Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೊರಿಂಥದವರಿಗೆ 7

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನೀವು ಬರೆದ ಸಂಗತಿಗಳನ್ನು ಕುರಿತಾಗಿ ಹೇಳುವುದೇನೆಂದರೆ, “ಸ್ತ್ರೀಸಂಪರ್ಕವಿಲ್ಲದೆ ಇರುವುದು ಮನುಷ್ಯನಿಗೆ ಒಳ್ಳೆಯದು.”
2ಆದರೆ ಲೈಂಗಿಕ ಅನೈತಿಕತೆ ಹೆಚ್ಚಾಗಿರುವುದರಿಂದ, ಪ್ರತಿಯೊಬ್ಬನಿಗೆ ಸ್ವಂತ ಹೆಂಡತಿ ಇರಲಿ, ಪ್ರತಿಯೊಬ್ಬಳಿಗೆ ಸ್ವಂತ ಗಂಡನಿರಲಿ.
3ಗಂಡನು ಹೆಂಡತಿಗೆ, ಹೆಂಡತಿಯು ಗಂಡನಿಗೆ ದಾಂಪತ್ಯ ಧರ್ಮ ಪೂರೈಸಲಿ.
4ಹೆಂಡತಿಯ ಸ್ವಂತ ದೇಹದ ಮೇಲೆ ಆಕೆಗೆ ಅಧಿಕಾರವಿಲ್ಲ, ಅದು ಗಂಡನಿಗಿದೆ. ಹಾಗೆಯೇ, ಗಂಡನ ಸ್ವಂತ ದೇಹದ ಮೇಲೆ ಅವನಿಗೆ ಅಧಿಕಾರವಿಲ್ಲ, ಅದು ಅವನ ಹೆಂಡತಿಗಿದೆ.
5ಗಂಡ ಹೆಂಡತಿ ಪರಸ್ಪರ ಸಮ್ಮತಿಯಿಂದ ಸ್ವಲ್ಪಕಾಲ ಪ್ರಾರ್ಥನೆಗಾಗಿ ಅಗಲಿರಬಹುದಷ್ಟೇ. ಇಲ್ಲದಿದ್ದರೆ, ಸೈತಾನನು ನಿಮ್ಮ ಸಂಯಮ ಇಲ್ಲದಿರುವುದನ್ನು ನೋಡಿ ನಿಮ್ಮನ್ನು ಶೋಧಿಸದಂತೆ ಒಂದುಗೂಡಬೇಕು.
6ಹೀಗೆ ನಾನು ಹೇಳುವುದು ಸಲಹೆಯೇ ಹೊರತು ಆಜ್ಞೆಯಲ್ಲ.
7ನಾನಿರುವಂತೆಯೇ ಎಲ್ಲಾ ಮನುಷ್ಯರು ಇರಬೇಕೆಂಬುದು ನನ್ನ ಇಷ್ಟ. ಆದರೆ ಒಬ್ಬರು ಒಂದು ವಿಧವಾಗಿಯೂ ಮತ್ತೊಬ್ಬರು ಇನ್ನೊಂದು ವಿಧವಾಗಿಯೂ ಸ್ವಂತ ವರವನ್ನು ದೇವರಿಂದ ಪಡೆದುಕೊಂಡಿರುತ್ತಾರೆ.
8ಮದುವೆಯಾಗದವರಿಗೂ ವಿಧವೆಯರಿಗೂ ನಾನು ಹೇಳುವುದೇನೆಂದರೆ: ನಾನಿರುವಂತೆಯೇ ಮದುವೆಯಾಗದೇ ಇರುವುದು ಅವರಿಗೆ ಒಳ್ಳೆಯದು.
9ಅವರಿಗೆ ಸ್ವಯಂನಿಯಂತ್ರಣ ಇಲ್ಲದಿದ್ದರೆ, ಮದುವೆಮಾಡಿಕೊಳ್ಳಲಿ, ಕಾಮದಾಶೆ ಪಡುವುದಕ್ಕಿಂತ ಮದುವೆ ಮಾಡಿಕೊಳ್ಳುವುದು ಉತ್ತಮ.
10ಮದುವೆ ಮಾಡಿಕೊಂಡಿರುವವರಿಗೆ ನನ್ನ ಅಪ್ಪಣೆ ಅಲ್ಲ, ನಿಜವಾಗಿ ಕರ್ತದೇವರ ಅಪ್ಪಣೆಯಾಗಿದೆ: ಏನೆಂದರೆ, ಹೆಂಡತಿಯು ಗಂಡನನ್ನು ಬಿಟ್ಟು ಅಗಲಬಾರದು.
11ಒಂದು ವೇಳೆ ಅಗಲಿದರೆ ಆಕೆಯು ಮದುವೆಯಿಲ್ಲದೆ ಇರಬೇಕು. ಇಲ್ಲವೆ ಗಂಡನ ಸಂಗಡ ಸಂಧಾನವಾಗಬೇಕು ಮತ್ತು ಗಂಡನು ಹೆಂಡತಿಯನ್ನು ಬಿಟ್ಟುಬಿಡಬಾರದು.
12ಉಳಿದವರಿಗೆ ಕರ್ತ ದೇವರಿಂದ ಮಾತು ಇಲ್ಲವಾದರೂ ನಾನು ಹೇಳುವುದೇನೆಂದರೆ: ಒಬ್ಬ ಸಹೋದರನಿಗೆ ಕ್ರೈಸ್ತ ವಿಶ್ವಾಸಿಯಲ್ಲದ ಹೆಂಡತಿಯಿರಲಾಗಿ, ಆಕೆ ಅವನೊಂದಿಗೆ ಬಾಳುವುದಕ್ಕೆ ಸಮ್ಮತಿಸಿದರೆ, ಅವನು ಆಕೆಯನ್ನು ಬಿಡದಿರಲಿ.
13ಒಬ್ಬ ಸ್ತ್ರೀಗೆ ಅವಿಶ್ವಾಸಿಯಾದ ಗಂಡನಿರಲಾಗಿ ಅವನು ಆಕೆಯೊಂದಿಗೆ ಬಾಳುವುದಕ್ಕೆ ಸಮ್ಮತಿಸಿದರೆ, ಆಕೆಯು ಅವನನ್ನು ಬಿಡದಿರಲಿ.
14ಏಕೆಂದರೆ, ಅವಿಶ್ವಾಸಿಯಾದ ಗಂಡನು ವಿಶ್ವಾಸಿಯಾದ ತನ್ನ ಹೆಂಡತಿಯಿಂದ ಮತ್ತು ಅವಿಶ್ವಾಸಿಯಾದ ಹೆಂಡತಿಯು ವಿಶ್ವಾಸಿಯಾದ ತನ್ನ ಗಂಡನಿಂದ ದೇವಜನರೊಂದಿಗೆ ಸಂಬಂಧವುಳ್ಳವರಾಗಿದ್ದಾರೆ. ಹಾಗಲ್ಲದಿದ್ದರೆ, ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ದೇವರಿಗಾಗಿ ಪವಿತ್ರರಾಗಿದ್ದಾರೆ.
15ಆದರೆ ಅವಿಶ್ವಾಸಿಯಾದವರು ಅಗಲಬೇಕೆಂದಿದ್ದರೆ ಅಗಲಿ ಹೋಗಲಿ. ಇಂಥಾ ವಿಷಯಗಳಲ್ಲಿ ವಿಶ್ವಾಸಿಯಾದ ಸಹೋದರನಾಗಲೀ, ಸಹೋದರಿಯಾಗಲೀ ಬದ್ಧರಲ್ಲ. ಸಮಾಧಾನದಲ್ಲಿ ಬಾಳುವುದಕ್ಕೆ ದೇವರು ನಮ್ಮನ್ನು ಕರೆದಿದ್ದಾರೆ.
16ಸ್ತ್ರೀಯೇ, ನಿನ್ನ ಗಂಡನನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು? ಪುರುಷನೇ, ನಿನ್ನ ಹೆಂಡತಿಯನ್ನು ರಕ್ಷಿಸುವೆಯೋ ಏನೋ ನಿನಗೇನು ಗೊತ್ತು? ನಿಮ್ಮ ಕರೆಯುವಿಕೆಯ ಸನ್ನಿವೇಶಗಳು
17ಆದರೂ ಕರ್ತದೇವರು ಪ್ರತಿಯೊಬ್ಬನಿಗೆ ನೇಮಿಸಿದಂತೆಯೂ ದೇವರು ಪ್ರತಿಯೊಬ್ಬನನ್ನು ಕರೆದಂತೆಯೂ ನಡೆದುಕೊಳ್ಳಲಿ. ಎಲ್ಲಾ ಸಭೆಗಳಲ್ಲಿಯೂ ಇರಬೇಕೆಂದು ನಾನು ಕೊಡುವ ನಿಯಮವು ಇದೇ.
18ಸುನ್ನತಿ ಮಾಡಿಸಿಕೊಂಡವನು ದೇವರ ಕರೆಹೊಂದಿದ್ದರೆ, ಅವನು ಸುನ್ನತಿಯಿಲ್ಲದವನಂತೆ ಇರಬಾರದು. ಸುನ್ನತಿ ಮಾಡಿಸಿಕೊಳ್ಳದವನು ದೇವರ ಕರೆಹೊಂದಿದ್ದರೆ, ಅವನು ಸುನ್ನತಿ ಮಾಡಿಸಿಕೊಳ್ಳಬೇಕಾಗಿಲ್ಲ.
19ಸುನ್ನತಿಯಿದ್ದರೂ ಪ್ರಯೋಜನವಿಲ್ಲ, ಸುನ್ನತಿಯಿಲ್ಲದಿದ್ದರೂ ಪ್ರಯೋಜನವಿಲ್ಲ. ದೇವರ ಆಜ್ಞೆಗಳನ್ನು ಕೈಗೊಳ್ಳುವುದೇ ಪ್ರಯೋಜನಕರ.
20ಪ್ರತಿಯೊಬ್ಬನು ದೇವರು ಕರೆದಾಗ, ಯಾವ ಸ್ಥಿತಿಯಲ್ಲಿದ್ದನೋ ಆ ಸ್ಥಿತಿಯಲ್ಲಿಯೇ ಇರಲಿ.
21ದೇವರು ಕರೆದಾಗ ನೀನು ಮತ್ತೊಬ್ಬನ ದಾಸನಾಗಿದ್ದೀಯೋ? ಅದಕ್ಕೆ ಚಿಂತೆ ಮಾಡಬೇಡ. ಆದರೆ ಬಿಡುಗಡೆಯಾಗುವುದಕ್ಕೆ ನೀನು ಶಕ್ತನಾದರೆ ಅದನ್ನೇ ಮಾಡು.
22ದೇವರು ಕರೆದಾಗ ಒಬ್ಬನು ದಾಸನಾಗಿದ್ದರೂ, ಅವನು ಕರ್ತ ದೇವರಲ್ಲಿ ಸ್ವತಂತ್ರನು. ಅದೇ ಪ್ರಕಾರ, ಒಬ್ಬನು ಸ್ವತಂತ್ರನಾಗಿದ್ದಾಗ ಕರ್ತದೇವರ ಕರೆಹೊಂದಿದ್ದರೆ, ಅವನು ಕ್ರಿಸ್ತನಿಗೆ ದಾಸನು.
23ನಿಮ್ಮನ್ನು ಕ್ರಯಕ್ಕೆ ಕೊಳ್ಳಲಾಗಿದೆ. ಆದ್ದರಿಂದ ಮನುಷ್ಯರಿಗೆ ಗುಲಾಮರಾಗಬೇಡಿರಿ.
24ಪ್ರಿಯರೇ, ದೇವರು ಕರೆದಾಗ ಒಬ್ಬನು ಯಾವ ಸ್ಥಿತಿಯಲ್ಲಿ ಇದ್ದನೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ನೆಲೆಸಿರಲಿ. ಮದುವೆಯಾಗದವರನ್ನು ಕುರಿತು
25ಕನ್ಯೆಯರನ್ನು ಕುರಿತು ಕರ್ತ ಯೇಸುವಿನಿಂದ ನನಗೆ ಯಾವ ಆಜ್ಞೆಯೂ ಇಲ್ಲ. ಆದರೂ ಕರ್ತ ಯೇಸುವಿನಿಂದ ಕರುಣೆಯನ್ನು ಪಡೆದು ನಂಬಿಗಸ್ತನಾಗಿರುವ ನಾನು ನನ್ನ ಅಭಿಪ್ರಾಯವನ್ನು ಕೊಡುತ್ತೇನೆ.
26ಇಂದಿನ ಕಷ್ಟಕಾಲದ ಪರಿಸ್ಥಿತಿಯಲ್ಲಿ ನೀವು ಇದ್ದ ಹಾಗೇ ಇರುವುದು ನಿಮಗೆ ಒಳ್ಳೆಯದೆಂದು ನಾನು ಭಾವಿಸುತ್ತೇನೆ.
27ನಿನಗೆ ಹೆಂಡತಿಯಿದ್ದರೆ? ವಿಚ್ಛೇದನಕ್ಕೆ ಯತ್ನಿಸಬೇಡ. ನೀನು ಹೆಂಡತಿಯಿಂದ ಬಿಡುಗಡೆಯಾಗಿದ್ದರೆ? ಹೆಂಡತಿಗಾಗಿ ಹುಡುಕಬೇಡ.
28ಒಂದು ವೇಳೆ ನೀನು ಮದುವೆ ಮಾಡಿಕೊಂಡರೆ, ಅದು ಪಾಪವಲ್ಲ. ಕನ್ಯೆಯು ಮದುವೆ ಮಾಡಿಕೊಂಡರೆ, ಅದು ಸಹ ಪಾಪವಲ್ಲ. ಆದರೆ ಮದುವೆ ಮಾಡಿಕೊಳ್ಳುವವರು ಈ ಜೀವನದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುವರು. ನಾನು ನಿಮ್ಮನ್ನು ಇದರಿಂದ ತಪ್ಪಿಸಬೇಕೆಂದು ಅಪೇಕ್ಷಿಸುತ್ತೇನೆ.
29ಪ್ರಿಯರೇ, ಸಮಯವು ಕೊಂಚವಾಗಿರುವುದರಿಂದ ಇನ್ನು ಮೇಲೆ, ಮದುವೆಯಾದವರು ಮದುವೆಯಾಗದವರಂತೆಯೂ
30ದುಃಖಪಡುವವರು ದುಃಖಪಡದವರಂತೆಯೂ ಆನಂದ ಪಡುವವರು ಆನಂದಪಡದವರಂತೆಯೂ ವಸ್ತುಗಳ್ನು ಕೊಂಡುಕೊಳ್ಳುವವರು ತಾವು ಕೊಂಡುಕೊಂಡದ್ದು ತಮ್ಮದಲ್ಲ ಎಂಬಂತೆಯೂ
31ಲೋಕದ ವಸ್ತುಗಳನ್ನು ಉಪಯೋಗಿಸುವವರು ಅದರಲ್ಲಿಯೇ ಮಗ್ನರಾಗದಿರಲಿ. ಏಕೆಂದರೆ ಈಗಿರುವ ಪ್ರಪಂಚ ಗತಿಸಿಹೋಗುತ್ತಿದೆ.
32ನೀವು ಚಿಂತೆ ಇಲ್ಲದೆ ಇರಬೇಕೆಂಬುದು ನನ್ನ ಇಷ್ಟ. ಮದುವೆ ಆಗದವನು ಕರ್ತ ಯೇಸುವನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತ ಯೇಸುವಿನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ.
33ಮದುವೆಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಮಗ್ನನಾಗಿರುತ್ತಾನೆ.
34ಇದರಿಂದ ಅವನ ಆಸಕ್ತಿಗಳಲ್ಲಿ ಭಿನ್ನತೆಯಿರುತ್ತದೆ. ಮದುವೆಯಾಗದ ಮಹಿಳೆ ಅಥವಾ ಕನ್ಯೆ ದೇಹಾತ್ಮಗಳಲ್ಲಿ ಕರ್ತ ಯೇಸುವಿಗೆ ಸಮರ್ಪಿತರಾಗಿರುವ ಉದ್ದೇಶ ಹೊಂದಿದವರಾಗಿ, ಕರ್ತ ಯೇಸುವಿನ ಕಾರ್ಯಗಳಲ್ಲಿ ಆಸಕ್ತಳಾಗಿರುತ್ತಾರೆ. ಆದರೆ ಮದುವೆಯಾದವಳು, ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ.
35ನಾನು ನಿಮಗೆ ಬಂಧನ ಹಾಕಬೇಕೆಂದು ಇದನ್ನು ಹೇಳದೆ, ಗಮನ ಸೆಳೆಯದ ಭಕ್ತಿಯಿಂದ ಕರ್ತ ಯೇಸುವಿನ ಸೇವೆಯನ್ನು ಮಾಡುವವರಾಗಿ ನೀವು ಜೀವಿಸಬೇಕೆಂದು ನಿಮ್ಮ ಒಳ್ಳೆಯದಕ್ಕಾಗಿಯೇ ಹೇಳುತ್ತಿದ್ದೇನೆ.
36ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವುದು ಮರ್ಯಾದೆಯಿಲ್ಲವೆಂದು ಭಾವಿಸಿದರೆ, ಆಕೆಗೆ ಪ್ರಾಯ ಕಳೆದು ಹೋಗುತ್ತಿದ್ದರೆ, ಮದುವೆಯಾಗುವುದು ಅವಶ್ಯವೆಂದು ಅವನಿಗೆ ಕಂಡರೆ, ತನ್ನಿಷ್ಟದಂತೆ ಮಾಡಲಿ. ಇದರಿಂದ ಅವನು ಪಾಪಮಾಡುವುದಿಲ್ಲ, ಮದುವೆ ಮಾಡಿಕೊಡಲಿ.
37ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ, ತನ್ನಿಷ್ಟವನ್ನು ನಡೆಸುವುದಕ್ಕೆ ಹಕ್ಕುಳ್ಳವನಾಗಿ ತನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ತನ್ನೊಳಗೆ ನಿರ್ಣಯಿಸಿಕೊಂಡರೆ, ಅವನು ಹಾಗೆ ಮಾಡುವುದು ಒಳ್ಳೆಯದು.
38ಹಾಗಾದರೆ, ತನ್ನ ಮಗಳನ್ನು ಮದುವೆ ಮಾಡಿಕೊಡುವವನು ಒಳ್ಳೆಯದನ್ನು ಮಾಡುತ್ತಾನೆ. ಮದುವೆ ಮಾಡಿಕೊಡದೆ ಇರುವವನು ಉತ್ತಮವಾದುದನ್ನು ಮಾಡುತ್ತಾನೆ.
39ಹೆಂಡತಿಯು ತನ್ನ ಗಂಡನು ಜೀವದಿಂದಿರುವ ತನಕ ಅವನಿಗೆ ಬದ್ಧಳಾಗಿದ್ದಾಳೆ. ಗಂಡನು ಸತ್ತಿದ್ದರೆ, ಆಕೆಯು ತನಗೆ ಬೇಕಾದವನನ್ನು ಮದುವೆ ಮಾಡಿಕೊಳ್ಳುವುದಕ್ಕೆ ಸ್ವತಂತ್ರಳಾಗಿದ್ದಾಳೆ. ಆದರೆ ಆ ವ್ಯಕ್ತಿಯು ಕರ್ತ ದೇವರಲ್ಲಿ ವಿಶ್ವಾಸಿಯಾಗಿರಬೇಕು.
40ಆಕೆ ಮದುವೆ ಮಾಡಿಕೊಳ್ಳದೆ ಇರುವುದು ಬಹಳ ಸಂತೋಷಕರವಾದದ್ದೆಂದು ನನ್ನ ಅಭಿಪ್ರಾಯ. ನನಗೂ ದೇವರಾತ್ಮ ಇರುವುದಾಗಿ ಭಾವಿಸುತ್ತೇನೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.