Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಬ 2

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಇನ್ನೊಂದು ದಿನ, ದೇವದೂತರು ಯೆಹೋವ ದೇವರ ಮುಂದೆ ಒಟ್ಟಾಗಿ ಸೇರಿ ಬಂದಿದ್ದರು. ಸೈತಾನನು ಸಹ ಅವರೊಂದಿಗೆ ಯೆಹೋವ ದೇವರ ಮುಂದೆ ಬಂದನು.
2ಆಗ ಯೆಹೋವ ದೇವರು ಸೈತಾನನಿಗೆ, “ನೀನು ಎಲ್ಲಿಂದ ಬಂದೆ?” ಎಂದರು. ಸೈತಾನನು ಯೆಹೋವ ದೇವರಿಗೆ, “ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗಾಡುತ್ತಾ ಇದ್ದು ಬಂದೆನು,” ಎಂದನು.
3ಆಗ ಯೆಹೋವ ದೇವರು ಸೈತಾನನಿಗೆ, “ನನ್ನ ಸೇವಕ ಯೋಬನನ್ನು ಗಮನಿಸಿದೆಯಾ? ಅವನು ನಿರ್ದೋಷಿಯೂ, ಯಥಾರ್ಥನೂ, ದೇವರಿಗೆ ಭಯಪಡುವವನೂ, ಕೇಡನ್ನು ತೊರೆಯುವವನೂ ಆಗಿದ್ದಾನೆ. ಅವನ ಹಾಗೆ ಭೂಲೋಕದಲ್ಲಿ ಒಬ್ಬರೂ ಇಲ್ಲ. ಅವನನ್ನು ಕಾರಣವಿಲ್ಲದೆ ನಾಶಮಾಡುವುದಕ್ಕೆ ನೀನು ನನಗೆ ಸೂಚಿಸಿದರೂ, ಅವನು ಇನ್ನೂ ತನ್ನ ಯಥಾರ್ಥತೆಯಲ್ಲಿ ದೃಢವಾಗಿದ್ದಾನೆ,” ಎಂದರು.
4ಅದಕ್ಕೆ ಸೈತಾನನು, “ಚರ್ಮಕ್ಕೆ ಚರ್ಮ,” ಎಂದ ಹಾಗೆ, “ಒಬ್ಬ ಮನುಷ್ಯನು ತನ್ನ ಪ್ರಾಣ ಉಳಿಸಿಕೊಳ್ಳಲು ತನ್ನ ಸರ್ವಸ್ವವನ್ನೂ ಕೊಡುವನು.
5ಆದರೆ ಈಗ ನಿಮ್ಮ ಕೈಚಾಚಿ, ಅವನ ಎಲುಬನ್ನೂ ಅವನ ಮಾಂಸವನ್ನೂ ಹೊಡೆದರೆ, ಅವನು ನಿಮ್ಮ ಮುಖದೆದುರಿಗೇ ನಿಮ್ಮನ್ನು ಶಪಿಸುವನು,” ಎಂದನು.
6ಆಗ ಯೆಹೋವ ದೇವರು ಸೈತಾನನಿಗೆ, “ಹಾಗಾದರೆ ಅವನು ನಿನ್ನ ಕೈಯಲ್ಲಿ ಇದ್ದಾನೆ. ಅವನ ಪ್ರಾಣವನ್ನು ಮಾತ್ರ ಮುಟ್ಟಬಾರದು,” ಎಂದರು.
7ಆಗ ಸೈತಾನನು ಯೆಹೋವ ದೇವರ ಸನ್ನಿಧಾನದಿಂದ ಹೊರಟುಹೋಗಿ, ಯೋಬನಿಗೆ ಅಂಗಾಲಿನಿಂದ ನೆತ್ತಿಯವರೆಗೆ ಕೆಟ್ಟ ಹುಣ್ಣುಗಳು ಬರುವಂತೆ ಅವನನ್ನು ಬಾಧಿಸಿದನು.
8ಯೋಬನು ಮುರಿದ ಬೋಕಿಯನ್ನು ತೆಗೆದುಕೊಂಡು ತನ್ನ ಮೈಯನ್ನು ಕೆರೆದುಕೊಳ್ಳುತ್ತಾ ಬೂದಿಯ ಮೇಲೆ ಕುಳಿತುಕೊಂಡನು.
9ಆಗ ಯೋಬನ ಹೆಂಡತಿಯು ಅವನಿಗೆ, “ನೀನು ಇನ್ನೂ ಯಥಾರ್ಥತ್ವವನ್ನು ಬಿಡಲಿಲ್ಲವೇ? ದೇವರನ್ನು ಶಪಿಸಿ ಸತ್ತುಹೋಗು,” ಎಂದಳು.
10ಆದರೆ ಯೋಬನು ಅವಳಿಗೆ, “ನೀನು ಹುಚ್ಚಳಂತೆ ಮಾತನಾಡುತ್ತಿರುವೆ? ನಾವು ದೇವರಿಂದ ಒಳ್ಳೆಯದನ್ನು ಹೊಂದಿದ್ದೇವೆ, ಕಷ್ಟವನ್ನು ಹೊಂದಬಾರದೋ?” ಎಂದನು. ಇವೆಲ್ಲವುಗಳಲ್ಲಿಯೂ ಪಾಪದ ಮಾತೊಂದೂ ಯೋಬನ ಬಾಯಿಂದ ಬರಲಿಲ್ಲ.
11ಯೋಬನ ಮೂವರು ಸ್ನೇಹಿತರು, ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು ಅವನಿಗೆ ಬಂದ ಈ ಎಲ್ಲಾ ಕಷ್ಟನಷ್ಟವನ್ನು ಕುರಿತು ಕೇಳಿ, ಯೋಬನಿಗೆ ಸಂತಾಪವನ್ನು ತೋರ್ಪಡಿಸಿ ಅವನನ್ನು ಸಂತೈಸುವುದಕ್ಕೆ ಹೋಗಬೇಕೆಂದು ತಮ್ಮಲ್ಲಿ ಆಲೋಚನೆ ಮಾಡಿಕೊಂಡು, ತಮ್ಮ ತಮ್ಮ ಸ್ಥಳಗಳಿಂದ ಅವನ ಬಳಿಗೆ ಬಂದರು.
12ಅವರು ಯೋಬನನ್ನು ದೂರದಿಂದ ನೋಡಿದಾಗ, ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅವರು ಗಟ್ಟಿಯಾಗಿ ಅಳಲು ಪ್ರಾರಂಭಿಸಿದರು. ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು, ಧೂಳನ್ನು ತಮ್ಮ ತಲೆಯ ಮೇಲೆ ಸುರಿಸಿಕೊಂಡರು.
13ಅನಂತರ ಯೋಬನು ಅನುಭವಿಸುತ್ತಿದ್ದ ಬಾಧೆಯು ಎಷ್ಟು ಕ್ರೂರವೆಂದು ಅವರು ನೋಡಿ, ಅವನ ಸಂಗಡ ಏಳು ಹಗಲು, ಏಳು ರಾತ್ರಿ ನೆಲದ ಮೇಲೆ ಕುಳಿತುಕೊಂಡಿದ್ದರು. ಒಬ್ಬನಾದರೂ ಒಂದು ಮಾತನ್ನೂ ಯೋಬನಿಗೆ ಹೇಳಲಿಲ್ಲ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.