭಿವೃದ್ಧಿಯಲ್ಲಿ ಕಳೆಯುವರು. ತಮ್ಮ ವರ್ಷಗಳನ್ನು ಸಂತೃಪ್ತಿಯಲ್ಲಿಯೂ ಪೂರೈಸುವರು.
12ಅವರು ವಿಧೇಯರಾಗದಿದ್ದರೆ, ಸಂಕಟದ ಸಾಗರದಲ್ಲಿ ಸಾಗಿಹೋಗುವರು; ತಿಳುವಳಿಕೆಯಿಲ್ಲದ ಬಾಳನ್ನು ಬಾಳುವರು.
13“ಹೃದಯದಲ್ಲಿ ಭಕ್ತಿಹೀನರಾಗಿರುವವರು ಕೋಪವನ್ನು ಕೂಡಿಸುವರು; ದೇವರು ಅವರನ್ನು ಬಂಧಿಸಿದರೂ, ಅವರು ದೇವರಿಗೆ ಮೊರೆ ಇಡುವುದಿಲ್ಲ.
14ಅವರು ತಮ್ಮ ಯೌವನದಲ್ಲಿ, ಪುರುಷಗಾಮಿಗಳ ಮಂದಿರದಲ್ಲಿ ಗತಿಸಿಹೋಗುವರು.
15ಶ್ರಮೆ ಪಡುವವರನ್ನು ದೇವರು ಅವರ ಶ್ರಮೆಯ ಮೂಲಕವೇ ಬಿಡುಗಡೆ ಮಾಡುವರು; ದೇವರು ಅವರ ಹಿಂಸೆಯ ಮೂಲಕವೇ ಅವರೊಂದಿಗೆ ಮಾತನಾಡುವರು.
16“ದೇವರು ನಿನ್ನನ್ನು ಇಕ್ಕಟ್ಟಿನೊಳಗಿಂದ ಬಿಡಿಸುವರು; ಇಕ್ಕಟ್ಟಿಲ್ಲದ ವಿಶಾಲ ಸ್ಥಳವು ನಿನಗೆ ದೊರೆಯುವುದು; ನಿನ್ನ ಆದರಣೆಗಾಗಿ ನಿನ್ನ ಮೇಜು ಉತ್ತಮ ಆಹಾರಗಳಿಂದ ತುಂಬಿರುವುದು.
17ಆದರೆ ಈಗ ನೀನು ದುಷ್ಟರಿಗೆ ಬರಬೇಕಾದ ತೀರ್ಪಿನಿಂದ ತುಂಬಿರುವೆ. ನ್ಯಾಯವಿಚಾರಣೆಯೂ, ತೀರ್ಪೂ ನಿನ್ನನ್ನು ಹಿಡಿದಿರುತ್ತವೆ.
18ಯಾರೂ ನಿನ್ನನ್ನು ಸಂಪತ್ತಿನಿಂದ ಆಕರ್ಷಿಸದಂತೆ ಜಾಗರೂಕನಾಗಿರು; ದೊಡ್ಡ ಲಂಚತನವು ನಿನ್ನನ್ನು ವಂಚಿಸಬಾರದು.
19ನಿನ್ನ ಐಶ್ವರ್ಯವೂ, ಶಕ್ತಿಸಾಮರ್ಥ್ಯವೂ ಕಷ್ಟಾನುಭವವಿಲ್ಲದೆ ಸಾಗಿಸಲು ಸಾಧ್ಯವೇ?
20ಜನರನ್ನು ಅವರ ಮನೆಗಳಿಂದ ಎಳೆದುಕೊಂಡು ಹೋಗುವುದಕ್ಕೆ ರಾತ್ರಿಯನ್ನು ಬಯಸಬೇಡ.
21ಅಕ್ರಮದ ಕರೆಗೆ ಕಾಲಿಡಬೇಡ, ಎಚ್ಚರಿಕೆ! ನೀನು ಕಷ್ಟಕ್ಕಿಂತಲೂ ಕೇಡನ್ನು ಆರಿಸಿಕೊಂಡಿದ್ದೀ.
22“ದೇವರು ತಮ್ಮ ಶಕ್ತಿಯಲ್ಲಿ ಉನ್ನತರಾಗಿದ್ದಾರೆ. ದೇವರಂಥ ಬೋಧಕರು ಯಾರಿದ್ದಾರೆ?
23ದೇವರ ಮಾರ್ಗವನ್ನು ದೇವರಿಗೆ ನೇಮಿಸಿದವರ‍್ಯಾರು? ‘ನೀವು ಮಾಡಿರುವುದು ಅನ್ಯಾಯ,’ ಎಂದು ದೇವರಿಗೆ ಹೇಳುವವರು ಯಾರು?
24ಮನುಷ್ಯರು ಹೊಗಳಿ ಹಾಡುವ ಹಾಡುಗಳಿಂದ, ದೇವರ ಕೃತ್ಯಗಳನ್ನು ಉನ್ನತಪಡಿಸಲು ನೆನಸಿಕೋ.
25ಎಲ್ಲಾ ಮನುಷ್ಯರು ದೇವರ ಕೃತ್ಯಗಳನ್ನು ಕಂಡಿದ್ದಾರೆ; ಹೌದು, ಮನುಷ್ಯರು ದೂರದಿಂದ ನೋಡುತ್ತಾರೆ.
26ದೇವರು ಮಹೋನ್ನತರು; ದೇವರು ನಮ್ಮ ಅರಿವಿಗೆ ನಿಲುಕರು. ದೇವರ ವರ್ಷಗಳು ಅಸಂಖ್ಯಾತವಾಗಿವೆ.
27“ದೇವರು ನೀರಿನ ಹನಿಗಳನ್ನು ಕೂಡಿಸಿದಾಗ, ಮಂಜಿನಿಂದ ತಿಳಿಮಳೆ ಸುರಿಯುತ್ತವೆ.
28ಮೋಡಗಳು ಮಳೆಗರೆಯುತ್ತವೆ. ಮನುಷ್ಯರ ಮೇಲೆ ಸಮೃದ್ಧಿಯಾಗಿ ಚಿಮುಕಿಸುತ್ತವೆ.
29ಮೋಡಗಳ ವಿಸ್ತೀರ್ಣತೆಯನ್ನೂ, ದೇವರ ಗುಡಾರದಿಂದ ಗುಡುಗುವುದನ್ನೂ ಗ್ರಹಿಸಿಕೊಳ್ಳುವವರು ಯಾರು?
30ಇಗೋ, ದೇವರು ಮಿಂಚನ್ನು ತಮ್ಮ ಸುತ್ತಲು ಚದರಿಸುತ್ತಾರೆ. ಸಮುದ್ರದ ಆಳವನ್ನು ಸಹ ಆವರಿಸುತ್ತಾರೆ.
31ಈ ರೀತಿಯಾಗಿ ದೇವರು ದೇಶಗಳನ್ನು ಆಳುತ್ತಾರೆ ಸಮೃದ್ಧಿಯಾಗಿ ದೇವರು ಆಹಾರ ಕೊಡುತ್ತಾರೆ.
32ದೇವರು ತಮ್ಮ ಕೈಯಲ್ಲಿ ಮಿಂಚನ್ನು ಹಿಡಿದುಕೊಂಡು, ಅದನ್ನು ಗುರಿಮುಟ್ಟುವಂತೆ ಆಜ್ಞಾಪಿಸುತ್ತಾರೆ.
33ಬಿರುಗಾಳಿಯು ಬರುತ್ತಿದೆ ಎಂದು ದೇವರ ಸಿಡಿಲು ತಿಳಿಸುತ್ತದೆ; ದನಕರುಗಳು ಸಹ ದೇವರ ಆಗಮನವನ್ನು ತಿಳಿಸುತ್ತವೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.