Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪರಮಗೀತೆ 5

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನನ್ನ ಪ್ರಿಯಳೇ, ನನ್ನ ವಧುವೇ, ನಾನು ನನ್ನ ತೋಟಕ್ಕೆ ಬಂದಿರುವೆ. ನನ್ನ ರಕ್ತಬೋಳ ಸುಗಂಧಗಳನ್ನೂ ಕೂಡಿಸಿರುವೆ. ನನ್ನ ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿರುವೆ. ನನ್ನ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿದ್ದೇನೆ. ಸ್ನೇಹಿತರು ಸ್ನೇಹಿತರೇ, ಊಟಮಾಡಿರಿ, ಕುಡಿಯಿರಿ. ಹೌದು ಪ್ರಿಯರೇ, ಸಮೃದ್ಧಿಯಾಗಿ ಪಾನಮಾಡಿರಿ. ಪ್ರಿಯತಮೆ
2ನಾನು ನಿದ್ರಿಸುತ್ತಿದ್ದರೂ, ನನ್ನ ಹೃದಯವು ಎಚ್ಚರವಾಗಿತ್ತು. ಇಗೋ! ಬಾಗಿಲು ತಟ್ಟುವ ನನ್ನ ಪ್ರಿಯನ ಶಬ್ದವಿದು: “ನನ್ನ ಪ್ರಿಯಳೇ, ನನ್ನ ವಧುವೇ, ನನ್ನ ಪಾರಿವಾಳವೇ, ಪರಿಪೂರ್ಣಳೇ, ಬಾಗಿಲು ತೆಗೆ! ನನ್ನ ತಲೆ ಮಂಜಿನಿಂದ ನೆನೆದಿದೆ. ನನ್ನ ಕೂದಲು ರಾತ್ರಿಯ ಹನಿಗಳಿಂದ ತೋಯ್ದಿದೆ.”
3ನಾನು ನನ್ನ ಅಂಗಿಯನ್ನು ತೆಗೆದು ಹಾಕಿರಲು, ಅದನ್ನು ಮತ್ತೆ ಹಾಕಿಕೊಳ್ಳುವುದು ಹೇಗೆ? ನಾನು ನನ್ನ ಕಾಲುಗಳನ್ನು ತೊಳೆದುಕೊಂಡಿರಲು, ನಾನು ಮತ್ತೆ ಅವುಗಳನ್ನು ಕೊಳೆ ಮಾಡುವುದು ಹೇಗೆ?
4ಅನಂತರ ನನ್ನ ಪ್ರಿಯನು ಬಾಗಿಲ ಸಂದಿನಲ್ಲಿ ತನ್ನ ಕೈ ಹಾಕಿದನು. ನನ್ನ ಹೃದಯವು ಅವನಿಗಾಗಿ ಮಿಡಿಯಿತು.
5ನಾನು ನನ್ನ ಪ್ರಿಯನಿಗೆ ಬಾಗಿಲು ತೆರೆಯಲು ಎದ್ದಾಗ, ಬೀಗದ ಹಿಡಿಗಳ ಮೇಲೆ ನನ್ನ ಕೈಗಳಿಂದ ರಕ್ತಬೋಳವು ತೊಟ್ಟಿಕ್ಕಿತು. ನನ್ನ ಬೆರಳುಗಳಿಂದಲೂ ರಕ್ತಬೋಳವು ಸುರಿಯಿತು.
6ನಾನು ನನ್ನ ಪ್ರಿಯನಿಗೆ ಬಾಗಿಲು ತೆರೆದೆನು. ಆದರೆ ಅಷ್ಟರಲ್ಲಿ ನನ್ನ ಪ್ರಿಯನು ಹಿಂದಿರುಗಿ ಹೋಗಿಬಿಟ್ಟಿದ್ದನು. ಅವನು ಹೋಗಿದ್ದರಿಂದ ನನ್ನ ಹೃದಯ ಕುಗ್ಗಿಹೋಯಿತು. ಅವನನ್ನು ಹುಡುಕಿದೆನು, ಆದರೆ ಸಿಕ್ಕಲಿಲ್ಲ. ಅವನನ್ನು ಕರೆದೆನು, ಉತ್ತರವೇ ಇಲ್ಲ.
7ಪಟ್ಟಣದಲ್ಲಿ ಸಂಚರಿಸುವ ಕಾವಲುಗಾರರು ನನ್ನನ್ನು ಕಂಡುಹಿಡಿದರು. ನನ್ನನ್ನು ಹೊಡೆದು, ಗಾಯ ಮಾಡಿದರು. ಗೋಡೆಗಳನ್ನು ಕಾಯುವವರು ನನ್ನ ಮುಸುಕನ್ನು ಕಸಿದುಕೊಂಡರು.
8ಯೆರೂಸಲೇಮಿನ ಪುತ್ರಿಯರೇ, ನಿಮಗೆ ಆಣೆಯಿಟ್ಟು ಹೇಳುತ್ತೇನೆ. ನೀವು ನನ್ನ ಪ್ರಿಯನನ್ನು ಕಂಡರೆ, ನಾನು ಪ್ರೀತಿಯಿಂದ ಅಸ್ವಸ್ಥಳಾಗಿದ್ದೇನೆಂದು ಅವನಿಗೆ ತಿಳಿಸಿರಿ. ಸ್ನೇಹಿತರು
9ಸ್ತ್ರೀಯರಲ್ಲಿ ಅತಿ ಸುಂದರಿಯೇ, ಬೇರೆಯವರ ಪ್ರಿಯನಿಗಿಂತ ನಿನ್ನ ಪ್ರಿಯನ ಅತಿಶಯವೇನು? ನೀನು ನಮಗೆ ಹೀಗೆ ಆಣೆ ಇಡುವುದಕ್ಕೆ ಬೇರೆಯವರ ಪ್ರಿಯರಿಗಿಂತ ನಿನ್ನ ಪ್ರಿಯನ ವಿಶೇಷವೇನು? ಪ್ರಿಯತಮೆ
10ನನ್ನ ಪ್ರಿಯನು, ತೇಜೋಮಯನು, ಕೆಂಪೂ ಬಣ್ಣವುಳ್ಳವನು. ಹತ್ತು ಸಾವಿರ ಜನರಲ್ಲಿ ಶ್ರೇಷ್ಠನು.
11ಅವನ ತಲೆಯು ಚೊಕ್ಕ ಬಂಗಾರದಂತಿದೆ. ಅವನ ಗುಂಗುರು ಕೂದಲು ಕಾಗೆಯಂತೆ ಕಪ್ಪಾಗಿದೆ.
12ಅವನ ಕಣ್ಣುಗಳು ತುಂಬುತೊರೆಗಳ ಬಳಿ ತಂಗುವ, ಹಾಲಿನಿಂದ ತೊಳೆದಿರುವ, ಪಾರಿವಾಳಗಳ ಕಣ್ಣುಗಳಂತಿವೆ.
13ಅವನ ಕೆನ್ನೆಗಳು ಸುಗಂಧ ಸಸ್ಯಗಳು ಬೆಳೆಯುವ ದಿಬ್ಬಗಳಂತಿವೆ. ಅವನ ತುಟಿಗಳು ಸುಗಂಧ ರಕ್ತಬೋಳವನ್ನು ಸುರಿಸುವ ಕೆಂದಾವರೆಗಳು.
14ಅವನ ಕೈಗಳು ಗೋಮೇಧಿಕ ರತ್ನದ ಬಂಗಾರದ ಸಲಾಕೆಗಳಂತಿವೆ. ಅವನ ದೇಹ ಇಂದ್ರನೀಲಗಳಿಂದ ಹೊಳೆಯುವ ದಂತದ ಹಾಗೆ ಇದೆ.
15ಅವನ ಕಾಲುಗಳು ಶುದ್ಧ ಬಂಗಾರದ ಮೇಲೆ ನಿಂತಿರುವ ಚಂದ್ರಕಾಂತ ಸ್ತಂಭಗಳು. ಅವನ ತೋರಿಕೆಯು ಲೆಬನೋನಿನ ದೇವದಾರುಗಳ ಹಾಗೆ ಶ್ರೇಷ್ಠವಾಗಿವೆ.
16ಅವನ ಬಾಯಿ ಮಾತು ಬಹು ಮಧುರ. ಹೌದು, ಅವನು ಸರ್ವಾಂಗ ಸುಂದರ. ಯೆರೂಸಲೇಮಿನ ಪುತ್ರಿಯರೇ, ಇವನೇ ನನ್ನ ಪ್ರಿಯನು, ಇವನೇ ನನ್ನ ಸ್ನೇಹಿತನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.