Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪೂರ್ವಕಾಲ ವೃತ್ತಾಂತ 28

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆಹಾಜನು ಆಳಲು ಆರಂಭಿಸಿದಾಗ ಇಪ್ಪತ್ತು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಆದರೆ ಅವನು ತನ್ನ ತಂದೆಯಾದ ದಾವೀದನ ಹಾಗೆ ನಡೆಯದೆ, ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಲಿಲ್ಲ.
2ಆಹಾಜನು ಇಸ್ರಾಯೇಲಿನ ಅರಸರ ಮಾರ್ಗದಲ್ಲಿ ನಡೆದು, ಆರಾಧಿಸುವುದಕ್ಕಾಗಿ ಬಾಳನ ಎರಕ ಹೊಯ್ದ ವಿಗ್ರಹಗಳನ್ನು ಮಾಡಿಸಿದನು.
3ಇದಲ್ಲದೆ ಆಹಾಜನು ಬೆನ್ ಹಿನ್ನೋಮ್ ತಗ್ಗಿನಲ್ಲಿ ಧೂಪವನ್ನರ್ಪಿಸಿ, ಯೆಹೋವ ದೇವರು ಇಸ್ರಾಯೇಲರ ಎದುರಿನಿಂದ ಓಡಿಸಿಬಿಟ್ಟ ಇತರ ಜನಾಂಗಗಳ ಅಸಹ್ಯಕರವಾದ ಆಚಾರಗಳನ್ನು ಅನುಸರಿಸಿ ಅವನು ತನ್ನ ಮಗನನ್ನೇ ಬೆಂಕಿಯಲ್ಲಿ ಯಜ್ಞವಾಗಿ ಅರ್ಪಿಸಿದನು.
4ಇದಲ್ಲದೆ ಅವನು ಪೂಜಾಸ್ಥಳಗಳ ಮೇಲೆಯೂ ಬೆಟ್ಟಗಳ ಮೇಲೆಯೂ ಎಲ್ಲಾ ಹಸಿರಾದ ಮರಗಳ ಕೆಳಗೂ ಬಲಿಗಳನ್ನೂ ಧೂಪವನ್ನೂ ಅರ್ಪಿಸಿದನು.
5ಆದ್ದರಿಂದ ಆಹಾಜನ ದೇವರಾದ ಯೆಹೋವ ದೇವರು ಅರಾಮಿನ ಅರಸನ ಕೈಯಲ್ಲಿ ಅವನನ್ನು ಒಪ್ಪಿಸಿದರು. ಅರಾಮ್ಯರು ಅವನನ್ನು ಹೊಡೆದು, ಅವರಲ್ಲಿ ಅನೇಕರನ್ನು ಸೆರೆಹಿಡಿದು, ದಮಸ್ಕಕ್ಕೆ ತೆಗೆದುಕೊಂಡು ಹೋದರು. ಇದಲ್ಲದೆ ಆಹಾಜನು ಇಸ್ರಾಯೇಲಿನ ಅರಸನ ಕೈವಶವಾಗಿ, ಅವನಿಂದಲೂ ಕಠಿಣವಾಗಿ ಸೋತು ಹೋದನು.
6ಯೆಹೂದ್ಯರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಬಿಟ್ಟುಬಿಟ್ಟದ್ದರಿಂದ, ರೆಮಲ್ಯನ ಮಗ ಪೆಕಹನು ಒಂದೇ ದಿವಸದೊಳಗೆ ಅವರಲ್ಲಿ ಲಕ್ಷದ ಇಪ್ಪತ್ತು ಸಾವಿರ ಮಂದಿಯನ್ನು ಕೊಂದುಹಾಕಿದನು. ಇವರೆಲ್ಲರು ಪರಾಕ್ರಮಶಾಲಿಗಳಾಗಿದ್ದರು.
7ಇದಲ್ಲದೆ ಎಫ್ರಾಯೀಮ್ಯನಾಗಿರುವ ಪರಾಕ್ರಮಶಾಲಿಯಾದ ಜಿಕ್ರಿಯು ಅರಸನ ಮಗ ಮಾಸೇಯನನ್ನೂ, ಅರಮನೆಯ ನಾಯಕನಾದ ಅಜ್ರೀಕಾಮನನ್ನೂ, ಅರಸನಿಗೆ ಎರಡನೆಯವನಾದ ಎಲ್ಕಾನನನ್ನೂ ಕೊಂದುಹಾಕಿದನು.
8ಇಸ್ರಾಯೇಲರು ತಮ್ಮ ಸಹೋದರರಲ್ಲಿ ಎರಡು ಲಕ್ಷಮಂದಿ ಸ್ತ್ರೀಯರನ್ನೂ, ಪುತ್ರಪುತ್ರಿಯರನ್ನೂ ಸೆರೆಯಾಗಿ ತೆಗೆದುಕೊಂಡು ಹೋದರು. ಅವರಿಂದ ಬಹು ಕೊಳ್ಳೆಯನ್ನೂ ತೆಗೆದುಕೊಂಡು ಸಮಾರ್ಯಕ್ಕೆ ಬಂದರು.
9ಯೆಹೋವ ದೇವರ ಪ್ರವಾದಿ ಒಬ್ಬನು ಅಲ್ಲಿ ಇದ್ದನು. ಅವನ ಹೆಸರು ಓದೇದನು. ಅವನು ಸಮಾರ್ಯಕ್ಕೆ ಬಂದ ಸೈನ್ಯಕ್ಕೆದುರಾಗಿ ಹೊರಟುಹೋಗಿ ಅವರಿಗೆ, “ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ಯೆಹೂದದ ಮೇಲೆ ಕೋಪಗೊಂಡದ್ದರಿಂದ, ದೇವರು ಅವರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿದ್ದಾರೆ. ನೀವು ಆಕಾಶಕ್ಕೆ ಮುಟ್ಟುವ ಉಗ್ರತೆಯಿಂದ ಅವರನ್ನು ಕೊಂದುಹಾಕಿದ್ದೀರಿ.
10ಈಗ ನಿಮಗೆ ದಾಸರೂ, ದಾಸಿಯರೂ ಆಗಿರುವ ಹಾಗೆ ಯೆಹೂದದ ಮತ್ತು ಯೆರೂಸಲೇಮಿನ ಮಕ್ಕಳನ್ನು ನಿಮ್ಮ ವಶಮಾಡಬೇಕೆಂದು ಇದ್ದೀರಿ. ಆದರೆ ನಿಮ್ಮಲ್ಲಿಯೇ ನಿಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಅಪರಾಧಗಳು ಇಲ್ಲವೋ?
11ಆದ್ದರಿಂದ ನೀವು ನನ್ನ ಮಾತು ಕೇಳಿ ನಿಮ್ಮ ನಿಮ್ಮ ಸಹೋದರರಲ್ಲಿ ನೀವು ಸೆರೆಯಾಗಿ ತೆಗೆದುಕೊಂಡ ಸೆರೆಯವರನ್ನು ಬಿಟ್ಟುಬಿಡಿರಿ. ಏಕೆಂದರೆ ಯೆಹೋವ ದೇವರ ಕೋಪಾಗ್ನಿಯು ನಿಮ್ಮ ಮೇಲೆ ಇರುವುದು,” ಎಂದನು.
12ಆಗ ಎಫ್ರಾಯೀಮ್ಯರಲ್ಲಿ ಮುಖಂಡರಾಗಿದ್ದ ಯೆಹೋಹಾನಾನನ ಮಗ ಅಜರ್ಯನೂ, ಮೆಷಿಲ್ಲೇಮೋತನ ಮಗ ಬೆರೆಕ್ಯನೂ, ಶಲ್ಲೂಮನ ಮಗ ಹಿಜ್ಕೀಯನೂ, ಹದ್ಲೈಯನ ಮಗ ಅಮಾಸನೂ ಯುದ್ಧದಿಂದ ಬಂದವರಿಗೆ ವಿರೋಧವಾಗಿ ಎದ್ದು
13ಅವರಿಗೆ, “ನೀವು ಸೆರೆಯವರನ್ನು ಇಲ್ಲಿಗೆ ತರಬೇಡಿರಿ. ಏಕೆಂದರೆ ನಾವು ಯೆಹೋವ ದೇವರಿಗೆ ವಿರೋಧವಾಗಿ ಅಪರಾಧ ಮಾಡಿದ್ದೇವೆ. ನೀವು ನಮ್ಮ ಪಾಪಗಳನ್ನೂ, ನಮ್ಮ ಅಪರಾಧಗಳನ್ನೂ ಹೆಚ್ಚಿಸಬೇಕೆಂದಿದ್ದೀರಿ. ನಿಶ್ಚಯವಾಗಿ ನಮ್ಮ ಅಪರಾಧವು ದೊಡ್ಡದಾಗಿದೆ. ಇಸ್ರಾಯೇಲಿನ ಮೇಲೆ ಯೆಹೋವ ದೇವರ ಉಗ್ರಕೋಪವು ಉಂಟಾಯಿತು,” ಎಂದರು.
14ಆಗ ಸೈನ್ಯದವರು ಸೆರೆಯವರನ್ನೂ, ಕೊಳ್ಳೆಯನ್ನೂ ಪ್ರಧಾನರ ಮುಂದೆಯೂ, ಸಮಸ್ತ ಕೂಟದ ಮುಂದೆಯೂ ಬಿಟ್ಟುಬಿಟ್ಟರು.
15ಆಗ ಎಫ್ರಾಯೀಮ್ಯರಲ್ಲಿ ಮುಖಂಡರಾಗಿದ್ದವರು ಎದ್ದು ಸೆರೆಯವರನ್ನು ತೆಗೆದುಕೊಂಡು, ಅವರಲ್ಲಿ ಬೆತ್ತಲೆಯಾದವರಿಗೆ ಕೊಳ್ಳೆಯ ವಸ್ತ್ರಗಳನ್ನು ಉಡಿಸಿ ತೊಡಿಸಿ, ಅವರಿಗೆ ಕೆರಗಳನ್ನು ಕೊಟ್ಟು ಉಣ್ಣುವುದಕ್ಕೂ, ಕುಡಿಯುವುದಕ್ಕೂ ಕೊಟ್ಟು, ಅವರ ತಲೆಗಳಿಗೆ ಎಣ್ಣೆಯನ್ನು ಹಚ್ಚಿ, ಅವರಲ್ಲಿ ಇರುವ ಬಲಹೀನರನ್ನು ಕತ್ತೆಗಳ ಮೇಲೆ ಏರಿಸಿ, ಯೆರಿಕೋವೆಂಬ ಖರ್ಜೂರದ ಪಟ್ಟಣಕ್ಕೆ ಅವರ ಸಹೋದರರ ಬಳಿಗೆ ತೆಗೆದುಕೊಂಡು ಬಂದರು. ಆಗ ಅವರು ಸಮಾರ್ಯಕ್ಕೆ ಹಿಂದಿರುಗಿದರು.
16ಅದೇ ಕಾಲದಲ್ಲಿ ಅರಸನಾದ ಆಹಾಜನು ಅಸ್ಸೀರಿಯದ ಅರಸರ ಬಳಿಗೆ ಕಳುಹಿಸಿ ಸಹಾಯ ಬೇಡಿಕೊಂಡನು.
17ಏಕೆಂದರೆ ಎದೋಮ್ಯರು ತಿರುಗಿಬಂದು ಯೆಹೂದದವರನ್ನು ಸಂಹರಿಸಿ, ಕೆಲವರನ್ನು ಸೆರೆಯಾಗಿ ತೆಗೆದುಕೊಂಡು ಹೋದರು.
18ಇದಲ್ಲದೆ ಫಿಲಿಷ್ಟಿಯರು ತಗ್ಗಿನ ದೇಶದ ಪಟ್ಟಣಗಳಲ್ಲಿಯೂ, ಯೆಹೂದದ ದಕ್ಷಿಣ ಪ್ರಾಂತದಲ್ಲಿಯೂ ನುಗ್ಗಿ, ಬೇತ್ ಷೆಮೆಷ್, ಅಯ್ಯಾಲೋನ್, ಗೆದೇರೋತ್, ಸೋಕೋ ಅದರ ಗ್ರಾಮಗಳನ್ನೂ, ತಿಮ್ನಾ ಅದರ ಗ್ರಾಮಗಳನ್ನೂ, ಗಿಮ್ಜೋ ಅದರ ಗ್ರಾಮಗಳನ್ನೂ ತೆಗೆದುಕೊಂಡು ಅಲ್ಲಿ ವಾಸವಾಗಿದ್ದರು.
19ಇಸ್ರಾಯೇಲಿನ ಅರಸನಾದ ಆಹಾಜನ ನಿಮಿತ್ತ ಯೆಹೋವ ದೇವರು ಯೆಹೂದ್ಯ ಪ್ರಾಂತ್ಯವನ್ನು ತಗ್ಗಿಸಿದರು. ಏಕೆಂದರೆ ಅವನು ಯೆಹೂದ್ಯರನ್ನು ಅಧರ್ಮಕ್ಕೆ ಪ್ರಚೋದಿಸಿ, ಯೆಹೋವ ದೇವರಿಗೆ ಮಹಾ ದ್ರೋಹ ಮಾಡಿದನು. ಯೆಹೋವ ದೇವರಿಗೆ ಅತ್ಯಂತ ಅಪನಂಬಿಗಸ್ತನಾಗಿದ್ದನು.
20ಆಗ ಅಸ್ಸೀರಿಯದ ಅರಸ ತಿಗ್ಲತ್ಪಿಲೆಸರನು ಅವನ ಬಳಿಗೆ ಬಂದು, ಅವನಿಗೆ ನೆರವಾಗುವುದಕ್ಕೆ ಬದಲಾಗಿ ಬಾಧೆಪಡಿಸಿದನು.
21ಆಹಾಜನು ಯೆಹೋವ ದೇವರ ಆಲಯದಿಂದಲೂ, ಅರಮನೆಯಿಂದಲೂ, ಪ್ರಧಾನರಿಂದಲೂ ಆಸ್ತಿಯ ಒಂದು ಪಾಲನ್ನು ತೆಗೆದುಕೊಂಡು, ಅಸ್ಸೀರಿಯದ ಅರಸನಿಗೆ ಕಾಣಿಕೆಯಾಗಿ ಕೊಟ್ಟನು, ಆದರೂ ಅವನು ಆಹಾಜನಿಗೆ ಸಹಾಯ ಮಾಡಲಿಲ್ಲ.
22ಇದಲ್ಲದೆ ಈ ಅರಸನಾದ ಆಹಾಜನು ತನ್ನ ಇಕ್ಕಟ್ಟಿನ ಕಾಲದಲ್ಲಿ ಇನ್ನೂ ಅಧಿಕವಾಗಿ ಯೆಹೋವ ದೇವರಿಗೆ ಅಪನಂಬಿಗಸ್ತನಾದನು.
23ಕೊನೆಗೆ ಆಹಾಜನು, “ಅರಾಮಿನ ಅರಸರ ದೇವರುಗಳು ಅವರಿಗೆ ಸಹಾಯ ಕೊಟ್ಟದ್ದರಿಂದ, ಅವು ನನಗೆ ಸಹ ಸಹಾಯ ಕೊಡುವ ಹಾಗೆ ನಾನು ಅವುಗಳಿಗೆ ಬಲಿಯನ್ನು ಅರ್ಪಿಸುತ್ತೇನೆ,” ಎಂದುಕೊಂಡು ತನ್ನನ್ನು ಸೋಲಿಸಿದ ದಮಸ್ಕದವರ ದೇವರುಗಳಿಗೆ ಬಲಿಗಳನ್ನು ಅರ್ಪಿಸಿದನು. ಆದರೆ ಆ ದೇವರುಗಳು ಅವನನ್ನೂ, ಸಮಸ್ತ ಇಸ್ರಾಯೇಲರನ್ನೂ ಬೀಳುವಂತೆ ಮಾಡಿದವು.
24ಇದಲ್ಲದೆ ಆಹಾಜನು ದೇವರ ಮನೆಯ ಸಲಕರಣೆಗಳನ್ನು ಕೂಡಿಸಿ, ದೇವರ ಆಲಯದ ಸಾಮಗ್ರಿಗಳನ್ನು ಚೂರುಚೂರು ಮಾಡಿ ಕತ್ತರಿಸಿ, ಯೆಹೋವ ದೇವರ ಮನೆಯ ಬಾಗಿಲುಗಳನ್ನು ಮುಚ್ಚಿಬಿಟ್ಟು, ಯೆರೂಸಲೇಮಿನ ಸಮಸ್ತ ಮೂಲೆಗಳಲ್ಲಿ ಬಲಿಪೀಠಗಳನ್ನು ಕಟ್ಟಿಸಿದನು.
25ಯೆಹೂದದ ಸಮಸ್ತ ಪಟ್ಟಣಗಳಲ್ಲಿ ಅನ್ಯ ದೇವರುಗಳಿಗೆ ಧೂಪ ಸುಡುವುದಕ್ಕೆ ಎತ್ತರ ಸ್ಥಳಗಳನ್ನು ಕಟ್ಟಿಸಿ, ತನ್ನ ಪಿತೃಗಳ ದೇವರಾದ ಯೆಹೋವ ದೇವರಿಗೆ ಕೋಪವನ್ನೆಬ್ಬಿಸಿದನು.
26ಅವನ ಆಳ್ವಿಕೆಯಲ್ಲಿಯ ಇತರ ಕ್ರಿಯೆಗಳೂ, ಅವನ ಸಕಲ ಮಾರ್ಗಗಳೂ, ಮೊದಲನೆಯವುಗಳೂ, ಕಡೆಯವುಗಳೂ ಯೆಹೂದದ ಮತ್ತು ಇಸ್ರಾಯೇಲರ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
27ಆಹಾಜನು ಮೃತನಾಗಿ ತನ್ನ ಪಿತೃಗಳ ಬಳಿಯಲ್ಲಿ ಸೇರಿದನು. ಆದರೆ ಅವನನ್ನು ಇಸ್ರಾಯೇಲಿನ ಅರಸರ ಸಮಾಧಿಯ ಸ್ಥಳದಲ್ಲಿ ಹೂಣಿಡದೆ ಯೆರೂಸಲೇಮ್ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗ ಹಿಜ್ಕೀಯನು ಅರಸನಾದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.