Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಸಮುಯೇಲ 6

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ದಾವೀದನು ಇಸ್ರಾಯೇಲಿನಲ್ಲಿ ಆರಿಸಿದ ಮೂವತ್ತು ಸಾವಿರ ಸೈನಿಕರನ್ನು ಕೂಡಿಸಿಕೊಂಡು,
2ಆ ಕೆರೂಬಿಗಳ ನಡುವೆ ವಾಸವಾಗಿರುವ ಸೇನಾಧೀಶ್ವರ ಯೆಹೋವ ದೇವರ ಹೆಸರಿನಿಂದ ಕರೆಯಲಾದ ದೇವರ ಮಂಜೂಷವನ್ನು ತೆಗೆದುಕೊಂಡು ಬರಲು ತನ್ನ ಸಂಗಡ ಇದ್ದ ಸಮಸ್ತ ಜನರನ್ನು ಕರೆದುಕೊಂಡು, ಯೆಹೂದದ ಬಾಲಾ ಎಂಬಲ್ಲಿಗೆ ಹೊರಟನು.
3ಆಗ ಅವರು ಗುಡ್ಡದ ಮೇಲಿರುವ ಅಬೀನಾದಾಬನ ಮನೆಯೊಳಗಿಂದ ದೇವರ ಮಂಜೂಷವನ್ನು ತೆಗೆದುಕೊಂಡು, ಅದನ್ನು ಹೊಸ ಬಂಡಿಯ ಮೇಲೆ ಏರಿಸಿದರು. ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮಕ್ಕಳಾದ ಉಜ್ಜನು ಹಾಗೂ ಅಹಿಯೋವನು ಆ ಹೊಸ ಬಂಡಿಯನ್ನು ನಡೆಸಿದರು.
4ಅಬೀನಾದಾಬನ ಮನೆಯೊಳಗಿಂದ ಅದನ್ನು ಹೊರಗೆ ತಂದಾಗ ಅಹಿಯೋವನು ದೇವರ ಮಂಜೂಷದ ಮುಂದೆ ನಡೆದನು.
5ದಾವೀದನೂ, ಸಮಸ್ತ ಇಸ್ರಾಯೇಲರೂ ಸಕಲ ವಾದ್ಯಗಳಾದ ಕಿನ್ನರಿ, ವೀಣೆ, ದಮ್ಮಡಿ, ಸ್ವರಮಂಡಲ, ತಾಳ, ತುತೂರಿ ಇವುಗಳನ್ನು ತಮ್ಮ ಸಮಸ್ತ ಬಲದಿಂದ ಬಾರಿಸುತ್ತಾ, ಹಾಡುತ್ತಾ ಯೆಹೋವ ದೇವರ ಮುಂದೆ ಹೋದರು.
6ಅವರು ನಾಕೋನನ ಕಣದ ಬಳಿಗೆ ಬಂದಾಗ, ಎತ್ತುಗಳು ಎಡವಿದ್ದರಿಂದ ಉಜ್ಜನು ತನ್ನ ಕೈಚಾಚಿ ದೇವರ ಮಂಜೂಷವನ್ನು ಹಿಡಿದನು.
7ಆಗ ಯೆಹೋವ ದೇವರು ಉಜ್ಜನ ಮೇಲೆ ಕೋಪಗೊಂಡು, ಅಂಥ ಅಗೌರವಕ್ಕಾಗಿ ದೇವರು ಅವನನ್ನು ಶಿಕ್ಷಿಸಿದರು; ಅವನು ಅಲ್ಲಿಯೇ ದೇವರ ಮಂಜೂಷದ ಬಳಿಯಲ್ಲಿ ಸತ್ತನು.
8ಯೆಹೋವ ದೇವರು ಉಜ್ಜನನ್ನು ಶಿಕ್ಷಿಸಿದ್ದರಿಂದ, ದಾವೀದನು ಕೋಪಗೊಂಡು ಆ ಸ್ಥಳಕ್ಕೆ ಪೆರೆಚ್ ಉಜ್ಜ ಎಂದು ಹೆಸರಿಟ್ಟನು, ಇಂದಿನವರೆಗೂ ಆ ಸ್ಥಳಕ್ಕೆ ಪೆರೆಚ್ ಉಜ್ಜ ಎಂದು ಕರೆಯಲಾಗುತ್ತದೆ.
9ದಾವೀದನು ಆ ದಿನ ಯೆಹೋವ ದೇವರಿಗೆ ಭಯಪಟ್ಟು, “ಯೆಹೋವ ದೇವರ ಮಂಜೂಷವನ್ನು ನಾನಿರುವಲ್ಲಿಗೆ ಹೇಗೆ ತೆಗೆದುಕೊಂಡು ಹೋಗುವದು?” ಎಂದನು.
10ದಾವೀದನು ಯೆಹೋವ ದೇವರ ಮಂಜೂಷವನ್ನು ದಾವೀದನ ಪಟ್ಟಣಕ್ಕೆ ತರಲು ಮನಸ್ಸಿಲ್ಲದೆ, ಗಿತ್ತೀಯನಾದ ಓಬೇದ್ ಏದೋಮನ ಮನೆಗೆ ತೆಗೆದುಕೊಂಡು ಹೋದನು.
11ಯೆಹೋವ ದೇವರ ಮಂಜೂಷವು ಗಿತ್ತೀಯನಾದ ಓಬೇದ್ ಏದೋಮನ ಮನೆಯಲ್ಲಿ ಮೂರು ತಿಂಗಳು ಇದ್ದುದರಿಂದ, ಯೆಹೋವ ದೇವರು ಓಬೇದ್ ಎದೋಮನನ್ನೂ, ಅವನ ಮನೆಯವರೆಲ್ಲರನ್ನೂ ಆಶೀರ್ವದಿಸಿದರು.
12“ದೇವರ ಮಂಜೂಷದ ನಿಮಿತ್ತ ಯೆಹೋವ ದೇವರು ಓಬೇದ್ ಏದೋಮನ ಮನೆಯನ್ನೂ, ಅವನಿಗೆ ಉಂಟಾದದ್ದೆಲ್ಲವನ್ನೂ ಆಶೀರ್ವದಿಸಿದ್ದಾರೆ,” ಎಂದು ಅರಸನಾದ ದಾವೀದನಿಗೆ ತಿಳಿಸಲಾಯಿತು. ಆಗ ದಾವೀದನು ಹೋಗಿ, ಓಬೇದ್ ಏದೋಮನ ಮನೆಯೊಳಗಿಂದ ದೇವರ ಮಂಜೂಷವನ್ನು ದಾವೀದನ ಪಟ್ಟಣಕ್ಕೆ ಸಂತೋಷವಾಗಿ ತಂದನು.
13ಯೆಹೋವ ದೇವರ ಮಂಜೂಷವನ್ನು ಹೊತ್ತುಕೊಂಡು ಹೋಗುವವರು ಆರು ಹೆಜ್ಜೆ ನಡೆದಾಗ, ಅವನು ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ ಬಲಿಯಾಗಿ ಅರ್ಪಿಸಿದರು.
14ಇದಲ್ಲದೆ ದಾವೀದನು ನಾರಿನ ಏಫೋದನ್ನು ಧರಿಸಿಕೊಂಡು, ತನ್ನ ಪೂರ್ಣಬಲದಿಂದ ಯೆಹೋವ ದೇವರ ಮುಂದೆ ಕುಣಿದಾಡಿದನು.
15ಈ ಪ್ರಕಾರ ದಾವೀದನೂ, ಇಸ್ರಾಯೇಲರೆಲ್ಲರೂ ಯೆಹೋವ ದೇವರ ಮಂಜೂಷವನ್ನು ಆರ್ಭಟದಿಂದಲೂ, ತುತೂರಿಯ ಶಬ್ದದಿಂದಲೂ ಬರಮಾಡಿದರು.
16ಯೆಹೋವ ದೇವರ ಮಂಜೂಷವು ದಾವೀದನ ಪಟ್ಟಣದಲ್ಲಿ ಪ್ರವೇಶಿಸುವಾಗ, ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ನೋಡಿ, ಅರಸನಾದ ದಾವೀದನು ಯೆಹೋವ ದೇವರ ಮುಂದೆ ಕುಣಿದಾಡುವುದನ್ನು ಕಂಡು, ತನ್ನ ಹೃದಯದಲ್ಲಿ ಅವನನ್ನು ತಿರಸ್ಕರಿಸಿದಳು.
17ಅವರು ಯೆಹೋವ ದೇವರ ಮಂಜೂಷವನ್ನು ಒಳಗೆ ತಂದು, ದಾವೀದನು ಅದಕ್ಕೋಸ್ಕರ ಹಾಕಿದ ಗುಡಾರದೊಳಗೆ ಅದರ ನಿಯಮಿತ ಸ್ಥಳದಲ್ಲಿ ಅದನ್ನು ಇಟ್ಟ ತರುವಾಯ, ದಾವೀದನು ಯೆಹೋವ ದೇವರ ಸನ್ನಿಧಿಯಲ್ಲಿ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದನು.
18ದಾವೀದನು ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದ ತರುವಾಯ, ಸೇನಾಧೀಶ್ವರ ಯೆಹೋವ ದೇವರ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿ,
19ನೆರೆದುಬಂದ ಇಸ್ರಾಯೇಲಿನ ಪ್ರತಿಯೊಬ್ಬ ಪುರುಷನಿಗೂ ಸ್ತ್ರೀಗೂ, ಒಂದು ರೊಟ್ಟಿಯನ್ನೂ, ಖರ್ಜೂರದ ಉಂಡೆಯನ್ನೂ, ದ್ರಾಕ್ಷಿ ಹಣ್ಣಿನ ಉಂಡೆಯನ್ನೂ ಹಂಚಿದನು. ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.
20ಆಗ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವುದಕ್ಕೆ ತಿರುಗಿದಾಗ, ಸೌಲನ ಮಗಳಾದ ಮೀಕಲಳು ದಾವೀದನಿಗೆ ಎದುರಾಗಿ ಬಂದು, “ನಿಷ್ಪ್ರಯೋಜಕ ಮನುಷ್ಯರಲ್ಲಿ ಒಬ್ಬನು ನಾಚಿಕೆ ಇಲ್ಲದೆ ತನ್ನ ವಸ್ತ್ರಗಳನ್ನು ಬಿಚ್ಚಿ ಹಾಕಿದ ಹಾಗೆಯೇ, ಈ ಹೊತ್ತು ತನ್ನ ಸೇವಕರ ದಾಸಿಯರ ಕಣ್ಣು ಮುಂದೆ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿದ್ದ ಇಸ್ರಾಯೇಲಿನ ಅರಸನು ಈ ಹೊತ್ತು ಎಷ್ಟು ಘನಹೊಂದಿದನು?” ಎಂದಳು.
21ಆದರೆ ದಾವೀದನು ಮೀಕಲಳಿಗೆ, “ನಾನು ಕುಣಿದದ್ದು ಯೆಹೋವ ದೇವರ ಸನ್ನಿಧಿಯಲ್ಲಿ ಮಾತ್ರ; ನಿನ್ನ ತಂದೆಯನ್ನೂ ಅವನ ಮನೆಯವರೆಲ್ಲರನ್ನೂ ಬಿಟ್ಟುಬಿಟ್ಟು, ನನ್ನನ್ನೇ ಆರಿಸಿಕೊಂಡು, ತಮ್ಮ ಪ್ರಜೆಗಳಾದ ಇಸ್ರಾಯೇಲರ ಅರಸನನ್ನಾಗಿ ಮಾಡಿದ ಆ ಯೆಹೋವ ದೇವರ ಮುಂದೆ ಇನ್ನೂ ಹೆಚ್ಚಾಗಿ ಕುಣಿದಾಡುವೆನು.
22ನಾನು ಇನ್ನೂ ಇದಕ್ಕಿಂತ ಅಲ್ಪನಾಗಿರುವುದಕ್ಕೂ, ಹೀನೈಸಿಕೊಳ್ಳುವುದಕ್ಕೂ, ಸಿದ್ಧನಾಗಿದ್ದೇನೆ. ಆದರೆ ನೀನು ಹೇಳಿದ ದಾಸಿಯರಿಂದ ನಿಶ್ಚಯವಾಗಿ ಘನತೆಯನ್ನು ಹೊಂದುವೆನು,” ಎಂದನು.
23ಆದ್ದರಿಂದ ಸೌಲನ ಮಗಳಾದ ಮೀಕಲಳು ತನ್ನ ಮರಣದ ದಿವಸದ ಮಟ್ಟಿಗೂ ಮಕ್ಕಳು ಆಗಲಿಲ್ಲ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.