Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಬ 3

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆಮೇಲೆ ಯೋಬನು ತನ್ನ ಬಾಯಿತೆರೆದು, ತನ್ನ ಜನ್ಮ ದಿವಸವನ್ನು ಶಪಿಸಿದನು.
2ಯೋಬನು ಇಂತೆಂದನು:
3“ನಾನು ಹುಟ್ಟಿದ ದಿವಸವೂ, ‘ಗಂಡು ಮಗುವನ್ನು ಗರ್ಭಧರಿಸಿದೆ!’ ಎಂದು ಹೇಳಿದ ರಾತ್ರಿಯೂ ನಾಶವಾಗಲಿ.
4ಆ ದಿವಸವು ಕತ್ತಲಾಗಲಿ, ಮೇಲಿನಿಂದ ದೇವರು ಅದನ್ನು ಲೆಕ್ಕಿಸದಿರಲಿ, ಅದರ ಮೇಲೆ ಬೆಳಕು ಪ್ರಕಾಶಿಸದಿರಲಿ.
5ಕತ್ತಲೂ ಕಾರ್ಗತ್ತಲೂ ಆ ದಿನವನ್ನು ವಶಮಾಡಿಕೊಳ್ಳಲಿ; ಮೋಡವು ಅದರ ಮೇಲೆ ಕವಿಯಲಿ; ಕತ್ತಲೆ ಅದನ್ನು ಭಯಪಡಿಸಲಿ.
6ಆ ರಾತ್ರಿಯನ್ನು ಅಂಧಕಾರವು ಮುತ್ತಲಿ; ವರ್ಷದ ದಿನಗಳಲ್ಲಿ ಆ ದಿನವನ್ನು ಸೇರಿಸದಿರಲಿ. ಅದು ತಿಂಗಳುಗಳನ್ನು ಲೆಕ್ಕಿಸದಿರಲಿ.
7ಇಗೋ ಆ ರಾತ್ರಿಯು ಬಂಜೆಯಾಗಲಿ; ಅದರಲ್ಲಿ ಆನಂದ ಧ್ವನಿಯು ಕೇಳದಿರಲಿ.
8ಘಟಸರ್ಪವನ್ನು ಎಬ್ಬಿಸುವುದರಲ್ಲಿಯೂ ದಿನಗಳನ್ನು ಶಪಿಸುವುದರಲ್ಲಿಯೂ ನಿಪುಣರಾದವರು ಆ ದಿನವನ್ನು ಶಪಿಸಲಿ.
9ಅದರ ಮುಂಜಾನೆಯ ನಕ್ಷತ್ರಗಳು ಕಪ್ಪಾಗಲಿ; ಅದು ಬೆಳಕಿಗೋಸ್ಕರ ಕಾದುಕೊಂಡರೂ ಬಾರದಿರಲಿ ಅರುಣೋದಯವು ಆ ದಿನವನ್ನು ನೋಡದಿರಲಿ.
10ಏಕೆಂದರೆ ಆ ದಿನವು ನನ್ನ ತಾಯಿಯ ಗರ್ಭದ ಬಾಗಿಲನ್ನು ಮುಚ್ಚಲಿಲ್ಲ, ದುಃಖವನ್ನು ನನ್ನ ಕಣ್ಣುಗಳಿಗೆ ಮರೆಮಾಡಲಿಲ್ಲ.
11“ನಾನು ಹುಟ್ಟುವಾಗಲೇ ಏಕೆ ಸಾಯಲಿಲ್ಲ? ನಾನು ಗರ್ಭದಿಂದ ಬಂದಾಗಲೇ ಏಕೆ ಪ್ರಾಣ ಬಿಡಲಿಲ್ಲ?
12ತಾಯಿಯ ಮಡಿಲು ನನ್ನನ್ನು ಸ್ವಿಕರಿಸಿದ್ದೇಕೆ? ತಾಯಿಯ ಮೊಲೆಹಾಲು ಕುಡಿಯಮಾಡಿದ್ದೇಕೆ?
13ಆಗ ಸತ್ತಿದ್ದರೆ ನಾನು ಶಾಂತವಾಗಿ ಮಲಗಿಕೊಳ್ಳುತ್ತಿದ್ದೆನು; ನಾನು ವಿಶ್ರಾಂತಿಯಲ್ಲಿರುತ್ತಿದ್ದೆನು.
14ಭೂಲೋಕದಲ್ಲಿ ಹಾಳುಬಿದ್ದ ಪಟ್ಟಣಗಳನ್ನು ತಮಗಾಗಿ ಕಟ್ಟಿಸಿಕೊಂಡ ರಾಜರೊಂದಿಗೂ ಮಂತ್ರಿಗಳೊಡನೆಯೂ ನಾನಿರುತ್ತಿದ್ದೆನು.
15ಬಂಗಾರವನ್ನು ಕೂಡಿಸಿಟ್ಟು, ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸಿದ ಅಧಿಪತಿಗಳ ಸಂಗಡ ವಿಶ್ರಮಿಸಿಕೊಳ್ಳುತ್ತಿದ್ದೆನು.
16ಗರ್ಭಸ್ರಾವವಾಗಿ ಹೂಣಿಟ್ಟ ಪಿಂಡದಂತೆಯೂ ಬೆಳಕನ್ನು ನೋಡದ ಕೂಸುಗಳಂತೆಯೂ ನಾನೇಕೆ ಆಗಲಿಲ್ಲ?
17ಅಲ್ಲಿ ದುಷ್ಟರು ತೊಂದರೆ ಕೊಡುವುದು ಇರುವುದಿಲ್ಲ. ಶಕ್ತಿ ಕುಂದಿದವರು ಅಲ್ಲಿ ವಿಶ್ರಾಂತಿ ಹೊಂದಿರುತ್ತಾರೆ.
18ಸೆರೆಯವರು ಕೂಡ ಶಾಂತವಾಗಿರುತ್ತಾರೆ; ಬಾಧೆಪಡಿಸುವವನ ಶಬ್ದವನ್ನು ಕೇಳುವುದಿಲ್ಲ.
19ಅಲ್ಲಿ ಕಿರಿಯರು ಹಿರಿಯರು ಎಂಬ ಭೇದ ಇಲ್ಲಾ; ಗುಲಾಮರು ಯಜಮಾನರಿಂದ ಬಿಡುಗಡೆಯಾಗಿರುತ್ತಾರೆ.
20“ಕಷ್ಟದಲ್ಲಿ ಇರುವವನಿಗೆ ಬೆಳಕೂ ಕಹಿ ಮನಸ್ಸುಳ್ಳವರಿಗೆ ಜೀವವನ್ನು ಕೊಡುವುದೇಕೆ?
21ಅವರು ನಿಕ್ಷೇಪಕ್ಕಾಗಿ ಅಗಿಯುವ ಆಶೆಗಿಂತಲೂ ಹೆಚ್ಚಾದ ಆಶೆಯಿಂದ ಮರಣವನ್ನು ಹಾರೈಸಿ ಹುಡುಕಿದರೂ ಅದು ದೊರೆಯದು.
22ಅವರು ಸಮಾಧಿ ಸೇರಿದ ಮೇಲೆ ಸಂತೋಷ ಸಂಭ್ರಮದಿಂದ ಹರ್ಷಿಸುವರೋ?
23ದೇವರು ಸುತ್ತಲೂ ಬೇಲಿಹಾಕಿ, ದಾರಿ ಮುಚ್ಚಿದ ಮೇಲೆ ಅವರಿಗೆ ಬೆಳಕು ಏಕೆ?
24ನಿಟ್ಟುಸಿರೇ ನನ್ನ ದೈನಂದಿನ ಆಹಾರವಾಗಿದೆ; ನನ್ನ ನರಳಾಟವು ಜಲಧಾರೆಯಂತಿದೆ.
25ನನಗೆ ಭಯ ಹುಟ್ಟಿದೊಡನೆ ಆಪತ್ತು ಬಂದೊದಗುತ್ತದೆ; ಯಾವುದಕ್ಕೆ ಹೆದರುತ್ತೇನೋ, ಅದೇ ತಪ್ಪದೆ ಸಂಭವಿಸುತ್ತದೆ.
26ನನಗೆ ಶಾಂತಿ ಇಲ್ಲ, ವಿಶ್ರಾಂತಿಯೂ ಇಲ್ಲ; ನಾನು ಸಮಾಧಾನವಾಗಿಯೂ ಇಲ್ಲ, ಯಾವಾಗಲೂ ಕಳವಳವೇ ಇರುತ್ತದೆ.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.