Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಹೋಶೇಯ 9

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಇಸ್ರಾಯೇಲೇ, ಬೇರೆ ಜನಾಂಗಗಳು ಉಲ್ಲಾಸಿಸುವ ಪ್ರಕಾರ ಸಂತೋಷ ಪಡಬೇಡ. ಏಕೆಂದರೆ ನೀನು ನಿನ್ನ ದೇವರನ್ನು ಬಿಟ್ಟು ವ್ಯಭಿಚಾರ ಮಾಡಿದ್ದೀಯೆ. ಎಲ್ಲಾ ಧಾನ್ಯದ ಕಣಗಳಲ್ಲಿ ವ್ಯಭಿಚಾರದ ಕೂಲಿಯನ್ನು ಪ್ರೀತಿ ಮಾಡಿದ್ದೀಯೆ.
2ಧಾನ್ಯ ಕಣವು ಮತ್ತು ದ್ರಾಕ್ಷಿಯ ತೊಟ್ಟಿಯೂ ಅವರನ್ನು ಪೋಷಿಸುವುದಿಲ್ಲ. ಹೊಸ ದ್ರಾಕ್ಷಾರಸವು ಅವಳಲ್ಲಿ ನಿಂತುಹೋಗುವುವು.
3ಅವರು ಯೆಹೋವ ದೇವರ ದೇಶದಲ್ಲಿ ನೆಲೆಸುವುದಿಲ್ಲ. ಆದರೆ ಎಫ್ರಾಯೀಮು ಈಜಿಪ್ಟಿಗೆ ಹಿಂದಿರುಗುವುದು. ಅವರು ಅಸ್ಸೀರಿಯದಲ್ಲಿ ಅಶುದ್ಧವಾದವುಗಳನ್ನು ತಿನ್ನುವರು.
4ಅವರು ದ್ರಾಕ್ಷಾರಸವನ್ನು ಕಾಣಿಕೆಯಾಗಿ ಯೆಹೋವ ದೇವರಿಗೆ ಅರ್ಪಿಸುವುದಿಲ್ಲ. ಅವರ ಬಲಿಗಳು ಆತನಿಗೆ ಮೆಚ್ಚಿಗೆಯಾಗಿರುವುದಿಲ್ಲ. ಅವರ ಬಲಿಗಳು ಅವರಿಗೆ ದುಃಖಿಸುವವರ ರೊಟ್ಟಿಯ ಹಾಗಿರುವುವು. ಅದನ್ನು ತಿನ್ನುವವರೆಲ್ಲರೂ ಅಪವಿತ್ರರಾಗುವರು. ಏಕೆಂದರೆ ಅದು ಅವರ ಹೊಟ್ಟೆ ತುಂಬುವುದಕ್ಕೆ ಮಾತ್ರ ಸರಿಯೇ ಹೊರತು, ಯೆಹೋವ ದೇವರ ಆಲಯಕ್ಕೆ ಸಲ್ಲುವುದಿಲ್ಲ.
5ಪರಿಶುದ್ಧ ದಿವಸದಲ್ಲಿಯೂ, ಯೆಹೋವ ದೇವರ ಹಬ್ಬಗಳ ದಿವಸದಲ್ಲಿಯೂ ನೀನು ಏನು ಮಾಡುತ್ತೀ?
6ಇಗೋ, ನಾಶನದಿಂದ ಅವರು ತಪ್ಪಿಸಿಕೊಂಡರೂ ಈಜಿಪ್ಟ್ ಅವರನ್ನು ಕೂಡಿಸುವುದು. ಮೋಫ್ ಪಟ್ಟಣವು ಅವರನ್ನು ಹೂಳುವುದು. ಅವರ ಬೆಳ್ಳಿಯ ಬೊಕ್ಕಸಗಳು ಮುಳ್ಳು ಪೊದೆಗಳ ಪಾಲಾಗುವುವು. ಮುಳ್ಳುಗಿಡಗಳು ಅವರ ಗುಡಾರಗಳನ್ನು ಆವರಿಸಿಕೊಂಡಿರುವುದು.
7ದಂಡನೆಯ ದಿವಸಗಳು ಬಂದಿವೆ, ಮುಯ್ಯಿ ತೀರಿಸುವ ದಿವಸಗಳೂ ಸಮೀಪವಾಗಿವೆ. ಇಸ್ರಾಯೇಲು ಅದನ್ನು ತಿಳಿದುಕೊಳ್ಳಲಿ. ಏಕೆಂದರೆ ನಿನ್ನ ಪಾಪಗಳು ಬಹಳವಾಗಿರುವುದರಿಂದಲೂ, ದ್ವೇಷವು ಹೆಚ್ಚಾಗಿರುವುದರಿಂದಲೂ, “ಪ್ರವಾದಿ ಮೂರ್ಖನೂ, ಪ್ರೇರಿತ ಮನುಷ್ಯನು ಹುಚ್ಚನೂ,” ಎಂದು ಇಸ್ರಾಯೇಲು ಹೇಳಿಕೊಳ್ಳುತ್ತದೆ.
8ನನ್ನ ದೇವರೊಂದಿಗೆ ಪ್ರವಾದಿಯು ಎಫ್ರಾಯೀಮನ ಮೇಲೆ ಕಾವಲುಗಾರನಾಗಿದ್ದಾನೆ, ಆದರೂ ಅವನ ಮಾರ್ಗಗಳಲ್ಲೆಲ್ಲ ಬೇಟೆಯ ಬಲೆ ಒಡ್ಡಲಾಗಿದೆ ಮತ್ತು ಅವನ ದೇವರ ಮನೆಯಲ್ಲಿ ದ್ವೇಷವಿದೆ.
9ಗಿಬೆಯದ ದಿವಸಗಳಲ್ಲಿ ಆದ ಹಾಗೆ ತಮ್ಮನ್ನು ಬಹಳವಾಗಿ ಕೆಡಿಸಿಕೊಂಡಿದ್ದಾರೆ. ಆದ್ದರಿಂದ ಅವರ ಅಕ್ರಮವನ್ನು ಆತನು ಜ್ಞಾಪಕ ಮಾಡಿಕೊಳ್ಳುವನು. ಅವರ ಪಾಪಕ್ಕೆ ತನ್ನ ದಂಡನೆಯನ್ನು ವಿಧಿಸುವನು.
10“ನಾನು ಮರುಭೂಮಿಯಲ್ಲಿ ದ್ರಾಕ್ಷಾಫಲದ ಹಾಗೆ ಇಸ್ರಾಯೇಲನ್ನು ಕಂಡುಕೊಂಡೆನು. ಅಂಜೂರದ ಗಿಡದಲ್ಲಿ ಮೊದಲು ಮಾಗಿದ ಹಣ್ಣನ್ನು ಕಂಡ ಹಾಗೆ ನಿಮ್ಮ ಪಿತೃಗಳನ್ನು ನೋಡಿದೆನು. ಆದರೆ ಅವರು ಬಾಳ್ ಪೆಯೋರನ ಹತ್ತಿರ ಬಂದು ನಾಚಿಕೆಯ ವಿಗ್ರಹಕ್ಕೆ ತಮ್ಮನ್ನು ಪ್ರತ್ಯೇಕಿಸಿಕೊಂಡರು. ಅವರು ಪ್ರೀತಿಸಿದ ವಿಗ್ರಹಗಳ ಹಾಗೆ ಅಸಹ್ಯರಾದರು.
11ಎಫ್ರಾಯೀಮ್ ಘನತೆಯು ಪಕ್ಷಿಯಂತೆ ಹಾರಿಹೋಗುವುದು. ಜನನವಿಲ್ಲ, ಗರ್ಭಧಾರಣೆ ಇಲ್ಲ, ಪ್ರಸವವಿಲ್ಲ.
12ಅವರು ತಮ್ಮ ಮಕ್ಕಳನ್ನು ಬೆಳೆಸಿದ್ದರೂ, ಅವರ ಮಕ್ಕಳಲ್ಲಿ ಯಾರೂ ಉಳಿಯದ ಹಾಗೆ ನಾನು ಅವರನ್ನು ಮಕ್ಕಳಿಲ್ಲದವರನ್ನಾಗಿ ಮಾಡುವೆನು. ನಾನು ಅವರನ್ನು ಬಿಟ್ಟು ಹೋಗುವಾಗ ಅವರಿಗೆ ಕಷ್ಟ!
13ಎಫ್ರಾಯೀಮ್ ಟೈರ್‌ನಂತಹ ಸುಂದರವಾದ ಸ್ಥಳದಲ್ಲಿ ನೆಡುವುದನ್ನು ನಾನು ಕಂಡೆನು. ಆದರೆ ಎಫ್ರಾಯೀಮ್ ತನ್ನ ಮಕ್ಕಳನ್ನು ಹತ್ಯಗೆ ಈಡಾಗುವಂತೆ ಕಳುಹಿಸುವುದು.”
14ಯೆಹೋವ ದೇವರೇ, ಅವರಿಗೆ ಕೊಡಿರಿ. ಅವರಿಗೆ ನೀವು ಏನು ಕೊಡುತ್ತೀರಿ? ಗರ್ಭ ಸ್ರಾವ, ಗರ್ಭವನ್ನು ಮತ್ತು ಬತ್ತಿದ ಸ್ತನಗಳನ್ನು ಅವರಿಗೆ ಕೊಡಿರಿ.
15ಅವರ ದುಷ್ಟತನವೆಲ್ಲಾ ಗಿಲ್ಗಾಲಿನಲ್ಲಿದೆ. ಅಲ್ಲಿ ಅವರನ್ನು ಹಗೆ ಮಾಡಿದ್ದೇನೆ. ಅವರ ಪಾಪ ಕೃತ್ಯಗಳ ನಿಮಿತ್ತ ಅವರನ್ನು ನನ್ನ ಆಲಯದೊಳಗಿಂದ ಹೊರಡಿಸಿ, ಅವರನ್ನು ಇನ್ನು ಪ್ರೀತಿಸುವುದೇ ಇಲ್ಲ. ಅವರ ಅಧಿಕಾರಿಗಳೆಲ್ಲಾ ತಿರುಗಿ ಬೀಳುವವರೇ.
16ಎಫ್ರಾಯೀಮು ಹೊಡೆತಕ್ಕೆ ಒಳಗಾಗಿದೆ. ಅವರ ಬೇರು ಒಣಗಿಹೋಗಿದೆ, ಅವರು ಫಲವನ್ನು ಕೊಡುವುದಿಲ್ಲ, ಅವರು ಹೆತ್ತರೂ ಅವರ ಗರ್ಭದ ಪ್ರಿಯಕರವಾದ ಫಲವನ್ನು ಸಹ ನಾನು ಕೊಲ್ಲುವೆನು.
17ನನ್ನ ದೇವರು ಅವರನ್ನು ತಳ್ಳಿಬಿಡುವರು. ಏಕೆಂದರೆ ಅವರು ಆತನಿಗೆ ವಿಧೇಯರಾಗಲಿಲ್ಲ. ಅವರು ಜನಾಂಗಗಳಲ್ಲಿ ಅಲೆದಾಡುವವರಾಗಿರುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.