Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಅರಸುಗಳು 9

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಸೊಲೊಮೋನನು ಯೆಹೋವ ದೇವರ ಆಲಯವನ್ನೂ, ತನ್ನ ಅರಮನೆಯನ್ನೂ ತಾನು ಬಯಸಿದ್ದೆಲ್ಲವನ್ನೂ ಸಾಧಿಸಿದನು.
2ಅನಂತರ ಯೆಹೋವ ದೇವರು ಸೊಲೊಮೋನನಿಗೆ ಗಿಬ್ಯೋನಿನಲ್ಲಿ ಪ್ರತ್ಯಕ್ಷರಾದಂತೆ, ಅವನಿಗೆ ಎರಡನೆಯ ಸಾರಿ ಪ್ರತ್ಯಕ್ಷರಾದರು.
3ಯೆಹೋವ ದೇವರು ಅವನಿಗೆ, “ನೀನು ನನ್ನ ಮುಂದೆ ಮಾಡಿದ ನಿನ್ನ ಪ್ರಾರ್ಥನೆಯನ್ನೂ ನಿನ್ನ ವಿಜ್ಞಾಪನೆಯನ್ನೂ ಕೇಳಿ ನನ್ನ ನಾಮವು ಯುಗಯುಗಾಂತರಕ್ಕೂ ಅಲ್ಲಿರುವ ಹಾಗೆ ನೀನು ಕಟ್ಟಿಸಿದ ಈ ಆಲಯವನ್ನು ಪರಿಶುದ್ಧ ಮಾಡಿದ್ದೇನೆ. ನನ್ನ ಕಣ್ಣುಗಳೂ, ನನ್ನ ಹೃದಯವೂ ನಿತ್ಯವಾಗಿ ಅಲ್ಲಿರುವುವು.
4“ನೀನು ನಿನ್ನ ತಂದೆಯಾದ ದಾವೀದನಂತೆ ಸಂಪೂರ್ಣ ಹೃದಯದಿಂದಲೂ, ಯಥಾರ್ಥತೆಯಿಂದಲೂ ನಾನು ನಿನಗೆ ಆಜ್ಞಾಪಿಸಿದ ನನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ನಿಷ್ಠೆಯಿಂದ ಕೈಗೊಂಡು ನಡೆದರೆ,
5ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ನಿನಗೆ ಉತ್ತರಾಧಿಕಾರಿಯ ಕೊರತೆಯಾಗುವುದಿಲ್ಲವೆಂದು ನಾನು ನಿನ್ನ ತಂದೆ ದಾವೀದನಿಗೆ ಮಾತುಕೊಟ್ಟ ಪ್ರಕಾರ, ‘ಇಸ್ರಾಯೇಲಿನಲ್ಲಿ ನಿನ್ನ ರಾಜ್ಯದ ಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು.’
6“ಆದರೆ ನೀವಾಗಲಿ, ನಿಮ್ಮ ಮಕ್ಕಳಾಗಲಿ ನಾನು ನಿಮಗೆ ಕೊಟ್ಟಿರುವ ಆಜ್ಞೆಗಳನ್ನೂ, ಕಟ್ಟಳೆಗಳನ್ನೂ ಕೈಗೊಂಡು ನಡೆಯದೆ ನನ್ನಿಂದ ದೂರಹೋಗಿ, ಅನ್ಯದೇವರುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದರೆ,
7ಆಗ ನಾನು ಇಸ್ರಾಯೇಲಿಗೆ ಕೊಟ್ಟ ದೇಶದೊಳಗಿಂದ ಅವರನ್ನು ತೆಗೆದುಹಾಕಿ, ನನ್ನ ನಾಮಕ್ಕೋಸ್ಕರ ಪ್ರತಿಷ್ಠಿಸಿಕೊಂಡ ಈ ಆಲಯವನ್ನು ನಾನು ನಿರಾಕರಿಸುವೆನು. ಇಸ್ರಾಯೇಲರು ಸಮಸ್ತ ಜನರಲ್ಲಿ ಗಾದೆಯಾಗಿಯೂ, ಅಪಹಾಸ್ಯಕ್ಕೆ ಗುರಿಯಾಗುವರು.
8ಇದಲ್ಲದೆ ಉನ್ನತವಾಗಿರುವ ಈ ಆಲಯದ ಮಾರ್ಗವಾಗಿ ಹೋಗುವವರೆಲ್ಲರೂ ಅದಕ್ಕೆ ಆಶ್ಚರ್ಯಪಟ್ಟು, ‘ಯೆಹೋವ ದೇವರು ಈ ದೇಶಕ್ಕೂ, ಈ ಆಲಯಕ್ಕೂ ಹೀಗೆ ಏಕೆ ಮಾಡಿದರು?’ ಎಂದು ಕೇಳುವರು.
9ಅದಕ್ಕೆ ಜನರು, ‘ತಮ್ಮ ತಂದೆಗಳನ್ನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ತಮ್ಮ ದೇವರಾದ ಯೆಹೋವ ದೇವರನ್ನು ಬಿಟ್ಟು ಅನ್ಯದೇವರುಗಳನ್ನು ಹಿಂಬಾಲಿಸಿ, ಅವುಗಳಿಗೆ ಅಡ್ಡಬಿದ್ದು ಸೇವಿಸಿದ್ದರಿಂದ ಯೆಹೋವ ದೇವರು ಈ ಕೇಡನ್ನೆಲ್ಲಾ ಅವರ ಮೇಲೆ ಬರಮಾಡಿದ್ದಾರೆಂದು ಹೇಳುವರು,’ ” ಎಂದರು. ಸೊಲೊಮೋನನ ಇತರ ಚಟುವಟಿಕೆಗಳು
10ಅರಸನಾದ ಸೊಲೊಮೋನನು ಇಪ್ಪತ್ತು ವರ್ಷಗಳಲ್ಲಿ ಆ ಎರಡು ಮನೆಗಳನ್ನು ಅಂದರೆ, ಯೆಹೋವ ದೇವರ ಆಲಯವನ್ನೂ, ಅರಮನೆಯನ್ನೂ ಕಟ್ಟಿಸಿ ತೀರಿಸಿದ ತರುವಾಯ
11ಸೊಲೊಮೋನನ ಇಷ್ಟದ ಪ್ರಕಾರ ಟೈರಿನ ಅರಸನಾದ ಹೀರಾಮನು ದೇವದಾರು ಮರಗಳನ್ನೂ, ತುರಾಯಿ ಮರಗಳನ್ನೂ, ಚಿನ್ನವನ್ನೂ ಕೊಟ್ಟಿದ್ದರಿಂದ ಸೊಲೊಮೋನನು ಟೈರಿನ ಅರಸನಾದ ಹೀರಾಮನಿಗೆ ಗಲಿಲಾಯ ದೇಶದಲ್ಲಿನ ಇಪ್ಪತ್ತು ಪಟ್ಟಣಗಳನ್ನು ಕೊಟ್ಟನು.
12ಆಗ ಹೀರಾಮನು ಟೈರಿನಿಂದ ಸೊಲೊಮೋನನು ತನಗೆ ಕೊಟ್ಟ ಪಟ್ಟಣಗಳನ್ನು ನೋಡಲು ಬಂದನು. ಆದರೆ ಅವು ಅವನಿಗೆ ಮೆಚ್ಚಿಕೆಯಾಗಿರಲಿಲ್ಲ.
13ಆದ್ದರಿಂದ ಅವನು, “ನನ್ನ ಸಹೋದರನೇ, ನೀನು ನನಗೆ ಎಂಥಾ ಪಟ್ಟಣಗಳನ್ನು ಕೊಟ್ಟಿರುವೆ?” ಎಂದು ಹೇಳಿ, ಅವುಗಳಿಗೆ ಕಾಬೂಲ್ ದೇಶವೆಂದು ಹೆಸರಿಟ್ಟನು. ಇಂದಿನವರೆಗೂ ಅವಕ್ಕೆ ಅದೇ ಹೆಸರು.
14ಹೀರಾಮನು ಅರಸನಿಗೆ ನಾಲ್ಕು ಸಾವಿರ ಕಿಲೋಗ್ರಾಂ ಚಿನ್ನವನ್ನು ಕಳುಹಿಸಿದನು.
15ಅರಸನಾದ ಸೊಲೊಮೋನನು ದಾಸರನ್ನು ಕೂಡಿಸಿದ ಕಾರಣವೇನೆಂದರೆ, ಯೆಹೋವ ದೇವರ ಮಂದಿರವನ್ನೂ, ತನ್ನ ಅರಮನೆಯನ್ನೂ, ಮಿಲ್ಲೋವನ್ನೂ, ಯೆರೂಸಲೇಮಿನ ಗೋಡೆಯನ್ನೂ, ಹಾಚೋರನ್ನೂ, ಮೆಗಿದ್ದೋವನ್ನೂ, ಗೆಜೆರನ್ನೂ ಕಟ್ಟುವುದಕ್ಕೋಸ್ಕರವೇ.
16ಈಜಿಪ್ಟಿನ ಅರಸನಾದ ಫರೋಹನು ಹೊರಟುಹೋಗಿ, ಗೆಜೆರನ್ನು ತೆಗೆದುಕೊಂಡು, ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟು, ಪಟ್ಟಣದಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಕೊಂದು, ಸೊಲೊಮೋನನ ಹೆಂಡತಿಯಾದ ತನ್ನ ಮಗಳಿಗೆ ಅದನ್ನು ಬಹುಮಾನವಾಗಿ ಕೊಟ್ಟನು.
17ಹೀಗೆಯೇ ಸೊಲೊಮೋನನು ಗೆಜೆರನ್ನೂ, ಕೆಳಗಿನ ಬೇತ್ ಹೋರೋನನ್ನೂ,
18ಬಾಲಾತನ್ನೂ, ಮರುಭೂಮಿಯಲ್ಲಿರುವ ತದ್ಮೋರ್ ಎಂಬ ಸ್ಥಳವನ್ನೂ ಕಟ್ಟಿಸಿದನು.
19ಇದಲ್ಲದೆ ಸೊಲೊಮೋನನು ಉಗ್ರಾಣದ ಪಟ್ಟಣಗಳನ್ನೂ, ತನ್ನ ರಾಹುತರಿಗೋಸ್ಕರ ಮತ್ತು ರಥಗಳಿಗೋಸ್ಕರ ಪಟ್ಟಣಗಳನ್ನೂ ಕಟ್ಟಿಸಿದನು. ಯೆರೂಸಲೇಮಿನಲ್ಲಿಯೂ, ಲೆಬನೋನಿನಲ್ಲಿಯೂ ತನ್ನ ರಾಜ್ಯದ ಎಲ್ಲಾ ಪ್ರಾಂತಗಳಲ್ಲಿಯೂ ತನಗೆ ಇಷ್ಟವಾದವುಗಳನ್ನೆಲ್ಲಾ ಕಟ್ಟಿಸಿದನು.
20ಇಸ್ರಾಯೇಲರಲ್ಲದ ಅಮೋರಿಯರು, ಹಿತ್ತಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು, ಇವರಲ್ಲಿ ಉಳಿದ ಸಮಸ್ತ ಜನರನ್ನೂ
21ಇಸ್ರಾಯೇಲರು ಸಂಹರಿಸದೆ ಉಳಿಸಿದ್ದ ಅವರ ಮಕ್ಕಳನ್ನೂ ಸೊಲೊಮೋನನು ಇಂದಿನವರೆಗೂ ದಾಸತ್ವಕ್ಕಾಗಿ ನೇಮಿಸಿದನು.
22ಆದರೆ ಸೊಲೊಮೋನನು ಇಸ್ರಾಯೇಲರನ್ನು ದಾಸರಾಗಿ ಮಾಡಲಿಲ್ಲ. ಅವರು ಯುದ್ಧಭಟರಾಗಿಯೂ, ಅವನ ಅಧಿಪತಿಯಾಗಿಯೂ, ತನ್ನ ಕೈಕೆಳಗಿರುವ ಅವನ ಪ್ರಧಾನರಾಗಿಯೂ, ಅಧಿಕಾರಿಗಳಾಗಿಯೂ, ತನ್ನ ರಥಗಳ ಮೇಲೆಯೂ, ರಾಹುತರ ಮೇಲೆಯೂ ಅಧಿಪತಿಗಳಾಗಿಯೂ ಇದ್ದರು.
23ಇದರೊಳಗೆ ಐದು ನೂರ ಐವತ್ತು ಮಂದಿ ಸೊಲೊಮೋನನ ಕೆಲಸದ ಪ್ರಧಾನ ಅಧಿಕಾರಿಗಳಾಗಿದ್ದರು. ಇವರು ಕೆಲಸದಲ್ಲಿ ಕಷ್ಟಪಡುವ ಜನರ ಮೇಲೆ ಅಧಿಕಾರಿಗಳಾಗಿದ್ದರು.
24ಆದರೆ ಫರೋಹನ ಮಗಳು ದಾವೀದನ ಪಟ್ಟಣದಿಂದ ತನಗೋಸ್ಕರ ಸೊಲೊಮೋನನು ಕಟ್ಟಿಸಿದ ಪಟ್ಟಣಕ್ಕೆ ಬಂದಳು. ಆಗ ಅವನು ಮಿಲ್ಲೋವನ್ನು ಕಟ್ಟಿಸಿದನು.
25ವರುಷಕ್ಕೆ ಮೂರು ಸಾರಿ ಸೊಲೊಮೋನನು ಯೆಹೋವ ದೇವರಿಗೆ ತಾನು ಕಟ್ಟಿಸಿದ ಬಲಿಪೀಠದ ಮೇಲೆ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿ, ಯೆಹೋವ ದೇವರ ಮುಂದಿರುವ ಪೀಠದ ಮೇಲೆ ಧೂಪವನ್ನು ಸುಡುತ್ತಿದ್ದನು. ಹೀಗೆ ಆಲಯದ ಅರ್ಪಣೆಗಳನ್ನು ಪೂರೈಸಿದನು.
26ಇದಲ್ಲದೆ ಅರಸನಾದ ಸೊಲೊಮೋನನು ಎದೋಮ್ ದೇಶದ ಕೆಂಪು ಸಮುದ್ರತೀರದ ಏಲೋತ್ ಎಂಬ ಊರ ಬಳಿಯಲ್ಲಿರುವ ಎಚ್ಯೋನ್ ಗೆಬೆರಿನಲ್ಲಿ ಹಡಗುಗಳನ್ನು ಕಟ್ಟಿಸಿದನು.
27ಹೀರಾಮನು ಸಮುದ್ರ ಪ್ರಯಾಣದಲ್ಲಿ ನಿಪುಣರಾದ ತನ್ನ ನಾವಿಕರನ್ನು ಸೊಲೊಮೋನನ ಸೇವಕರ ಸಂಗಡ ಆ ಹಡಗುಗಳಲ್ಲಿ ಕಳುಹಿಸಿದನು.
28ಅವರು ಓಫೀರಿಗೆ ಹೋಗಿ, ಅಲ್ಲಿಂದ ಹದಿನಾಲ್ಕು ಸಾವಿರ ಕಿಲೋಗ್ರಾಂ ಬಂಗಾರವನ್ನು ಅರಸನಾದ ಸೊಲೊಮೋನನಿಗೆ ತೆಗೆದುಕೊಂಡು ಬಂದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.