Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪೂರ್ವಕಾಲ ವೃತ್ತಾಂತ 6

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆಗ ಸೊಲೊಮೋನನು, “ಯೆಹೋವ ದೇವರೇ, ಕಾರ್ಗತ್ತಲಲ್ಲಿ ವಾಸಿಸುತ್ತೇನೆಂದು ಹೇಳಿದ್ದೀರಿ;
2ಆದರೆ ನಾನು ನಿಮಗೋಸ್ಕರ ಭವ್ಯವಾದ ಮಂದಿರವನ್ನು ಕಟ್ಟಿಸಿದ್ದೇನೆ, ಅದು ನಿಮಗೆ ಶಾಶ್ವತವಾದ ವಾಸಸ್ಥಳವಾಗಿರಲಿ,” ಎಂದನು.
3ಅರಸನು ಜನರ ಕಡೆ ತಿರುಗಿಕೊಂಡು, ಎದ್ದುನಿಂತಿದ್ದ ಇಸ್ರಾಯೇಲ್ ಜನರನ್ನೆಲ್ಲಾ ಆಶೀರ್ವದಿಸಿದನು.
4ನಂತರ ಅರಸನು ಹೀಗೆ ಹೇಳಿದನು: “ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ. ಅವರು ನನ್ನ ತಂದೆಯಾದ ದಾವೀದನಿಗೆ ತಮ್ಮ ಬಾಯಿಂದ ವಾಗ್ದಾನ ಮಾಡಿದ್ದನ್ನು, ತಮ್ಮ ಕೈಗಳಿಂದಲೇ ನೆರವೇರಿಸಿದರು.
5ದೇವರು ತಮ್ಮ ಬಾಯಿಂದ, ‘ನನ್ನ ಜನರಾದ ಇಸ್ರಾಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಿದ ದಿನ ಮೊದಲುಗೊಂಡು, ನನ್ನ ನಾಮವು ಅದರಲ್ಲಿರುವ ಹಾಗೆ ಆಲಯವನ್ನು ಕಟ್ಟುವುದಕ್ಕೆ, ಇಸ್ರಾಯೇಲಿನ ಸಮಸ್ತ ಗೋತ್ರಗಳೊಳಗಿಂದ ಪಟ್ಟಣವನ್ನು ಆರಿಸಿಕೊಳ್ಳಲಿಲ್ಲ. ನನ್ನ ಜನರಾದ ಇಸ್ರಾಯೇಲರ ಮೇಲೆ ಆಳುವವನಾಗಿರಲು ನಾನು ಒಬ್ಬನನ್ನಾದರೂ ಆಯ್ದುಕೊಳ್ಳಲಿಲ್ಲ.
6ಆದರೆ ನನ್ನ ಹೆಸರು ಅಲ್ಲಿ ಇರುವಂತೆ ಯೆರೂಸಲೇಮನ್ನೂ, ಇಸ್ರಾಯೇಲರನ್ನು ಆಳುವುದಕ್ಕೆ ನಾನು ದಾವೀದನನ್ನೂ ಆರಿಸಿಕೊಂಡಿದ್ದೇನೆ,’ ಎಂದು ಹೇಳಿದ್ದರು.
7“ಆದಕಾರಣ ನನ್ನ ತಂದೆ ದಾವೀದನು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಹೆಸರಿಗೋಸ್ಕರ ಆಲಯವನ್ನು ಕಟ್ಟಬೇಕೆಂದು ಮನಸ್ಸು ಮಾಡಿದಾಗ,
8ಯೆಹೋವ ದೇವರು ಆತನಿಗೆ, ‘ನೀನು ನನ್ನ ಹೆಸರಿಗೋಸ್ಕರ ಒಂದು ಆಲಯವನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದು ಒಳ್ಳೇದೇ ಸರಿ.
9ಆದರೆ ನೀನು ಆಲಯವನ್ನು ಕಟ್ಟಬಾರದು. ನಿನ್ನಿಂದ ಹುಟ್ಟುವ ಮಗನೇ, ನನ್ನ ಹೆಸರಿಗೋಸ್ಕರ ಆಲಯವನ್ನು ಕಟ್ಟಬೇಕು,’ ಎಂದು ಹೇಳಿದರು.
10“ಈಗ ಯೆಹೋವ ದೇವರು ತಾವು ಹೇಳಿದ ವಾಗ್ದಾನವನ್ನು ನೆರವೇರಿಸಿದ್ದಾರೆ. ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ, ಯೆಹೋವ ದೇವರು ಮಾತುಕೊಟ್ಟ ಪ್ರಕಾರ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ದೇವರಾದ ಯೆಹೋವ ದೇವರ ಹೆಸರಿಗೋಸ್ಕರ ಈ ಆಲಯವನ್ನು ಕಟ್ಟಿಸಿದ್ದೇನೆ.
11ಯೆಹೋವ ದೇವರು ಇಸ್ರಾಯೇಲರ ಸಂಗಡ ಮಾಡಿದ ಒಡಂಬಡಿಕೆಯು ಇರುವ ಮಂಜೂಷವನ್ನು ಅದರಲ್ಲಿ ಇಟ್ಟಿದ್ದೇನೆ,” ಎಂದನು. ಸೊಲೊಮೋನನ ಪ್ರಾರ್ಥನೆ
12ಆಗ ಸೊಲೊಮೋನನು ಇಸ್ರಾಯೇಲಿನ ಸಮಸ್ತ ಸಮೂಹದವರ ಸಮ್ಮುಖದಲ್ಲಿ ಯೆಹೋವ ದೇವರ ಬಲಿಪೀಠದ ಮುಂದೆ ನಿಂತು, ಪ್ರಾರ್ಥನೆಗಾಗಿ ತನ್ನ ಕೈಗಳನ್ನು ಚಾಚಿದನು.
13ಸೊಲೊಮೋನನು ಸುಮಾರು ಎರಡೂವರೆ ಮೀಟರ್ ಉದ್ದ, ಎರಡೂವರೆ ಮೀಟರ್ ಅಗಲ, ಒಂದೂವರೆ ಮೀಟರ್ ಎತ್ತರವಾಗಿರುವ ಒಂದು ಕಂಚಿನ ಪೀಠವನ್ನು ಮಾಡಿಸಿ, ಅಂಗಳದ ಮಧ್ಯದಲ್ಲಿಡಿಸಿದನು. ತಾನು ಅದರ ಮೇಲೆ ನಿಂತು ಇಸ್ರಾಯೇಲಿನ ಸಮಸ್ತ ಸಮೂಹದವರ ಸಮ್ಮುಖದಲ್ಲಿ ಮೊಣಕಾಲೂರಿ ಆಕಾಶದೆಡೆಗೆ ತನ್ನ ಕೈಗಳನ್ನು ಚಾಚಿ,
14ಹೀಗೆ ಪ್ರಾರ್ಥಿಸಿದನು. “ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ಆಕಾಶದಲ್ಲಾದರೂ, ಭೂಮಿಯಲ್ಲಾದರೂ ನಿಮ್ಮ ಹಾಗೆ ದೇವರು ಯಾರೂ ಇಲ್ಲ. ಸಂಪೂರ್ಣ ಹೃದಯದಿಂದ ನಿಮಗೆ ನಡೆದುಕೊಳ್ಳುವಂಥ ಸೇವಕರ ಬಗ್ಗೆ ನೀವು ನಿಮ್ಮ ಒಡಂಬಡಿಕೆಯನ್ನು ನೆರವೇರಿಸಿ ಕೃಪೆಯನ್ನು ತೋರಿಸಿದ್ದೀರಿ.
15ನಿಮ್ಮ ಸೇವಕನಾದಂಥ ನನ್ನ ತಂದೆಯಾದ ದಾವೀದನಿಗೆ ಕೊಟ್ಟ ಮಾತನ್ನು ನೆರವೇರಿಸಿ, ನೀವು ನಿಮ್ಮ ಬಾಯಿಂದ ಹೇಳಿದ್ದನ್ನು ಇಂದು ಈಡೇರಿಸಿದ್ದೀರಿ.
16“ಆದಕಾರಣ, ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ‘ನಿಮ್ಮ ಸಂತಾನದವರು, ನಿನ್ನಂತೆ ಜಾಗ್ರತೆಯಾಗಿದ್ದು, ನನ್ನ ನಿಯಮದ ಪ್ರಕಾರ ನಡೆದುಕೊಳ್ಳುವದಾದರೆ, ಅವರು ತಪ್ಪದೆ ಇಸ್ರಾಯೇಲಿನ ಸಿಂಹಾಸನದ ಮೇಲೆ ನನ್ನ ಸಮ್ಮುಖದಲ್ಲಿ ಕುಳಿತುಕೊಳ್ಳುವರು,’ ಎಂದು ನೀವು ನನ್ನ ತಂದೆಯಾದ ನಿಮ್ಮ ಸೇವಕನಾದ ದಾವೀದನಿಗೆ ವಾಗ್ದಾನ ಮಾಡಿದ್ದನ್ನು ನೆರವೇರಿಸಿರಿ.
17ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ನಿಮ್ಮ ಸೇವಕನಾದ ದಾವೀದನಿಗೆ ಹೇಳಿದ ವಾಕ್ಯವು ನೆರವೇರಲಿ.
18“ಆದರೆ ದೇವರು ನಿಜವಾಗಿ ಭೂಮಿಯ ಮೇಲೆ ಮನುಷ್ಯರ ಸಂಗಡ ವಾಸವಾಗಿರುವರೋ? ಇಗೋ, ಆಕಾಶವೂ, ಉನ್ನತೋನ್ನತ ಆಕಾಶವೂ ನಿಮಗೆ ಸಾಲದು. ಹಾಗಾದರೆ, ನಾನು ಕಟ್ಟಿಸಿದ ಈ ಆಲಯವು ನಿಮಗೆ ಸಾಲುವುದು ಹೇಗೆ?
19ಆದರೂ ನನ್ನ ದೇವರಾದ ಯೆಹೋವ ದೇವರೇ, ನಿಮ್ಮ ಸೇವಕನ ಪ್ರಾರ್ಥನೆಗೂ, ಅವನ ವಿಜ್ಞಾಪನೆಗೂ ತಿರುಗಿಕೊಂಡು, ನಿಮ್ಮ ಸೇವಕನು ನಿಮ್ಮ ಮುಂದೆ ಪ್ರಾರ್ಥಿಸುವ ಪ್ರಾರ್ಥನೆಯ ಕೂಗನ್ನು ಕೇಳಿರಿ.
20ನಿಮ್ಮ ಸೇವಕನು ಈ ಸ್ಥಳದಲ್ಲಿ ಮಾಡುವ ಪ್ರಾರ್ಥನೆಯನ್ನು ನೀವು ಕೇಳುವಂತೆ, ‘ಇಲ್ಲಿ ನನ್ನ ನಾಮಪ್ರಭಾವ ಇರುವುದು,’ ಎಂದು ನೀವು ಹೇಳಿದ ಈ ಆಲಯದ ಮೇಲೆ ರಾತ್ರಿ ಹಗಲೂ ನಿಮ್ಮ ಕಟಾಕ್ಷವಿರಲಿ.
21ಇದಲ್ಲದೆ ನೀವು ನಿಮ್ಮ ಸೇವಕನ ಮತ್ತು ನಿಮ್ಮ ಜನರಾದ ಇಸ್ರಾಯೇಲರ ವಿಜ್ಞಾಪನೆಯನ್ನೂ ಕೇಳಿರಿ. ಅವರು ಈ ಸ್ಥಳದ ಕಡೆಗೆ ಪ್ರಾರ್ಥಿಸುವಾಗ, ನೀವು ವಾಸಮಾಡುವ ಸ್ಥಳವಾದ ಪರಲೋಕದಿಂದ ಕೇಳಿ, ಕ್ಷಮೆಯನ್ನು ದಯಪಾಲಿಸಿರಿ.
22“ತನ್ನ ನೆರೆಯವನಿಗೆ ವಿರೋಧವಾಗಿ ತಪ್ಪುಮಾಡಿದವನೆಂಬ ಸಂಶಯಕ್ಕೆ ಗುರಿಯಾದ ಒಬ್ಬ ವ್ಯಕ್ತಿ, ತಾನು ನಿರ್ದೋಷಿಯೆಂದು ಪ್ರಮಾಣಮಾಡಬೇಕಾದಾಗ, ಅಂಥವನು ಈ ಆಲಯಕ್ಕೆ ಬಂದು, ನಿಮ್ಮ ಪೀಠದ ಮುಂದೆ ನಿಂತು ಪ್ರಮಾಣಮಾಡಿದರೆ,
23ನೀವೇ ಆ ಅಪರಾಧಿಯನ್ನು ಖಂಡಿಸಿ ಅವನ ತಪ್ಪನ್ನು ಅವನ ತಲೆಯ ಮೇಲೆಯೇ ಹೊರಿಸಿರಿ; ಅವನು ಅಪರಾಧಿಯೆಂದು ತೋರಿಸಿಕೊಡಿರಿ. ನಿರ್ದೋಷಿಯಾಗಿದ್ದರೆ ಅವನ ನೀತಿಯ ಫಲವನ್ನು ಅನುಗ್ರಹಿಸಿ ಅವನು ನೀತಿವಂತನೆಂದು ತೋರಿಸಿಕೊಡುವ ಹಾಗೆ ಪರಲೋಕದಲ್ಲಿರುವ ನೀವು ಅದನ್ನು ಕೇಳಿ, ನಿಮ್ಮ ಸೇವಕರ ನ್ಯಾಯವನ್ನು ತೀರಿಸಿರಿ.
24“ನಿಮ್ಮ ಜನರಾದ ಇಸ್ರಾಯೇಲರು ನಿಮಗೆ ವಿರೋಧವಾಗಿ ಪಾಪಮಾಡಿದ್ದರಿಂದ, ತಮ್ಮ ಶತ್ರುವಿನ ಮುಂದೆ ಪರಾಭವಗೊಂಡು, ನಿಮ್ಮ ಕಡೆಗೆ ತಿರುಗಿಕೊಂಡು, ನಿಮ್ಮ ನಾಮವನ್ನು ಕೊಂಡಾಡಿ, ಈ ಆಲಯಕ್ಕೆ ಬಂದು, ನಿಮ್ಮ ಸನ್ನಿಧಿಯಲ್ಲಿ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಮಾಡಿದರೆ,
25ಆಗ ನೀವು ಪರಲೋಕದಿಂದ ಕೇಳಿ, ನಿಮ್ಮ ಜನರಾದ ಇಸ್ರಾಯೇಲರ ಪಾಪವನ್ನು ಮನ್ನಿಸಿ, ನೀವು ಅವರಿಗೂ ಅವರ ತಂದೆಗಳಿಗೂ ಕೊಟ್ಟ ದೇಶಕ್ಕೆ ಅವರನ್ನು ತಿರುಗಿ ಬರಮಾಡಿರಿ.
26“ಅವರು ನಿಮಗೆ ವಿರೋಧವಾಗಿ ಪಾಪವನ್ನು ಮಾಡಿದ್ದರಿಂದ, ನೀವು ಆಕಾಶವನ್ನು ಮಳೆಗರೆಯದಂತೆ ಮುಚ್ಚಿ ಅವರನ್ನು ಕುಂದಿಸಿದಾಗ ಅವರು ತಮ್ಮ ಪಾಪವನ್ನು ಬಿಟ್ಟು ಈ ಸ್ಥಳದ ಕಡೆಗೆ ತಿರುಗಿಕೊಂಡು, ನಿಮ್ಮ ನಾಮವನ್ನು ಕೊಂಡಾಡಿ ಪ್ರಾರ್ಥಿಸಿದರೆ,
27ಆಗ ನೀವು ಪರಲೋಕದಿಂದ ಕೇಳಿ, ನಿಮ್ಮ ಸೇವಕರಾದ ಇಸ್ರಾಯೇಲ್ ಜನರ ಪಾಪವನ್ನು ಮನ್ನಿಸಿ, ಅವರು ನಡೆಯಬೇಕಾದ ಸನ್ಮಾರ್ಗವನ್ನು ಅವರಿಗೆ ಕಲಿಸಿ, ನಿಮ್ಮ ಜನರಿಗೆ ಬಾಧ್ಯತೆಯಾಗಿ ಕೊಟ್ಟ ಭೂಮಿಯ ಮೇಲೆ ಮಳೆಯನ್ನು ಕೊಡಿರಿ.
28“ದೇಶದಲ್ಲಿ ಬರಗಾಲ, ಘೋರವ್ಯಾಧಿ, ಉರಿಗಾಳಿ, ಬೆಳೆಗಳ ಮೇಲೆ ಮಿಡತೆ, ಕಂಬಳಿಹುಳು ಇವುಗಳು ಇದ್ದರೆ, ಅಥವಾ ಅವರ ಶತ್ರುಗಳು ತಮ್ಮ ಸ್ವದೇಶದ ಪಟ್ಟಣಗಳಲ್ಲಿ ಅವರನ್ನು ಹಿಂಸಿಸಿದರೂ, ಯಾವ ಬಾಧೆ ಯಾವ ಬೇನೆ ಇದ್ದರೂ,
29ನಿಮ್ಮ ಜನರಾದ ಸಮಸ್ತ ಇಸ್ರಾಯೇಲಿನ ಯಾವ ಒಬ್ಬ ಮನುಷ್ಯನಾದರೂ ತಾನು ಅನುಭವಿಸುತ್ತಿರುವ ಉಪದ್ರವ ದುಃಖಗಳ ನಿಮಿತ್ತವಾಗಿ ಈ ಮಂದಿರದ ಕಡೆಗೆ ತನ್ನ ಕೈಗಳನ್ನು ಚಾಚಿ, ಯಾವ ಪ್ರಾರ್ಥನೆಯನ್ನಾದರೂ, ವಿಜ್ಞಾಪನೆಯನ್ನಾದರೂ ಮಾಡಿದರೆ,
30ನೀವು ವಾಸಮಾಡುವ ಪರಲೋಕದಿಂದ ಕೇಳಿ ಮನ್ನಿಸಿ, ಮನುಷ್ಯನ ಹೃದಯವನ್ನು ತಿಳಿದಿರುವ ನೀವು ಪ್ರತಿ ಮನುಷ್ಯನಿಗೂ ಅವನವನ ಮಾರ್ಗದ ಪ್ರಕಾರ ಪ್ರತಿಫಲಕೊಡಿರಿ. ಏಕೆಂದರೆ ನೀವೊಬ್ಬರೇ ಸಮಸ್ತ ಜನರ ಹೃದಯಗಳನ್ನು ತಿಳಿದವರಾಗಿದ್ದೀರಿ.
31ಆಗ ನೀವು ನಮ್ಮ ತಂದೆಗಳಿಗೆ ಕೊಟ್ಟ ದೇಶದಲ್ಲಿ ಅವರು ವಾಸಿಸುವ ಕಾಲದಲ್ಲೆಲ್ಲಾ ನಿಮ್ಮಲ್ಲಿ ಭಯಭಕ್ತಿಯುಳ್ಳವರಾಗಿ ನಿಮ್ಮ ಮಾರ್ಗಗಳಲ್ಲಿ ನಡೆಯುವರು.
32“ನಿಮ್ಮ ಜನರಾದ ಇಸ್ರಾಯೇಲಿನವನಲ್ಲದೆ ನಿಮ್ಮ ಮಹಾನಾಮದ ನಿಮಿತ್ತ ದೂರದೇಶದಿಂದ ಬಂದ ಒಬ್ಬ ಪರದೇಶಿಯು, ನಿಮ್ಮ ಬಲವಾದ ಕೈ, ನಿಮ್ಮ ಚಾಚಿದ ತೋಳು ಇವುಗಳ ಕುರಿತು ಕೇಳಿ, ಅವರು ಈ ಆಲಯದ ಕಡೆಗೆ ಬಂದು ಪ್ರಾರ್ಥನೆಮಾಡಿದರೆ,
33ನೀವು ವಾಸಮಾಡುವ ಪರಲೋಕದಿಂದ ಕೇಳಿ, ಪರದೇಶಿಯು ಕೇಳಿದ್ದೆಲ್ಲವನ್ನು ನೆರವೇರಿಸಿರಿ. ಆಗ ಭೂಲೋಕದ ಎಲ್ಲಾ ಜನರೂ ನಿಮ್ಮ ನಾಮವನ್ನು ತಿಳಿದು, ನಿಮ್ಮ ಜನರಾದ ಇಸ್ರಾಯೇಲರಂತೆ ನಿಮಗೆ ಭಯಭಕ್ತಿಯುಳ್ಳವರಾಗಿ, ನಾನು ಕಟ್ಟಿಸಿದ ಈ ಆಲಯವು ನಿಮ್ಮ ಹೆಸರಿನಿಂದ ಕರೆಯಲಾಗಿದೆ ಎಂದು ತಿಳಿದುಕೊಳ್ಳುವರು.
34“ನೀವು ನಿಮ್ಮ ಜನರನ್ನು ತಮ್ಮ ಶತ್ರುಗಳ ಸಂಗಡ ಯುದ್ಧಮಾಡುವದಕ್ಕೆ ಎಲ್ಲಿಗಾದರೂ ಕಳುಹಿಸಿದಾಗ, ಅವರು ಅಲ್ಲಿಂದ ನೀವು ಆಯ್ದುಕೊಂಡ ಪಟ್ಟಣದ ಕಡೆಗೂ, ನಾನು ನಿಮ್ಮ ಹೆಸರಿಗಾಗಿ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು, ಅವರು ನಿಮಗೆ ಪ್ರಾರ್ಥನೆಮಾಡಿದರೆ,
35ಆಗ ನೀವು ಪರಲೋಕದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ, ಅವರಿಗೆ ನ್ಯಾಯವನ್ನು ತೀರಿಸಿರಿ.
36“ಪಾಪ ಮಾಡದವನು ಯಾವನೂ ಇಲ್ಲವಲ್ಲಾ. ಆದ್ದರಿಂದ ಅವರು ನಿಮಗೆ ವಿರೋಧವಾಗಿ ಪಾಪಮಾಡಲು, ನೀವು ಅವರ ಮೇಲೆ ಕೋಪಿಸಿಕೊಂಡು ದೂರವಾದರೂ, ಸಮೀಪವಾದರೂ ಶತ್ರುವಿನ ದೇಶಕ್ಕೆ ಅವರು ಸೆರೆಯಾಗಿ ಹೋಗುವಂತೆ ನೀವು ಅವರನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿದರೆ,
37ಅವರು ಸೆರೆಯವರಾಗಿ ಬಿದ್ದುಕೊಂಡಿರುವ ದೇಶದಲ್ಲಿ ಮಾನಸಾಂತರಪಟ್ಟು, ‘ನಾವು ಪಾಪಮಾಡಿದ್ದೇವೆ, ತಪ್ಪುಮಾಡಿ ದುಷ್ಟರಾಗಿ ನಡೆದಿದ್ದೇವೆ,’ ಎಂದು ಅವರನ್ನು ಸೆರೆಯಾಗಿ ಒಯ್ಯುವವರ ದೇಶದಲ್ಲಿ ನಿಮಗೆ ಪ್ರಾರ್ಥನೆಮಾಡಿ,
38ತಮ್ಮ ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ನಿಮ್ಮ ಕಡೆಗೆ ತಿರುಗಿಕೊಂಡು, ನೀವು ಅವರ ಪಿತೃಗಳಿಗೆ ಕೊಟ್ಟ ತಮ್ಮ ದೇಶದ ಕಡೆಗೂ, ನೀವು ಆಯ್ದುಕೊಂಡ ಪಟ್ಟಣದ ಕಡೆಗೂ ನಿಮ್ಮ ನಾಮಕ್ಕೋಸ್ಕರ ನಾನು ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು, ಅವರು ನಿಮಗೆ ಪ್ರಾರ್ಥನೆಮಾಡಿದರೆ,
39ಆಗ ನೀವು ವಾಸಮಾಡುವ ಪರಲೋಕದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ ಅವರ ನ್ಯಾಯವನ್ನು ತೀರಿಸಿರಿ, ನಿಮ್ಮ ಜನರು ನಿಮಗೆ ವಿರೋಧವಾಗಿ ಮಾಡಿದ ಪಾಪಗಳನ್ನು ಕ್ಷಮಿಸಿರಿ.
40“ಈಗ ನನ್ನ ದೇವರೇ, ಈ ಸ್ಥಳದಲ್ಲಿ ಮಾಡಿದ ಪ್ರಾರ್ಥನೆಗೆ ನಿಮ್ಮ ಕಣ್ಣುಗಳು ತೆರೆದಿರಲಿ. ನಿಮ್ಮ ಕಿವಿಗಳು ಆಲಿಸುತ್ತಾ ಇರಲಿ.
41“ಈಗ ದೇವರಾದ ಯೆಹೋವ ದೇವರೇ, ಎದ್ದು ನಿಮ್ಮ ವಿಶ್ರಾಂತಿಯ ಸ್ಥಳಕ್ಕೆ ಬನ್ನಿರಿ; ನೀವೂ, ನಿಮ್ಮ ಶಕ್ತಿಯುತ ಮಂಜೂಷವೂ ಬರಲಿ. ಯೆಹೋವ ದೇವರೇ, ನಿಮ್ಮ ಯಾಜಕರು ರಕ್ಷಣೆಯೆಂಬ ವಸ್ತ್ರವನ್ನು ಧರಿಸಿಕೊಳ್ಳಲಿ. ನಿಮ್ಮ ಭಕ್ತರು ಒಳ್ಳೆಯದರಲ್ಲಿ ಸಂತೋಷಪಡಲಿ.
42ಯೆಹೋವ ದೇವರೇ, ನಿಮ್ಮ ಅಭಿಷಿಕ್ತನನ್ನು ತಿರಸ್ಕರಿಸಬೇಡಿರಿ. ನಿಮ್ಮ ಸೇವಕನಾದ ದಾವೀದನಿಗೆ ವಾಗ್ದಾನಮಾಡಿದ ಮಹಾ ಪ್ರೀತಿಯನ್ನು ನೆನಪುಮಾಡಿಕೊಳ್ಳಿರಿ,” ಎಂದು ಬೇಡಿಕೊಂಡನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.