Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ರೂತಳು 1

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನ್ಯಾಯಸ್ಥಾಪಕರು ಆಳುತ್ತಿದ್ದ ಆ ದಿನಗಳಲ್ಲಿ ಇಸ್ರಾಯೇಲ್ ದೇಶದೊಳಗೆ ಬರ ಉಂಟಾಗಿದ್ದಾಗ, ಯೆಹೂದದ ಬೇತ್ಲೆಹೇಮಿನವನಾದ ಒಬ್ಬ ಮನುಷ್ಯನು ತನ್ನ ಹೆಂಡತಿ ಮತ್ತು ತನ್ನ ಇಬ್ಬರು ಪುತ್ರರೊಂದಿಗೆ ಮೋವಾಬ್ ದೇಶದಲ್ಲಿ ಸ್ವಲ್ಪ ಕಾಲ ವಾಸಮಾಡಬೇಕೆಂದು ಹೋದನು.
2ಆ ಮನುಷ್ಯನ ಹೆಸರು ಎಲೀಮೆಲೆಕನು. ಅವನ ಹೆಂಡತಿಯ ಹೆಸರು ನೊವೊಮಿ. ಅವನ ಪುತ್ರರಲ್ಲಿ ಒಬ್ಬನ ಹೆಸರು ಮಹ್ಲೋನನು, ಮತ್ತೊಬ್ಬನ ಹೆಸರು ಕಿಲ್ಯೋನನು. ಯೆಹೂದ ದೇಶಕ್ಕೆ ಸೇರಿದ ಎಫ್ರಾತದಲ್ಲಿರುವ ಬೇತ್ಲೆಹೇಮಿನವರಾದ ಇವರು ಬಂದು ಮೋವಾಬ್ ದೇಶದಲ್ಲಿ ವಾಸವಾಗಿದ್ದರು.
3ಆದರೆ ನೊವೊಮಿಯ ಗಂಡನಾದ ಎಲೀಮೆಲೆಕನು ಸತ್ತುಹೋದನು. ಆಕೆಯೂ ಆಕೆಯ ಇಬ್ಬರು ಪುತ್ರರೂ ಉಳಿದರು.
4ಇವರು ಒರ್ಫಾ, ರೂತ್ ಎಂಬ ಹೆಸರುಗಳುಳ್ಳ ಇಬ್ಬರು ಮೋವಾಬ್ ದೇಶದ ಸ್ತ್ರೀಯರನ್ನು ಮದುವೆಮಾಡಿಕೊಂಡು ಸುಮಾರು ಹತ್ತು ವರುಷ ಅಲ್ಲಿ ವಾಸವಾಗಿದ್ದರು.
5ಅಲ್ಲಿಯೇ ಮಹ್ಲೋನ ಮತ್ತು ಕಿಲ್ಯೋನ ಇಬ್ಬರೂ ಸತ್ತುಹೋದರು. ಆ ಸ್ತ್ರೀಯು ತನ್ನ ಇಬ್ಬರು ಪುತ್ರರನ್ನೂ ತನ್ನ ಗಂಡನನ್ನೂ ಕಳೆದುಕೊಂಡು ಒಬ್ಬಳೇ ಉಳಿದಳು. ಬೇತ್ಲೆಹೇಮಿಗೆ ನೊವೊಮಿ ಮತ್ತು ರೂತಳ ಪುನರಾಗಮನ
6ಯೆಹೋವ ದೇವರು ತಮ್ಮ ಜನರಿಗೆ ರೊಟ್ಟಿಯನ್ನು ಕೊಡುವ ಹಾಗೆ ಅವರನ್ನು ದರ್ಶಿಸಿದರೆಂದು ಅವಳು ಮೋವಾಬ್ ದೇಶದಲ್ಲಿ ಕೇಳಿದ್ದರಿಂದ ಅವಳು ತನ್ನ ಸೊಸೆಯರ ಸಂಗಡ ಮೋವಾಬ್ ದೇಶದಿಂದ ಸ್ವದೇಶಕ್ಕೆ ಹೋಗಬೇಕೆಂದು ನಿರ್ಧರಿಸಿದಳು.
7ಆಕೆಯು ಇಬ್ಬರು ಸೊಸೆಯರೊಡನೆ ತಾನಿದ್ದ ಸ್ಥಳದಿಂದ ಯೆಹೂದ ದೇಶಕ್ಕೆ ಹೋಗಬೇಕೆಂದು ಹೊರಟಳು.
8ನೊವೊಮಿಯು ತನ್ನ ಇಬ್ಬರು ಸೊಸೆಯರಿಗೆ, “ನೀವು ನಿಮ್ಮ ನಿಮ್ಮ ತಾಯಿಯ ಮನೆಗೆ ತಿರುಗಿ ಹೋಗಿರಿ. ನೀವು ಮರಣ ಹೊಂದಿದ ಪತಿಯರಿಗೂ ನನಗೂ ದಯೆ ತೋರಿಸಿದ ಹಾಗೆಯೇ ಯೆಹೋವ ದೇವರು ನಿಮಗೆ ದಯೆ ತೋರಲಿ.
9ನೀವು ಮದುವೆಯಾಗಿ ನಿಮ್ಮ ಗಂಡನ ಮನೆಯಲ್ಲಿ ವಿಶ್ರಾಂತಿ ಹೊಂದುವಂತೆ, ಯೆಹೋವ ದೇವರು ಆಶೀರ್ವದಿಸಲಿ,” ಎಂದು ಹೇಳಿದಳು. ನಂತರ ನೊವೊಮಿಯು ಅವರಿಗೆ ಮುದ್ದಿಟ್ಟಳು.
10ಆಗ ಅವರು ಗಟ್ಟಿಯಾಗಿ ಅತ್ತು ಆಕೆಗೆ, “ನಿಶ್ಚಯವಾಗಿ ನಿಮ್ಮ ಜನರ ಬಳಿಗೆ ನಿಮ್ಮ ಸಂಗಡ ತಿರುಗಿ ಬರುತ್ತೇವೆ,” ಎಂದರು.
11ಅದಕ್ಕೆ ನೊವೊಮಿಯು, “ಬೇಡ ನನ್ನ ಮಕ್ಕಳೇ, ನೀವು ಹಿಂತಿರುಗಿ ಹೋಗಿರಿ. ನನ್ನ ಸಂಗಡ ಏಕೆ ಬರುತ್ತೀರಿ? ನಿಮಗೆ ಗಂಡಂದಿರಾಗುವ ಹಾಗೆ ಇನ್ನು ಮುಂದೆ ನನ್ನ ಗರ್ಭದಲ್ಲಿ ನನಗೆ ಪುತ್ರರಾಗುವರೋ?
12ನನ್ನ ಮಕ್ಕಳೇ, ನೀವು ನಿಮ್ಮ ಮನೆಗೆ ಹಿಂದಿರುಗಿ ಹೋಗಿರಿ. ಏಕೆಂದರೆ ನಾನು ಪುನಃ ಮದುವೆಮಾಡಿಕೊಳ್ಳುವ ಪ್ರಾಯ ನನಗೆ ದಾಟಿಹೋಗಿದೆ. ಒಂದು ವೇಳೆ, ನಾನು ಸಂತಾನವಾಗುವ ನಿರೀಕ್ಷೆಯಿಂದ ಈ ಹೊತ್ತೇ ಮದುವೆಯಾಗಿ ಮಕ್ಕಳನ್ನು ಹೆತ್ತರೂ,
13ಅವರು ದೊಡ್ಡವರಾಗುವವರೆಗೂ ಕಾದು ಕೊಳ್ಳುವಿರೋ? ಗಂಡನಿಲ್ಲದೆ ನೀವು ತಾಳಿಕೊಂಡಿರುವಿರೋ? ಇಲ್ಲ, ನನ್ನ ಮಕ್ಕಳೇ; ಯೆಹೋವ ದೇವರ ಹಸ್ತವು ನನಗೆ ವಿರೋಧವಾಗಿದೆ. ಆದ್ದರಿಂದ ನಿಮಗಿಂತ ನನಗೆ ಬಹು ದುಃಖವಾಗಿದೆ,” ಎಂದಳು.
14ಆಗ ಅವರು ತಿರುಗಿ ಗಟ್ಟಿಯಾದ ಸ್ವರದಿಂದ ಅತ್ತರು. ಒರ್ಫಾ ತನ್ನ ಅತ್ತೆಯನ್ನು ಮುದ್ದಿಟ್ಟು ಹೊರಟು ಹೋದಳು; ಆದರೆ ರೂತಳು ಅತ್ತೆಯನ್ನು ಅಂಟಿಕೊಂಡಳು.
15ಆಗ ನೊವೊಮಿ, “ಇಗೋ, ನಿನ್ನ ಓರಗಿತ್ತಿಯು ತನ್ನ ಜನರ ಬಳಿಗೂ ತನ್ನ ದೇವರುಗಳ ಬಳಿಗೂ ತಿರುಗಿ ಹೋದಳು. ನೀನೂ ನಿನ್ನ ಓರಗಿತ್ತಿಯ ಹಿಂದೆ ಹೋಗು,” ಎಂದಳು.
16ಅದಕ್ಕೆ ರೂತಳು, “ನಿಮ್ಮನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಮಾಡಬೇಡಿರಿ. ಏಕೆಂದರೆ ನೀವು ಎಲ್ಲಿ ಹೋಗುವಿರೋ ನಾನು ಅಲ್ಲಿಗೇ ಬರುವೆನು. ನೀವು ಎಲ್ಲಿ ಇಳುಕೊಳ್ಳುವಿರೋ ನಾನು ಅಲ್ಲಿ ಇಳುಕೊಳ್ಳುವೆನು. ನಿಮ್ಮ ಜನರೇ ನನ್ನ ಜನರು; ನಿಮ್ಮ ದೇವರೇ ನನ್ನ ದೇವರು.
17ನೀವು ಎಲ್ಲಿ ಸಾಯುತ್ತೀರೋ ಅಲ್ಲಿಯೇ ನಾನು ಸಾಯುವೆನು. ಅಲ್ಲಿಯೇ ನನಗೆ ಸಮಾಧಿಯಾಗಲಿ. ಮರಣದಿಂದಲ್ಲದೆ ನಾನು ನಿಮ್ಮನ್ನು ಅಗಲಿದರೆ ಯೆಹೋವ ದೇವರು ನನಗೆ ಬೇಕಾದದ್ದನ್ನು ಮಾಡಲಿ,” ಎಂದಳು.
18ರೂತಳು ತನ್ನ ಸಂಗಡ ಬರಲು ದೃಢವಾದ ಮನಸ್ಸು ಮಾಡಿಕೊಂಡಿದ್ದಾಳೆಂದು ನೊವೊಮಿ ತಿಳಿದು ಸುಮ್ಮನಾದಳು.
19ಹಾಗೆಯೇ ಇಬ್ಬರೂ ಬೇತ್ಲೆಹೇಮಿನವರೆಗೂ ನಡೆದುಹೋದರು. ಅವರು ಬೇತ್ಲೆಹೇಮಿನಲ್ಲಿ ಪ್ರವೇಶಿಸುವಾಗ ಆ ಪಟ್ಟಣದವರಲ್ಲಿ ಕುತೂಹಲ ಮೂಡಿಸಿತು. ಅವರು, “ಇವಳು ನೊವೊಮಿಯೋ?” ಎಂದರು.
20ಆಗ ಆಕೆಯು ಅವರಿಗೆ, “ನನ್ನನ್ನು ‘ನೊವೊಮಿ’ ಎಂದು ಕರೆಯಬೇಡಿರಿ. ಮಾರಾ ಎಂದು ಕರೆಯಿರಿ ಏಕೆಂದರೆ ಸರ್ವಶಕ್ತರು ನನ್ನನ್ನು ಬಹು ದುಃಖದಿಂದ ನಡೆಸಿದರು.
21ನಾನು ಪರಿಪೂರ್ಣಳಾಗಿ ಹೊರಟುಹೋದೆನು. ಯೆಹೋವ ದೇವರು ನನ್ನನ್ನು ಏನೂ ಇಲ್ಲದೆ ಬರಮಾಡಿದ್ದಾರೆ. ಯೆಹೋವ ದೇವರು ನನಗೆ ವಿರೋಧವಾಗಿ ಸಾಕ್ಷಿಕೊಟ್ಟು, ಸರ್ವಶಕ್ತರಾದ ದೇವರು ನನಗೆ ವಿರೋಧವಾಗಿ ನನ್ನನ್ನು ಬಾಧಿಸಿರುವುದರಿಂದ ನೀವು ನನ್ನನ್ನು ನೊವೊಮಿ ಎಂದು ಕರೆಯುವುದು ಸರಿಯೇ?” ಎಂದಳು.
22ಹೀಗೆ ನೊವೊಮಿ ಮೋವಾಬ್ ದೇಶಸ್ಥಳಾದ ರೂತಳೆಂಬ ತನ್ನ ಸೊಸೆಯ ಸಂಗಡ ಮೋವಾಬ್ ದೇಶದಿಂದ ತಿರುಗಿಬಂದಳು. ಅವರು ಜವೆಗೋಧಿಯ ಸುಗ್ಗಿಯ ಕಾಲ ಪ್ರಾರಂಭವಾದಾಗ ಬೇತ್ಲೆಹೇಮಿಗೆ ತಲುಪಿದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.