Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಸಮುಯೇಲ 8

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಸಮುಯೇಲನು ವೃದ್ಧನಾದಾಗ ತನ್ನ ಪುತ್ರರನ್ನು ಇಸ್ರಾಯೇಲಿಗೆ ನ್ಯಾಯಾಧಿಪತಿಗಳನ್ನಾಗಿ ಮಾಡಿದನು.
2ಅವನ ಚೊಚ್ಚಲ ಮಗನ ಹೆಸರು ಯೋಯೇಲ್, ಅವನ ಎರಡನೆಯ ಮಗನ ಹೆಸರು ಅಬೀಯ. ಇವರು ಬೇರ್ಷೆಬದಲ್ಲಿ ನ್ಯಾಯಾಧಿಪತಿಗಳಾಗಿದ್ದರು.
3ಆದರೆ ಅವರು ಸಮುಯೇಲನ ಮಾರ್ಗದಲ್ಲಿ ನಡೆಯದೆ, ಅಪ್ರಾಮಾಣಿಕತೆಯಿಂದ ಹಣ ಸಂಪಾದಿಸಿ, ಲಂಚವನ್ನು ತೆಗೆದುಕೊಂಡು, ನ್ಯಾಯವನ್ನು ತಪ್ಪಿಸುತ್ತಿದ್ದರು.
4ಆಗ ಇಸ್ರಾಯೇಲ್ ಹಿರಿಯರೆಲ್ಲರೂ ಕೂಡಿಕೊಂಡು, ರಾಮದಲ್ಲಿರುವ ಸಮುಯೇಲನ ಬಳಿಗೆ ಬಂದು ಅವನಿಗೆ,
5“ನೀನು ವೃದ್ಧನಾದೆ, ನಿನ್ನ ಮಕ್ಕಳು ನಿನ್ನ ಮಾರ್ಗದಲ್ಲಿ ನಡೆಯುವುದಿಲ್ಲ. ಈಗ ಎಲ್ಲ ರಾಷ್ಟ್ರಗಳ ಹಾಗೆ ನಮಗೆ ನ್ಯಾಯತೀರಿಸುವುದಕ್ಕೆ ಒಬ್ಬ ಅರಸನನ್ನು ನೇಮಿಸು,” ಎಂದರು.
6“ನಮಗೆ ನ್ಯಾಯತೀರಿಸುವ ಒಬ್ಬ ಅರಸನನ್ನು ನೇಮಿಸು,” ಎಂದು ಅವರು ಹೇಳಿದ್ದು ಸಮುಯೇಲನಿಗೆ ಕೆಟ್ಟದ್ದಾಗಿ ಕಾಣಿಸಿತು. ಅವನು ಯೆಹೋವ ದೇವರಿಗೆ ಪ್ರಾರ್ಥನೆಮಾಡಿದನು.
7ಆಗ ಯೆಹೋವ ದೇವರು ಸಮುಯೇಲನಿಗೆ, “ಜನರು ನಿನಗೆ ಹೇಳಿದ್ದೆಲ್ಲದರಲ್ಲಿ ಅವರ ಮಾತು ಕೇಳು. ಏಕೆಂದರೆ ಅವರು ನಿನ್ನನ್ನು ತಿರಸ್ಕಾರ ಮಾಡಿಲ್ಲ. ನಾನು ಅವರನ್ನು ಆಳದ ಹಾಗೆ ನನ್ನನ್ನೇ ತಿರಸ್ಕಾರಮಾಡಿದ್ದಾರೆ.
8ನಾನು ಅವರನ್ನು ಈಜಿಪ್ಟಿನಿಂದ ಬರಮಾಡಿದ ದಿನವು ಮೊದಲುಗೊಂಡು ಈ ದಿನದವರೆಗೂ ಅವರು ನನ್ನನ್ನು ಬಿಟ್ಟು, ಅನ್ಯದೇವರುಗಳನ್ನು ಸೇವಿಸಿ, ಮಾಡಿದ ಸಮಸ್ತ ಕೃತ್ಯಗಳ ಪ್ರಕಾರ ನಿನಗೂ ಮಾಡುತ್ತಾರೆ.
9ಈಗ ಅವರ ಮಾತನ್ನು ಕೇಳು. ಆದರೆ ನೀನು ಅವರಿಗೆ ಕಟ್ಟಳೆಯನ್ನು ಕೊಟ್ಟು, ಅವರನ್ನು ಆಳುವ ಅರಸನ ಅಧಿಕಾರವು ಎಂಥದ್ದೆಂಬುದನ್ನು ತಿಳಿಸು,” ಎಂದನು.
10ಆಗ ಸಮುಯೇಲನು ಒಬ್ಬ ಅರಸನನ್ನು ಕೇಳಿದ ಜನರಿಗೆ ಯೆಹೋವ ದೇವರ ವಾಕ್ಯಗಳನ್ನೆಲ್ಲಾ ಹೇಳಿದನು.
11ಅವನು, “ನಿಮ್ಮನ್ನು ಆಳುವ ಅರಸನ ಅಧಿಕಾರವು ಏನೆಂದರೆ, ಅವನು ನಿಮ್ಮ ಪುತ್ರರನ್ನು ತನ್ನ ರಥಗಳಿಗೋಸ್ಕರ ಸಾರಥಿಗಳನ್ನಾಗಿಯೂ ಕುದುರೆ ಸವಾರರನ್ನಾಗಿಯೂ ತೆಗೆದುಕೊಳ್ಳುವನು. ಕೆಲವರು ಅವನ ರಥಗಳ ಮುಂದೆ ಓಡುವರು.
12ಅವನು ಸಾವಿರ ಜನಕ್ಕೆ ಅಧಿಪತಿಗಳಾಗಿಯೂ ಐವತ್ತು ಜನಕ್ಕೆ ಅಧಿಪತಿಗಳಾಗಿಯೂ, ತನ್ನ ಭೂಮಿಯನ್ನು ಊಳುವವರಾಗಿಯೂ ತನ್ನ ಪೈರನ್ನು ಕೊಯ್ಯುವವರಾಗಿಯೂ ತನ್ನ ಯುದ್ಧದ ಆಯುಧಗಳನ್ನು ಹಾಗು ತನ್ನ ರಥಸಾಮಗ್ರಿಗಳನ್ನು ಮಾಡುವವರಾಗಿಯೂ ನೇಮಿಸುವನು.
13ಇದಲ್ಲದೆ ಅವನು ನಿಮ್ಮ ಪುತ್ರಿಯರನ್ನು ತೈಲಗಾರ್ತಿಗಳಾಗಿಯೂ, ಅಡುಗೆ ಮಾಡುವವರಾಗಿಯೂ ರೊಟ್ಟಿ ಸುಡುವವರಾಗಿಯೂ ಇಟ್ಟುಕೊಳ್ಳುವನು.
14ಅವನು ಉತ್ತಮವಾದ ನಿಮ್ಮ ಹೊಲಗಳನ್ನೂ, ನಿಮ್ಮ ದ್ರಾಕ್ಷಿತೋಟಗಳನ್ನೂ, ನಿಮ್ಮ ಓಲಿವ್ ಮರದ ತೋಪುಗಳನ್ನೂ ತೆಗೆದುಕೊಂಡು ತನ್ನ ಸೇವಕರಿಗೆ ಕೊಡುವನು.
15ನಿಮ್ಮ ಧಾನ್ಯಗಳಲ್ಲಿಯೂ, ನಿಮ್ಮ ದ್ರಾಕ್ಷಿ ಫಲಗಳಲ್ಲಿಯೂ ಹತ್ತರಲ್ಲಿ ಒಂದು ಪಾಲನ್ನು ತೆಗೆದುಕೊಂಡು, ತನ್ನ ಅಧಿಕಾರಿಗಳಿಗೂ, ತನ್ನ ಸೇವಕರಿಗೂ ಕೊಡುವನು.
16ನಿಮ್ಮ ದಾಸರನ್ನೂ, ನಿಮ್ಮ ದಾಸಿಯರನ್ನೂ, ನಿಮ್ಮ ಉತ್ತಮ ಪ್ರಾಯಸ್ಥರನ್ನೂ, ನಿಮ್ಮ ಕತ್ತೆಗಳನ್ನೂ ತೆಗೆದುಕೊಂಡು ತನ್ನ ಕೆಲಸಕ್ಕೆ ಇಡುವನು.
17ಇದಲ್ಲದೆ ಅವನು ನಿಮ್ಮ ಕುರಿಗಳಲ್ಲಿ ಹತ್ತರಲ್ಲಿ ಒಂದನ್ನು ಆಯ್ದುಕೊಳ್ಳುವನು. ನೀವು ಅವನಿಗೆ ದಾಸರಾಗುವಿರಿ.
18ನೀವು ನಿಮಗೆ ಆಯ್ದುಕೊಂಡ ನಿಮ್ಮ ಅರಸನ ನಿಮಿತ್ತ ಆ ದಿವಸದಲ್ಲಿ ಕೂಗುವಿರಿ, ಆದರೆ ಆ ದಿವಸದಲ್ಲಿ ಯೆಹೋವ ದೇವರು ನಿಮಗೆ ಕಿವಿಗೊಡುವುದಿಲ್ಲ,” ಎಂದನು.
19ಆದರೂ ಜನರು ಸಮುಯೇಲನ ಮಾತನ್ನು ಕೇಳಲೊಲ್ಲದೆ, ಅವರು, “ಹಾಗಲ್ಲ, ನಮ್ಮ ಮೇಲೆ ಅರಸನು ಇರಬೇಕು.
20ನಾವು ಸಕಲ ರಾಷ್ಟ್ರಗಳ ಹಾಗೆ ಇರಬೇಕು. ನಮ್ಮ ಅರಸನು ನಮಗೆ ನ್ಯಾಯತೀರಿಸುವನು. ಅವನು ನಮ್ಮ ಮುಂದೆ ಹೊರಟು, ನಮ್ಮ ಪರವಾಗಿ ಯುದ್ಧಗಳನ್ನು ನಡೆಸುವನು,” ಎಂದರು.
21ಸಮುಯೇಲನು ಜನರ ಮಾತುಗಳನ್ನೆಲ್ಲಾ ಕೇಳಿ ಅವುಗಳನ್ನು ಯೆಹೋವ ದೇವರಿಗೆ ಹೇಳಿದನು.
22ಯೆಹೋವ ದೇವರು ಸಮುಯೇಲನಿಗೆ, “ಅವರ ಮಾತನ್ನು ಕೇಳಿ ಅವರಿಗೆ ಅರಸನನ್ನು ನೇಮಿಸು,” ಎಂದರು. ಆಗ ಸಮುಯೇಲನು ಇಸ್ರಾಯೇಲ್ ಜನರಿಗೆ, “ನಿಮ್ಮ ನಿಮ್ಮ ಪಟ್ಟಣಗಳಿಗೆ ಹೋಗಿರಿ,” ಎಂದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.