Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಸಮುಯೇಲ 9

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಬೆನ್ಯಾಮೀನನ ವಂಶದವನಾದ ಕೀಷನೆಂಬ ಒಬ್ಬ ಮನುಷ್ಯನಿದ್ದನು. ಇವನು ಅಬೀಯೇಲನ ಮಗನು, ಇವನು ಚೆರೋರನ ಮಗನು, ಇವನು ಬೆಕೋರತನ ಮಗನು, ಇವನು ಬೆನ್ಯಾಮೀನ್ಯನಾದ ಅಫೀಹನ ಮಗನು. ಇವನು ಐಶ್ವರ್ಯವಂತನಾಗಿದ್ದನು.
2ಅವನಿಗೆ ಒಳ್ಳೆಯ ಪ್ರಾಯಸ್ಥನಾದ ಸೌಲನೆಂಬ ಹೆಸರುಳ್ಳ ಒಬ್ಬ ಒಳ್ಳೆಯ ಮಗನಿದ್ದನು. ಇಸ್ರಾಯೇಲರಲ್ಲಿ ಅವನಿಗಿಂತ ಸೌಂದರ್ಯವುಳ್ಳವನು ಒಬ್ಬನಾದರೂ ಇರಲಿಲ್ಲ. ಅವನ ಭುಜವು ಜನರ ಮಧ್ಯೆ ಕಾಣುವಷ್ಟು ಎತ್ತರವಾಗಿದ್ದನು.
3ಸೌಲನ ತಂದೆಯಾದ ಕೀಷನ ಕತ್ತೆಗಳು ಕಾಣದೆ ಹೋದದ್ದರಿಂದ ಅವನು ತನ್ನ ಮಗ ಸೌಲನಿಗೆ, “ನೀನೆದ್ದು ಕೆಲಸದವರಲ್ಲಿ ಒಬ್ಬನನ್ನು ನಿನ್ನ ಸಂಗಡ ಕರೆದುಕೊಂಡು, ಕತ್ತೆಗಳನ್ನು ಹುಡುಕಲು ಹೋಗಬೇಕು,” ಎಂದನು.
4ಹಾಗೆಯೇ ಅವನು ಎಫ್ರಾಯೀಮ್ ಬೆಟ್ಟವನ್ನು ಶಾಲಿಷಾ ದೇಶವನ್ನೂ ದಾಟಿಹೋದನು, ಆದರೆ ಅವು ಸಿಕ್ಕಲಿಲ್ಲ. ಶಾಲೀಮ್ ದೇಶವನ್ನು ಹಾದುಹೋದನು, ಅಲ್ಲಿಯೂ ಅವುಗಳು ಕಾಣದೆ ಹೋದವು. ಅವನು ಬೆನ್ಯಾಮೀನನ ದೇಶವನ್ನು ದಾಟಿ, ಅವುಗಳನ್ನು ಕಾಣದೆ ಹೋದನು.
5ಅವರು ಚೂಫ್ ಎಂಬ ದೇಶಕ್ಕೆ ಬಂದಾಗ, ಸೌಲನು ತನ್ನ ಸಂಗಡ ಇದ್ದ ಸೇವಕನಿಗೆ, “ನನ್ನ ತಂದೆಯು ಕತ್ತೆಗಳ ಮೇಲೆ ಇರುವ ಚಿಂತೆಯನ್ನು ಬಿಟ್ಟು, ನಮಗೋಸ್ಕರ ಚಿಂತೆ ಪಡದ ಹಾಗೆ ನಾವು ಹಿಂದಕ್ಕೆ ಹೋಗೋಣ ಬಾ,” ಎಂದನು.
6ಅದಕ್ಕವನು, “ಇಗೋ, ಈ ಪಟ್ಟಣದಲ್ಲಿ ದೇವರ ಮನುಷ್ಯನು ಒಬ್ಬನಿದ್ದಾನೆ, ಅವನು ಘನವುಳ್ಳ ಮನುಷ್ಯನು. ಅವನು ಹೇಳುವುದೆಲ್ಲಾ ನಿಶ್ಚಯವಾಗಿ ಆಗುವುದು. ಈಗ ನಾವು ಅಲ್ಲಿಗೆ ಹೋಗೋಣ. ಒಂದು ವೇಳೆ ಅವನು ನಾವು ಹೋಗಬೇಕೆಂದಿರುವ ನಮ್ಮ ಮಾರ್ಗವನ್ನು ತಿಳಿಸುವನು,” ಎಂದನು.
7ಆಗ ಸೌಲನು ತನ್ನ ಸೇವಕನಿಗೆ, “ನಾವು ಆ ಮನುಷ್ಯನ ಬಳಿಗೆ ಹೋದರೆ, ಏನು ತೆಗೆದುಕೊಂಡು ಹೋಗೋಣ? ನಮ್ಮ ಚೀಲಗಳಲ್ಲಿ ಇರುವ ರೊಟ್ಟಿ ಮುಗಿದು ಹೋಯಿತು. ದೇವರ ಮನುಷ್ಯನ ಬಳಿಗೆ ತೆಗೆದುಕೊಂಡು ಹೋಗಲು ತಕ್ಕ ಕಾಣಿಕೆ ಇಲ್ಲ. ನಮ್ಮ ಬಳಿಯಲ್ಲಿ ಏನಿದೆ?” ಎಂದನು.
8ಅದಕ್ಕೆ ಆ ಸೇವಕನು ಸೌಲನಿಗೆ ಉತ್ತರವಾಗಿ, “ಇಗೋ, ನನ್ನ ಕೈಯಲ್ಲಿ ಒಂದು ಪಾವಲಿ ಬೆಳ್ಳಿನಾಣ್ಯ ಇದೆ, ದೇವರ ಮನುಷ್ಯನು ನಮಗೆ ಮಾರ್ಗವನ್ನು ತಿಳಿಸುವ ಹಾಗೆ ನಾನು ಅದನ್ನು ಅವನಿಗೆ ಕೊಡುವೆನು,” ಎಂದನು.
9ಪೂರ್ವದಲ್ಲಿ ಇಸ್ರಾಯೇಲಿನಲ್ಲಿ ಯಾವನಾದರೂ ದೇವರ ಹತ್ತಿರ ವಿಚಾರಿಸಬೇಕಾದರೆ, “ಪ್ರವಾದಿಯ ಬಳಿಗೆ ಹೋಗೋಣ ಬನ್ನಿರಿ,” ಎನ್ನುವನು. ಏಕೆಂದರೆ ಈ ಕಾಲದಲ್ಲಿ ಪ್ರವಾದಿ ಎಂದು ಕರೆಯಿಸಿಕೊಳ್ಳುವವರನ್ನು ಪೂರ್ವಕಾಲದಲ್ಲಿ ದರ್ಶಿ ಎಂದು ಕರೆಯುತ್ತಿದ್ದರು.
10ಆಗ ಸೌಲನು ಸೇವಕನಿಗೆ, “ನಿನ್ನ ಮಾತು ಒಳ್ಳೆಯದು. ನಾವು ಹೋಗೋಣ ಬಾ,” ಎಂದನು. ದೇವರ ಮನುಷ್ಯನಿದ್ದ ಆ ಪಟ್ಟಣಕ್ಕೆ ಹೋದರು.
11ಅವರು ದಿಣ್ಣೆಯನ್ನು ಹತ್ತಿ ಪಟ್ಟಣದೊಳಗೆ ಹೋಗುವಾಗ, ನೀರು ಸೇದಲು ಬರುವ ಹುಡುಗಿಯರನ್ನು ಕಂಡು, “ದರ್ಶಿಯು ಇಲ್ಲಿ ಇದ್ದಾನೋ?” ಎಂದು ಅವರನ್ನು ಕೇಳಿದರು.
12ಅವರು ಇವರಿಗೆ ಉತ್ತರವಾಗಿ, “ಅವನು ಇದ್ದಾನೆ, ನಿಮ್ಮ ಮುಂದೆ ಇದ್ದಾನೆ, ಈಗ ಬೇಗ ಹೋಗಿರಿ, ಏಕೆಂದರೆ ಈ ಹೊತ್ತು ಗುಡ್ಡದ ಮೇಲೆ ಜನರು ಬಲಿಯನ್ನು ಅರ್ಪಿಸುವುದರಿಂದ ಅವನು ಈ ಹೊತ್ತು ಪಟ್ಟಣಕ್ಕೆ ಬಂದಿದ್ದಾನೆ.
13ನೀವು ಪಟ್ಟಣದೊಳಗೆ ಪ್ರವೇಶಿಸುತ್ತಲೇ ಗುಡ್ಡದ ಮೇಲೆ ತಿನ್ನಲು ಹೋಗುವರು. ಅವನು ಬರುವವರೆಗೂ ಜನರು ಏನೂ ತಿನ್ನುವುದಿಲ್ಲ. ಅವನು ಬಂದು ಅರ್ಪಣೆಯನ್ನು ಆಶೀರ್ವದಿಸುವನು. ಅನಂತರವೇ ಆಮಂತ್ರಿತರು ಊಟಮಾಡುವರು. ಈಗಲೇ ಹೋಗಿರಿ. ಈ ವೇಳೆಯಲ್ಲಿ ಅವನನ್ನು ಕಂಡುಕೊಳ್ಳುವಿರಿ,” ಎಂದರು.
14ಅವರು ಪಟ್ಟಣಕ್ಕೆ ಹೋದರು. ಅವರು ಪಟ್ಟಣದಲ್ಲಿ ಪ್ರವೇಶಿಸಿದಾಗ, ಸಮುಯೇಲನು ಗುಡ್ಡದ ಮೇಲಕ್ಕೆ ಏರಿ ಹೋಗುವುದಕ್ಕೆ ಅವರಿಗೆದುರಾಗಿ ಹೊರಟುಬಂದನು.
15ಆದರೆ ಸೌಲನು ಬರುವುದಕ್ಕೆ ಒಂದು ದಿವಸ ಮುಂಚೆ, ಯೆಹೋವ ದೇವರು ಸಮುಯೇಲನಿಗೆ ತಿಳಿಯಪಡಿಸಿದ್ದೇನೆಂದರೆ,
16“ನಾಳೆ ಇಷ್ಟು ಹೊತ್ತಿಗೆ ಬೆನ್ಯಾಮೀನನ ದೇಶದವನಾದ ಒಬ್ಬ ಮನುಷ್ಯನನ್ನು ನಿನ್ನ ಬಳಿಗೆ ಕಳುಹಿಸುವೆನು. ನೀನು ಅವನನ್ನು ನನ್ನ ಜನರಾದ ಇಸ್ರಾಯೇಲಿನ ಮೇಲೆ ನಾಯಕನಾಗಿರಲು ಅಭಿಷೇಕಿಸಬೇಕು. ಅವನು ನನ್ನ ಜನರನ್ನು ಫಿಲಿಷ್ಟಿಯರ ಕೈಯಿಂದ ತಪ್ಪಿಸಿ ರಕ್ಷಿಸುವನು. ಏಕೆಂದರೆ ನನ್ನ ಜನರ ಕೂಗು ನನ್ನ ಬಳಿಗೆ ಬಂದು ಮುಟ್ಟಿತು,” ಎಂಬುದೆ.
17ಸಮುಯೇಲನು ಸೌಲನನ್ನು ಕಂಡಾಗ ಯೆಹೋವ ದೇವರು, “ಇಗೋ, ನಾನು ನಿನಗೆ ಹೇಳಿದ ಮನುಷ್ಯನು ಇವನೇ. ಇವನೇ ನನ್ನ ಜನರನ್ನು ಆಳುವನು,” ಎಂದರು.
18ಸೌಲನು ಊರಿನ ಬಾಗಿಲಲ್ಲಿ ಇರುವ ಸಮುಯೇಲನ ಸಮೀಪಕ್ಕೆ ಬಂದು, ಅವನಿಗೆ, “ದರ್ಶಿಯ ಮನೆಯು ಎಲ್ಲಿ ಇದೆ? ದಯಮಾಡಿ ನೀನು ನನಗೆ ತಿಳಿಸು,” ಎಂದನು.
19ಸಮುಯೇಲನು ಸೌಲನಿಗೆ ಉತ್ತರವಾಗಿ, “ದರ್ಶಿಯು ನಾನೇ, ನೀನು ನನ್ನ ಮುಂದೆ ಗುಡ್ಡದ ಮೇಲಕ್ಕೆ ಏರಿ ಹೋಗು. ಈ ಹೊತ್ತು ನೀನು ನನ್ನ ಸಂಗಡ ಊಟಮಾಡಬೇಕು, ನಾಳೆ ಹೊತ್ತಾರೆ ನಿನ್ನನ್ನು ಕಳುಹಿಸುವೆನು. ನಿನ್ನ ಹೃದಯದಲ್ಲಿರುವುದನ್ನೆಲ್ಲಾ ನಿನಗೆ ತಿಳಿಯಪಡಿಸುವೆನು.
20ಇಂದಿಗೆ ಮೂರನೆಯ ದಿವಸದಲ್ಲಿ ಕಾಣದೆ ಹೋದ ನಿನ್ನ ಕತ್ತೆಗಳಿಗಾಗಿ ಚಿಂತೆ ಮಾಡಬೇಡ. ಏಕೆಂದರೆ ಅವು ದೊರಕಿದವು. ಇದಲ್ಲದೆ ಇಸ್ರಾಯೇಲಿನ ಅಭಿಲಾಷೆಯೆಲ್ಲಾ ಯಾರ ಮೇಲೆ ಇರುವುದು? ಅದು ನಿನ್ನ ಮೇಲೆಯೇ ಅಲ್ಲವೋ,” ಎಂದನು.
21ಸೌಲನು ಅದಕ್ಕೆ, “ಆದರೆ ನಾನು ಇಸ್ರಾಯೇಲನ ಸಣ್ಣ ಗೋತ್ರವಾದ ಬೆನ್ಯಾಮೀನನು ನಾನಲ್ಲವೋ, ಬೆನ್ಯಾಮೀನನ ಗೋತ್ರದಲ್ಲಿ ನನ್ನ ವಂಶವು ಸಣ್ಣದಾದದ್ದಲ್ಲವೋ? ಇಂಥ ಸಂಗತಿಯನ್ನು ನನಗೇಕೆ ಹೇಳುತ್ತೀ?” ಎಂದನು.
22ಆಗ ಸಮುಯೇಲನು ಸೌಲನನ್ನೂ, ಅವನ ಸೇವಕನನ್ನೂ ಕರೆತಂದು ಅತಿಥಿಗಳ ಕೊಠಡಿಯಲ್ಲಿ ಮುಖ್ಯವಾದ ಸ್ಥಳಕ್ಕೆ ಕರಕೊಂಡು ಬಂದನು.
23ಹೆಚ್ಚು ಕಡಿಮೆ ಮೂವತ್ತು ಜನರಿದ್ದರು. ಸಮುಯೇಲನು ಅಡಿಗೆಯವನಿಗೆ, “ನಾನು ನಿನ್ನ ಕೈಯಲ್ಲಿ ಕೊಟ್ಟು ಇಡಬೇಕೆಂದು ಹೇಳಿದ ಪಾಲನ್ನು ತಂದಿಡು,” ಎಂದನು.
24ಆಗ ಅಡಿಗೆಯವನು ಒಂದು ಮುಂದೊಡೆಯನ್ನೂ, ಅದರ ಸಂಗಡ ಇದ್ದುದ್ದನ್ನೂ ತಂದು ಅದನ್ನು ಸೌಲನ ಮುಂದೆ ಇಟ್ಟನು. ಆಗ ಸಮುಯೇಲನು ಸೌಲನಿಗೆ, “ನಿನಗಾಗಿ ಪ್ರತ್ಯೇಕಿಸಿದ್ದು ಇದೇ. ನಾನು ಜನರನ್ನು ಭೋಜನಕ್ಕೆ ಕರೆದಿದ್ದೇನೆಂದು ಹೇಳಿದ ಕಾಲದಿಂದ ಈವರೆಗೂ ನಿನಗೋಸ್ಕರ ಪ್ರತ್ಯೇಕವಾಗಿ ಇಟ್ಟಿದ್ದು ಇದೇ, ಇದನ್ನು ತಿನ್ನು,” ಎಂದನು. ಹಾಗೆಯೇ ಸೌಲನು ಆ ದಿವಸದಲ್ಲಿ ಸಮುಯೇಲನ ಸಂಗಡ ಊಟಮಾಡಿದನು.
25ಅವರು ಗುಡ್ಡದಿಂದ ಪಟ್ಟಣಕ್ಕೆ ಇಳಿದು ಬಂದಾಗ ಸಮುಯೇಲನು ಮಾಳಿಗೆಯ ಮೇಲೆ ಸೌಲನ ಸಂಗಡ ಮಾತನಾಡಿದನು.
26ಅವರು ಉದಯಕಾಲದಲ್ಲಿ ಸೂರ್ಯೋದಯದಲ್ಲಿ ಎದ್ದಾಗ, ಸಮುಯೇಲನು ಸೌಲನನ್ನು ಮಾಳಿಗೆಗೆ ಕರೆದು, “ಏಳು, ನಾನು ನಿನ್ನನ್ನು ಕಳುಹಿಸುತ್ತೇನೆ,” ಎಂದನು. ಹಾಗೆಯೇ ಸೌಲನು ಎದ್ದನು, ಆಗ ಸೌಲನೂ, ಸಮುಯೇಲನೂ ಇಬ್ಬರೂ ಹೊರಗೆ ಹೊರಟರು.
27ಪಟ್ಟಣದ ಹೊರಗೆ ಬಂದಾಗ, ಸಮುಯೇಲನು ಸೌಲನಿಗೆ, “ನಾನು ದೇವರ ಸಂದೇಶವನ್ನು ನಿನಗೆ ತಿಳಿಸುವ ಹಾಗೆ ಸ್ವಲ್ಪ ಹೊತ್ತು ನಿಲ್ಲು. ನಿನ್ನ ಸೇವಕನನ್ನು ನಮ್ಮ ಮುಂದೆ ಹೋಗಲು ಹೇಳು,” ಎಂದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.