Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಬ 30

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1“ಆದರೆ ಈ ದಿವಸಗಳಲ್ಲಿ ನನಗಿಂತ ಚಿಕ್ಕವರು, ನನ್ನನ್ನು ನೋಡಿ ಪರಿಹಾಸ್ಯ ಮಾಡುತ್ತಾರೆ. ಇವರ ಪಿತೃಗಳನ್ನು ನನ್ನ ಕುರಿಮಂದೆಯ ನಾಯಿಗಳೊಡನೆ ಇರಲೂ ಅಯೋಗ್ಯರು ಎಂದೆಣಿಸಿದ್ದೆನು.
2ಇವರ ಕೈಗಳ ಬಲದಿಂದ ನನಗೇನಾಗುತ್ತಿತ್ತು? ಆಗ ಅವರ ಚೈತನ್ಯವು ಕುಗ್ಗಿಹೋಗಿತ್ತು!
3ಅವರು ಬಡತನದಿಂದಲೂ ಹಸಿವಿನಿಂದಲೂ ಬಳಲಿಹೋಗಿದ್ದರು. ನಿರ್ಜನ ಮತ್ತು ಕತ್ತಲೆಯಾದ ಮರುಭೂಮಿಗಳ ಕಡೆಗೆ ಆಹಾರಕ್ಕಾಗಿ ಓಡಾಡುತ್ತಿದ್ದರು.
4ಪೊದೆಗಳಲ್ಲಿನ ಉಪ್ಪಿನ ಸೊಪ್ಪು ಸಂಗ್ರಹಿಸುತ್ತಿದ್ದರು. ಜಾಲಿಯ ಬೇರುಗಳೇ ಅವರ ಆಹಾರವಾಗಿತ್ತು.
5ಜನರು ಅವರನ್ನು ಹೊರಗೆ ಹಾಕುತ್ತಿದ್ದರು; ಕಳ್ಳರು ಎಂಬಂತೆ ಅವರನ್ನು ಓಡಿಸುತ್ತಿದ್ದರು.
6ಆಗ ಅವರು ಭಯಂಕರ ತಗ್ಗುಗಳ ಸಂದುಗಳಲ್ಲಿಯೂ, ಗುಹೆಗಳಲ್ಲಿಯೂ ಬಂಡೆಗಳಲ್ಲಿಯೂ ವಾಸಿಸುತ್ತಿದ್ದರು.
7ಪೊದೆಗಳ ನಡುವೆ ಇದ್ದುಕೊಂಡು ಅರಚುತ್ತಿದ್ದರು. ಮುಳ್ಳುಗಿಡಗಳ ಕೆಳಗೆ ಕೂಡಿಕೊಳ್ಳುತ್ತಿದ್ದರು.
8ಆಗ ಅವರು ಹುಚ್ಚರಂತೆಯೂ ಹೆಸರಿಲ್ಲದ ಮಕ್ಕಳಂತೆಯೂ ನಾಡಿನಿಂದ ಹೊರಗೆ ಅಲೆದಾಡುತ್ತಿದ್ದರು.
9“ಆದರೆ ಈಗ ನಾನು ಅವರ ಹಾಸ್ಯದ ಹಾಡೂ, ಅವರಿಗೆ ಗಾದೆಯೂ ಆಗಿದ್ದೇನೆ.
10ಈಗ ನನ್ನನ್ನು ಕಂಡು ಅಸಹ್ಯಪಟ್ಟು, ನನ್ನಿಂದ ದೂರಸರಿಯುತ್ತಿದ್ದಾರೆ. ನನ್ನ ಮುಖದ ಮೇಲೆ ಉಗುಳಲೂ ಹಿಂಜರಿಯುವದಿಲ್ಲ.
11ಏಕೆಂದರೆ, ದೇವರು ನನ್ನ ಬಿಲ್ಲಿನ ಹಗ್ಗವನ್ನು ಸಡಲಿಸಿ, ಅವರಿಂದ ನನ್ನನ್ನು ಬಾಧಿಸಿದ್ದಾರೆ. ಆದ್ದರಿಂದ ಈಗ ಅವರು ಯಾವುದೇ ನಿರ್ಬಂಧವಿಲ್ಲದಂತೆ ನನ್ನ ಮೇಲೆ ಹೀಗೆಲ್ಲಾ ವರ್ತಿಸುತ್ತಿದ್ದಾರೆ.
12ಬಲಗಡೆಯಲ್ಲಿ ಯುವಕರು ಎದ್ದಿದ್ದಾರೆ; ಅವರು ನನ್ನ ಕಾಲುಗಳಿಗೆ ಬಲೆ ಹಾಕಿದ್ದಾರೆ. ನನ್ನನ್ನು ನಾಶಮಾಡಲು ತಮ್ಮ ಹಾದಿಗಳನ್ನು ನನಗೆ ವಿರೋಧವಾಗಿ ಕಟ್ಟುತ್ತಿದ್ದಾರೆ.
13ನನ್ನ ದಾರಿಯನ್ನೂ ಕಡಿದುಹಾಕಿದ್ದಾರೆ; ಅವರು ನನ್ನನ್ನು ನಾಶಮಾಡಲು ಯಶಸ್ವಿಯಾಗುತ್ತಿದ್ದಾರೆ; ‘ಅವನಿಗೆ ಸಹಾಯಕನಿಲ್ಲ,’ ಎಂದು ಹೇಳುತ್ತಿದ್ದಾರೆ.
14ಆ ಯುವಕರು ಅಗಲವಾದ ಬಿರುಕಿನಲ್ಲಿ ನೀರು ಬರುವಂತೆ ಬರುತ್ತಿದ್ದಾರೆ; ನಾಶನದಲ್ಲಿರುವ ನನ್ನ ಮೇಲೆ ಅವರು ಉರುಳಿಬೀಳಲಿದ್ದಾರೆ.
15ವಿಪತ್ತುಗಳು ನನ್ನ ಮೇಲೆ ತಿರುಗಿಬಿದ್ದು, ನನ್ನ ಮಾನಮರ್ಯಾದೆ ಗಾಳಿಯಂತೆ ಹೊಡೆದುಕೊಂಡು ಹೋಗುತ್ತಿದೆ; ನನ್ನ ಕ್ಷೇಮವು ಮೇಘದ ಹಾಗೆ ಹರಿದು ಹೋಗುತ್ತಿದೆ.
16“ಆದರೆ ಈಗ ನನ್ನ ಪ್ರಾಣವು ನನ್ನಲ್ಲಿಯೇ ಕರಗಿಹೋಗಿದೆ; ಸಂಕಟದ ದಿವಸಗಳು ನನ್ನನ್ನು ಬಿಗಿಹಿಡಿದಿವೆ.
17ರಾತ್ರಿಯಲ್ಲಿ ನನ್ನ ಎಲುಬುಗಳು ನನ್ನಲ್ಲಿ ಕೊರೆಯುತ್ತಿವೆ; ನನ್ನ ಸಂಕಟಗಳು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ.
18ದೇವರ ಅಧಿಕ ಬಲದಲ್ಲಿ ನನ್ನ ಬಟ್ಟೆಯು ರೋಗದಿಂದ ಬಿಗಿಯಾಗಿ, ಅಂಗಿಯ ಕೊರಳ ಪಟ್ಟಿಯಂತೆ ನನ್ನನ್ನು ಸುತ್ತಿಕೊಂಡಿದೆ.
19ದೇವರು ನನ್ನನ್ನು ಕೆಸರಿನಲ್ಲಿ ಕೆಡವಿದ್ದಾರೆ; ನಾನು ಧೂಳಿಗೂ ಬೂದಿಗೂ ಸಮಾನನಾಗಿದ್ದೇನೆ.
20“ದೇವರೇ, ನಿಮಗೆ ಮೊರೆಯಿಡುತ್ತೇನೆ ಆದರೆ ನೀವು ನನಗೆ ಉತ್ತರ ಕೊಡುವುದಿಲ್ಲ, ನಾನು ಎದ್ದುನಿಂತರೂ ನನ್ನನ್ನು ಸುಮ್ಮನೆ ನೋಡುತ್ತಿರುವಿರಿ.
21ನೀವು ನನಗೆ ಕ್ರೂರರಾಗಿದ್ದೀರಿ, ನಿಮ್ಮ ಹಸ್ತ ಶಕ್ತಿಯಿಂದ ನನಗೆ ಹಿಂಸೆಕೊಡುತ್ತೀರಿ.
22ನನ್ನನ್ನು ಗಾಳಿಗೆ ಎತ್ತಿ ತೂರಿಬಿಟ್ಟಿರುವಿರಿ, ನನ್ನನ್ನು ಬಿರುಗಾಳಿಗೆ ತೊಳಲಾಡುವಂತೆ ಮಾಡಿದ್ದೀರಿ.
23ದೇವರೇ, ನೀವು ನನ್ನನ್ನು ಎಲ್ಲಾ ಜೀವಿಗಳಿಗೆ ನೇಮಕವಾದ ಮನೆಯೆಂಬ ಮರಣಕ್ಕೆ, ಸೇರಿಸುವಿರಿ ಎಂದು ನನಗೆ ಗೊತ್ತಿದೆ.
24“ಆದರೂ ಮುರಿದ ಮನುಷ್ಯನಾಗಿರುವ ನಾನು ಸಹಾಯಕ್ಕಾಗಿ ಕೈಚಾಚಬಾರದೆ? ಆಪತ್ತಿಗೆ ಒಳಪಟ್ಟವನಾದ ನಾನು ಕೂಗಿಕೊಳ್ಳಬಾರದೆ?
25ಕಷ್ಟದಲ್ಲಿ ಇದ್ದವರಿಗೋಸ್ಕರ ನಾನು ಕಣ್ಣೀರಿಡಲಿಲ್ಲವೆ? ದರಿದ್ರನಿಗೋಸ್ಕರ ನನ್ನ ಪ್ರಾಣವು ದುಃಖಪಡಲಿಲ್ಲವೆ?
26ನಾನು ಒಳ್ಳೆಯದನ್ನು ನಿರೀಕ್ಷಿಸುತ್ತಿರಲು ಕೇಡು ಬಂದೊದಗಿತು; ನಾನು ಬೆಳಕನ್ನು ಎದುರು ನೋಡಲು, ಅಂಧಕಾರ ಬಂದು ಕವಿಯಿತು.
27ನನ್ನ ಹೃದಯವು ಯಾವಾಗಲೂ ಅಶಾಂತಿಯಿಂದ ಕುದಿಯುತ್ತಿದೆ; ಸಂಕಟಗಳ ದಿವಸಗಳು ನನ್ನನ್ನು ಎದುರಿಸುತ್ತಿವೆ.
28ಬಿಸಿಲು ನನ್ನ ಮೇಲೆ ಬೀಳದಿದ್ದರೂ ನಾನು ಕಪ್ಪಾಗಿ ಹೋದೆನು; ನಾನು ಸಭೆಯಲ್ಲಿ ಎದ್ದು ನಿಂತು ಸಹಾಯಕ್ಕಾಗಿ ಕೂಗಿದೆನು.
29ನಾನು ನರಿಗಳಿಗೆ ಸಹೋದರನಾದೆನು; ಗೂಬೆಗಳಿಗೆ ನಾನು ಜೊತೆಯವನಾದೆನು.
30ನನ್ನ ಮೇಲಿನ ಚರ್ಮವು ಕಪ್ಪಾಗಿ ಉದುರುತ್ತಿದೆ; ನನ್ನ ಶರೀರ ಜ್ವರದಿಂದ ಬಿಸಿಯಾಗಿದೆ.
31ನನ್ನ ಕಿನ್ನರಿಯಲ್ಲಿ ಗೋಳಾಟದ ಧ್ವನಿಯು ಕೇಳಿಸುತ್ತಿದೆ. ನನ್ನ ಕೊಳಲಿನಲ್ಲಿ ಅಳುವವರ ಸ್ವರವೇ ಕೇಳಿಬರುತ್ತಿದೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.