Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಅರಸುಗಳು 15

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನೆಬಾಟನ ಮಗ ಯಾರೊಬ್ಬಾಮನ ಹದಿನೆಂಟನೆಯ ವರ್ಷದಲ್ಲಿ ಅಬಿಯಾಮನು ಯೆಹೂದದ ಅರಸನಾಗಿ,
2ಯೆರೂಸಲೇಮಿನಲ್ಲಿ ಮೂರು ವರ್ಷ ಆಳಿದನು. ಅವನ ತಾಯಿಯ ಹೆಸರು ಮಾಕಾ, ಇವಳು ಅಬ್ಷಾಲೋಮನ ಮಗಳಾಗಿದ್ದಳು.
3ಅಬಿಯಾಮನು, ತನ್ನ ಪಿತೃವಾದ ದಾವೀದನ ಹೃದಯದ ಪ್ರಕಾರ, ಅವನ ಹೃದಯವು ತನ್ನ ದೇವರಾದ ಯೆಹೋವ ದೇವರ ಮುಂದೆ ಪೂರ್ಣವಾಗಿರದೆ, ತನಗೆ ಮುಂಚೆ ಇದ್ದ ತನ್ನ ತಂದೆ ಮಾಡಿದ ಸಮಸ್ತ ಪಾಪಗಳಲ್ಲಿ ನಡೆದನು.
4ಅವನ ತರುವಾಯ ಅವನ ಮಗನನ್ನು ನೇಮಿಸುವುದಕ್ಕೂ, ಯೆರೂಸಲೇಮನ್ನು ಸ್ಥಿರಪಡಿಸುವುದಕ್ಕೂ, ತನ್ನ ದೇವರಾದ ಯೆಹೋವ ದೇವರು ದಾವೀದನ ನಿಮಿತ್ತ ಯೆರೂಸಲೇಮಿನಲ್ಲಿ ಅವನಿಗೆ ದೀಪವನ್ನು ಉಳಿಸಿದರು.
5ಏಕೆಂದರೆ ದಾವೀದನು ಹಿತ್ತಿಯನಾದ ಊರೀಯನ ವಿಷಯವೊಂದನ್ನು ಬಿಟ್ಟು, ತನ್ನ ಜೀವಿತದ ಸಮಸ್ತ ದಿವಸಗಳಲ್ಲಿ ಯೆಹೋವ ದೇವರು ತನಗೆ ಆಜ್ಞಾಪಿಸಿದ ಎಲ್ಲಾದಕ್ಕೆ ತೊಲಗದೆ, ಅವರ ದೃಷ್ಟಿಗೆ ಮೆಚ್ಚಿಕೆಯಾದದ್ದನ್ನು ಮಾಡಿದನು.
6ಆದರೆ ರೆಹಬ್ಬಾಮನಿಗೂ, ಯಾರೊಬ್ಬಾಮನಿಗೂ ಅವರ ಜೀವಾಂತ್ಯದವರೆಗೆ ಯುದ್ಧ ಉಂಟಾಗಿತ್ತು.
7ಅಬಿಯಾಮನ ಮಿಕ್ಕಾದ ಕ್ರಿಯೆಗಳೂ, ಅವನು ಮಾಡಿದ್ದೆಲ್ಲವೂ, ಯೆಹೂದದ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. ಇವನಿಗೂ ಯಾರೊಬ್ಬಾಮನಿಗೂ ಯುದ್ಧ ನಡೆಯುತ್ತಿತ್ತು.
8ಅಬಿಯಾಮನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು, ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಆಸನು ಅವನಿಗೆ ಬದಲಾಗಿ ಅರಸನಾದನು. ಯೆಹೂದ್ಯರ ಅರಸನಾದ ಆಸನು
9ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ಇಪ್ಪತ್ತನೆಯ ವರುಷದಲ್ಲಿ ಆಸನು ಯೆಹೂದದ ಮೇಲೆ ಅರಸನಾದನು.
10ನಾಲ್ವತ್ತೊಂದು ವರುಷ ಅವನು ಯೆರೂಸಲೇಮಿನಲ್ಲಿ ಆಳಿದನು. ಅವನ ಅಜ್ಜಿ ಅಬ್ಷಾಲೋಮನ ಮಗಳಾಗಿದ್ದು ಮಾಕಾ ಎಂಬಾಕೆಯು ಇವನ ತಾಯಿ.
11ಆಸನು ತನ್ನ ತಂದೆಯಾದ ದಾವೀದನ ಹಾಗೆ ಯೆಹೋವ ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದನ್ನು ಮಾಡಿದನು.
12ಅವನು ಪೂಜಾ ಸ್ಥಳದ ಪುರುಷಗಾಮಿಗಳನ್ನು ದೇಶದಲ್ಲಿಂದ ಹೊರಡಿಸಿ, ತನ್ನ ಪಿತೃಗಳು ಮಾಡಿದ ಸಮಸ್ತ ವಿಗ್ರಹಗಳನ್ನು ತೆಗೆದುಹಾಕಿದನು.
13ಇದಲ್ಲದೆ, ಆಸನು ತನ್ನ ಅಜ್ಜಿ ಮಾಕ ಎಂಬವಳು ಅಶೇರ ದೇವತೆಯ ಒಂದು ಅಸಹ್ಯವಾದ ಮೂರ್ತಿಯನ್ನು ಮಾಡಿಸಿದ್ದರಿಂದ, ಅವಳನ್ನು ರಾಜಮಾತೆಯ ಸ್ಥಾನದಿಂದ ತೆಗೆದುಹಾಕಿದನು. ಆ ಮೂರ್ತಿಯನ್ನು ಕಡಿದುಹಾಕಿ ಕಿದ್ರೋನ್ ಹಳ್ಳದ ಹತ್ತಿರ ಸುಟ್ಟುಬಿಟ್ಟನು.
14ಅವನು ಪೂಜಾಸ್ಥಳಗಳನ್ನು ತೆಗೆದು ಹಾಕದಿದ್ದರೂ ಆಸನ ಹೃದಯವು ತನ್ನ ಜೀವಮಾನದಲ್ಲೆಲ್ಲಾ ಯೆಹೋವ ದೇವರ ದೃಷ್ಟಿಯಲ್ಲಿ ದೋಷವಿಲ್ಲದ್ದಾಗಿತ್ತು.
15ತಾನು ಮತ್ತು ತನ್ನ ತಂದೆಯೂ ಪ್ರತಿಷ್ಠಿಸಿದ ಬೆಳ್ಳಿಬಂಗಾರವನ್ನೂ ಸಲಕರಣೆಗಳನ್ನೂ ಯೆಹೋವ ದೇವರ ಆಲಯಕ್ಕೆ ತಂದನು.
16ಇದಲ್ಲದೆ ಆಸನಿಗೂ ಇಸ್ರಾಯೇಲಿನ ಅರಸನಾದ ಬಾಷನಿಗೂ, ಅವರ ಜೀವಾಂತ್ಯದವರೆಗೂ ಯುದ್ಧ ನಡೆಯುತ್ತಿತ್ತು.
17ಆಗ ಇಸ್ರಾಯೇಲಿನ ಅರಸನಾದ ಬಾಷನು ಯೆಹೂದಕ್ಕೆ ವಿರೋಧವಾಗಿ ಬಂದು ಯೆಹೂದದ ಅರಸನಾದ ಆಸನ ಬಳಿಗೆ ಒಳಗಾಗಲೀ, ಹೊರಗಾಗಲೀ ಯಾರೂ ಹೋಗದ ಹಾಗೆ ಸುತ್ತಲೂ ರಾಮ ಎಂಬ ಕೋಟೆಯನ್ನು ಕಟ್ಟಿಸಿದನು.
18ಆಸನು ಯೆಹೋವ ದೇವರ ಆಲಯದ ಮತ್ತು ತನ್ನ ಅರಮನೆಯ ಬೊಕ್ಕಸಗಳಿಂದ ಮಿಕ್ಕ ಸಮಸ್ತ ಬೆಳ್ಳಿಬಂಗಾರವನ್ನು ತೆಗೆದು, ತನ್ನ ಸೇವಕರ ಕೈಯಲ್ಲಿ ಒಪ್ಪಿಸಿ, ದಮಸ್ಕದಲ್ಲಿ ವಾಸವಾಗಿರುವ ಹೆಜ್ಯೋನನ ಮಗನೂ, ಟಬ್ರಿಮ್ಮೋನನ ಮಗನೂ ಆದ ಅರಾಮಿನ ಅರಸನಾದ ಬೆನ್ಹದದನಿಗೆ ಅವುಗಳನ್ನು ಕಳುಹಿಸಿದನು.
19ಅಲ್ಲದೆ ಅವನಿಗೆ, “ನನ್ನ ತಂದೆ ಮತ್ತು ನಿನ್ನ ತಂದೆಯ ನಡುವೆ ಇದ್ದಂತೆ ನನ್ನ ಮತ್ತು ನಿನ್ನ ನಡುವೆ ಒಡಂಬಡಿಕೆ ಉಂಟು. ಇಗೋ ನಾನು ಬೆಳ್ಳಿಬಂಗಾರವನ್ನು ದಾನವಾಗಿ ನಿನಗೆ ಕಳುಹಿಸಿದ್ದೇನೆ. ಇಸ್ರಾಯೇಲಿನ ಅರಸನಾದ ಬಾಷನು ನನ್ನನ್ನು ಬಿಟ್ಟುಹೋಗುವಂತೆ, ನೀನು ಅವನ ಸಂಗಡ ಮಾಡಿದ ಒಡಂಬಡಿಕೆಯನ್ನು ಮುರಿಯಬೇಕು,” ಎಂದನು.
20ಹಾಗೆಯೇ ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ, ಇಸ್ರಾಯೇಲಿನ ಪಟ್ಟಣಗಳಿಗೆ ವಿರೋಧವಾಗಿ ತನ್ನ ಸೈನ್ಯಾಧಿಪತಿಗಳನ್ನು ಕಳುಹಿಸಿದನು. ಇಯ್ಯೋನ್, ದಾನ್, ಆಬೇಲ್ ಬೇತ್ ಮಾಕಾ ಹಾಗೂ ಸಮಸ್ತ ಕಿನ್ನೆರೆತ್, ಸಮಸ್ತ ನಫ್ತಾಲಿ ಪ್ರಾಂತ ಇವುಗಳನ್ನು ಹಾಳುಮಾಡಿದರು.
21ಬಾಷನು ಇದನ್ನು ಕೇಳಿದಾಗ ರಾಮಕೋಟೆ ಕಟ್ಟಿಸುವುದನ್ನು ಬಿಟ್ಟು, ತಿರ್ಚಕ್ಕೆ ಹೋಗಿ ವಾಸಿಸಿದನು.
22ಆಗ ಅರಸನಾದ ಆಸನು ಯೆಹೂದರಲ್ಲಿ ಒಬ್ಬನನ್ನೂ ಬಿಡದೆ ಎಲ್ಲರನ್ನೂ ಕರೆಯಿಸಿ, ಬಾಷನು ಕಟ್ಟಿಸುತ್ತಾ ಇದ್ದ ರಾಮ ಪಟ್ಟಣದ ಕಲ್ಲುಗಳನ್ನೂ, ಅದರ ತೊಲೆಗಳನ್ನೂ ತೆಗೆದುಕೊಂಡುಹೋಗಿ ಅವುಗಳಿಂದ ಬೆನ್ಯಾಮೀನನ ಗಿಬೆಯ ಮತ್ತು ಮಿಚ್ಪೆ ಎಂಬ ನಗರಗಳನ್ನು ಕಟ್ಟಿಸಿದನು.
23ಆಸನ ಉಳಿದ ಎಲ್ಲಾ ಕಾರ್ಯಗಳೂ, ಅವನ ಸಮಸ್ತ ಪರಾಕ್ರಮವೂ, ಅವನು ಮಾಡಿದ್ದೆಲ್ಲವೂ, ಅವನು ಕಟ್ಟಿಸಿದ ಪಟ್ಟಣಗಳೂ, ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. ಆದರೆ ತನ್ನ ವೃದ್ಧಾಪ್ಯದಲ್ಲಿ ಅವನ ಕಾಲುಗಳಿಗೆ ರೋಗ ತಗುಲಿತು.
24ಆಸನು ಮೃತನಾಗಿ ತನ್ನ ಪಿತೃಗಳ ಬಳಿ ಸೇರಿದನು. ತನ್ನ ತಂದೆ ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸಮಾಧಿ ಬಳಿ ಅವನನ್ನು ಹೂಳಿಟ್ಟರು. ಅವನಿಗೆ ಬದಲಾಗಿ ಅವನ ಮಗ ಯೆಹೋಷಾಫಾಟನು ಅರಸನಾದನು. ಇಸ್ರಾಯೇಲರ ಅರಸನಾದ ನಾದಾಬನು
25ಯೆಹೂದದ ಅರಸನಾದ ಆಸನ ಎರಡನೆಯ ವರ್ಷದಲ್ಲಿ ಯಾರೊಬ್ಬಾಮನ ಮಗ ನಾದಾಬನು ಅರಸನಾಗಿ ಎರಡು ವರುಷ ಇಸ್ರಾಯೇಲಿನ ಮೇಲೆ ಆಳಿದನು.
26ಆದರೆ ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಪಾಪಮಾಡಲು ಇಸ್ರಾಯೇಲನ್ನು ಪ್ರೇರೇಪಿಸಿದ ಅವನ ತಂದೆಯ ಪಾಪದಲ್ಲಿಯೂ, ಅವನ ಮಾರ್ಗದಲ್ಲಿಯೂ ನಡೆದನು.
27ನಾದಾಬನೂ, ಸಮಸ್ತ ಇಸ್ರಾಯೇಲರೂ ಫಿಲಿಷ್ಟಿಯರ ಪಟ್ಟಣವಾದ ಗಿಬ್ಬೆತೋನಿಗೆ ಮುತ್ತಿಗೆ ಹಾಕುತ್ತಾ ಇದ್ದರು. ಆದುದರಿಂದ ಇಸ್ಸಾಕಾರನ ಗೋತ್ರದ ಅಹೀಯನ ಮಗ ಬಾಷನು ನಾದಾಬನಿಗೆ ವಿರೋಧವಾಗಿ ಒಳಸಂಚುಮಾಡಿ, ನಾದಾಬನನ್ನು ಕೊಂದುಬಿಟ್ಟನು.
28ಯೆಹೂದದ ಅರಸನಾದ ಆಸನ ಮೂರನೆಯ ವರುಷದಲ್ಲಿ ಬಾಷನು ನಾದಾಬನನ್ನು ಕೊಂದುಹಾಕಿ, ಅವನಿಗೆ ಬದಲಾಗಿ ಅರಸನಾದನು.
29ಅವನು ಆಳುತ್ತಿರುವಾಗ, ಯಾರೊಬ್ಬಾಮನ ಮನೆಯವರನ್ನೆಲ್ಲಾ ಸಂಹರಿಸಿಬಿಟ್ಟನು. ಯಾರೊಬ್ಬಾಮನು ಪಾಪಮಾಡಿ, ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನಿಮಿತ್ತವಾಗಿಯೂ, ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಕೋಪವನ್ನು ಎಬ್ಬಿಸಿದ ನಿಮಿತ್ತವಾಗಿಯೂ, ಯೆಹೋವ ದೇವರು ಶೀಲೋವಿನವನಾಗಿರುವ ತನ್ನ ಸೇವಕನಾದ ಅಹೀಯನ ಮುಖಾಂತರ ಹೇಳಿದ ಮಾತಿನ ಪ್ರಕಾರವೇ ನೆರವೇರಿತು.
30ಯಾರೊಬ್ಬಾಮನು ತಾನು ಪಾಪಮಾಡಿದ್ದಲ್ಲದೆ ಇಸ್ರಾಯೇಲರನ್ನೂ ಪಾಪಕ್ಕೆ ಪ್ರೇರೇಪಿಸಿ, ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಕೋಪವನ್ನು ಪ್ರಚೋದಿಸಿದ ಕಾರಣ ಇದು ಸಂಭವಿಸಿತು.
31ನಾದಾಬನ ಮಿಕ್ಕಾದ ಕ್ರಿಯೆಗಳೂ, ಅವನು ಮಾಡಿದ ಸಮಸ್ತವೂ, ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
32ಇದಲ್ಲದೆ ಆಸನಿಗೂ, ಇಸ್ರಾಯೇಲಿನ ಅರಸನಾದ ಬಾಷನಿಗೂ ಅವರ ಜೀವಾಂತ್ಯದವರೆಗೂ ಯುದ್ಧ ನಡೆಯುತ್ತಿತ್ತು. ಇಸ್ರಾಯೇಲರ ಅರಸನಾದ ಬಾಷನು
33ಯೆಹೂದದ ಅರಸನಾದ ಆಸನ ಮೂರನೆಯ ವರ್ಷದಲ್ಲಿ ಅಹೀಯನ ಮಗ ಬಾಷನು ಸಮಸ್ತ ಇಸ್ರಾಯೇಲಿನ ಮೇಲೆ ತಿರ್ಚದಲ್ಲಿ ಇಪ್ಪತ್ತನಾಲ್ಕು ವರ್ಷ ಆಳಿದನು.
34ಆದರೆ ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಯಾರೊಬ್ಬಾಮನ ಮಾರ್ಗದಲ್ಲಿಯೂ, ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ಅವನ ಪಾಪದಲ್ಲಿಯೂ ಭಾಗಿಯಾದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.