Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಸಮುಯೇಲ 5

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಇಸ್ರಾಯೇಲಿನ ಎಲ್ಲಾ ಗೋತ್ರದವರು ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಬಂದು, “ನಾವು ನಿನ್ನ ಎಲುಬೂ, ನಿನ್ನ ಮಾಂಸವೂ ಆಗಿದ್ದೇವೆ.
2ಇದಲ್ಲದೆ ಪೂರ್ವದಲ್ಲಿ ಸೌಲನು ನಮ್ಮ ಮೇಲೆ ಅರಸನಾಗಿದ್ದಾಗ, ನೀನು ದಳಪತಿಯಾಗಿ ಇಸ್ರಾಯೇಲನ್ನು ಹೊರಗೆ ನಡೆಸುವವನಾಗಿಯೂ ಒಳಗೆ ತರುವವನಾಗಿಯೂ ಇದ್ದವನು. ಆದ್ದರಿಂದ ಯೆಹೋವ ದೇವರು ನಿನಗೆ, ‘ನೀನು ನನ್ನ ಜನರಾದ ಇಸ್ರಾಯೇಲರ ನಾಯಕನೂ ಪಾಲಕನೂ ಆಗಿರುವೆ ಎಂದು ಹೇಳಿದರು,’ ” ಎಂದರು.
3ಹಾಗೆಯೇ ಇಸ್ರಾಯೇಲಿನ ಹಿರಿಯರೆಲ್ಲರು ಹೆಬ್ರೋನಿನಲ್ಲಿದ್ದ ಅರಸನ ಬಳಿಗೆ ಬಂದಾಗ, ಅರಸನಾದ ದಾವೀದನು ಹೆಬ್ರೋನಿನಲ್ಲಿ ಯೆಹೋವ ದೇವರ ಮುಂದೆ ಅವರ ಸಂಗಡ ಒಡಂಬಡಿಕೆ ಮಾಡಿದನು. ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕ ಮಾಡಿದರು.
4ದಾವೀದನು ಆಳಲು ಪ್ರಾರಂಭಿಸಿದಾಗ, ಮೂವತ್ತು ವರ್ಷದವನಾಗಿದ್ದನು. ಅವನು ನಲವತ್ತು ವರ್ಷ ಆಳಿದನು.
5ಅವನು ಹೆಬ್ರೋನಿನಲ್ಲಿ ಯೆಹೂದದ ಮೇಲೆ ಏಳುವರೆ ವರ್ಷ ಆಳಿದನು. ಯೆರೂಸಲೇಮಿನಲ್ಲಿ ಸಮಸ್ತ ಇಸ್ರಾಯೇಲರ ಮೇಲೆಯೂ, ಸಮಸ್ತ ಯೆಹೂದದ ಜನರ ಮೇಲೆಯೂ ಮೂವತ್ತು ಮೂರು ವರ್ಷ ಆಳಿದನು. ದಾವೀದನು ಯೆರೂಸಲೇಮನ್ನು ಗೆದ್ದದ್ದು
6ಅರಸನೂ ಅವನ ಜನರೂ ಯೆಬೂಸಿಯರ ವಿರುದ್ಧವಾಗಿ ಯೆರೂಸಲೇಮಿಗೆ ಬಂದರು. ದಾವೀದನು ಇದರೊಳಗೆ ಬರಲು ಸಾಧ್ಯವಿಲ್ಲವೆಂದು ಅವರು ನೆನಸಿ ದಾವೀದನಿಗೆ, “ನೀನು ಕಣ್ಣು ಕಾಣದವರನ್ನೂ ಕುಂಟರನ್ನೂ ತೆಗೆದುಹಾಕದ ಹೊರತು, ನೀನು ಇಲ್ಲಿಗೆ ಬರಲಾರೆ,” ಎಂದರು.
7ಆದರೂ ದಾವೀದನು ಚೀಯೋನಿನ ಕೋಟೆಯನ್ನು ವಶಪಡಿಸಿಕೊಂಡನು. ಅದೇ ದಾವೀದನ ಪಟ್ಟಣವು.
8ಆ ದಿವಸದಲ್ಲಿ ದಾವೀದನು, “ಜಲದ್ವಾರವನ್ನು ದಾಟಿ, ಯೆಬೂಸಿಯರನ್ನು ಜಯಿಸಬೇಕೆಂದಿರುವವನು, ಜಲದ್ವಾರದ ಮೂಲಕ ಹತ್ತಿ ಹೋಗಿ, ನನ್ನನ್ನು ದ್ವೇಷಿಸುವ ಕುರುಡರನ್ನೂ ಕುಂಟರನ್ನೂ ನಾಶಮಾಡಲಿ,” ಎಂದು ಹೇಳಿದ್ದನು. ಆದುದರಿಂದಲೇ, “ಕುರುಡರೂ ಕುಂಟರೂ ಅರಮನೆಯೊಳಗೆ ಪ್ರವೇಶಿಸಲಾರರು,” ಎಂಬ ಗಾದೆಯಾಯಿತು.
9ದಾವೀದನು ಕೋಟೆಯಲ್ಲಿ ವಾಸಮಾಡಿದನು, ಅದಕ್ಕೆ ದಾವೀದನ ಪಟ್ಟಣವೆಂದು ಹೆಸರಿಟ್ಟನು. ಇದಲ್ಲದೆ ಅವನು ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ, ಒಳಗಿನ ಪೌಳಿಗೋಡೆಯನ್ನು ಕಟ್ಟಿಸಿದನು.
10ಹೀಗೆಯೇ ಸರ್ವಶಕ್ತರಾದ ಯೆಹೋವ ದೇವರು ದಾವೀದನ ಸಂಗಡ ಇದ್ದುದರಿಂದ ಅವನು ದಿನದಿನಕ್ಕೆ ಬಲಗೊಳ್ಳುತ್ತಾ ಇದ್ದನು.
11ಆಗ ಟೈರಿನ ಅರಸನಾದ ಹೀರಾಮನು ದಾವೀದನ ಬಳಿಗೆ ದೂತರನ್ನು, ದೇವದಾರು ಮರಗಳನ್ನು, ಬಡಗಿಯವರನ್ನು ಮತ್ತು ಕಲ್ಲುಕುಟಿಗರನ್ನು ಕಳುಹಿಸಿದನು, ಅವರು ದಾವೀದನಿಗೆ ಅರಮನೆಯನ್ನು ಕಟ್ಟಿದರು.
12ಆಗ ದಾವೀದನು, ತನ್ನನ್ನು ಯೆಹೋವ ದೇವರು ಇಸ್ರಾಯೇಲಿನ ಮೇಲೆ ಅರಸನನ್ನಾಗಿ ಸ್ಥಿರಪಡಿಸಿದರೆಂದೂ ತಮ್ಮ ಜನರಾದ ಇಸ್ರಾಯೇಲರ ನಿಮಿತ್ತ ತನ್ನ ರಾಜ್ಯವನ್ನು ಉನ್ನತಕ್ಕೇರಿಸಿದರೆಂದೂ ತಿಳಿದುಕೊಂಡನು.
13ದಾವೀದನು ಹೆಬ್ರೋನನ್ನು ಬಿಟ್ಟುಹೋದ ತರುವಾಯ, ಯೆರೂಸಲೇಮಿನಲ್ಲಿ ಸಹ ಕೆಲವು ಸ್ತ್ರೀಯರನ್ನು ಪತ್ನಿಯರನ್ನಾಗಿಯೂ ಉಪಪತ್ನಿಯರನ್ನಾಗಿಯೂ ಮಾಡಿಕೊಂಡದ್ದರಿಂದ ಅವನಿಗೆ ಇನ್ನೂ ಹೆಚ್ಚು ಪುತ್ರ, ಪುತ್ರಿಯರು ಹುಟ್ಟಿದರು.
14ಯೆರೂಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು: ಶಮ್ಮೂವ ಎಂಬ ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್,
15ಇಬ್ಹಾರ್, ಎಲೀಷೂವ, ನೆಫೆಗ್, ಯಾಫೀಯ,
16ಎಲೀಷಾಮ, ಎಲ್ಯಾದ, ಎಲೀಫೆಲೆಟ್, ಇವರೇ. ದಾವೀದನು ಫಿಲಿಷ್ಟಿಯರನ್ನು ಸೋಲಿಸಿದ್ದು
17ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನಾಗಿ ಅಭಿಷೇಕ ಹೊಂದಿದ್ದಾನೆಂದು ಫಿಲಿಷ್ಟಿಯರು ಕೇಳಿದಾಗ, ಫಿಲಿಷ್ಟಿಯರೆಲ್ಲರೂ ದಾವೀದನನ್ನು ಸೆರೆಹಿಡಿಯಲು ಹೋದರು. ದಾವೀದನು ಅದನ್ನು ಕೇಳಿ ಕೋಟೆ ಸ್ಥಳಕ್ಕೆ ಹೋದನು.
18ಆಗ ಫಿಲಿಷ್ಟಿಯರು ಬಂದು ರೆಫಾಯಿಮ್ ತಗ್ಗಿನಲ್ಲಿ ಇಳಿದುಕೊಂಡರು.
19ಅದಕ್ಕೆ ದಾವೀದನು, “ನಾನು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಹೋಗಬಹುದೋ? ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವಿರೋ?” ಎಂದು ಯೆಹೋವ ದೇವರನ್ನು ವಿಚಾರಿಸಿದನು. ಆಗ ಯೆಹೋವ ದೇವರು ಅವನಿಗೆ, “ಹೋಗು, ಖಂಡಿತವಾಗಿ ನಾನು ಅವರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನು,” ಎಂದು ಹೇಳಿದರು.
20ಆದಕಾರಣ ದಾವೀದನು ಬಾಳ್ ಪೆರಾಜಿಮ್ ಎಂಬಲ್ಲಿಗೆ ಹೋಗಿ ಫಿಲಿಷ್ಟಿಯರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿದನು. ಆಗ ದಾವೀದನು, “ಪ್ರವಾಹವು ಕೊಚ್ಚಿಕೊಂಡು ಹೋಗುವಹಾಗೆ, ಯೆಹೋವ ದೇವರು ನನ್ನ ಶತ್ರುಗಳನ್ನು ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾರೆ,” ಎಂದು ಹೇಳಿ, ಆ ಸ್ಥಳಕ್ಕೆ ಬಾಳ್ ಪೆರಾಜಿಮ್ ಎಂದು ಹೆಸರಿಟ್ಟನು.
21ಅಲ್ಲಿ ಫಿಲಿಷ್ಟಿಯರು ತಮ್ಮ ವಿಗ್ರಹಗಳನ್ನು ಬಿಟ್ಟು ಹೋದುದರಿಂದ ದಾವೀದನೂ, ಅವನ ಜನರೂ ಅವುಗಳನ್ನು ಸುಟ್ಟುಬಿಟ್ಟರು.
22ಫಿಲಿಷ್ಟಿಯರು ಮತ್ತೆ ತಿರುಗಿಬಂದು, ರೆಫಾಯಿಮಿನ ತಗ್ಗಿನಲ್ಲಿ ವಿಸ್ತಾರವಾಗಿ ಹರಡಿಕೊಂಡರು.
23ಆದ್ದರಿಂದ ದಾವೀದನು ಇದರ ಬಗ್ಗೆ ಯೆಹೋವ ದೇವರನ್ನು ವಿಚಾರಿಸಿದನು. ಆಗ ದೇವರು ಅವನಿಗೆ, “ನೀನು ಅವರ ಮುಂದೆ ಹೋಗದೆ, ಅವರ ಹಿಂದಿನಿಂದ ಸುತ್ತಿಕೊಂಡು ಹೋಗಿ, ಬಾಕಾಮರಗಳಿಗೆ ಎದುರಾಗಿ ಅವರ ಮೇಲೆ ದಾಳಿಮಾಡು.
24ಬಾಕಾಮರಗಳ ತುದಿಗಳಲ್ಲಿ ನಡೆದುಬರುವ ಶಬ್ದವನ್ನು ನೀನು ಕೇಳಿದಾಗಲೇ, ಯೆಹೋವ ದೇವರು ಫಿಲಿಷ್ಟಿಯರ ದಂಡನ್ನು ಹೊಡೆಯಲು ನಿನ್ನ ಮುಂದಾಗಿ ಹೊರಟರೆಂದು ತಿಳಿದುಕೊಂಡು ಅವರ ಮೇಲೆ ದಾಳಿಮಾಡು,” ಎಂದರು.
25ಆಗ ದಾವೀದನು, ಯೆಹೋವ ದೇವರು ತನಗೆ ಆಜ್ಞಾಪಿಸಿದ ಪ್ರಕಾರಮಾಡಿ, ಅವನು ಗೆಬದಿಂದ ಗೆಜೆರಿನವರೆಗೆ ಫಿಲಿಷ್ಟಿಯರನ್ನು ಹೊಡೆದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.