Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ರೂತಳು 4

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಬೋವಜನು ಪಟ್ಟಣದ ಬಾಗಿಲ ಬಳಿ ಹೋಗಿ ಕುಳಿತುಕೊಂಡನು. ಆಗ ಬೋವಜನು ಹೇಳಿದ್ದ ಆ ವಿಮೋಚಕ ಬಂಧುವು ಹಾದುಹೋಗುತ್ತಿದ್ದನು. ಬೋವಜನು ಅವನಿಗೆ, “ನನ್ನ ಸ್ನೇಹಿತನೇ, ಈ ಕಡೆಗೆ ಬಂದು ಇಲ್ಲಿ ಕುಳಿತುಕೋ,” ಎಂದನು. ಅವನು ಬಂದು ಕುಳಿತುಕೊಂಡನು.
2ಆಗ ಬೋವಜನು ಪಟ್ಟಣದ ಹಿರಿಯರಲ್ಲಿ ಹತ್ತು ಮಂದಿಯನ್ನು ಕರೆದು ಅವರಿಗೆ, “ಇಲ್ಲಿ ಕುಳಿತುಕೊಳ್ಳಿರಿ,” ಎಂದನು. ಅವರು ಕುಳಿತರು.
3ಆಗ ಬೋವಜನು ಆ ವಿಮೋಚಕ ಬಂಧುವಿಗೆ ಹೇಳಿದ್ದೇನೆಂದರೆ, “ಮೋವಾಬ್ ಸೀಮೆಯಿಂದ ತಿರುಗಿ ಬಂದ ನೊವೊಮಿಯು ನಮ್ಮ ಸಹೋದರನಾದ ಎಲೀಮೆಲೆಕನಿಗೆ ಇದ್ದ ಹೊಲದ ಪಾಲನ್ನು ಮಾರಿಬಿಡಬೇಕೆಂದಿರುತ್ತಾಳೆ.
4ನಿವಾಸಿಗಳ ಮುಂದೆಯೂ ನನ್ನ ಜನರಾದ ಹಿರಿಯರ ಮುಂದೆಯೂ ಅದನ್ನು ಕೊಂಡು ಬಿಡಿಸಿಕೊಂಡರೆ ಬಿಡಿಸಿಕೋ. ಬಿಡಿಸಿಕೊಳ್ಳದಿದ್ದರೆ ನಾನು ತಿಳಿದುಕೊಳ್ಳುವ ಹಾಗೆ ನನಗೆ ಹೇಳು. ಏಕೆಂದರೆ ನೀನೂ ನಿನ್ನ ತರುವಾಯ ನಾನೂ ಅಲ್ಲದೆ ಬಿಡಿಸಿಕೊಳ್ಳುವವನು ಯಾರೂ ಇಲ್ಲ,” ಎಂದು ಹೇಳಿದನು. ಅದಕ್ಕೆ ಅವನು, “ನಾನು ಬಿಡಿಸಿಕೊಳ್ಳುವೆನು,” ಎಂದನು.
5ಆಗ ಬೋವಜನು, “ನೀನು ನೊವೊಮಿಯಿಂದ ಆ ಹೊಲವನ್ನು ಕೊಂಡುಕೊಳ್ಳುವ ದಿವಸದಲ್ಲಿ ಸತ್ತವನ ಬಾಧ್ಯತೆಯಲ್ಲಿ ಅವನ ಹೆಸರನ್ನು ಸ್ಥಿರಮಾಡುವ ಹಾಗೆ ಅವನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ತೆಗೆದುಕೊಳ್ಳಬೇಕು,” ಎಂದನು.
6ಅದಕ್ಕೆ ಆ ಬಂಧುವು, “ನಾನು ನನ್ನ ಬಾಧ್ಯತೆಯನ್ನು ನಷ್ಟಪಡಿಸಿಕೊಳ್ಳದ ಹಾಗೆ ಅದನ್ನು ಬಿಡಿಸಿಕೊಳ್ಳಲಾರೆನು. ನಾನು ಬಿಡಿಸಿಕೊಳ್ಳತಕ್ಕದ್ದನ್ನು ನೀನು ಬಿಡಿಸಿಕೋ; ಏಕೆಂದರೆ ನಾನು ಬಿಡಿಸಿಕೊಳ್ಳಲಾರೆನು,” ಎಂದನು.
7ಬಿಡಿಸಿಕೊಳ್ಳುವುದರಲ್ಲಿಯೂ ಬದಲು ಮಾಡುವುದರಲ್ಲಿಯೂ ಸಕಲ ಕಾರ್ಯಗಳೂ ದೃಢವಾಗುವ ಹಾಗೆ ಇಸ್ರಾಯೇಲಿನಲ್ಲಿ ಒಂದು ವಾಡಿಕೆಯಿತ್ತು. ಅದು ಕೊಡುವವನು ಕೊಳ್ಳುವವನಿಗೆ ತನ್ನ ಕೆರವನ್ನು ತೆಗೆದು ತನ್ನ ನೆರೆಯವನಿಗೆ ಕೊಡುತ್ತಿದ್ದನು. ಇದು ಇಸ್ರಾಯೇಲಿನಲ್ಲಿ ವ್ಯವಹಾರವನ್ನು ಕಾನೂನು ಬದ್ಧಗೊಳಿಸುವ ವಿಧಾನವಾಗಿತ್ತು.
8ಹಾಗೆಯೇ ಆ ಬಂಧುವು ಬೋವಜನಿಗೆ, “ನೀನೇ ನಿನಗೋಸ್ಕರ ಅದನ್ನು ಕೊಂಡುಕೋ,” ಎಂದು ತನ್ನ ಕೆರವನ್ನು ತೆಗೆದುಹಾಕಿದನು.
9ಆಗ ಬೋವಜನು ಹಿರಿಯರಿಗೂ ಸಮಸ್ತ ಜನರಿಗೂ, “ನಾನು ಎಲೀಮೆಲೆಕನಿಗೆ ಇದ್ದ ಎಲ್ಲವನ್ನೂ ಕಿಲ್ಯೋನನಿಗೂ ಮಹ್ಲೋನನಿಗೂ ಇದ್ದ ಎಲ್ಲವನ್ನೂ ನೊವೊಮಿಯ ಕೈಯಿಂದ ಕೊಂಡುಕೊಂಡೆನು ಎಂಬುದಕ್ಕೆ ಈ ದಿನ ನೀವು ಸಾಕ್ಷಿಗಳಾಗಿದ್ದೀರಿ.
10ಇದಲ್ಲದೆ ಸತ್ತವನ ಹೆಸರನ್ನು ಸ್ಥಿರಮಾಡಲು ನಾನು ಮಹ್ಲೋನನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ನನಗೆ ಹೆಂಡತಿಯಾಗಿ ಸ್ವೀಕರಿಸಿದ್ದೇನೆ. ಇದರಿಂದ ಹೊಲದ ಖಾತೆಯು ಗತಿಸಿದ ಮಹ್ಲೋನನ ಹೆಸರಿನಲ್ಲಿಯೇ ಉಳಿಯುವುದು. ಅವನ ಹೆಸರೂ ಅವನ ವಂಶವೂ ಊರಲ್ಲಿಯೇ ನೆಲೆಯಾಗಿರುವುದು. ಇದಕ್ಕೆ ಈ ದಿನ ನೀವು ಸಾಕ್ಷಿಗಳಾಗಿದ್ದೀರಿ,” ಎಂದನು.
11ಆಗ ಊರುಬಾಗಿಲಲ್ಲಿ ಕೂಡಿದ್ದ ಸಮಸ್ತ ಜನರೂ ಹಿರಿಯರೂ, “ನಾವು ಸಾಕ್ಷಿಗಳೇ, ನಿನ್ನ ಮನೆಯಲ್ಲಿ ಬಂದ ಸ್ತ್ರೀಯನ್ನು ಯೆಹೋವ ದೇವರು ಇಸ್ರಾಯೇಲ್ ಮನೆಯನ್ನು ಕಟ್ಟಿದ ಇಬ್ಬರಾದ ರಾಹೇಲಳ ಹಾಗೆಯೂ ಲೇಯಳ ಹಾಗೆಯೂ ಮಾಡಲಿ. ಎಫ್ರಾತದಲ್ಲಿ ಧನವಂತನಾಗಿರು, ಬೇತ್ಲೆಹೇಮಿನಲ್ಲಿ ಘನವಂತನಾಗಿರು.
12ಈ ಹುಡುಗಿಯಿಂದ ಯೆಹೋವ ದೇವರು ನಿನಗೆ ಕೊಡುವ ಸಂತಾನದಿಂದ ನಿನ್ನ ಮನೆಯು ತಾಮಾರಳು ಯೆಹೂದನಿಗೆ ಹೆತ್ತ ಪೆರೆಚನ ಮನೆಯ ಹಾಗೆಯೇ ಆಗಲಿ,” ಎಂದರು. ನೊವೊಮಿ ಒಬ್ಬ ಮಗನನ್ನು ಪಡೆದದ್ದು
13ಬೋವಜನು ರೂತಳನ್ನು ಮದುವೆಯಾದನು. ಅವಳು ಅವನಿಗೆ ಹೆಂಡತಿಯಾದಳು. ಅವನು ಅವಳೊಂದಿಗೆ ಬಾಳಿದಾಗ, ರೂತಳು ಯೆಹೋವ ದೇವರ ಅನುಗ್ರಹದಿಂದ ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆತ್ತಳು.
14ಆಗ ಸ್ತ್ರೀಯರು ನೊವೊಮಿಗೆ, “ಇಸ್ರಾಯೇಲಿನಲ್ಲಿ ವಿಮೋಚಿಸತಕ್ಕ ಬಾಧ್ಯಸ್ಥನನ್ನು ನಿನಗೆ ಅನುಗ್ರಹಿಸಿದ ಯೆಹೋವ ದೇವರಿಗೆ ಸ್ತೋತ್ರವಾಗಲಿ. ಈ ಮಗನು ಪ್ರಖ್ಯಾತನಾಗಲಿ.
15ಅವನು ನಿನಗೆ ಪ್ರಾಣವನ್ನು ಪುನರುಜ್ಜೀವಿಸುವವನಾಗಿಯೂ ನಿನ್ನ ವೃದ್ಧ ವಯಸ್ಸಿನಲ್ಲಿ ಸಂರಕ್ಷಿಸುವವನಾಗಿಯೂ ಇರುವನು. ಏಕೆಂದರೆ ನಿನ್ನನ್ನು ಪ್ರೀತಿ ಮಾಡುವ ಏಳುಮಂದಿ ಮಕ್ಕಳಿಗಿಂತ ನಿನಗೆ ಉತ್ತಮಳಾಗಿರುವ ನಿನ್ನ ಸೊಸೆಯು ಅವನನ್ನು ಹೆತ್ತಳು,” ಎಂದರು.
16ನೊವೊಮಿಯು ಆ ಮಗುವನ್ನು ಎತ್ತಿ ತನ್ನ ಉಡಿಲಲ್ಲಿ ಇಟ್ಟುಕೊಂಡು ಅದಕ್ಕೆ ದಾದಿಯಾದಳು.
17ಆಗ ನೆರೆಹೊರೆಯ ಸ್ತ್ರೀಯರು ನೊವೊಮಿಗೆ, “ಒಬ್ಬ ಮಗನು ಹುಟ್ಟಿದ್ದಾನೆ,” ಎಂದು ಹೇಳಿ ಅವನಿಗೆ ಓಬೇದನೆಂದು ಹೆಸರಿಟ್ಟರು. ಇವನೇ ದಾವೀದನ ತಂದೆಯಾದ ಇಷಯನಿಗೆ ತಂದೆಯಾದವನು. ದಾವೀದನ ವಂಶಾವಳಿ
18ಪೆರೆಚನ ಸಂತತಿಯ ವಿವರ: ಪೆರೆಚನು ಹೆಚ್ರೋನನ ತಂದೆಯಾಗಿದ್ದನು;
19ಹೆಚ್ರೋನನು ರಾಮನ ತಂದೆಯಾಗಿದ್ದನು; ರಾಮನು ಅಮ್ಮೀನಾದಾಬನ ತಂದೆಯಾಗಿದ್ದನು;
20ಅಮ್ಮೀನಾದಾಬನು ನಹಶೋನನ ತಂದೆಯಾಗಿದ್ದನು; ನಹಶೋನನು ಸಲ್ಮೋನನ ತಂದೆಯಾಗಿದ್ದನು;
21ಸಲ್ಮೋನನು ಬೋವಜನ ತಂದೆಯಾಗಿದ್ದನು; ಬೋವಜನು ಓಬೇದನ ತಂದೆಯಾಗಿದ್ದನು;
22ಓಬೇದನು ಇಷಯನ ತಂದೆಯಾಗಿದ್ದನು; ಇಷಯನು ದಾವೀದನ ತಂದೆಯಾಗಿದ್ದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.