Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪೂರ್ವಕಾಲ ವೃತ್ತಾಂತ 5

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಹೀಗೆಯೇ ಸೊಲೊಮೋನನು ಯೆಹೋವ ದೇವರ ಆಲಯಕ್ಕೋಸ್ಕರ ಮಾಡಿಸಿದ ಕೆಲಸವೆಲ್ಲಾ ಮುಗಿಯಿತು. ಆಗ ಸೊಲೊಮೋನನು ತನ್ನ ತಂದೆ ದಾವೀದನು ಪ್ರತಿಷ್ಠೆ ಮಾಡಿದ ಬೆಳ್ಳಿಯನ್ನೂ, ಬಂಗಾರವನ್ನೂ, ಎಲ್ಲಾ ಸಲಕರಣೆಗಳನ್ನೂ ದೇವರ ಆಲಯದ ಭಂಡಾರಕ್ಕೆ ಸೇರಿಸಿದನು. ಮಂಜೂಷವನ್ನು ದೇವಾಲಯಕ್ಕೆ ತಂದದ್ದು
2ಆಗ ಚೀಯೋನೆಂಬ ದಾವೀದನ ಪಟ್ಟಣದಿಂದ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತರುವ ನಿಮಿತ್ತ, ಸೊಲೊಮೋನನು ಇಸ್ರಾಯೇಲರಲ್ಲಿ ಶ್ರೇಷ್ಠರಾಗಿರುವ ಪಿತೃಗಳಾದ ಇಸ್ರಾಯೇಲಿನ ಹಿರಿಯರನ್ನೂ, ಗೋತ್ರಗಳ ಮುಖ್ಯಸ್ಥರನ್ನೂ ಯೆರೂಸಲೇಮಿನಲ್ಲಿ ತನ್ನ ಬಳಿಗೆ ಕೂಡಿಬರುವಂತೆ ಮಾಡಿದನು.
3ಆದ್ದರಿಂದ ಏಳನೆಯ ತಿಂಗಳಿನ ಹಬ್ಬದಲ್ಲಿ ಇಸ್ರಾಯೇಲಿನ ಸಮಸ್ತ ಜನರು ಅರಸನ ಬಳಿಗೆ ಕೂಡಿಬಂದರು.
4ಇಸ್ರಾಯೇಲಿನ ಹಿರಿಯರೆಲ್ಲರೂ ಬಂದ ತರುವಾಯ, ಲೇವಿಯರು ಯೆಹೋವ ದೇವರ ಮಂಜೂಷವನ್ನು ಎತ್ತಿಕೊಂಡರು.
5ಒಡಂಬಡಿಕೆಯ ಮಂಜೂಷವನ್ನೂ, ದೇವದರ್ಶನದ ಗುಡಾರವನ್ನೂ, ಗುಡಾರದಲ್ಲಿದ್ದ ಸಮಸ್ತ ಪರಿಶುದ್ಧವಾದ ಸಲಕರಣೆಗಳನ್ನೂ ತಂದರು. ಇವುಗಳನ್ನು ಯಾಜಕರಾದ ಲೇವಿಯರು ಹೊತ್ತುಕೊಂಡು ತಂದರು.
6ಆಗ ಅರಸನಾದ ಸೊಲೊಮೋನನೂ ಅವನ ಬಳಿಯಲ್ಲಿ ಕೂಡಿದ ಇಸ್ರಾಯೇಲ್ ಜನರೆಲ್ಲರೂ ಮಂಜೂಷದ ಮುಂದೆ ನಿಂತು ಎಣಿಸಲಾಗದಷ್ಟು ಕುರಿಗಳನ್ನೂ, ಪಶುಗಳನ್ನೂ ಬಲಿಯಾಗಿ ಅರ್ಪಿಸಿದರು.
7ಯಾಜಕರು ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗಿದ್ದ ಅದರ ಸ್ಥಳದಲ್ಲಿ ಇಟ್ಟರು.
8ಕೆರೂಬಿಗಳು ಮಂಜೂಷವಿದ್ದ ಸ್ಥಳದ ಮೇಲೆ ತಮ್ಮ ರೆಕ್ಕೆಗಳನ್ನು ಚಾಚಿಕೊಂಡಿದ್ದವು. ಹೀಗೆಯೇ ಕೆರೂಬಿಗಳು ಮಂಜೂಷವನ್ನೂ, ಅದರ ಕೋಲುಗಳನ್ನೂ ಮೇಲಿನಿಂದ ಮುಚ್ಚಿಕೊಂಡಿದ್ದವು.
9ಆ ಕೋಲುಗಳು ಮಂಜೂಷಕ್ಕಿಂತಲೂ ಬಹಳ ಉದ್ದವಾಗಿದ್ದುದರಿಂದ ಅವುಗಳ ತುದಿಗಳು ಗರ್ಭಗುಡಿಯ ಮುಂಭಾಗದಲ್ಲಿರುವ ಪರಿಶುದ್ಧ ಸ್ಥಳದಲ್ಲಿ ನಿಂತವರಿಗೆ ಕಾಣಿಸುತ್ತಿದ್ದವು, ಆದರೆ ಅವು ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ. ಅವು ಇಂದಿನವರೆಗೂ ಅಲ್ಲಿಯೇ ಇವೆ.
10ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಬಂದ ನಂತರ, ಯೆಹೋವ ದೇವರು ಅವರ ಸಂಗಡ ಒಡಂಬಡಿಕೆ ಮಾಡಿದಾಗ ಮೋಶೆಯು ಹೋರೇಬ್ ಬೆಟ್ಟದ ಬಳಿಯಲ್ಲಿ ಮಂಜೂಷದೊಳಗೆ ಇಟ್ಟ ಕಲ್ಲಿನ ಎರಡು ಹಲಗೆಗಳ ಹೊರತು ಅದರಲ್ಲಿ ಮತ್ತೇನೂ ಇರಲಿಲ್ಲ.
11ಅಲ್ಲಿ ಇದ್ದ ಸಮಸ್ತ ಯಾಜಕರು ವರ್ಗವ್ಯತ್ಯಾಸವಿಲ್ಲದೆ ತಮ್ಮನ್ನು ಶುದ್ಧಪಡಿಸಿಕೊಂಡಿದ್ದರು.
12ತಮ್ಮನ್ನು ಪ್ರತಿಷ್ಠಿಸಿಕೊಂಡಿದ್ದ ಯಾಜಕರು ಪರಿಶುದ್ಧ ಸ್ಥಳದಿಂದ ಹೊರಟಾಗ, ನಯವಾದ ನಾರು ಬಟ್ಟೆಗಳನ್ನು ಧರಿಸಿಕೊಂಡಿದ್ದ ಲೇವಿಯ ಗಾಯಕರಾದ ಆಸಾಫ್, ಹೇಮಾನ್, ಯೆದುತೂನ್ ಹಾಗೂ ಇವರ ಮಕ್ಕಳೂ ಸಹೋದರರೂ ತುತೂರಿಗಳನ್ನು ಊದತಕ್ಕ ನೂರಿಪ್ಪತ್ತು ಮಂದಿ ಯಾಜಕರೂ ಬಲಿಪೀಠದ ಪೂರ್ವದಿಕ್ಕಿನಲ್ಲಿ ನಿಂತುಕೊಂಡರು.
13ತುತೂರಿ ಊದುವವರೂ, ಸಂಗೀತಗಾರರೂ ಯೆಹೋವ ದೇವರನ್ನು ಕೊಂಡಾಡುತ್ತಾ, ಹೊಗಳುತ್ತಾ ಧ್ವನಿ ಎತ್ತಿ ಸ್ತೋತ್ರ ಮಾಡುವಂತೆ ತುತೂರಿಗಳೂ, ತಾಳಗಳೂ ಮೊದಲಾದ ಗೀತ ವಾದ್ಯಗಳಿಂದ ಕೀರ್ತಿಸಿದರು: “ಯೆಹೋವ ದೇವರು ಒಳ್ಳೆಯವರು, ಅವರ ಕೃಪೆಯು ಯುಗಯುಗಕ್ಕೆ ಇರುವುದು,” ಎಂದು ಯೆಹೋವ ದೇವರನ್ನು ಹೊಗಳುತ್ತಿದ್ದ ಹಾಗೆ, ಯೆಹೋವ ದೇವರ ಆಲಯವು ಮೇಘದಿಂದ ತುಂಬಿತು.
14ಯೆಹೋವ ದೇವರ ತೇಜಸ್ಸಿನಿಂದ ವ್ಯಾಪಿಸಿದ್ದ ಆ ಮೋಡವು ದೇವಾಲಯದಲ್ಲಿ ತುಂಬಿಕೊಂಡದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲಾರದೆ ಹೋದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.