Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೊರಿಂಥದವರಿಗೆ 6

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನಿಮ್ಮಲ್ಲಿ ಯಾವನಿಗಾದರೂ ಮತ್ತೊಬ್ಬನ ಮೇಲೆ ವ್ಯಾಜ್ಯವಿದ್ದರೆ, ನ್ಯಾಯವಿಚಾರಣೆಗಾಗಿ ಕರ್ತದೇವರ ಜನರ ಮುಂದೆ ಹೋಗದೆ, ಭಕ್ತಿಹೀನರ ಮುಂದೆ ಹೋಗುವುದಕ್ಕೆ ಧೈರ್ಯವಿದೆಯೋ?
2ಕರ್ತದೇವರ ಜನರು ಲೋಕಕ್ಕೆ ತೀರ್ಪುಮಾಡುವರೆಂಬುದು ನಿಮಗೆ ತಿಳಿಯದೋ? ನೀವೇ ಲೋಕವನ್ನು ನ್ಯಾಯತೀರ್ಪು ಮಾಡಬೇಕಾಗಿರುವಲ್ಲಿ, ಅತ್ಯಲ್ಪ ಸಂಗತಿಗಳನ್ನು ಕುರಿತು ತೀರ್ಪುಮಾಡುವುದಕ್ಕೆ ನೀವು ಅಯೋಗ್ಯರಾಗಿದ್ದೀರೋ?
3ನಾವು ದೇವದೂತರಿಗೂ ತೀರ್ಪುಮಾಡುವೆವೆಂಬುದು ನಿಮಗೆ ತಿಳಿಯದೋ? ಈ ಜೀವನದ ವ್ಯಾಜ್ಯಗಳನ್ನು ಕುರಿತು ತೀರ್ಪು ಮಾಡುವುದು ಎಷ್ಟು ಸುಲಭವಲ್ಲವೇ?
4ಆದ್ದರಿಂದ ಇಂಥ ವ್ಯಾಜ್ಯಗಳ ಬಗ್ಗೆ ವ್ಯಾಜ್ಯಗಳಿದ್ದರೂ ಸಭೆಯಲ್ಲಿ ಮರ್ಯಾದೆ ಇಲ್ಲದವರನ್ನು ನ್ಯಾಯಾಧೀಶರಾಗಿ ನೇಮಿಸುವಿರೋ?
5ನಿಮ್ಮಲ್ಲಿ ನಾಚಿಕೆ ಹುಟ್ಟಿಸುವುದಕ್ಕೆ ಇದನ್ನು ಹೇಳುತ್ತೇನೆ. ತನ್ನ ಸಹೋದರನ ನ್ಯಾಯವನ್ನು ವಿವೇಚಿಸಿ ತೀರ್ಮಾನ ಕೊಡುವ ಜ್ಞಾನಿಯು ನಿಮ್ಮಲ್ಲಿ ಒಬ್ಬನಾದರೂ ಇಲ್ಲವೋ?
6ಇದಕ್ಕೆ ಬದಲಾಗಿ ಒಬ್ಬ ಸಹೋದರನು ಇನ್ನೊಬ್ಬ ಸಹೋದರನ ವಿರೋಧವಾಗಿ ನ್ಯಾಯಾಲಯಕ್ಕೆ ಹೋಗುತ್ತಾನೆ. ಅದೂ ಅವಿಶ್ವಾಸಿಗಳ ಮುಂದೆ ನ್ಯಾಯಕ್ಕಾಗಿ ಹೋಗುವುದು ಸರಿಯೇ?
7ನಿಮ್ಮ ನಿಮ್ಮಲ್ಲಿ ವ್ಯಾಜ್ಯವಿರುವುದೇ, ನೀವು ಈಗಾಗಲೇ ಸಂಪೂರ್ಣವಾಗಿ ಸೋತವರೆಂಬುದಕ್ಕೆ ಸೂಚನೆಗಳಾಗಿವೆ. ಆದರೆ ಅನ್ಯಾಯವನ್ನು ಏಕೆ ಸಹಿಸಬಾರದು? ಏಕೆ ಮೋಸಹೊಂದಬಾರದು?
8ಅದಕ್ಕೆ ಬದಲಾಗಿ ನೀವೇ ನಿಮ್ಮ ಸಹೋದರರಿಗೆ ಅನ್ಯಾಯ ಮಾಡಿ ಮೋಸಮಾಡುತ್ತೀರಲ್ಲಾ?
9ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯಸ್ಥರಾಗುವುದಿಲ್ಲವೆಂಬುದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ: ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಸಲಿಂಗಕಾಮಿಗಳು,
10ಕಳ್ಳರು, ಲೋಭಿಗಳು, ಕುಡುಕರು, ಬೈಯ್ಯುವವರು, ಸುಲಿಗೆ ಮಾಡುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.
11ನಿಮ್ಮಲ್ಲಿ ಕೆಲವರು ಅಂಥವರಾಗಿದ್ದೀರಿ. ಆದರೂ ಕರ್ತ ಆಗಿರುವ ಯೇಸುಕ್ರಿಸ್ತರ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಿಂದಲೂ ನೀವು ತೊಳೆದು, ಶುದ್ಧೀಕರಣ ಹೊಂದಿ, ನೀತಿವಂತರೆಂಬ ನಿರ್ಣಯವನ್ನು ಹೊಂದಿದ್ದೀರಿ. ಲೈಂಗಿಕ ಅನೈತಿಕತೆ
12“ನನಗೆ ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೂ ಹಕ್ಕಿದೆ” ಎಂದು ನೀವು ಹೇಳುತ್ತೀರಿ. ಆದರೆ ಎಲ್ಲವೂ ನನಗೆ ಪ್ರಯೋಜನಕರವಾಗಿರುವುದಿಲ್ಲ. ನನಗೆ ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಹಕ್ಕಿದೆ; ಆದರೆ ನಾನು ಯಾವುದಕ್ಕೂ ಗುಲಾಮನಾಗಿರುವುದಿಲ್ಲ.
13“ಆಹಾರವು ಹೊಟ್ಟೆಗಾಗಿಯೂ, ಹೊಟ್ಟೆಯು ಆಹಾರಕ್ಕಾಗಿಯೂ ಇದೆ,” ಎಂದು ನೀವು ಹೇಳುತ್ತೀರಿ. ಆದರೆ ದೇವರು ಇವೆರಡನ್ನೂ ನಾಶಮಾಡುವರು. ದೇಹವು ಲೈಂಗಿಕ ಅನೈತಿಕತೆಗಾಗಿರುವಂಥದ್ದಲ್ಲ, ಆದರೆ ಕರ್ತ ದೇವರಿಗೋಸ್ಕರವಾಗಿದೆ. ಕರ್ತದೇವರು ದೇಹಕ್ಕೋಸ್ಕರ ಇದ್ದಾರೆ.
14ದೇವರು ತಮ್ಮ ಶಕ್ತಿಯಿಂದ ನಮಗೆ ಕರ್ತ ಆಗಿರುವ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರು ಮತ್ತು ನಮ್ಮನ್ನೂ ಎಬ್ಬಿಸುವರು.
15ನಿಮ್ಮ ದೇಹಗಳು ಕ್ರಿಸ್ತ ಯೇಸುವಿನ ಅಂಗಗಳಾಗಿವೆ ಎಂಬುದು ನಿಮಗೆ ತಿಳಿಯದೋ? ಹೀಗಿರಲಾಗಿ ನಾವು ಕ್ರಿಸ್ತ ಯೇಸುವಿನ ಅಂಗಗಳಾಗಿರುವಂಥವುಗಳನ್ನೇ ತೆಗೆದುಕೊಂಡು ವೇಶ್ಯೆಯ ಅಂಗಗಳನ್ನಾಗಿ ಮಾಡಬಹುದೇ? ಎಂದಿಗೂ ಬೇಡ.
16ವೇಶ್ಯೆಯನ್ನು ಸೇರುವವನು ಅವಳೊಂದಿಗೆ ಒಂದೇ ದೇಹವಾಗುವನೆಂಬುದು ನಿಮಗೆ ತಿಳಿಯದೋ? “ಅವರಿಬ್ಬರೂ ಒಂದೇ ಶರೀರವಾಗಿರುವರು,” ಎಂದು ಹೇಳಲಾಗಿದೆಯಲ್ಲವೇ?
17ಆದರೆ ಕರ್ತ ದೇವರೊಂದಿಗೆ ಅನ್ಯೋನ್ಯತೆಯಲ್ಲಿರುವವನು ಅವರೊಂದಿಗೆ ಒಂದೇ ಆತ್ಮವಾಗಿದ್ದಾನೆ.
18ಲೈಂಗಿಕ ಅನೈತಿಕತೆಯಿಂದ ಓಡಿಹೋಗಿರಿ. ಮನುಷ್ಯನು ಮಾಡುವ ಇತರ ಎಲ್ಲಾ ಪಾಪಗಳು ಅವನ ದೇಹದ ಹೊರಗಿರುತ್ತವೆ, ಆದರೆ ಲೈಂಗಿಕ ಅನೈತಿಕತೆಯು, ತನ್ನ ದೇಹಕ್ಕೆ ವಿರುದ್ಧವಾಗಿ ಪಾಪಕ್ಕೆ ನಡೆಸುತ್ತದೆ.
19ದೇವರಿಂದ ನಿಮಗೆ ದೊರಕಿ, ನಿಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮರ ಆಲಯವು ನಿಮ್ಮ ದೇಹವಾಗಿದೆ ಎಂಬುದು ನಿಮಗೆ ತಿಳಿಯದೋ? ನೀವು ನಿಮ್ಮ ಸ್ವಂತ ಸೊತ್ತಲ್ಲ.
20ನೀವು ಕ್ರಯಕ್ಕೆ ಕೊಳ್ಳಲಾದವರು. ಆದ್ದರಿಂದ ನೀವು ನಿಮ್ಮ ದೇಹದಿಂದ ದೇವರನ್ನು ಮಹಿಮೆಪಡಿಸಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.