Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಅರಸುಗಳು 10

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಶೆಬದ ರಾಣಿಯು ಯೆಹೋವ ದೇವರ ನಾಮದ ಮಹತ್ತಿನಿಂದ ಸೊಲೊಮೋನನ ಕೀರ್ತಿಯನ್ನು ಕೇಳಿದಾಗ, ಒಗಟುಗಳಿಂದ ಅವನನ್ನು ಪರೀಕ್ಷಿಸಲು ಬಂದಳು.
2ಅವಳು ಮಹಾ ಗುಂಪಿನ ಸಂಗಡ ಸುಗಂಧದ್ರವ್ಯಗಳನ್ನೂ, ಬಹಳಷ್ಟು ಬಂಗಾರವನ್ನೂ, ಅಮೂಲ್ಯವಾದ ರತ್ನಗಳನ್ನೂ ಹೊತ್ತುಕೊಂಡಿರುವ ಒಂಟೆಗಳ ಸಂಗಡ ಯೆರೂಸಲೇಮಿಗೆ ಬಂದಳು. ಅವಳು ಸೊಲೊಮೋನನ ಬಳಿಗೆ ಬಂದ ಮೇಲೆ ತನ್ನ ಹೃದಯದಲ್ಲಿದ್ದ ಎಲ್ಲವನ್ನು ಕುರಿತು ಅವನ ಸಂಗಡ ಮಾತನಾಡಿದಳು.
3ಆಗ ಸೊಲೊಮೋನನು ಅವಳ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದನು. ಅವುಗಳಲ್ಲಿ ಅರಸನಿಗೆ ತಿಳಿಯದಂಥದ್ದು ಒಂದೂ ಇರಲಿಲ್ಲವಾದ್ದರಿಂದ ಎಲ್ಲವುಗಳಿಗೂ ಉತ್ತರಿಸಿದನು.
4ಶೆಬದ ರಾಣಿಯು ಸೊಲೊಮೋನನ ಸಮಸ್ತ ಜ್ಞಾನವನ್ನೂ, ಅವನು ಕಟ್ಟಿಸಿದ ಅರಮನೆಯನ್ನೂ,
5ಅವನ ಮೇಜಿನ ಭೋಜನವನ್ನೂ, ಅವನ ಅಧಿಪತಿಗಳು ಕುಳಿತಿರುವ ರೀತಿಯನ್ನೂ, ಅವನ ಸೇವಕರು ನಿಂತಿರುವುದನ್ನೂ, ಅವರ ವಸ್ತ್ರಗಳನ್ನೂ, ಅವನ ಪಾನದಾಯಕರನ್ನೂ, ಅವನು ಯೆಹೋವ ದೇವರ ಆಲಯದಲ್ಲಿ ಅರ್ಪಿಸಿದ ದಹನಬಲಿಗಳನ್ನೂ ಕಂಡಾಗ ಅವಳು ವಿಸ್ಮಯಗೊಂಡಳು.
6ಅವಳು ಅರಸನಿಗೆ, “ನಾನು ನನ್ನ ದೇಶದಲ್ಲಿ ನಿನ್ನ ಸಾಧನೆಗಳ ಕುರಿತೂ, ನಿನ್ನ ಜ್ಞಾನವನ್ನು ಕುರಿತೂ ಕೇಳಿದ ಮಾತು ಸತ್ಯ.
7ಆದರೆ ನಾನು ಬಂದು ನನ್ನ ಕಣ್ಣುಗಳಿಂದ ನೋಡುವವರೆಗೂ ಜನರ ಮಾತುಗಳನ್ನು ನಂಬದೆ ಹೋದೆನು. ಜನರು ನನಗೆ ಇದರಲ್ಲಿ ಅರ್ಧವನ್ನಾದರೂ ಹೇಳಲಿಲ್ಲ. ನಿನ್ನ ಜ್ಞಾನವೂ, ನಿನ್ನ ಸಂಪತ್ತೂ ನಾನು ಕೇಳಿದ್ದಕ್ಕಿಂತ ನಿನ್ನ ಕೀರ್ತಿ ಎಷ್ಟೋ ಅಧಿಕವಾಗಿದೆ.
8ನಿನ್ನ ಜನರು ಭಾಗ್ಯವಂತರು. ನಿನ್ನ ಮುಂದೆ ಯಾವಾಗಲೂ ನಿಂತು ನಿನ್ನ ಜ್ಞಾನವನ್ನು ಕೇಳುವ ಈ ನಿನ್ನ ಅಧಿಪತಿಗಳು ಭಾಗ್ಯವಂತರು.
9ಇಸ್ರಾಯೇಲಿನ ಸಿಂಹಾಸನದ ಮೇಲೆ ನಿನ್ನನ್ನು ಕುಳ್ಳಿರಿಸಿದ ನಿನ್ನಲ್ಲಿ ಹರ್ಷಗೊಂಡ ನಿನ್ನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ. ಯೆಹೋವ ದೇವರು ಯುಗಯುಗಕ್ಕೂ ಇಸ್ರಾಯೇಲರನ್ನು ಪ್ರೀತಿಮಾಡಿದ್ದರಿಂದ ನ್ಯಾಯವನ್ನೂ, ನೀತಿಯನ್ನೂ ನಡೆಸಲು ಅವರು ನಿನ್ನನ್ನು ಅರಸನನ್ನಾಗಿ ಮಾಡಿದರು,” ಎಂದಳು.
10ಅವಳು ಅರಸನಿಗೆ ನಾಲ್ಕು ಸಾವಿರ ಕಿಲೋಗ್ರಾಂ ತೂಕ ಬಂಗಾರವನ್ನೂ, ಬಹು ಸಮೃದ್ಧಿಯಾದ ಸುಗಂಧದ್ರವ್ಯಗಳನ್ನೂ, ಅಮೂಲ್ಯವಾದ ರತ್ನಗಳನ್ನೂ ಕೊಟ್ಟಳು. ಶೆಬದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟ ಅಪರಿಮಿತವಾದ ಸುಗಂಧದ್ರವ್ಯಗಳ ಹಾಗೆ ಬೇರೆ ಯಾರೂ ಕೊಟ್ಟಿರಲಿಲ್ಲ.
11ಹೀರಾಮನ ಹಡಗುಗಳು ಓಫೀರನಿಂದ ಬಂಗಾರ ಮಾತ್ರವಲ್ಲದೆ ಅನೇಕ ಸುಗಂಧದ ಮರಗಳನ್ನೂ, ಅಮೂಲ್ಯವಾದ ರತ್ನಗಳನ್ನೂ ತಂದವು.
12ಅರಸನು ಆ ಸುಗಂಧದ ಮರಗಳಿಂದ ಯೆಹೋವ ದೇವರ ಆಲಯಕ್ಕೋಸ್ಕರವೂ ಅರಮನೆಗೋಸ್ಕರವೂ ಸ್ತಂಭಗಳನ್ನು ಮಾಡಿಸಿದನು. ಇದಲ್ಲದೆ ಅವುಗಳಿಂದ ಹಾಡುವವರಿಗೋಸ್ಕರ ಕಿನ್ನರಿಗಳನ್ನೂ, ವೀಣೆಗಳನ್ನೂ ಮಾಡಿಸಿದನು. ಅಂದಿನಿಂದ ಈ ದಿನದವರೆಗೂ ಅಂಥಾ ಸುಗಂಧದ ಮರಗಳು ಬಂದದ್ದೂ ಇಲ್ಲ, ಕಂಡದ್ದೂ ಇಲ್ಲ.
13ಅರಸನಾದ ಸೊಲೊಮೋನನು ಶೆಬದ ರಾಣಿಗೆ ಔದಾರ್ಯವಾಗಿ ಕೊಟ್ಟ ಕಾಣಿಕೆಗಳ ಹೊರತಾಗಿ, ಅವಳು ಬಯಸಿ ಕೇಳಿದ್ದನ್ನೆಲ್ಲಾ ಅವಳಿಗೆ ಕೊಟ್ಟನು. ಅನಂತರ ಅವಳು ತನ್ನ ಸೇವಕರೊಡನೆ ತಿರುಗಿ ತಮ್ಮ ದೇಶಕ್ಕೆ ಹೋದಳು. ಸೊಲೊಮೋನನ ವೈಭವ
14ಸೊಲೊಮೋನನಿಗೆ ಪ್ರತಿ ವರುಷ ಸುಮಾರು ಇಪ್ಪತ್ತಮೂರು ಸಾವಿರ ಕಿಲ್ರೊಗ್ರಾಂ ಬಂಗಾರವು ದೊರಕುತ್ತಿತ್ತು.
15ಇದಲ್ಲದೆ ಸೊಲೊಮೋನನಿಗೆ ವರ್ತಕರಿಂದಲೂ, ವರ್ತಕರ ವ್ಯಾಪಾರದಿಂದಲೂ, ಅರೇಬಿಯದ ಅರಸರಿಂದಲೂ, ದೇಶದ ಅಧಿಪತಿಗಳಿಂದಲೂ ಸಹ ಬಂಗಾರವು ದೊರಕುತ್ತಿತ್ತು.
16ಅರಸನಾದ ಸೊಲೊಮೋನನು ಬಂಗಾರದಿಂದ ಇನ್ನೂರು ಗುರಾಣಿಗಳನ್ನು ಮಾಡಿಸಿದನು. ಒಂದೊಂದು ಗುರಾಣಿ ಸುಮಾರು ಏಳು ಕಿಲೋಗ್ರಾಂ ತೂಕದ ಬಂಗಾರವಿತ್ತು.
17ಹಾಗೆಯೇ ಬಂಗಾರದಿಂದ ಮುನ್ನೂರು ಸಣ್ಣ ಗುರಾಣಿಗಳನ್ನು ಮಾಡಿಸಿದನು. ಒಂದೊಂದು ಗುರಾಣಿಗೆ ಸುಮಾರು ಎರಡು ಕಿಲೋಗ್ರಾಂ ಬಂಗಾರ ಹಿಡಿಯಿತು. ಅರಸನು ಇವುಗಳನ್ನು ಲೆಬನೋನಿನ ಅಡವಿಯ ಮನೆಯಲ್ಲಿ ಇಟ್ಟನು.
18ಅರಸನು ದಂತದಿಂದ ದೊಡ್ಡ ಸಿಂಹಾಸನವನ್ನು ಮಾಡಿಸಿ, ಅದನ್ನು ಚೊಕ್ಕ ಬಂಗಾರದಿಂದ ಹೊದಿಸಿದನು.
19ಈ ಸಿಂಹಾಸನಕ್ಕೆ ಆರು ಮೆಟ್ಟಲುಗಳಿದ್ದವು. ಈ ಸಿಂಹಾಸನದ ಹಿಂಭಾಗವು ದುಂಡಾಗಿತ್ತು. ಕುಳಿತುಕೊಳ್ಳುವ ಆಸನದ ಎರಡು ಕಡೆಗಳಲ್ಲಿ ಕೈಗಳಿದ್ದವು. ಆ ಕೈಗಳ ಬಳಿಯಲ್ಲಿ ಎರಡು ಸಿಂಹಗಳು ನಿಂತಿದ್ದವು.
20ಹನ್ನೆರಡು ಸಿಂಹಗಳು, ಆರು ಮೆಟ್ಟಲುಗಳ ಮೇಲೆ ಎರಡು ಕಡೆಗಳಲ್ಲಿ ನಿಂತಿದ್ದವು. ಯಾವ ರಾಜ್ಯದಲ್ಲಿಯೂ ಅಂಥದ್ದು ಇರಲಿಲ್ಲ.
21ಇದಲ್ಲದೆ ಅರಸನಾದ ಸೊಲೊಮೋನನು ಕುಡಿಯುವ ಪಾತ್ರೆಗಳೆಲ್ಲಾ ಬಂಗಾರದವುಗಳಾಗಿದ್ದವು. ಲೆಬನೋನಿನ ಅಡವಿಯ ಮನೆಯ ಎಲ್ಲಾ ಸಾಮಗ್ರಿಗಳು ಚೊಕ್ಕ ಬಂಗಾರದವುಗಳು. ಸೊಲೊಮೋನನ ದಿವಸಗಳಲ್ಲಿ ಬೆಳ್ಳಿಗೆ ಬೆಲೆಯೇ ಇರಲಿಲ್ಲ, ಆದುದರಿಂದ ಅವನಲ್ಲಿ ಬೆಳ್ಳಿಯ ವಸ್ತು ಒಂದಾದರೂ ಕಾಣಿಸಲಿಲ್ಲ.
22ಹೀರಾಮನ ಹಡಗುಗಳ ಜೊತೆಯಲ್ಲಿ ಅರಸನ ಹಡಗುಗಳು ತಾರ್ಷೀಷಿಗೆ ಹೋಗಿ ಮೂರು ವರ್ಷಕ್ಕೆ ಒಂದು ಸಾರಿ ಬಂಗಾರ, ಬೆಳ್ಳಿ, ದಂತ, ಕೋತಿ, ನವಿಲು ಇವುಗಳನ್ನೂ ತರುತ್ತಿದ್ದವು.
23ಹೀಗೆಯೇ ಅರಸನಾದ ಸೊಲೊಮೋನನು ಐಶ್ವರ್ಯದಲ್ಲಿಯೂ, ಜ್ಞಾನದಲ್ಲಿಯೂ ಭೂಲೋಕದ ಸಮಸ್ತ ಅರಸರಿಗಿಂತ ಮಿಗಿಲಾಗಿದ್ದನು.
24ದೇವರು ಸೊಲೊಮೋನನ ಹೃದಯದಲ್ಲಿ ಕೊಟ್ಟಿದ್ದ ಜ್ಞಾನವನ್ನು ಕೇಳುವುದಕ್ಕಾಗಿ ಭೂಲೋಕದಲ್ಲಿರುವ ಸಮಸ್ತರೂ ಅವನ ದರ್ಶನವನ್ನು ಬಯಸಿದರು.
25ಅವರೆಲ್ಲರೂ ಕಾಣಿಕೆಯಾಗಿ ಬೆಳ್ಳಿಯ ಪಾತ್ರೆಗಳನ್ನೂ, ಬಂಗಾರದ ಪಾತ್ರೆಗಳನ್ನೂ, ವಸ್ತ್ರಗಳನ್ನೂ, ಆಯುಧಗಳನ್ನೂ, ಸುಗಂಧಗಳನ್ನೂ, ಕುದುರೆಗಳನ್ನೂ, ಹೇಸರಗತ್ತೆಗಳನ್ನೂ, ವರುಷ ವರುಷವೂ ನೇಮಕವಾದ ಪ್ರಕಾರ ತರುತ್ತಿದ್ದರು.
26ಇದಲ್ಲದೆ ಸೊಲೊಮೋನನು ರಥಗಳನ್ನೂ, ರಾಹುತರನ್ನೂ ಕೂಡಿಸಿದನು. ಸಾವಿರದ ನಾನೂರು ರಥಗಳು, ಹನ್ನೆರಡು ಸಾವಿರ ಕುದುರೆಯ ರಾಹುತರು ಇದ್ದರು. ಇವುಗಳಲ್ಲಿ ಕೆಲವನ್ನು ಯೆರೂಸಲೇಮಿನಲ್ಲಿ ತನ್ನ ಬಳಿಯಲ್ಲಿಯೇ ಇರಿಸಿದನು, ಉಳಿದವುಗಳನ್ನು ರಥಗಳ ಪಟ್ಟಣಗಳಲ್ಲಿಯೂ ಇರಿಸಿದನು.
27ಅರಸನ ಕಾಲದಲ್ಲಿ ಯೆರೂಸಲೇಮಿನಲ್ಲಿ ಬೆಳ್ಳಿಯನ್ನು ಕಲ್ಲುಗಳಂತೆಯೂ, ದೇವದಾರು ಮರಗಳನ್ನು ತಗ್ಗಿನಲ್ಲಿರುವ ಅತ್ತಿಮರಗಳಂತೆಯೂ ಪರಿಗಣಿಸಲಾಯಿತು.
28ಇದಲ್ಲದೆ ಸೊಲೊಮೋನನಿಗೆ ಈಜಿಪ್ಟಿನಿಂದಲೂ ಕುವೆಯಿಂದಲೂ ಕುದುರೆಗಳು ಬರುತ್ತಿದ್ದವು. ಅರಸನ ವರ್ತಕರು ಅವುಗಳನ್ನು ಹಿಂಡುಹಿಂಡಾಗಿ ಕೊಂಡುಕೊಂಡು ಬರುತ್ತಿದ್ದರು.
29ಹಾಗೆಯೇ ಈಜಿಪ್ಟಿನಿಂದ ಆರುನೂರು ಬೆಳ್ಳಿ ನಾಣ್ಯಗಳ ಕ್ರಯಕ್ಕೆ ಒಂದು ರಥವನ್ನೂ ನೂರ ಐವತ್ತು ಬೆಳ್ಳಿ ನಾಣ್ಯಗಳ ಕ್ರಯಕ್ಕೆ ಒಂದು ಕುದುರೆಯನ್ನೂ ತರಿಸುತ್ತಿದ್ದರು. ಈ ಪ್ರಕಾರ ಹಿತ್ತಿಯರ ಮತ್ತು ಅರಾಮಿನ ಅರಸುಗಳೆಲ್ಲರು ಇವರ ಮುಖಾಂತರವಾಗಿಯೇ ತರಿಸುತ್ತಿದ್ದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.