Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಚೆಫನ್ಯ 3

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಅಸಹ್ಯವಾದ, ಮೈಲಿಗೆಯಾದ, ಶ್ರಮೆಪಡಿಸುವ ಪಟ್ಟಣಕ್ಕೆ ಕಷ್ಟ!
2ಅವಳು ಯಾರಿಗೂ ವಿಧೇಯಳಾಗಲಿಲ್ಲ; ಶಿಕ್ಷೆಯನ್ನು ತೆಗೆದುಕೊಳ್ಳಲಿಲ್ಲ; ಯೆಹೋವ ದೇವರಲ್ಲಿ ಭರವಸೆ ಇಡಲಿಲ್ಲ; ತನ್ನ ದೇವರ ಸಮೀಪಕ್ಕೆ ಬರಲಿಲ್ಲ.
3ಅವಳ ಪ್ರಮುಖರು ಗರ್ಜಿಸುವ ಸಿಂಹಗಳು. ಅವಳ ನ್ಯಾಯಾಧಿಪತಿಗಳು ಸಂಜೆಯ ತೋಳಗಳು. ಕಡಿಯುವುದಕ್ಕೆ ಎಲುಬನ್ನು ಕೂಡ ಮರುದಿನದವರೆಗೆ ಉಳಿಸವು.
4ಅವಳ ಪ್ರವಾದಿಗಳು ಬಡಾಯಿ ಕೊಚ್ಚಿಕೊಳ್ಳುವವರೂ ವಿಶ್ವಾಸದ್ರೋಹಿಗಳೂ ಆಗಿದ್ದಾರೆ. ಅವಳ ಯಾಜಕರು ಪರಿಶುದ್ಧ ಸ್ಥಳವನ್ನು ಅಪವಿತ್ರಮಾಡುತ್ತಾರೆ, ದೈವನಿಯಮವನ್ನು ಭಂಗಪಡಿಸುತ್ತಾರೆ.
5ನೀತಿಯುಳ್ಳ ಯೆಹೋವ ದೇವರು ಅವಳ ಮಧ್ಯದಲ್ಲಿ ಇದ್ದಾರೆ. ಅವರು ಅನ್ಯಾಯ ಮಾಡುವುದಿಲ್ಲ; ಪ್ರತಿ ಬೆಳಿಗ್ಗೆ ತಮ್ಮ ನ್ಯಾಯತೀರ್ಪನ್ನು ಬೆಳಕಿಗೆ ತರುತ್ತಾರೆ; ಅವರು ತಪ್ಪುವವರಲ್ಲ. ಆದರೆ ಅನ್ಯಾಯವಂತನು ನಾಚಿಕೆಯನ್ನು ಅರಿಯನು.
6“ನಾನು ಜನಾಂಗಗಳನ್ನು ಕಡಿದು ಬಿಟ್ಟಿದ್ದೇನೆ. ಅವುಗಳ ಗೋಪುರಗಳು ಹಾಳಾಗಿವೆ. ಅವುಗಳ ಬೀದಿಗಳನ್ನು ಯಾರೂ ಹಾದುಹೋಗದ ಹಾಗೆ ಹಾಳುಮಾಡಿದ್ದೆನೆ. ಅವುಗಳ ಪಟ್ಟಣಗಳು ನಾಶವಾದವು. ಹೀಗೆ ಅಲ್ಲಿ ಯಾವನೂ ಇರುವುದಿಲ್ಲ; ಯಾವ ಮನುಷ್ಯನೂ ಅಲ್ಲಿ ವಾಸಿಸುವುದೂ ಇಲ್ಲ.
7‘ನಿಶ್ಚಯವಾಗಿ ನೀನು ನನಗೆ ಭಯಪಟ್ಟು ಶಿಕ್ಷಣವನ್ನು ಹೊಂದುವೆ,’ ಹೀಗೆ ನಾನು ಅವರಿಗೆ ಶಿಕ್ಷೆ ವಿಧಿಸಿದರೂ ಅವರ ನಿವಾಸವು ನಾಶವಾಗುವುದಿಲ್ಲ. ಆದರೆ ಅವರು ಬೇಗನೆ ಎದ್ದು ತಮ್ಮ ನಡತೆಯನ್ನೆಲ್ಲಾ ಕೆಡಿಸಿಕೊಂಡರು.
8ಆದ್ದರಿಂದ ಯೆಹೋವ ದೇವರು ಹೀಗೆನ್ನುತ್ತಾರೆ: ನಾನು ಬೇಟೆ ಹಿಡಿಯಲಿಕ್ಕೆ ಏಳುವ ದಿವಸದವರೆಗೂ ನನಗೆ ಕಾದುಕೊಳ್ಳಿರಿ.” ಏಕೆಂದರೆ ಜನಾಂಗಗಳನ್ನು ಕೂಡಿಸುವುದಕ್ಕೂ ರಾಜ್ಯಗಳನ್ನು ಒಟ್ಟು ಸೇರಿಸುವುದಕ್ಕೂ ಅವುಗಳ ಮೇಲೆ ನನ್ನ ರೌದ್ರವನ್ನೂ ನನ್ನ ಕೋಪದ ಎಲ್ಲಾ ಉರಿಯನ್ನೂ ಹೊಯ್ಯುವುದಕ್ಕೂ ತೀರ್ಮಾನಿಸಿಕೊಂಡಿದ್ದೇನೆ. ಏಕೆಂದರೆ ನನ್ನ ರೋಷದ ಬೆಂಕಿಯಿಂದ ಭೂಮಿಯೆಲ್ಲಾ ದಹಿಸಲಾಗುವುದು. ಇಸ್ರಾಯೇಲಿನ ಅವಶೇಷಗಳ ಪುನಃಸ್ಥಾಪನೆ
9“ಆಗ ನಾನು ಜನರ ತುಟಿಗಳನ್ನು ಶುದ್ಧೀಕರಿಸುವೆನು. ಅವರೆಲ್ಲರೂ ಯೆಹೋವ ದೇವರ ಹೆಸರಿನಿಂದ ಮೊರೆಯಿಡುವರು. ಏಕಮನಸ್ಸಿನಿಂದ ಆತನಿಗೆ ಸೇವೆಮಾಡುವರು.
10ಕೂಷಿನ ನದಿಗಳ ಆಚೆಯಿಂದ ನನ್ನ ಭಕ್ತರೂ ಚದರಿಹೋದ ನನ್ನ ಜನರೂ ನನಗೆ ಕಾಣಿಕೆಗಳನ್ನು ತರುವರು.
11ಆ ದಿವಸದಲ್ಲಿ ನೀನು ನನಗೆ ವಿರೋಧವಾಗಿ ಮಾಡಿದ ದುಷ್ಕೃತ್ಯಗಳಿಗಾಗಿ ನಾಚಿಕೆಗೆ ಗುರಿಯಾಗುವುದಿಲ್ಲ; ಏಕೆಂದರೆ ಆಗ ಗರ್ವದಿಂದ ಹೊಗಳಿಕೊಳ್ಳುವವರನ್ನು ನಿನ್ನ ಮಧ್ಯದೊಳಗಿಂದ ತೆಗೆದುಹಾಕುವೆನು. ನನ್ನ ಪರಿಶುದ್ಧ ಪರ್ವತದಲ್ಲಿ ಇನ್ನು ಮೇಲೆ ನೀನು ಗರ್ವಪಡದೇ ಬಾಳುವೆ.
12ಆದರೆ ನಿನ್ನ ಮಧ್ಯದಲ್ಲಿ ಸೌಮ್ಯರನ್ನೂ ದೀನರನ್ನೂ ಉಳಿಸುವೆನು. ಇವರು ಯೆಹೋವ ದೇವರ ಹೆಸರಿನಲ್ಲಿ ನಂಬಿಕೆ ಇಡುವರು.
13ಇಸ್ರಾಯೇಲಿನಲ್ಲಿ ಉಳಿದವರು ಅನ್ಯಾಯ ಮಾಡರು; ಸುಳ್ಳಾಡರು, ಅವರ ಬಾಯಲ್ಲಿ ಮೋಸವಿರದು. ಅವರು ಮಂದೆಯಂತೆ ಮೇದು ಮಲಗುವರು. ಅವರನ್ನು ಭಯಪಡಿಸುವವನು ಒಬ್ಬನೂ ಇರುವುದಿಲ್ಲ.”
14ಚೀಯೋನಿನ ಪುತ್ರಿಯೇ, ಹಾಡು. ಇಸ್ರಾಯೇಲೇ ಆರ್ಭಟಿಸು; ಯೆರೂಸಲೇಮಿನ ಪುತ್ರಿಯೇ, ಪೂರ್ಣಹೃದಯದಿಂದ ಸಂಭ್ರಮಿಸಿ ಉಲ್ಲಾಸಪಡು.
15ಯೆಹೋವ ದೇವರು ನಿನ್ನ ಶಿಕ್ಷೆಗಳನ್ನು ದೂರಮಾಡಿ ನಿನ್ನ ಶತ್ರುವನ್ನು ತೆಗೆದುಹಾಕಿದ್ದಾರೆ. ಇಸ್ರಾಯೇಲಿನ ಅರಸನಾದ ಯೆಹೋವ ದೇವರು ನಿನ್ನ ಮಧ್ಯದಲ್ಲಿ ಇದ್ದಾರೆ. ಇನ್ನು ಮೇಲೆ ನಿನಗೆ ಯಾವ ಕೇಡಿನ ಭಯವಿರುವುದಿಲ್ಲ.
16ಆ ದಿವಸದಲ್ಲಿ ಯೆರೂಸಲೇಮಿಗೆ ಹೀಗೆಂದು ಹೇಳುವರು, “ಚೀಯೋನೇ, ನೀನು ಭಯಪಡಬೇಡ; ನಿನ್ನ ಕೈಗಳು ಬಲಹೀನವಾಗದಿರಲಿ.
17ನಿನ್ನ ದೇವರಾದ ಯೆಹೋವ ದೇವರು ನಿನ್ನೊಂದಿಗಿದ್ದಾರೆ. ನಿನ್ನನ್ನು ರಕ್ಷಿಸಲು ಶಕ್ತರಾಗಿದ್ದಾರೆ. ನಿನ್ನಲ್ಲಿ ಬಹಳವಾಗಿ ಹರ್ಷಾನಂದಗೊಳ್ಳುವರು. ತಮ್ಮ ಪ್ರೀತಿಯ ನಿಮಿತ್ತ ಅವರು ಇನ್ನು ಮುಂದೆ ನಿನ್ನನ್ನು ಖಂಡಿಸುವುದಿಲ್ಲ, ಆದರೆ ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವರು.”
18“ನೇಮಕವಾದ ಹಬ್ಬಗಳ ನಷ್ಟಕ್ಕಾಗಿರುವ ನಿಮ್ಮ ದುಃಖವನ್ನು ನಿಮ್ಮಿಂದ ನಾನು ತೆಗೆದುಬಿಡುವೆನು. ಅವು ನಿನಗೆ ಭಾರವಾಗಿಯೂ ನಿಂದೆಯಾಗಿಯೂ ಇದ್ದವು.
19ಆ ಕಾಲದಲ್ಲಿ ನಿನ್ನನ್ನು ಪೀಡಿಸುವವರನ್ನೆಲ್ಲಾ ದಂಡಿಸುವೆನು, ಕುಂಟಾದದ್ದನ್ನು ರಕ್ಷಿಸಿ, ಚದರಿಹೋದವರನ್ನು ಕೂಡಿಸುವೆನು; ಅವರು ಅವಮಾನ ಹೊಂದಿದ ದೇಶಗಳಲ್ಲೆಲ್ಲಾ ಅವರಿಗೆ ಹೊಗಳಿಕೆಯನ್ನೂ ಕೀರ್ತಿಯನ್ನೂ ಉಂಟುಮಾಡುವೆನು.
20ಆ ಕಾಲದಲ್ಲಿ ನಾನು ನಿಮ್ಮನ್ನು ಒಟ್ಟುಗೂಡಿಸುವೆನು. ಆ ಸಮಯದಲ್ಲಿ ನಾನು ಮನೆಗೆ ನಿಮ್ಮನ್ನು ಕರೆದುಕೊಂಡು ಬರುವೆನು. ನಾನು ನಿಮ್ಮ ಸೌಭಾಗ್ಯವನ್ನು ನಿಮ್ಮ ಕಣ್ಣೆದುರಿಗೆ ಪುನಃಸ್ಥಾಪಿಸಿ ಭೂಮಿಯ ಎಲ್ಲಾ ಜನರಲ್ಲಿ ನಿಮಗೆ ಕೀರ್ತಿಯನ್ನೂ ಹೊಗಳಿಕೆಯನ್ನೂ ಉಂಟುಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.