Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಅರಸುಗಳು 16

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಬಾಷನಿಗೆ ವಿರೋಧವಾಗಿ ಹನಾನೀಯ ಮಗ ಯೇಹುವಿಗೆ ಯೆಹೋವ ದೇವರ ವಾಕ್ಯ ಬಂತು,
2“ನಾನು ನಿನ್ನನ್ನು ಧೂಳಿನಿಂದ ಎಬ್ಬಿಸಿ, ನಿನ್ನನ್ನು ನನ್ನ ಜನರಾದ ಇಸ್ರಾಯೇಲಿನ ಮೇಲೆ ನಾಯಕನಾಗಿ ಇರಿಸಿದೆನು. ಆದರೆ ನೀನು ಯಾರೊಬ್ಬಾಮನ ಮಾರ್ಗದಲ್ಲಿ ನಡೆದು, ನನ್ನ ಜನರಾದ ಇಸ್ರಾಯೇಲರು ತಮ್ಮ ಪಾಪಗಳಿಂದ ನನಗೆ ಕೋಪವನ್ನು ಎಬ್ಬಿಸುವ ಹಾಗೆ ಅವರನ್ನು ಪಾಪಮಾಡಲು ಪ್ರೇರೇಪಿಸಿದೆ.
3ನಾನು ಬಾಷನ ಸಂತತಿಯನ್ನೂ, ಅವನ ಮನೆಯ ಸಂತತಿಯನ್ನೂ ತೆಗೆದುಹಾಕಿ, ನಿನ್ನ ಮನೆಯನ್ನು ನೆಬಾಟನ ಮಗ ಯಾರೊಬ್ಬಾಮನ ಮನೆಯ ಹಾಗೆ ಮಾಡುವೆನು.
4ಬಾಷನ ಕಡೆಯವರಲ್ಲಿ ಪಟ್ಟಣದೊಳಗೆ ಸಾಯುವವನನ್ನು ನಾಯಿಗಳು ತಿನ್ನುವುವು. ಅವನ ಕಡೆಯವನಲ್ಲಿ ಹೊಲದೊಳಗೆ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವುವು,” ಎಂಬುದೇ ಆ ವಾಕ್ಯ.
5ಬಾಷನ ಇತರ ಕಾರ್ಯಗಳೂ, ಅವನು ಮಾಡಿದ್ದೂ, ಅವನ ಪರಾಕ್ರಮವೂ ಇಸ್ರಾಯೇಲಿನ ಅರಸುಗಳ ಪುಸ್ತಕದಲ್ಲಿ ಬರೆದಿರುತ್ತವೆ.
6ಬಾಷನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ತಿರ್ಚದಲ್ಲಿ ಅವನ ಶವವನ್ನು ಸಮಾಧಿಮಾಡಿದರು. ಅವನ ಮಗ ಏಲನು ಅವನಿಗೆ ಬದಲಾಗಿ ಅರಸನಾದನು.
7ಬಾಷನು ಯಾರೊಬ್ಬಾಮನ ಮನೆಯವರ ಹಾಗಿದ್ದು, ಅವರನ್ನು ಸಂಹರಿಸಿದ್ದರಿಂದ ಯೆಹೋವ ದೇವರಿಗೆ ಕೋಪವನ್ನು ಎಬ್ಬಿಸಿ, ಯೆಹೋವ ದೇವರ ಸಮ್ಮುಖದಲ್ಲಿ ತಾನು ಮಾಡಿದ ಎಲ್ಲಾ ಕೆಟ್ಟತನದ ನಿಮಿತ್ತ ಅವನಿಗೆ ವಿರೋಧವಾಗಿಯೂ, ಅವನ ಮನೆಗೆ ವಿರೋಧವಾಗಿಯೂ ಹನಾನೀಯ ಮಗನಾಗಿರುವ ಪ್ರವಾದಿ ಯೇಹುವಿನ ಮುಖಾಂತರ ಯೆಹೋವ ದೇವರ ವಾಕ್ಯ ಬಂತು. ಇಸ್ರಾಯೇಲರ ಅರಸನಾದ ಏಲನು
8ಯೆಹೂದದ ಅರಸನಾದ ಆಸನ ಇಪ್ಪತ್ತಾರನೆಯ ವರುಷದಲ್ಲಿ ಬಾಷನ ಮಗ ಏಲನು ಇಸ್ರಾಯೇಲಿನ ಮೇಲೆ ತಿರ್ಚದಲ್ಲಿ ಎರಡು ವರ್ಷ ಆಳಿದನು.
9ಆದರೆ ತಿರ್ಚದಲ್ಲಿ ತನ್ನ ಮನೆಯ ಉಗ್ರಾಣಿಕನಾದ ಅರ್ಚನ ಮನೆಯಲ್ಲಿ ಅವನು ಕುಡಿದು ಮತ್ತನಾಗಿರುವಾಗ, ಅರ್ಧ ರಥಗಳಿಗೆ ಅಧಿಪತಿಯಾಗಿರುವ ಅವನ ಸೇವಕನಾದ ಜಿಮ್ರಿಯನು ಅವನಿಗೆ ವಿರೋಧವಾಗಿ ಒಳಸಂಚು ಮಾಡಿದನು.
10ಜಿಮ್ರಿಯು ಒಳಗೆ ಹೋಗಿ ಯೆಹೂದದ ಅರಸನಾದ ಆಸನ ಇಪ್ಪತ್ತೇಳನೆಯ ವರ್ಷದಲ್ಲಿ, ಅವನನ್ನು ಕೆಡವಿ ಕೊಂದುಹಾಕಿ, ಅವನಿಗೆ ಬದಲಾಗಿ ಅರಸನಾದನು.
11ಜಿಮ್ರಿಯು ಆಳಲು ಆರಂಭಿಸಿದಾಗ, ಅವನು ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಲೇ, ಬಾಷನ ಮನೆಯವರನ್ನೆಲ್ಲಾ ಸಂಹರಿಸಿ, ಅವನ ಬಂಧುಗಳಲ್ಲಿಯೂ, ಅವನ ಸ್ನೇಹಿತರಲ್ಲಿಯೂ ಒಬ್ಬ ಗಂಡಸನನ್ನೂ ಉಳಿಸಲಿಲ್ಲ.
12ಹೀಗೆಯೇ ಬಾಷನೂ ಅವನ ಮಗ ಏಲನೂ ತಮ್ಮ ಎಲ್ಲಾ ಪಾಪಗಳಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಕೋಪವನ್ನು ಎಬ್ಬಿಸಿ, ತಾವು ಮಾಡಿದ ಪಾಪಗಳಿಂದಲೂ,
13ತಾವು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ್ದರಿಂದಲೂ, ಯೆಹೋವ ದೇವರು ಪ್ರವಾದಿಯಾದ ಯೇಹುವಿನ ಮುಖಾಂತರ ಬಾಷನಿಗೆ ವಿರೋಧವಾಗಿ ಹೇಳಿದ ಆತನ ವಾಕ್ಯದ ಪ್ರಕಾರವೇ ಜಿಮ್ರಿಯು ಬಾಷನ ಮನೆಯವರನ್ನೆಲ್ಲಾ ನಾಶಮಾಡಿದನು.
14ಏಲನ ಇತರ ಕ್ರಿಯೆಗಳೂ, ಅವನು ಮಾಡಿದ್ದೆಲ್ಲವೂ ಇಸ್ರಾಯೇಲ್ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. ಇಸ್ರಾಯೇಲರ ಅರಸನಾದ ಜಿಮ್ರಿಯು
15ಯೆಹೂದದ ಅರಸನಾದ ಆಸನ ಇಪ್ಪತ್ತೇಳನೆಯ ವರ್ಷದಲ್ಲಿ ಜಿಮ್ರಿಯು ತಿರ್ಚದಲ್ಲಿ ಇಸ್ರಾಯೇಲರ ಅರಸನಾಗಿ ಏಳು ದಿನ ಆಳಿದನು. ಆಗ ಇಸ್ರಾಯೇಲರು ಫಿಲಿಷ್ಟಿಯರಿಗೆ ಸಂಬಂಧಪಟ್ಟ ಗಿಬ್ಬೆತೋನಿನ ಬಳಿಯಲ್ಲಿ ದಂಡಿಳಿಸಿದ್ದರು.
16ಜಿಮ್ರಿಯು ಒಳಸಂಚುಮಾಡಿ, ಅರಸನನ್ನು ಕೊಂದು ಹಾಕಿದ್ದಾನೆಂದು ಅಲ್ಲಿ ಇಳಿದಿರುವ ದಂಡಿನವರು ಕೇಳಿದ್ದರಿಂದ, ಇಸ್ರಾಯೇಲರೆಲ್ಲರು ಅದೇ ದಿವಸದಲ್ಲಿ ದಂಡಿನ ಅಧಿಪತಿಯಾದ ಒಮ್ರಿಯನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ನೇಮಿಸಿದರು.
17ಆಗ ಒಮ್ರಿಯೂ ಅವನ ಸಂಗಡ ಇಸ್ರಾಯೇಲರೆಲ್ಲರೂ ಗಿಬ್ಬೆತೋನನ್ನು ಬಿಟ್ಟು ಹೋಗಿ ತಿರ್ಚವನ್ನು ಮುತ್ತಿಗೆ ಹಾಕಿದರು.
18ಪಟ್ಟಣವು ವಶವಾದದ್ದನ್ನು ಕಂಡಾಗ, ಜಿಮ್ರಿಯು ಅರಮನೆಯ ಅಂತಃಪುರದೊಳಗೆ ಪ್ರವೇಶಿಸಿ, ತನ್ನ ಅರಮನೆಯನ್ನು ಬೆಂಕಿಯಿಂದ ಸುಟ್ಟು ತಾನೂ ಸತ್ತನು.
19ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ತಾನು ಮಾಡಿದ ಪಾಪಗಳ ನಿಮಿತ್ತವಾಗಿಯೂ, ಯಾರೊಬ್ಬಾಮನ ಮಾರ್ಗದಲ್ಲಿ ನಡೆದು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ಅವನ ಪಾಪದ ನಿಮಿತ್ತವಾಗಿಯೂ ಆಯಿತು.
20ಜಿಮ್ರಿಯ ಇತರ ಕಾರ್ಯಗಳೂ, ಅವನು, ಮಾಡಿದ ಒಳಸಂಚೂ ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. ಇಸ್ರಾಯೇಲರ ಅರಸನಾದ ಒಮ್ರಿಯು
21ಆ ಕಾಲದಲ್ಲಿ ಇಸ್ರಾಯೇಲರೊಳಗೆ ಎರಡು ಪಕ್ಷಗಳುಂಟಾದವು, ಅರ್ಧ ಜನರು ಗೀನಾತನ ಮಗ ತಿಬ್ನಿಯನ್ನು ಅರಸನನ್ನಾಗಿ ಮಾಡಲು ಅವನ ಹಿಂದೆ ಹೋದರು, ಅರ್ಧ ಜನರು ಒಮ್ರಿಯ ಹಿಂದೆ ಹೋದರು.
22ಆದರೆ ಒಮ್ರಿಯ ಸಮರ್ಥಕರು ಜಯಿಸಿದ್ದರಿಂದ ಗೀನಾತನ ಮಗನಾದ ತಿಬ್ನಿಯು ಸತ್ತುಹೋದನು, ಒಮ್ರಿಯು ಅರಸನಾದನು.
23ಯೆಹೂದದ ಅರಸನಾದ ಆಸನ ಮೂವತ್ತೊಂದನೆಯ ವರ್ಷದಲ್ಲಿ, ಒಮ್ರಿಯು ಇಸ್ರಾಯೇಲಿನ ಮೇಲೆ ಆಳಲು ಆರಂಭಿಸಿ, ಹನ್ನೆರಡು ವರ್ಷ ಆಳಿದನು, ಅದರಲ್ಲಿ ಆರು ವರ್ಷ ತಿರ್ಚದಲ್ಲಿ ಆಳಿದನು.
24ಅವನು ಶೆಮೆರ್ ಎಂಬವನಿಗೆ ಆರು ಸಾವಿರ ಬೆಳ್ಳಿ ನಾಣ್ಯಗಳನ್ನು ಕೊಟ್ಟು ಸಮಾರಿಯ ಎಂಬ ಬೆಟ್ಟವನ್ನು ಕೊಂಡುಕೊಂಡನು. ಆ ಬೆಟ್ಟದ ಮೇಲೆ ಒಂದು ಪಟ್ಟಣವನ್ನು ಕಟ್ಟಿಸಿ, ಅದಕ್ಕೆ ಆ ಜಮೀನಿನ ಯಜಮಾನನಾಗಿದ್ದ ಶೆಮೆರನ ಜ್ಞಾಪಕಾರ್ಥವಾಗಿ ತಾನು ಕಟ್ಟಿಸಿದ ಪಟ್ಟಣಕ್ಕೆ ಸಮಾರ್ಯ ಎಂದು ಹೆಸರಿಟ್ಟನು.
25ಆದರೆ ಒಮ್ರಿಯು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ತನಗೆ ಮುಂಚೆ ಇದ್ದ ಎಲ್ಲರಿಗಿಂತ ಕೆಟ್ಟವನಾಗಿ ನಡೆದನು.
26ಅವನು ನೆಬಾಟನ ಮಗ ಯಾರೊಬ್ಬಾಮನ ಸಕಲ ಮಾರ್ಗಗಳಲ್ಲಿಯೂ, ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ತಮ್ಮ ವ್ಯರ್ಥವಾದವುಗಳಿಂದ ಕೋಪವನ್ನು ಎಬ್ಬಿಸಿದ ಹಾಗೆ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ಯಾರೊಬ್ಬಾಮನ ಪಾಪದಲ್ಲಿಯೂ ನಡೆದನು.
27ಒಮ್ರಿಯು ಮಾಡಿದ ಇತರ ಕಾರ್ಯಗಳೂ, ಅವನು ತೋರಿಸಿದ ಪರಾಕ್ರಮವೂ, ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
28ಒಮ್ರಿಯು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ಸಮಾರ್ಯ ಪಟ್ಟಣದಲ್ಲಿ ಅವನ ಶವವನ್ನು ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಅಹಾಬನು ಅರಸನಾದನು. ಅಹಾಬನು ಇಸ್ರಾಯೇಲಿನ ಅರಸನಾದನು
29ಯೆಹೂದದ ಅರಸನಾದ ಆಸನ ಮೂವತ್ತೆಂಟನೆಯ ವರ್ಷದಲ್ಲಿ ಒಮ್ರಿಯ ಮಗ ಅಹಾಬನು ಇಸ್ರಾಯೇಲಿನ ಮೇಲೆ ಅರಸನಾಗಿ ಸಮಾರ್ಯದಲ್ಲಿ ಇಪ್ಪತ್ತೆರಡು ವರ್ಷ ಆಳಿದನು.
30ಒಮ್ರಿಯ ಮಗ ಅಹಾಬನು ತನಗೆ ಮುಂಚೆ ಇದ್ದ ಎಲ್ಲರಿಗಿಂತ ಯೆಹೋವ ದೇವರ ಮುಂದೆ ಹೆಚ್ಚು ಕೆಟ್ಟತನ ಮಾಡಿದನು.
31ನೆಬಾಟನ ಮಗ ಯಾರೊಬ್ಬಾಮನ ಪಾಪಗಳಲ್ಲಿ ನಡೆಯುವುದು ಅವನಿಗೆ ಅಲ್ಪವಾಗಿತ್ತು. ಅವನು ಸೀದೋನ್ಯರ ಅರಸನಾದ ಎತ್ಬಾಳನ ಮಗಳಾದ ಈಜೆಬೆಲಳನ್ನು ಮದುವೆಯಾಗಿ ಬಾಳನನ್ನು ಸೇವಿಸಿ ಅವನಿಗೆ ಅಡ್ಡಬಿದ್ದನು.
32ಇದಲ್ಲದೆ ತಾನು ಸಮಾರ್ಯದಲ್ಲಿ ಕಟ್ಟಿಸಿದ ಬಾಳನ ಮನೆಯಲ್ಲಿ ಬಾಳನಿಗೆ ಬಲಿಪೀಠವನ್ನು ಕಟ್ಟಿಸಿದನು.
33ಅಹಾಬನು ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿದನು. ಹೀಗೆಯೇ ಅಹಾಬನು ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಕೋಪ ಉಕ್ಕುವ ಹಾಗೆ ತನಗೆ ಮುಂಚಿನ ಇಸ್ರಾಯೇಲಿನ ಅರಸುಗಳೆಲ್ಲರಿಗಿಂತ ಅಧಿಕವಾಗಿ ಕೆಟ್ಟತನ ಮಾಡಿದನು.
34ಅವನ ದಿವಸಗಳಲ್ಲಿ ಬೇತೇಲಿನ ಹೀಯೇಲನು ಯೆರಿಕೋವನ್ನು ಕಟ್ಟಿಸಿದನು. ಯೆಹೋವ ದೇವರು ನೂನನ ಮಗನಾದ ಯೆಹೋಶುವನ ಮುಖಾಂತರ ಹೇಳಿದ್ದ ವಾಕ್ಯದ ಪ್ರಕಾರವೇ ಅವನು ಅದಕ್ಕೆ ಅಸ್ತಿವಾರವನ್ನು ಹಾಕಿದಾಗ, ತನ್ನ ಚೊಚ್ಚಲಮಗನಾದ ಅಬೀರಾಮನನ್ನೂ, ಅದರ ಬಾಗಿಲುಗಳನ್ನು ಇಟ್ಟಾಗ ತನ್ನ ಕಿರಿ ಮಗನಾದ ಸೆಗೂಬನನ್ನೂ ಕಳೆದುಕೊಂಡನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.