Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 19

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಈಜಿಪ್ಟಿನವರ ವಿಷಯವಾದ ಪ್ರವಾದನೆ: ಇಗೋ, ಯೆಹೋವ ದೇವರು ವೇಗವುಳ್ಳ ಮೇಘವನ್ನು ಹತ್ತಿಕೊಂಡು ಈಜಿಪ್ಟಿಗೆ ಬರುತ್ತಾರೆ. ಅವರು ಸಮ್ಮುಖರಾದಾಗ ಈಜಿಪ್ಟಿನ ವಿಗ್ರಹಗಳು ನಡುಗುವುವು. ಈಜಿಪ್ಟಿನವರ ಹೃದಯಗಳು ಅದರ ಮಧ್ಯೆ ಭಯದಿಂದ ಕರಗುವುವು.
2ಇದಲ್ಲದೆ ನಾನು ಈಜಿಪ್ಟಿನವನಿಗೆ ವಿರೋಧವಾಗಿ ಈಜಿಪ್ಟಿನವನನ್ನು ಎಬ್ಬಿಸುವೆನು. ಸಹೋದರನಿಗೆ ವಿರುದ್ಧವಾಗಿ ಸಹೋದರನೂ, ನೆರೆಯವನಿಗೆ ವಿರುದ್ಧವಾಗಿ ನೆರೆಯವನೂ, ಪಟ್ಟಣಕ್ಕೆ ವಿರೋಧವಾಗಿ ಪಟ್ಟಣವೂ, ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಹೊರಾಡುವವು.
3ಈಜಿಪ್ಟಿನವರ ಮನಸ್ಸು ಭಯಗೊಳ್ಳುವುದು ಅವರ ಆಲೋಚನೆಯನ್ನು ಭಂಗಪಡಿಸುವೆನು. ಅಲ್ಲಿಯವರು ವಿಗ್ರಹಗಳನ್ನೂ, ಮಾಟಗಾರರನ್ನೂ, ಯಕ್ಷಣಿಗಾರರನ್ನೂ, ಮಂತ್ರವಾದಿಗಳನ್ನೂ ಆಶ್ರಯಿಸುವರು.
4ಈಜಿಪ್ಟಿನವರನ್ನು ಕ್ರೂರನಾದ ಒಡೆಯನ ಕೈಗೆ ಒಪ್ಪಿಸುವೆನು. ಭಯಂಕರನಾದ ರಾಜನು ಅವರನ್ನಾಳುವನು, ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
5ನೈಲ್ ನದಿಯ ನೀರು ಬತ್ತಿಹೋಗುವುದು. ನದಿ ತೀರವೂ ಇಂಗಿ ಒಣಗಿಹೋಗುವುದು.
6ಕಾಲುವೆಗಳು ನಾರುವುವು. ಈಜಿಪ್ಟನ ಉಪನದಿಗಳು ದೂರಕ್ಕೆ ಇಳಿದು ನೀರಿಲ್ಲದೆ ಹೋಗುವುವು. ಜಂಬು ಹುಲ್ಲು ಬಾಡುವುದು.
7ನೈಲ್ ನದಿಯ ಹತ್ತಿರದ ತೀರವು ಬರುಡಾಗುವುದು. ನದಿಯ ಬಳಿಯಲ್ಲಿ ಬಿತ್ತಿದ ಬೀಜಗಳೆಲ್ಲವೂ ಒಣಗಿ, ಗಾಳಿಗೆ ತೂರಿಹೋಗುವುವು.
8ಮೀನುಗಾರರು ಕೂಡ ದುಃಖಿಸುವರು ಮತ್ತು ನೈಲ್ ನದಿಯಲ್ಲಿ ಗಾಳ ಹಾಕುವವರು ಪ್ರಲಾಪಿಸುವರು. ನೀರಿನ ಮೇಲೆ ಬಲೆ ಬೀಸುವವರು ಕುಗ್ಗಿ ಹೋಗುವರು.
9ನಯವಾದ ನಾರಿನ ಕೆಲಸದವರು ಬಟ್ಟೆ ನೇಯುವವರು ನಿರಾಶರಾಗಿರುವರು.
10ಬಟ್ಟೆಯಲ್ಲಿ ಕೆಲಸ ಮಾಡುವವರು ಖಿನ್ನರಾಗುತ್ತಾರೆ, ಮತ್ತು ಎಲ್ಲಾ ವೇತನದಾರರು ಹೃದಯದಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ.
11ಚೋವನ್ ಪಟ್ಟಣದ ಅಧಿಪತಿಗಳು ಕೇವಲ ಬುದ್ಧಿಹೀನರು; ಫರೋಹನ ಮಂತ್ರಿಗಳಲ್ಲಿ ಜ್ಞಾನವುಳ್ಳ ಸಲಹೆಗಾರರ ಆಲೋಚನೆಯೂ ಜ್ಞಾನರಹಿತವಾಗಿದೆ. ನೀವು ಫರೋಹನನಿಗೆ, “ನಾನು ಜ್ಞಾನಿಗಳ ಸಂತಾನದವನು, ಪುರಾತನ ರಾಜನ ಶಿಷ್ಯನೆಂದು ಹೇಳುವುದು ಹೇಗೆ”?
12ನಿನ್ನ ಜ್ಞಾನಿಗಳು ಎಲ್ಲಿ? ನಿನಗೆ ಅವರು ಹೇಳಲಿ. ಸೇನಾಧೀಶ್ವರ ಯೆಹೋವ ದೇವರು ಈಜಿಪ್ಟಿನವರ ವಿರೋಧವಾಗಿ ಉದ್ದೇಶಿಸಿದ್ದನ್ನು ಅವರು ತಿಳಿದುಕೊಳ್ಳಲಿ.
13ಚೋವನಿನ ಶ್ರೇಷ್ಠರು ಮೂರ್ಖರಾಗಿದ್ದಾರೆ. ನೋಫಿನ ಶ್ರೇಷ್ಠರು ಮೋಸ ಹೋಗಿದ್ದಾರೆ. ಈಜಿಪ್ಟಿನ ಗೋತ್ರಗಳ ಪ್ರಮುಖರು ಅದನ್ನು ಭ್ರಮೆಗೊಳಿಸಿದ್ದಾರೆ. ಅದನ್ನು ತಪ್ಪು ದಾರಿಗೆಳೆದಿದ್ದಾರೆ.
14ಯೆಹೋವ ದೇವರು ಅವರ ಮಧ್ಯದಲ್ಲಿ ತತ್ತರಿಸುವ ಆತ್ಮವನ್ನು ಸುರಿಸಿದ್ದಾರೆ. ಅಮಲೇರಿದವನು ಕಕ್ಕುತ್ತಾ ಓಲಾಡುವ ಪ್ರಕಾರ ಈಜಿಪ್ಟ್ ತನ್ನ ಒಂದೊಂದು ಕೆಲಸದಲ್ಲಿಯೂ ಓಲಾಡುವಂತೆ ಮಾಡಿದ್ದಾರೆ.
15ಈಜಿಪ್ಟಿನಲ್ಲಿ ತಲೆಯಾಗಲಿ, ಬಾಲವಾಗಲಿ, ಕೊಂಬೆಯಾಗಲಿ, ಒಂದು ಕಡ್ಡಿಯಾಗಲಿ ಸಾಧಿಸಲು ಸಾಧ್ಯವಾಗದ ಯಾವ ಕೆಲಸವೂ ಇರುವುದಿಲ್ಲ.
16ಆ ದಿನದಲ್ಲಿ ಈಜಿಪ್ಟಿನವರು ಹೆಂಗಸರ ಹಾಗೆ ಇರುವರು. ಸೇನಾಧೀಶ್ವರ ಯೆಹೋವ ದೇವರು ಅದರ ಮೇಲೆ ಎತ್ತಿದ ಕೈಯನ್ನು ಬೀಸುತ್ತಿರುವುದರಿಂದ ಅವರು ಹೆದರಿ ಭಯಪಡುವರು.
17ಈಜಿಪ್ಟ್ ಬೆಚ್ಚಿ ಬೀಳುವುದಕ್ಕೆ ಯೆಹೂದ ದೇಶವು ಕಾರಣವಾಗುವುದು, ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನು ಸೇನಾಧೀಶ್ವರ ಯೆಹೋವ ದೇವರು ಈಜಿಪ್ಟಿಗೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಆಲೋಚನೆಯನ್ನು ತಿಳಿದು ಬೆರಗಾಗುವನು.
18ಆ ದಿವಸದಲ್ಲಿ ಈಜಿಪ್ಟಿನ ಐದು ಪಟ್ಟಣಗಳು ಸೇನಾಧೀಶ್ವರ ಯೆಹೋವ ದೇವರಿಗೆ ಆಣೆಯಿಟ್ಟುಕೊಳ್ಳುವವು. ಕಾನಾನಿನ ಭಾಷೆಯನ್ನಾಡುವವರಿಂದ ತುಂಬಿದ ಐದು ಪಟ್ಟಣಗಳು ಈಜಿಪ್ಟ್ ದೇಶದಲ್ಲಿರುವುವು. ಅವುಗಳಲ್ಲಿ ಒಂದರ ಹೆಸರು “ನಾಶಪುರ.”
19ಆ ದಿನದಲ್ಲಿ ಈಜಿಪ್ಟ್ ದೇಶದ ಮಧ್ಯದಲ್ಲಿ ಯೆಹೋವ ದೇವರಿಗೆ ಬಲಿಪೀಠವು ದೇಶದ ಎಲ್ಲೆಯಲ್ಲಿ ಯೆಹೋವ ದೇವರಿಗೆ ಒಂದು ಸ್ತಂಭವು ಇರುವುದು.
20ಅದು ಸೇನಾಧೀಶ್ವರ ಯೆಹೋವ ದೇವರಿಗೆ ಈಜಿಪ್ಟ್ ದೇಶದಲ್ಲಿ ಗುರುತಾಗಿ ಸಾಕ್ಷಿಯಾಗಿರುವುದು. ಏಕೆಂದರೆ ಹಿಂಸಕರ ದೆಸೆಯಿಂದ ಯೆಹೋವ ದೇವರನ್ನು ಕೂಗಿಕೊಳ್ಳಲು, ದೇವರು ಅವರಿಗೆ ಒಬ್ಬ ಶೂರನಾದ ರಕ್ಷಕನನ್ನು ಕಳುಹಿಸಿ, ಅವರನ್ನು ಬಿಡುಗಡೆ ಮಾಡುವರು.
21ಯೆಹೋವ ದೇವರು ತಮ್ಮನ್ನು ಈಜಿಪ್ಟಿನವರಿಗೆ ತಿಳಿಯಪಡಿಸಲು, ಅವರು ಆ ದಿನದಲ್ಲಿ ಯೆಹೋವ ದೇವರನ್ನು ತಿಳಿದುಕೊಳ್ಳುವರು ಮತ್ತು ಬಲಿಕಾಣಿಕೆಗಳಿಂದ ಸೇವೆಮಾಡುವರು. ಹೌದು, ಅವರು ಯೆಹೋವ ದೇವರಿಗೆ ಪ್ರಮಾಣ ಮಾಡಿಕೊಂಡು ನೆರವೇರಿಸುವರು.
22ಇದಲ್ಲದೆ ಯೆಹೋವ ದೇವರು ಈಜಿಪ್ಟಿನವರನ್ನು ಹೊಡೆಯುವರು; ಗಾಯಮಾಡಿ ಸ್ವಸ್ಥ ಮಾಡುವರು. ಅವರು ಯೆಹೋವ ದೇವರ ಕಡೆಗೆ ತಿರುಗಿಕೊಳ್ಳುವರು, ದೇವರು ಅವರನ್ನು ಆಲೈಸಿ ಸ್ವಸ್ಥ ಮಾಡುವರು.
23ಆ ದಿವಸದಲ್ಲಿ ಈಜಿಪ್ಟಿನಿಂದ ಅಸ್ಸೀರಿಯಕ್ಕೆ ಹೋಗುವ ಒಂದು ರಾಜ ಮಾರ್ಗವಿರುವುದು. ಅಸ್ಸೀರಿಯದವರು ಈಜಿಪ್ಟಿಗೂ, ಈಜಿಪ್ಟಿನವರು ಅಸ್ಸೀರಿಯಕ್ಕೂ ಹೋಗಿ ಬರುವರು. ಈಜಿಪ್ಟಿನವರು, ಅಸ್ಸೀರಿಯರೊಂದಿಗೆ ಯೆಹೋವ ದೇವರನ್ನು ಆರಾಧಿಸುವರು.
24ಆ ದಿನದಲ್ಲಿ ಇಸ್ರಾಯೇಲು ಈಜಿಪ್ಟಿನವರ ಮತ್ತು ಅಸ್ಸೀರಿಯದವರ ಸಂಗಡ ಮೂರನೆಯದಾಗಿ ದೇಶದ ಮಧ್ಯದಲ್ಲಿ ಆಶೀರ್ವಾದವಾಗಿರುವುದು.
25ನನ್ನ ಪ್ರಜೆಯಾದ ಈಜಿಪ್ಟಿಗೂ, ನನ್ನ ಕೈಕೆಲಸವಾದ ಅಸ್ಸೀರಿಯಕ್ಕೂ ಮತ್ತು ನನ್ನ ಸೊತ್ತಾದ ಇಸ್ರಾಯೇಲಿಗೂ, “ನಿಮಗೆ ಆಶೀರ್ವಾದ,” ಎಂದು ಸೇನಾಧೀಶ್ವರ ಯೆಹೋವ ದೇವರು ಅವುಗಳನ್ನು ಆಶೀರ್ವಾದ ಮಾಡುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.