Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಬ 29

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೋಬನು ಮತ್ತೆ ತನ್ನ ಚರ್ಚೆಯನ್ನು ಮುಂದುವರಿಸಿ ಹೇಳಿದ್ದೇನೆಂದರೆ:
2“ಕಳೆದುಹೋದ ತಿಂಗಳುಗಳಲ್ಲಿ ಇದ್ದಂತೆ ಈಗಲೂ ಇದ್ದರೆ ಎಷ್ಟೋ ಒಳ್ಳೆಯದು; ಆಗ ದೇವರು ನನ್ನನ್ನು ಕಾಪಾಡುತ್ತಿದ್ದರಲ್ಲವೆ?
3ದೇವರ ದೀಪವು ನನ್ನ ತಲೆಯ ಮೇಲೆ ಬೆಳಗುತ್ತಿತ್ತು; ನಾನು ದೇವರ ಬೆಳಕಿನಿಂದ ಕತ್ತಲಲ್ಲಿ ನಡೆಯುತ್ತಿದ್ದೆ.
4ನಾನು ನನ್ನ ಯೌವನದ ದಿವಸಗಳಲ್ಲಿದ್ದಾಗ ದೇವರ ಸ್ನೇಹವು ನನ್ನ ಗುಡಾರದ ಮೇಲೆ ಇರುತ್ತಿತ್ತು.
5ಆಗ ಸರ್ವಶಕ್ತರು ನನ್ನ ಸಂಗಡ ಇರುತ್ತಿದ್ದರು; ನನ್ನ ಸುತ್ತಲೂ ನನ್ನ ಮಕ್ಕಳು ಇದ್ದರು.
6ನನ್ನ ಹೆಜ್ಜೆಗಳನ್ನು ಮೊಸರಿನಿಂದ ತೊಳೆಯುತ್ತಾ ಇದ್ದೆನು; ಬಂಡೆಯಿಂದ ನನಗೆ ಓಲಿವ್ ಎಣ್ಣೆ ಪ್ರವಾಹವಾಗಿ ಸುರಿಸುತ್ತಿತ್ತು.
7“ನಾನು ಪಟ್ಟಣದ ಮುಂಬಾಗಿಲಿಗೆ ಹೋದಾಗ, ಬೀದಿಯಲ್ಲಿ ನನ್ನ ಪೀಠದ ಮೇಲೆ ಕುಳಿತುಕೊಂಡಾಗ,
8ಯುವಕರು ನನ್ನನ್ನು ನೋಡಿ ಪಕ್ಕಕ್ಕೆ ಸರಿದು ನಿಲ್ಲುತ್ತಿದ್ದರು; ವೃದ್ಧರು ಸಹ ಎದ್ದು ನಿಲ್ಲುತ್ತಿದ್ದರು.
9ಪ್ರಧಾನರು ನುಡಿಗಳನ್ನು ಬಿಗಿ ಹಿಡಿದು, ತಮ್ಮ ಬಾಯಿಯ ಮೇಲೆ ಕೈ ಇಟ್ಟುಕೊಳ್ಳುತ್ತಿದ್ದರು.
10ಘನವಂತರು ಮೌನ ತಾಳುತ್ತಿದ್ದರು; ಅವರ ನಾಲಿಗೆ ಅವರ ಬಾಯಿಯ ಅಂಗಳಕ್ಕೆ ಅಂಟಿರುತ್ತಿತ್ತು.
11ಕೇಳಿದ ಕಿವಿಯು ನನ್ನನ್ನು ಹರಸುತ್ತಿತ್ತು; ನೋಡಿದವರು ನನ್ನನ್ನು ಗೌರವಿಸುತ್ತಿದ್ದರು.
12ಏಕೆಂದರೆ ಅಂಗಲಾಚುವ ಬಡವನನ್ನೂ, ಸಹಾಯಕನಿಲ್ಲದ ಅನಾಥನನ್ನೂ ನಾನು ರಕ್ಷಿಸುವವನಾಗಿದ್ದೆನು.
13ಸಾಯುತ್ತಿದ್ದವರ ಆಶೀರ್ವಾದವು ನನ್ನ ಮೇಲೆ ಬರುತ್ತಿತ್ತು; ವಿಧವೆಯ ಹೃದಯವು ಸಂತೋಷದಿಂದ ಹಾಡುವಂತೆ ಮಾಡುತ್ತಿದ್ದೆನು.
14ನಾನು ನೀತಿಯನ್ನು ನನ್ನ ಬಟ್ಟೆಯಂತೆ ಧರಿಸಿದ್ದೆನು; ನನ್ನ ನ್ಯಾಯವು ನಿಲುವಂಗಿಯ ಹಾಗೆಯೂ ಪೇಟದ ಹಾಗೆಯೂ ಇರುತ್ತಿತ್ತು.
15ನಾನು ಕುರುಡನಿಗೆ ಕಣ್ಣೂ, ಕುಂಟನಿಗೆ ಕಾಲೂ ಆಗಿದ್ದೆನು.
16ದರಿದ್ರರಿಗೆ ನಾನು ತಂದೆಯಾಗಿದ್ದೆನು; ಅಪರಿಚಿತರ ವ್ಯಾಜ್ಯವನ್ನು ವಿಚಾರಿಸುತ್ತಿದ್ದೆನು.
17ದುಷ್ಟರ ದವಡೆಗಳನ್ನು ಮುರಿಯುತ್ತಿದ್ದೆನು; ದುಷ್ಟರ ಹಲ್ಲುಗಳೊಳಗಿಂದ ಬೇಟೆಯನ್ನು ಕಿತ್ತು ಬಿಡಿಸುತ್ತಿದ್ದೆನು.
18“ಆಗ ನಾನು, ‘ನನ್ನ ಮನೆಯಲ್ಲಿಯೇ ನಾನು ಸಾಯುವೆನು; ಮರಳಿನಂತೆ ನನ್ನ ದಿವಸಗಳು ಇರುತ್ತವೆ,
19ನನ್ನ ಬೇರು ನೀರಿನ ಬಳಿ ಹಬ್ಬಿರುತ್ತದೆ; ರಾತ್ರಿಯಿಡಿ ನನ್ನ ಕೊಂಬೆಯ ಮೇಲೆ ಮಂಜು ಬಿದ್ದಿರುತ್ತದೆ.
20ನನ್ನ ಘನವು ನನ್ನಲ್ಲಿ ಹೊಸದಾಗಿ ಇರುತ್ತದೆ; ನನ್ನ ಬಿಲ್ಲು ಸಹ ನನ್ನ ಕೈಯಲ್ಲಿ ಎಂದೆಂದಿಗೂ ಬಲಗೊಳ್ಳುತ್ತಾ ಇರುತ್ತದೆ,’ ಎಂದೆಲ್ಲಾ ಹೇಳುತ್ತಿದ್ದೆನು.
21“ಜನರು ನನಗೆ ಕಿವಿಗೊಟ್ಟು ಎದುರುನೋಡುತ್ತಿದ್ದರು. ನನ್ನ ಆಲೋಚನೆ ಕೇಳಲು ಮೌನವಾಗಿರುತ್ತಿದ್ದರು.
22ನನ್ನ ಮಾತಿನ ಮೇಲೆ ಅವರು ಬೇರೆ ಮಾತನಾಡುತ್ತಿರಲಿಲ್ಲ; ನನ್ನ ನುಡಿ ಅವರ ಕಿವಿಗೆ ಬೀಳುತ್ತಿತ್ತು.
23ಮಳೆಯಂತೆ ನನ್ನನ್ನು ಎದುರುನೋಡುತ್ತಿದ್ದರು. ಮುಂಗಾರಿನ ಮಳೆಯಹಾಗೆ ನನ್ನ ಮಾತುಗಳಲ್ಲಿ ಉಲ್ಲಾಸಿಸುತ್ತಿದ್ದರು.
24ನಾನು ಅವರನ್ನು ನೋಡಿ ಮುಗುಳ್ನಗಿದಾಗ, ಅವರು ಅದನ್ನು ನಂಬಲಿಲ್ಲ; ನನ್ನ ಮುಖದ ಕಾಂತಿ ಅವರಿಗೆ ಅಮೂಲ್ಯವಾಗಿತ್ತು.
25ನಾನು ಅವರ ಪ್ರಧಾನನಾಗಿ ಕೂತು ಸೈನ್ಯಗಳ ನಡುವೆ ಅರಸನಂತೆ ಆಸೀನನಾಗಿದ್ದೆನು. ನಾನು ದುಃಖಿಸುವವರನ್ನು ಸಂತೈಸುವವನಾಗಿಯೂ ಇದ್ದೆನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.